ವಯನಾಡ್ : ಕಲ್ಲಾಡಿಯ ಭೂಕುಸಿತದ ಸ್ಥಳದಲ್ಲಿ ರಕ್ಷಣಾ ತಂಡಗಳು ಇನ್ನೂ ಎರಡು ಮೃತದೇಹಗಳನ್ನು ಹೊರತೆಗೆದಿದೆ. ಸಾವಿನ ಸಂಖ್ಯೆ ಐದಕ್ಕೆ ಏರಿದೆ ಎಂದು ಕೇರಳದ ಸಚಿವರಾದ ಎ.ಪಿ. ಅನಿಲ್ ಕುಮಾರ್ ಮತ್ತು ಟಿ. ಸಿದ್ದಿಕ್ ತಿಳಿಸಿದ್ದಾರೆ.
ಗುರುವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆಯ ವಲಯ-1 ರಿಂದ ಒಂದು ಮೃತದೇಹವನ್ನು ಹೊರತೆಗೆಯಲಾಯಿತು ಮತ್ತು ಇನ್ನೊಂದು ಮೃತದೇಹ ನದಿಯ ಪಕ್ಕದಲ್ಲಿ ಕಾರ್ಮಿಕರು ಮಾಡಿಕೊಂಡಿದ್ದ ಮನೆ ಬಳಿಯೇ ಪತ್ತೆಯಾಗಿದೆ ಎನ್ನಲಾಗಿದೆ.
“ಆ ಪ್ರದೇಶದ ವಲಯ-1 ಮತ್ತು 2 ರಲ್ಲಿ ಶೋಧ ಕಾರ್ಯವನ್ನು ನಡೆಸಲಾಗುವುದು. ನದಿಯ ಸಮೀಪದಲ್ಲಿಯೂ ಶೋಧ ಕಾರ್ಯಾಚರಣೆಯ ಮೇಲೆ ಗಮನಹರಿಸಲಾಗುವುದು” ಎಂದು ಅನಿಲ್ ಕುಮಾರ್ ಹೇಳಿದರು.
ನಿಗದಿತ ವಲಯಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಯಲಿದ್ದು, ನದಿಯ ಉದ್ದಕ್ಕೂ ಇರುವ ಪ್ರದೇಶಗಳಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ.
ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ವೈಥಿರಿ ತಾಲೂಕು ಆಸ್ಪತ್ರೆಯಲ್ಲಿ ನಡೆಸಲಾಗುವುದು ಮತ್ತು ನಂತರ ಅವುಗಳನ್ನು ಸಂರಕ್ಷಿಸುವ ಪ್ರಕ್ರಿಯೆಯನ್ನು (ಎಂಬಾಲ್ಮಿಂಗ್) ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಾಡಲಾಗುವುದು ಎಂದು ಸಿದ್ದಿಕ್ ಹೇಳಿದರು.
ವಯನಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಗಳನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿರುವ ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ಯೋಜನೆಯ ಸ್ಥಳದಲ್ಲಿ ಜುಲೈ 7 ರಂದು ಭೂಕುಸಿತ ಸಂಭವಿಸಿತ್ತು.
ಶೋಧ ಕಾರ್ಯಾಚರಣೆಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಬುಧವಾರ ಹೇಳಿದ್ದರು. ಘಟನೆಯಲ್ಲಿ ಗಾಯಗೊಂಡ 10 ಮಂದಿಯ ಪೈಕಿ ಮೂವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ನಾಲ್ವರು ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಮೂವರು ಐಸಿಯುನಲ್ಲಿದ್ದಾರೆ (ಅದರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ) ಎಂದು ಅವರು ತಿಳಿಸಿದ್ದರು.

