ನವದೆಹಲಿ : ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಭೂಮಧ್ಯರೇಖೆಯ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ (El Nino) ಪರಿಸ್ಥಿತಿಗಳು ಅಧಿಕೃತವಾಗಿ ಆರಂಭವಾಗಿರುವುದನ್ನು ದೃಢಪಡಿಸಿದೆ.
ದೇಶದಲ್ಲಿ 1950ರ ಬಳಿಕ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಪ್ರಬಲ ಎಲ್ ನಿನೊ ಎಫೆಕ್ಟ್ ಆಗುವ ಮುನ್ಸೂಚನೆ ನೀಡಿಲಾಗಿದೆ. ಇದರಿಂದ ಜಾಗತಿಕವಾಗಿ ಹವಾಮಾನ ಏರುಪೇರಾಗಲಿದೆ. ಅದರಲ್ಲೂ, ಭಾರತದಲ್ಲಿ ಮುಂಗಾರು ಮಳೆ ಕೊರತೆ, ಸುದೀರ್ಘ ಬೇಸಿಗೆ ಮತ್ತು ತೀವ್ರ ಉಷ್ಣ ಮಾರುತಗಳ ಆತಂಕ ಸೃಷ್ಟಿಯಾಗುವ ಆತಂಕ ಎದುರಾಗಿ
ಎಲ್ ನಿನೋ ಎಂದರೇನು?
El Nino ಎಂಬುದು ಪೆಸಿಫಿಕ್ ಮಹಾಸಾಗರದ ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗುವ ಹವಾಮಾನ ವಿದ್ಯಮಾನವಾಗಿದೆ.
ಇದರ ಪರಿಣಾಮವಾಗಿ ಭಾರತದ ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಕೆಲವು ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಉಂಟಾಗಬಹುದು. ಕೃಷಿ ಮತ್ತು ಜಲಸಂಪನ್ಮೂಲಗಳ ಮೇಲೆ ಪರಿಣಾಮ ಬೀಳಬಹುದು.
ಭಾರತದ ಮೇಲೆ ಪರಿಣಾಮ
ಎಲ್ ನಿನೋ ವರ್ಷಗಳಲ್ಲಿ ಸಾಮಾನ್ಯವಾಗಿ, ಮುಂಗಾರು ಮಳೆ ದುರ್ಬಲವಾಗುವ ಸಾಧ್ಯತೆ ಹೆಚ್ಚು. ಕೃಷಿ ಉತ್ಪಾದನೆ ಮೇಲೆ ಒತ್ತಡ ಹೆಚ್ಚಾಗಬಹುದು. ಜಲಾಶಯಗಳ ನೀರಿನ ಮಟ್ಟದ ಮೇಲೆ ಪರಿಣಾಮ ಬೀಳಬಹುದು. ಕೆಲವು ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗಬಹುದು. ಆದರೆ, ಎಲ್ ನಿನೋ ಇದ್ದರೂ ಭಾರತದ ಎಲ್ಲ ಭಾಗಗಳಲ್ಲಿ ಮಳೆ ಕೊರತೆಯಾಗುತ್ತದೆ ಎಂದರ್ಥವಲ್ಲ. ಇತರೆ ಹವಾಮಾನ ಅಂಶಗಳೂ ಮುಂಗಾರಿನ ಮೇಲೆ ಪ್ರಭಾವ ಬೀರುತ್ತವೆ.
ಐಎಂಡಿಯ ಮುನ್ಸೂಚನೆ
IMD ಈಗಾಗಲೇ 2026ರ ಮುಂಗಾರು ಮಳೆಯು ದೇಶದ ದೀರ್ಘಾವಧಿ ಸರಾಸರಿಯ (LPA) ಸುಮಾರು 90% ಇರಬಹುದು ಎಂದು ಅಂದಾಜಿಸಿದ್ದು, ಇದು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಮಳೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಮುಂದಿನ ತಿಂಗಳುಗಳಲ್ಲಿ ಎಲ್ ನಿನೋ ಬಲಗೊಳ್ಳುತ್ತದೆಯೇ ಎಂಬುದರ ಮೇಲೆ ಭಾರತದ ಮುಂಗಾರು ಮಳೆಯ ಅಂತಿಮ ಚಿತ್ರಣ ಅವಲಂಬಿತವಾಗಿರುತ್ತದೆ.
ಈ ‘ಎಲ್ ನಿನೊ’ ಆತಂಕದ ನಡುವೆಯೂ ಭಾರತಕ್ಕೆ ಒಂದು ಸಣ್ಣ ಸಮಾಧಾನಕರ ಸಂಗತಿಯಿದೆ. ಜಪಾನ್ ಹವಾಮಾನ ಸಂಸ್ಥೆಯ ಪ್ರಕಾರ, ಜುಲೈ ತಿಂಗಳ ಆಸುಪಾಸಿನಲ್ಲಿ ಹಿಂದೂ ಮಹಾಸಾಗರದಲ್ಲಿ‘ಇಂಡಿಯನ್ ಓಷನ್ ಡೈಪೋಲ್’(IOD) ಸಕಾರಾತ್ಮಕವಾಗಿ ಬದಲಾಗುವ ಸಾಧ್ಯತೆಯಿದ್ದು, ಒಂದು ವೇಳೆ ಇದು ಸಂಭವಿಸಿದರೆ, ಅದು ಎಲ್ ನಿನೊ ಪ್ರಭಾವವನ್ನು ಕೊಂಚ ಮಟ್ಟಿಗೆ ತಗ್ಗಿಸಿ, ದೇಶದ ಕೆಲವು ಭಾಗಗಳಲ್ಲಿ ಉತ್ತಮ ಮಳೆ ತರಲು ನೆರವಾಗಲಿದೆ ಎಂದು ವರದಿಯಾಗಿದೆ.

