ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸುಪ್ರೀಂಕೋರ್ಟ್ನಲ್ಲಿ ಕೋರಿದ್ದ ಜಾಮೀನು ಅರ್ಜಿ ವಿಚಾರಣೆ ಅಂತ್ಯವಾಗಿದೆ. ಸದ್ಯಕ್ಕೆ ದರ್ಶನ್ಗೆ ಬಿಡುಗಡೆ ಭಾಗ್ಯ ಇಲ್ಲ. ಕೊಲೆ ಆರೋಪಿ ದರ್ಶನ್ ಗೆ ಇನ್ನೂ 1 ವರ್ಷ ಜೈಲೇ ಗತಿ. 2027ರ ಮೇ 15ರವರೆಗೆ ದರ್ಶನ್ ಗೆ ಜೈಲು ವಾಸ. ಪ್ರಕರಣ ಇತ್ಯರ್ಥಗೊಳಿಸಿದ ಸುಪ್ರೀಂಕೋರ್ಟ್.
ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸದ್ಯಕ್ಕೆ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದರಿಂದಾಗಿ ದರ್ಶನ್ ಅವರು ಮತ್ತಷ್ಟು ದಿನಗಳ ಕಾಲ ಜೈಲಿನಲ್ಲಿಯೇ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಸುಪ್ರೀಂಕೋರ್ಟ್ ಪೀಠವು ಪ್ರಕರಣದ ವಿಚಾರಣೆ ನಡೆಯುತ್ತಿರುವ ವೇಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದಾರೆ. ಆದರೆ, ಕಳೆದ 7 ತಿಂಗಳುಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ ಎಂದು ತಿಳಿದ ನ್ಯಾಯಾಲಯವು ಗರಂ ಆಯಿತು. ಹೀಗೆ ವಿಚಾರಣೆ ನಡೆದರೆ ಪ್ರಕರಣ ಮುಕ್ತಾಯವಾಗಲು ತುಂಬಾ ಸಮಯ ಬೇಕಾಗುತ್ತದೆ. ವಿಚಾರಣೆ ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಚಾರಣೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮಹತ್ವದ ಗಡುವನ್ನು ವಿಧಿಸಿದೆ. ಮುಂದಿನ ವರ್ಷ ಅಂದರೆ 2027ರ ಮೇ 15ರ ಒಳಗಾಗಿ ಈ ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ಮುಗಿಸಬೇಕು ಎಂದು ಆದೇಶಿಸಿದೆ. ಇಂದಿನಿಂದ ಒಂದು ವರ್ಷದೊಳಗೆ ವಿಚಾರಣೆ ಪ್ರಕ್ರಿಯೆ ಅಂತ್ಯಗೊಳ್ಳಬೇಕು ಮತ್ತು ಈ ನಿಟ್ಟಿನಲ್ಲಿ ಪ್ರತಿದಿನ ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದೆ. ಈ ಗಡುವಿನ ನಂತರವೇ ಜಾಮೀನು ಅರ್ಜಿಯನ್ನು ಮರು ಪರಿಗಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

