ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನೆರೆಯ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಜುಲೈ 30 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶದಂತೆ ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳಿಂದ ತಮಗೆ ಬರಬೇಕಾದ ನೀರನ್ನು ತಕ್ಷಣವೇ ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ಜುಲೈ 30 ರ ಪ್ರಾಧಿಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದೆ.
ಪ್ರಾಧಿಕಾರದ ಆದೇಶದ ಪ್ರಕಾರ, ಆಗಸ್ಟ್ 12 ರ ಒಳಗೆ ತಮಿಳುನಾಡಿಗೆ ಒಟ್ಟು 4.536 ಟಿಎಂಸಿ ನೀರು ತಲುಪಬೇಕಿದೆ. ಆದರೆ, ಈ ನಡುವೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ನೀರಿನ ಪರಿಸ್ಥಿತಿ ಸದ್ಯಕ್ಕೆ ಸ್ವಲ್ಪ ಸುಧಾರಿಸಿದೆ ಎಂದು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಆಗಸ್ಟ್ 13 ರಂದು ವಿವಿಧ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿರುವ ರಾಜ್ಯಾದ್ಯಂತ ಬಂದ್ ಕರೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡಿದ್ದಾರೆ. ಇತ್ತ ಕರ್ನಾಟಕದಲ್ಲಿ ಬಂದ್ ಬಿಸಿ ಜೋರಾಗುತ್ತಿರುವಾಗಲೇ ತಮಿಳುನಾಡು ಕಾನೂನು ಹೋರಾಟ ತೀವ್ರಗೊಳಿಸಿರುವುದು ಜಲವಿವಾದವನ್ನು ಮತ್ತಷ್ಟು ಕಾವೇರಿಸುವಂತೆ ಮಾಡಿದೆ.
ಹಿರಿಯ ವಕೀಲರಾದ ಸಿ.ಎಸ್. ವೈದ್ಯನಾಥನ್ ಹಾಗೂ ಜಿ. ಉಮಾಪತಿ ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಂಡಿರುವ ಈ ಅರ್ಜಿಯಲ್ಲಿ ತಮಿಳುನಾಡು ಗಂಭೀರ ಆರೋಪಗಳನ್ನು ಮಾಡಿದೆ. ಜೂನ್ 1 ರಿಂದ ಆಗಸ್ಟ್ 12 ರವರೆಗಿನ ಅವಧಿಯಲ್ಲಿ ಬಿಳಿಗುಂಡ್ಲು ಅಂತರರಾಜ್ಯ ಗಡಿಯಲ್ಲಿ ತಮಗೆ ಭಾರಿ ಪ್ರಮಾಣದ ನೀರಿನ ಕೊರತೆಯಾಗಿದೆ. ಕಾವೇರಿ ಜಲಾನಯನ ಪ್ರದೇಶದ ಸಂಕಷ್ಟದ ಸೂತ್ರದ ಅನ್ವಯ ಕರ್ನಾಟಕ ಸರ್ಕಾರವು ತಮಗೆ ತಕ್ಷಣವೇ 26.954 ಟಿಎಂಸಿ ನೀರನ್ನು ಹರಿಸಬೇಕು ಎಂದು ತಮಿಳುನಾಡು ಒತ್ತಾಯಿಸಿದೆ.
ಇದರೊಂದಿಗೆ, ಕರ್ನಾಟಕದ ಜಲಾಶಯಗಳಲ್ಲಿನ ನೀರಿನ ಹರಿವನ್ನು ಪ್ರತಿ 10 ದಿನಗಳಿಗೊಮ್ಮೆ ಸೂಕ್ಷ್ಮವಾಗಿ ಗಮನಿಸಲು ಮತ್ತು ತಮಿಳುನಾಡಿಗೆ ಮಾಸಿಕ ಹಾಗೂ ದೈನಂದಿನ ಪಾಲಿನ ನೀರು ಸರಿಯಾಗಿ ಸಿಗುವಂತೆ ನೋಡಿಕೊಳ್ಳಲು ಪ್ರಾಧಿಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.
ತಮಿಳುನಾಡು ಅರ್ಜಿಯಲ್ಲಿ ಏನಿದೆ?
ಜೂನ್ ಒಂದರಿಂದ ಆಗಸ್ಟ್ 12 ರವರೆಗಿನ ಕಾವೇರಿ ಕೊಳ್ಳದ ಕಳೆದ 30 ವರ್ಷಗಳ ಮಳೆಯ ಸರಾಸರಿಯನ್ನು ಲೆಕ್ಕ ಹಾಕಿದರೆ, ಪ್ರಸ್ತುತ ಸಂಕಷ್ಟದ ಅನುಪಾತ ಶೇಕಡಾ 46.34 ರಷ್ಟಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ ನಮಗೆ ಸುಮಾರು 26.95 ಟಿಎಂಸಿ ನೀರು ಸಿಗಬೇಕು. ಆದರೆ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರ ನೀಡಿರುವ 4.536 ಟಿಎಂಸಿ ನೀರಿನ ಆದೇಶವು ನಿಜವಾದ ಸಂಕಷ್ಟದ ಪಾಲಿಗಿಂತ ತೀರಾ ಕಡಿಮೆಯಾಗಿದೆ ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ವಾದಿಸಿದೆ. ಇಷ್ಟಾದರೂ ಕರ್ನಾಟಕ ಸರ್ಕಾರವು ಪ್ರಾಧಿಕಾರದ ಕನಿಷ್ಠ ಆದೇಶವನ್ನೂ ಪಾಲಿಸುತ್ತಿಲ್ಲ. ಜುಲೈ 29 ರಿಂದ ಆಗಸ್ಟ್ 2 ರವರೆಗಿನ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ದಾಖಲಾದ ನೀರಿನ ಪ್ರಮಾಣ ಕೇವಲ 158 ರಿಂದ 530 ಕ್ಯೂಸೆಕ್ ಮಾತ್ರವಾಗಿದೆ. ಇದು ಕರ್ನಾಟಕದ ಉದ್ದೇಶಪೂರ್ವಕ ಉಲ್ಲಂಘನೆಯನ್ನು ತೋರಿಸುತ್ತದೆ ಎಂದು ತಮಿಳುನಾಡು ದೂರಿದೆ.
ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್‌ನಲ್ಲಿ 23.078 ಟಿಎಂಸಿ, ಕಬಿನಿಯಲ್ಲಿ 18.610 ಟಿಎಂಸಿ, ಹಾರಂಗಿಯಲ್ಲಿ 7.827 ಟಿಎಂಸಿ ಮತ್ತು ಹೇಮಾವತಿಯಲ್ಲಿ 28.022 ಟಿಎಂಸಿ ಸೇರಿದಂತೆ ಒಟ್ಟು 77.537 ಟಿಎಂಸಿಯಷ್ಟು ಭಾರಿ ಪ್ರಮಾಣದ ನೀರಿನ ಸಂಗ್ರಹವಿದೆ. ಇತ್ತೀಚೆಗೆ ಕಬಿನಿ ಮತ್ತು ಕೆಆರ್‌ಎಸ್ ಜಲಾನಯನ ಪ್ರದೇಶದ ಮೇಲ್ಭಾಗದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ. ಕರ್ನಾಟಕದ ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ಸಹ ನೆರೆ ರಾಜ್ಯಕ್ಕೆ ನೀರು ಬಿಡದೆ ಕಾವೇರಿ ನ್ಯಾಯಾಧಿಕರಣದ ಆದೇಶಗಳನ್ನು ಉಲ್ಲಂಘಿಸುತ್ತಲೇ ಬಂದಿದೆ ಎಂದು ತಮಿಳುನಾಡು ತನ್ನ ಅರ್ಜಿಯಲ್ಲಿ ಗಂಭೀರವಾಗಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಹೇಗೆ ಕೈಗೆತ್ತಿಕೊಳ್ಳಲಿದೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.

