ತಮಿಳುನಾಡು : ಕಾವೇರಿ ನೀರಿನ ಹಂಚಿಕೆ ಮತ್ತು ಮೇಕೆದಾಟು ಯೋಜನೆ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಆಗಸ್ಟ್ 3ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ.
ಕಾವೇರಿ ನೀರಿನ ಹಂಚಿಕೆ ಹಾಗೂ ಮೇಕೆದಾಟು ಅಣೆಕಟ್ಟು ಯೋಜನೆ ಕುರಿತು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಲು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ತಮಿಳುನಾಡು ಕೃಷಿ ಸಚಿವ ಆರ್. ವಿನೋದ್ ಹೇಳಿದ್ದಾರೆ.
ಮೇಕೆದಾಟು ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಕರ್ನಾಟಕ ಸರ್ಕಾರದಿಂದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಅಧಿಕೃತ ಆಹ್ವಾನ ತಲುಪಿದೆ ಎಂದು ತಮಿಳುನಾಡಿನ ಕೃಷಿ ಸಚಿವ ಆರ್. ವಿನೋದ್ ದೃಢಪಡಿಸಿದ್ದಾರೆ.
ತಮಿಳುನಾಡಿನ ಹಿತಾಸಕ್ತಿ ಹಾಗೂ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಶೀಘ್ರದಲ್ಲೇ ನೆರೆರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಂಜಾವೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಕರ್ನಾಟಕ ಸರ್ಕಾರವು, ಮುಖ್ಯಮಂತ್ರಿ ವಿಜಯ್ ಅವರಿಗೆ ಅಧಿಕೃತ ಆಹ್ವಾನವನ್ನು ನೀಡಿದೆ. ಆಗಸ್ಟ್ 3 ರಂದು ಸಿಎಂ ವಿಜಯ್ ಅವರು ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಆಹ್ವಾನವನ್ನು ಕೇವಲ ಮುಖ್ಯಮಂತ್ರಿಗಳಿಗೆ ಮಾತ್ರವೇ ಪ್ರತ್ಯೇಕವಾಗಿ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಭೇಟಿಯ ಕಾರ್ಯಸೂಚಿಯ (ಅಜೆಂಡಾ) ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ತಮಿಳುನಾಡಿನ ಜನತೆಗೆ ಯಾವುದು ಒಳ್ಳೆಯದೋ ಮತ್ತು ರಾಜ್ಯದ ಹಿತಾಸಕ್ತಿಗೆ ಯಾವುದು ಅಗತ್ಯವೋ ಅದನ್ನು ಪಡೆದುಕೊಳ್ಳುವುದೇ ಈ ಭೇಟಿಯ ಮುಖ್ಯ ಉದ್ದೇಶವಾಗಿದೆ” ಎಂದರು.

