ಬೆಂಗಳೂರು : ಮೇ 15, 2026ರಂದು ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಅವರು ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಿರುದ್ಯೋಗಿ ಯುವಕರನ್ನು “ಕಾಕ್ರೋಚ್ಗಳು” ಮತ್ತು “ಪರಾಸೈಟ್ಗಳು” ಎಂದು ಹೋಲಿಕೆ ಮಾಡಿಬಿಟ್ಟರು. ನಂತರ ತಾನು ಆ ಅರ್ಥದಲ್ಲಿ ಹೇಳಿರಲಿಲ್ಲ ಎಂದು ಸ್ಪಷ್ಟನೆಯನ್ನೂ ಕೊಟ್ಟರು. ಆದರೆ ಮುಖ್ಯ ನ್ಯಾಯಮೂರ್ತಿಗಳ ಈ ಟಿಪ್ಪಣಿಯನ್ನು ಜನರೇಷನ್ ಜಡ್ (ಜೆನ್ ಜಿ) ಗಳು ಲಘುವಾಗಿ ಸ್ವೀಕರಿಸಲಿಲ್ಲ. ಪ್ರತಿಕ್ರಿಯೆಯಾಗಿ ಮರುದಿನ ಮೇ 16ರಂದು ಕಾಕ್ರೋಚ್ ಜನತಾ ಪಾರ್ಟಿ (CJP) ಹುಟ್ಟಿಕೊಂಡಿತು.
ಬೋಸ್ಟನ್ ಯೂನಿವರ್ಸಿಟಿ ವಿದ್ಯಾರ್ಥಿ 30 ವರ್ಷದ ಅಭಿಜೀತ್ ದೀಪ್ಕೆ ಕಾಕ್ರೋಚ್ ಜನತಾ ಪಾರ್ಟಿಯನ್ನು ಪ್ರಾರಂಭಿಸಿದರು. ಮೊದಲು ಕೇವಲ ವಿಡಂಬನಾತ್ಮಕ ಟ್ವೀಟ್ ಮತ್ತು ಗೂಗಲ್ ಫಾರ್ಮ್ ಆಗಿ ಆರಂಭವಾದ ಈ ಚಳವಳಿ ಕೆಲವೇ ದಿನಗಳಲ್ಲಿ ಜೆನ್ Z ಯುವಕರ ನಡುವೆ ಬೃಹತ್ ಚಳವಳಿಯಾಗಿ ಬೆಳೆಯಿತು. “ಸೋಮಾರಿ, ಆನ್ಲೈನ್, ಕಾಕ್ರೋಚ್” ಎಂದು ಲೇಬಲ್ ಹಾಕಲ್ಪಡುವ ಯುವಕರ ಧ್ವನಿಯಾಗಿ ತನ್ನನ್ನು ಪರಿಚಯಿಸಿಕೊಂಡಿರುವ ಈ ಪಾರ್ಟಿ ತನ್ನ ಧ್ಯೇಯವನ್ನು “ಅಷ್ಟೇ. ಅದೇ ಮಿಷನ್. ಬಾಕಿ ಎಲ್ಲಾ ವ್ಯಂಗ್ಯ” ಎಂದು ಹೇಳಿಕೊಂಡಿದೆ
.
ಸಾಮಾಜಿಕ ಮಾಧ್ಯಮದಲ್ಲಿ ಇದು ಅದ್ಭುತ ಸಂಚಲನವನ್ನೇ ಸಾಧಿಸಿದೆ. ಆರಂಭದಲ್ಲಿ ಕೆಲವು ಸಾವಿರದಿಂದ ಆರಂಭಗೊಂಡ ಈ ಅಭಿಯಾನಕ್ಕೆ ಲಕ್ಷಗಟ್ಟಲೆ ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ 45 ಲಕ್ಷಕ್ಕೂ ಹೆಚ್ಚು ಫಾಲೋವರ್ಗಳಿದ್ದು Xನಲ್ಲೂ ವೈರಲ್ ಆಗುತ್ತಿದೆ. ಕಾಕ್ರೋಚ್ ಜನತಾ ಪಾರ್ಟಿ ತನ್ನ ವೆಬ್ಸೈಟ್ ಮೂಲಕ ಸದಸ್ಯತ್ವ, ಮ್ಯಾನಿಫೆಸ್ಟೋ ಮತ್ತು ಸಂಪರ್ಕ ವಿವರಗಳನ್ನು ನೀಡುತ್ತಿದೆ. TMC ನಾಯಕಿ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಅವರನ್ನು “ಸದಸ್ಯರಾಗಿ ಸ್ವೀಕರಿಸಿದ್ದೇವೆ” ಎಂದು ಘೋಷಿಸುವ ಮೂಲಕ ರಾಜಕೀಯ ಗಮನವನ್ನೂ ಸೆಳೆದಿದೆ.
ಇದು ವ್ಯಂಗ್ಯದೊಂದಿಗೆ ನಿಜವಾದ ರಾಜಕೀಯ ಬೇಡಿಕೆಗಳನ್ನು ಮಿಶ್ರಣಗೊಳಿಸಿದ ಐದು ಅಂಶಗಳ ಪ್ರಣಾಳಿಕೆಯನ್ನು ಪ್ರಕಟಿಸಿದೆ. ನ್ಯಾಯಾಧೀಶರಿಗೆ ನಿವೃತ್ತಿ ನಂತರ ರಾಜ್ಯಸಭಾ ಸ್ಥಾನದಂಥ ಕೊಡುಗೆಗಳನ್ನು ನೀಡಬಾರದು, ಮತದಾರರ ಮತಗಳನ್ನು ಅಳಿಸಿದರೆ CEC ಯವರನ್ನು UAPA ಅಡಿ ಬಂಧಿಸಬೇಕು, ಮಹಿಳೆಯರಿಗೆ 50% ಮೀಸಲಾತಿ, ಅಂಬಾನಿ-ಅದಾನಿ ಮಾಧ್ಯಮಗಳ ಲೈಸೆನ್ಸ್ ರದ್ದು ಮತ್ತು ಪಕ್ಷಾಂತರಕ್ಕೆ 20 ವರ್ಷ ನಿಷೇಧ ಇವು ಪಕ್ಷದ ಬೇಡಿಕೆಗಳು.
ನಿರುದ್ಯೋಗ, ಪರೀಕ್ಷಾ ಪೇಪರ್ ಲೀಕ್, ನ್ಯಾಯಾಂಗ ಸುಧಾರಣೆ ಮತ್ತು ಮಾಧ್ಯಮ ಪಕ್ಷಪಾತದಂತಹ ಯುವಕರ ಅಸಮಾಧಾನಗಳನ್ನು ಇದು ಮುನ್ನೆಲೆಗೆ ತಂದಿದೆ.
ಈ ಚಳವಳಿ ಭಾರತದಲ್ಲಿ ನಿರುದ್ಯೋಗಿ ಯುವಕರ ಒತ್ತಿಟ್ಟುಕೊಂಡ ಕೋಪ ಮತ್ತು ಅಸಮಾಧಾನವನ್ನು ಸ್ಪಷ್ಟವಾಗಿ ಬಿಂಬಿಸುತ್ತಿದೆ. ವ್ಯಂಗ್ಯವನ್ನು ಆಯುಧವಾಗಿ ಬಳಸಿ ರಾಜಕೀಯದಿಂದ ದೂರವಿದ್ದ ಯುವಕರನ್ನು ಒಳಗೆ ತರುವ ಪ್ರಯತ್ನ ನಡೆಯುತ್ತಿದೆ.
ಯಾವುದೇ ಸಂಘಟನೆ ಅಥವಾ ಹಣ ಇಲ್ಲದೆ ಡಿಜಿಟಲ್ನಲ್ಲಿ ಲಕ್ಷಾಂತರ ಜನರನ್ನು ಒಟ್ಟಿಗೆ ಸೇರಿಸುವುದು ಭಾರತೀಯ ರಾಜಕೀಯದಲ್ಲಿ ಹೊಸ ಮಾದರಿ. ಅಭಿಜೀತ್ ದೀಪ್ಕೆಯ ಹಿಂದಿನ AAP ಸಂಪರ್ಕದ ಕಾರಣ ಕೆಲವರು ಇದನ್ನು ವಿರೋಧ ಪಕ್ಷದ ಪ್ರಾಕ್ಸಿ ಎಂದು ಟೀಕಿಸುತ್ತಿದ್ದರೂ, ಇದು ಬಹುತೇಕ ರಾಜಕೀಯ ರಹಿತ ಯುವಕರ ಧ್ವನಿಯಂತೆ ಕಾಣುತ್ತಿದೆ.
ಕಾಕ್ರೋಚ್ ಜನತಾ ಪಾರ್ಟಿ ಭಾರತೀಯ ರಾಜಕೀಯದಲ್ಲಿ ವ್ಯಂಗ್ಯವನ್ನು ರಾಜಕೀಯ ಭಾಷೆಯಾಗಿ ಬಳಸುವ ಹೊಸ ಪ್ರಯೋಗವಾಗಿದೆ. ಇದು ಕೇವಲ ಮೀಮ್ ಚಳವಳಿಯಾಗಿ ಮರೆಯಾಗಬಹುದು ಅಥವಾ ದೀರ್ಘಕಾಲದ ಯುವ ಚಳವಳಿಗೆ ಬೀಜ ಬಿತ್ತಬಹುದು. ಇದು ರಾಜಕೀಯ ವ್ಯವಸ್ಥೆಗೆ ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತಿದೆ – “ನೀವು ನಮ್ಮನ್ನು ಕಾಕ್ರೋಚ್ ಎಂದು ಕರೆದರೆ, ನಾವು ಒಟ್ಟಾಗಿ ಕಾಕ್ರೋಚ್ ಜನತಾ ಪಾರ್ಟಿಯಾಗುತ್ತೇವೆ.” ಇನ್ನೂ ಆರಂಭದ ಹಂತದಲ್ಲಿರುವ ಈ ಚಳವಳಿಯ ಮುಂದಿನ ಗತಿಯನ್ನು ಯುವಕರೇ ನಿರ್ಧರಿಸುತ್ತಾರೆ.

