ಬೆಂಗಳೂರು: ಹಿರಿಯ ಪತ್ರಕರ್ತ, ಬರಹಗಾರ ಪಿ. ಲಂಕೇಶ್ ಅವರ ಧರ್ಮಪತ್ನಿ, ಲೇಖಕಿ ಇಂದಿರಾ ಲಂಕೇಶ್ (84) ಅವರು ಇಂದು ಮುಂಜಾನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ದಿವಂಗತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದು, ಕವಿತಾ ಲಂಕೇಶ್ (ಚಿತ್ರನಿರ್ದೇಶಕಿ), ಇಂದ್ರಜಿತ್ ಲಂಕೇಶ್ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ), ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ತಾಯಿ ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಸಾಹಿತ್ಯ ಮತ್ತು ಪ್ರಕಾಶನ: ಪತಿ ಪಿ.ಲಂಕೇಶ್ ಅವರ ಸಾಹಿತ್ಯಿಕ ಮತ್ತು ಪತ್ರಿಕೋದ್ಯಮದ ಪಯಣದಲ್ಲಿ ಸದಾ ಬೆಂಬಲವಾಗಿ ನಿಂತವರು. ಸ್ವತಃ ಬರವಣಿಗೆಯನ್ನು ಮಾಡುತ್ತಿದ್ದ ಇಂದಿರಾ ಅವರು ‘ಇಂದಿರಾ ಲಂಕೇಶ್ ಪ್ರಕಾಶನ’ದ ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
‘ಹುಳಿಮಾವು ಮತ್ತು ನಾನು’: ಪತಿ ಪಿ.ಲಂಕೇಶ್ ಅವರೊಂದಿಗಿನ ತಮ್ಮ ಬದುಕಿನ ಅನುಭವಗಳನ್ನು ಮತ್ತು ನೆನಪುಗಳನ್ನು ಇಂದಿರಾ ಲಂಕೇಶ್ ಅವರು ತಮ್ಮ ಆತ್ಮಕಥೆಯಾದ ‘ಹುಳಿಮಾವು ಮತ್ತು ನಾನು’ ಪುಸ್ತಕದಲ್ಲಿ ಸುಂದರವಾಗಿ ದಾಖಲಿಸಿದ್ದಾರೆ.
ಸಾಮಾಜಿಕ ಕಳಕಳಿ: ಮಗಳು ಗೌರಿ ಲಂಕೇಶ್ ಹತ್ಯೆಯ ನಂತರ ಆಘಾತಕ್ಕೀಡಾಗಿದ್ದ ಇಂದಿರಾ ಅವರು, ತಮ್ಮ ಮಕ್ಕಳೊಂದಿಗೆ ಸಾರ್ವಜನಿಕವಾಗಿ ವಿವಿಧ ಹೋರಾಟಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

