ಬೆಂಗಳೂರು : ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಹಲವು ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ವ್ಯಕ್ತವಾಗಿರುವ ಬೆನ್ನಲ್ಲೇ ಯಶವಂತರಾಯಗೌಡ ಪಾಟೀಲ ಅವರ ರಾಜೀನಾಮೆ ಹಿಂಪಡೆಯುವ ಬೆಳವಣಿಗೆ ಹೈಕಮಾಂಡ್ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ಅವರ ಮನವೊಲಿಕೆ ಕಾರ್ಯ ಶೈಲಿ ಯಶಸ್ವಿಯಾಗಿರುವುದನ್ನು ಸೂಚಿಸಿದೆ.
ಸಚಿವ ಸಂಪುಟ ವಿಸ್ತರಣೆಯ ಪಟ್ಟಿ ಪ್ರಕಟವಾಗುತ್ತಿದ್ದಂತೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಅಸಮಾಧಾನ ವ್ಯಕ್ತಪಡಿಸಿ, ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.
ನಿರ್ಧಾರವನ್ನು ಬದಲಿಸಿಕೊಂಡ ಯಶವಂತರಾಯಗೌಡ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಆಗಸ್ಟ್ 3ರಂದು ಸಲ್ಲಿಸಿದ್ದ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
“ಆ 3ರಂದು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸನ್ಮಾನ್ಯ ಸಭಾಧ್ಯಕ್ಷರಿಗೆ ನೀಡಿದ್ದೆ. ಆದರೆ ರಾಜೀನಾಮೆ ಪತ್ರವನ್ನು ಹಿಂದಕ್ಕೆ ಪಡೆಯುತ್ತಿದ್ದೇನೆ ಎಂಬ ಮಾಹಿತಿಯನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ” ಎಂದು ವಿಧಾನಸಭಾ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

