ಹಾಸನ : ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡಿದ್ದು ಜಲಾಶಯಗಳ ಒಳ ಹರಿವು ಏರಿಕೆಯಾಗಿದೆ. ಶಿವಮೊಗ್ಗ,ಕೊಡಗು, ಬೆಳಗಾವಿ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆವರಿಸಿವೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳು ಹೇಳಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು, ಆಲೂರು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಬೇಲೂರು ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ. ಶಿವಮೊಗ್ಗದ ಗಾಜಾನೂರು ತುಂಗಾ ಜಲಾಶಯ ಭರ್ತಿಯಾಗಿದ್ದು 22 ಕ್ರಸ್ಟ್ ಗೇಟ್‌ಗಳನ್ನು ತೆರೆಯಲಾಗಿದೆ. ಮರಗಳು ಮುರಿದು ಬಿದ್ದು ವಿದ್ಯುತ್ ತಂತಿಗಳು ಮುರಿದು ಸಂಪರ್ಕ ಕಡಿತಗೊಂಡಿದೆ.
ಈ ನಡುವೆ ಹೆಗ್ಗದ್ದೆ, ಬಾಸರವಳ್ಳಿ, ಬೇಲೂರು ತಾಲೂಕಿನ ಅರೇಹಳ್ಳಿ, ಬಿಕ್ಕೋಡು, ಚೀಕನಹಳ್ಳಿ ಹೋಬಳಿಗಳು ಹಾಗೂ ಕಸಬಾ ಎ, ಕಸಬಾ ಬಿ ವಲಯದ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಹಾಗೂ ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಿಸಿ ಬೇಲೂರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚಳವಾಗುತ್ತಿದೆ. ಪ್ರಸ್ತುತ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹರಿದುಬರುತ್ತಿದ್ದು, ನದಿ ತನ್ನ ದಂಡೆಯನ್ನು ಮೀರಿ ಹೊರಭಾಗದಲ್ಲಿ ಹರಿಯುತ್ತಿದೆ. ಚಿಕ್ಕೋಡಿ ತಾಲೂಕಿನ ಮಾಂಜರಿ ಮತ್ತು ಅಂಕಲಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿದೆ. ಕೇವಲ ಐದು ದಿನಗಳ ಹಿಂದೆ ಬರಡಾಗಿದ್ದ ಈ ಪ್ರದೇಶವು ಈಗ ಜಲಾವೃತವಾಗಿದೆ.
ಕಾವೇರಿ ಕೊಳ್ಳದ ಜಲಾಶಯಗಳಾದ ಹೇಮಾವತಿ, ಹಾರಂಗಿ ಜಲಾಶಯಗಳ ಒಳ ಹರಿವು ಹೆಚ್ಚಳ
ಇದೇ ವೇಳೆ ನೆರೆರಾಜ್ಯ ಕೇರಳದ ವೈನಾಡಿನಲ್ಲಿ ಮಳೆ ಹೆಚ್ಚಾಗಿರುವ ಕಾರಣ ಎಚ್.ಡಿ. ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯಕ್ಕೆ 24 ಗಂಟೆಗಳಲ್ಲಿ ಆರು ಅಡಿ ನೀರು ಹರಿದು ಬಂದಿದೆ.
ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಜಲಾಶಯ ಎಂಬ ಹೆಗ್ಗಳಿಕೆ ಕಬಿನಿ ಪಾತ್ರವಾಗಿದೆ. 300 ಕ್ಯೂಸೆಕ್ ಇದ್ದ ಒಳಹರಿವು ಆರು ಸಾವಿರಕ್ಕೆ ಹೆಚ್ಚಳವಾಗಿದೆ. ಭಾನುವಾರ 53 ಅಡಿಗೆ ಕುಸಿದಿದ್ದ ಕಬಿನಿ ಡ್ಯಾಂ ನೀರಿನ ಮಟ್ಟ ಇದೀಗ ಇಂದು 59 ಅಡಿಗೆ ಏರಿಕೆ ಕಂಡಿದೆ. ಕಬಿನಿ ಜಲಾಶಯದ ಒಟ್ಟು ಎತ್ತರ 84 ಅಡಿಗಳಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಚನ್ನಪಟ್ಟಣ, ರಾಮನಗರ, ಮಂಡ್ಯ, ನಂಜನಗೂಡು, ತಿ.ನರಸೀಪುರ, ಚಾಮರಾಜನಗರ ಸೇರಿ ಹಲವು ಪಟ್ಟಣಗಳಿಗೆ ಕಬಿನಿ ಜಲಾಶಯ ನೀರುಣಿಸುತ್ತಿದ್ದು, ಇದು ರಾಜ್ಯದ ಎರಡು ಕೋಟಿ ಜನರ ಪಾಲಿನ ಕುಡಿಯುವ ನೀರಿನ ಆಶ್ರಯದ ಡ್ಯಾಂ ಆಗಿದೆ.
ಕಾಡು ಪ್ರಾಣಿಗಳ ಕುಡಿಯುವ ನೀರಿಗೂ ಈ ಜಲಾಶಯ ಆಶ್ರಯವಾಗಿದ್ದು ತಮಿಳುನಾಡಿಗೆ ಈ ಡ್ಯಾಂನಿಂದ ಅತಿಹೆಚ್ಚು ನೀರು ಬಿಡಲಾಗುತ್ತದೆ.
ಹಾರಂಗಿ ಜಲಾಶಯ
ಕೊಡಗಿನಲ್ಲಿ ಮುಂಗಾರು ಚೇತರಿಸಿಕೊಂಡಿದ್ದು, ಸೋಮವಾರ 1344 ಕ್ಯುಸೆಕ್ ನೀರು ಹರಿದು ಬಂದಿದೆ. ಕಳೆದ ವರ್ಷ ಇದೇ ದಿನ 6135 ಕ್ಯುಸೆಕ್ ಇತ್ತು. ಹೊರ ಹರಿವು ನದಿಗೆ 180 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 5750 ಕ್ಯುಸೆಕ್ ಇತ್ತು. ಈ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2835.92 ಅಡಿಗಳು. ಕಳೆದ ವರ್ಷ ಇದೇ ದಿನ 2852.34 ಅಡಿಗಳು ಇತ್ತು.
ಹೇಮೆಯ ಒಳ ಹರಿವೂ ಹೆಚ್ಚಳ
ಕೆಆರ್‌ಎಸ್ ಜಲಾಶಯದ ಒಡಲಿಗೆ ಹೆಚ್ಚು ನೀರು ಒದಗಿಸುವ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದ ಒಳ ಹರಿವಿನಲ್ಲಿ ಹೆಚ್ಚಳ ಕಂಡು ಬಂದಿದೆ. ಸೋಮವಾರ ಒಳ ಹರಿವು 6294 ಕ್ಯುಸೆಕ್ ಇತ್ತು. 300 ಕ್ಯುಸೆಕ್ ಹೊರ ಬಿಡಲಾಗುತ್ತಿದೆ. ಇಂದಿನ ಮಟ್ಟ- 2894.60 ಅಡಿ. ಗರಿಷ್ಠ ಮಟ್ಟ- 2922 ಅಡಿಗಳು.

