ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಒಬ್ಬ ಕೆಟ್ಟ ರಾಜಕಾರಣಿ, ಬೀದಿ ಭಾಷಣಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜರಿದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬೆಂಗಳೂರಿನಲ್ಲಿ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿಯವರೂ ಸೇರಿದಂತೆ ದೇಶದ ಪ್ರಧಾನಮಂತ್ರಿಯಾದವರು ಎಂದೂ ಕೆಟ್ಟ ರಾಜಕಾರಣಿಗಳ ರೀತಿ ಬೀದಿ ಭಾಷಣ ಮಾಡಿ ವಿರೋಧಪಕ್ಷಗಳನ್ನು ಹಳಿಯಲು ಹೋಗಿಲ್ಲ. ಅವರೆಲ್ಲರೂ ಕಾಪಾಡಿಕೊಂಡು ಬಂದಿದ್ದ ಪ್ರಧಾನಿ ಕುರ್ಚಿಯ ಘನತೆ, ಗಾಂಭಿರ್ಯ ಮತ್ತು ಔಚಿತ್ಯವನ್ನು ನರೇಂದ್ರ ಮೋದಿಯವರು ತಮ್ಮ ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷಾಸೂಯೆಗಳನ್ನು ವ್ಯಕ್ತಪಡಿಸುವ ಭಾಷಣಗಳ ಮೂಲಕ ಮಣ್ಣುಪಾಲು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಬೆಂಗಳೂರಿಗೆ ಬಂದಿದ್ದ ಮೋದಿಯವರು ಇನ್ನೂ ಪಂಚ ರಾಜ್ಯಗಳ ಚುನಾವಣಾ ರ್ಯಾಲಿಗಳ ಗುಂಗಿನಲ್ಲಿಯೇ ಇದ್ದಂತೆ ಕಂಡರು. ಅವರು ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ಇಲ್ಲವೇ ರಾಜ್ಯ ಬಿಜೆಪಿ ಅಧ್ಯಕ್ಷರೋ? ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲವನ್ನು ಬಗೆಹರಿಸಬೇಕು ಎಂದು ಕಾಲೆಳೆದಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು ರಾಜ್ಯದಲ್ಲಿರುವ ಅವರ ಪಕ್ಷದ ದುಸ್ಥಿತಿಯಯನ್ನು ಸರಿಪಡಿಸಲಾಗದ ಅಸಹಾಯಕತೆ ಇತ್ತು. ತನ್ನ ಎಲೆ ಮೇಲೆ ಆನೆ ಸತ್ತು ಬಿದ್ದಿದ್ದರೂ ಎದುರಿನವರ ಎಲೆ ಮೇಲೆ ಸತ್ತುಬಿದ್ದ ನೊಣವನ್ನು ಹುಡುಕಾಡುವ ಢೋಂಗಿ ಬುದ್ಧಿಯೂ ಅವರ ಭಾಷಣದಲ್ಲಿ ಇತ್ತು.
ಇದು ಯಾವ ಅಭಿವೃದ್ದಿಯ ಲಕ್ಷಣ : 2024-25ರಲ್ಲಿಯೇ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುವೆ ಎಂದು ಕೊಚ್ಚಿಕೊಂಡಿದ್ದ, ಭಾರತದ ಅಭಿವೃದ್ದಿ ರಥ ನಾಗಾಲೋಟದಿಂದ ಮುಂದೋಡುತ್ತಿದೆ ಎಂದು ಬೀಗಿದ್ದ ಮತ್ತು ದೇಶದ ಬಡತನವನ್ನು ನಿರ್ಮೂಲನೆ ಮಾಡಿ ಆಗಿದೆ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡಿದ್ದ ಪ್ರಧಾನಿಯವರು ಈಗ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮತ್ತು ಖಾದ್ಯ ಎಣ್ಣೆ ಕಡಿಮೆ ಬಳಸಿ, ವಿದೇಶ ಪ್ರವಾಸ ಮಾಡಬೇಡಿ ಮತ್ತು ಗೊಬ್ಬರ ಬಳಕೆ ತಗ್ಗಿಸಿ ಎಂದು ಬೇಡಿಕೊಳ್ಳುತ್ತಿರುವುದು ಯಾವ ಅಭಿವೃದ್ದಿಯ ಲಕ್ಷಣ ಎನ್ನುವುದನ್ನು ಮೋದಿಯವರೇ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೈಫಲ್ಯಕ್ಕೆ ಯಾರನ್ನು ದೂರುತ್ತೀರಿ? : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯತೈಲ ಎಲ್ಲವೂ ದುಬಾರಿಯಾಗಿ ದೇಶದ ಜನರ ನಿತ್ಯದ ಜೀವನ ನಿರ್ವಹಣೆಗಾಗಿ ಪರದಾಡುವಂತಹ ಪರಿಸ‍್ಥಿತಿ ನಿರ್ಮಾಣಕ್ಕೆ ದೇಶದ ಎಡಬಿಡಂಗಿ ವಿದೇಶಾಂಗ ನೀತಿ ಕಾರಣ ಎನ್ನುವುದನ್ನು ಅರಿತುಕೊಳ್ಳುವಷ್ಟು ಜನತೆ ಪ್ರಬುದ್ಧರಾಗಿದ್ದಾರೆ. ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಯುದ್ಧದ ನಡುವೆ ಭಾರತ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯ ಮತ್ತು ನೀತಿಯ ಪರವಾಗಿ ಗಟ್ಟಿಯಾದ ನಿಲುವು ತೆಗೆದುಕೊಂಡಿದ್ದರೆ ಭಾರತ ಇಂದಿನ ದುಸ್ಥಿತಿಯನ್ನು ಎದುರಿಸುತ್ತಿರಲಿಲ್ಲ. ಮೋದಿಯವರೇ, ಈ ವೈಫಲ್ಯಕ್ಕೆ ಯಾರನ್ನು ದೂರುತ್ತೀರಿ? ಜವಾಹರಲಾಲ್ ನೆಹರೂ ಅವರನ್ನೇ? ಕಾಂಗ್ರೆಸ್ ಪಕ್ಷವನ್ನೇ? ಉತ್ತರಿಸಿ.
ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರ : ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ದೇಶದ ತಲಾವಾರು ಆದಾಯ ರೂ.2.11 ಲಕ್ಷ ರೂ.ಗಳಾಗಿದ್ದರೆ ಕರ್ನಾಟಕದ್ದು 4.33 ಲಕ್ಷ ರೂಪಾಯಿಗಳು. ದೇಶದ ಜಿಡಿಪಿ ಬೆಳವಣಿಗೆಯ ದರ ಶೇಕಡಾ 7.4 ಆಗಿದ್ದರೆ, ಕರ್ನಾಟಕದ್ದು ಶೇಕಡಾ 8.1 ಆಗಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲು ಶೇಕಡಾ 9.19 ಆಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕದ್ದೇ ಅತ್ಯಧಿಕ ಪಾಲು.
ಪ್ರಧಾನಿಗಳೇ, ಕರ್ನಾಟಕವು ಅಭಿವೃದ್ದಿಯ ಪಥದಲ್ಲಿ ವೇಗದಲ್ಲಿ ಸಾಗುತ್ತಿರುವುದಕ್ಕೆ ಇನ್ನೇನು ಪುರಾವೆ ಬೇಕು? ಮುಂದಿನ ಬಾರಿ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಸ್ವಲ್ಪ ಪೂರ್ವ ತಯಾರಿ ಮಾಡಿಕೊಂಡು ಬನ್ನಿ. ದೇಶದ ಪ್ರಧಾನಿಯವರ ಬಾಯಲ್ಲಿ ಸುಳ್ಳು ಹೇಳಿಕೆಗಳು ಶೋಭೆಯಲ್ಲ.
ಕರ್ನಾಟಕ ಬಿಜೆಪಿ ಸ್ಥಿತಿ ಹೇಡಿಗಳಂತಾಗಿದೆ:
ಕರ್ನಾಟಕದ ಬಿಜೆಪಿಯ ಸ್ಥಿತಿ ಬುಟ್ಟಿಯಲ್ಲಿ ಕೂಡಿ ಹಾಕಿರುವ ಏಡಿಗಳಂತಾಗಿದೆ. ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದುಕೊಂಡು ರಾಜಕೀಯ ಹರಾಕಿರಿ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಎದುರಾಗಿ ಪಕ್ಷದೊಳಗೆ ಅರ್ಧ ಡಜನ್ ಗುಂಪುಗಳಿವೆ. ಈ ಗುಂಪುಗಳ ನಾಯಕರು ಯಡಿಯೂರಪ್ಪ ವಿರುದ್ಧ ನೂರಾರು ಆರೋಪಗಳನ್ನು ಮಾಡಿದ್ದರೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ‍್ಳುವ ಧೈರ್ಯ 56 ಇಂಚಿನ ಎದೆಯಳತೆಯ ನಾಯಕರಲ್ಲಿ ಇಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರ ಮಾತಿಗೆ ಆ ಪಕ್ಷದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ.
ಪಕ್ಷವೇ ಅಮಾನತುಗೊಳಿಸಿದ್ದ ನಾಯಕರ ಕಾಲಿಗೆಬಿದ್ದು ಕರೆತಂದು ಚುನಾವಣಾ ಪ್ರಚಾರ ಮಾಡುವಷ್ಟರ ಮಟ್ಟಿಗೆ ರಾಜ್ಯದ ಬಿಜೆಪಿಯ ಸ್ಥಿತಿ ಕೆಟ್ಟುಹೋಗಿದೆ. ಇಂತಹವರು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಹೇಳಲು ಹೊರಟಿದ್ದಾರೆ. ಪ್ರಧಾನಿಯವರೇ ಮೊದಲು ಕುಸಿದು ಬೀಳುತ್ತಿರುವ ನಿಮ್ಮ ಮನೆಯನ್ನು ಭದ್ರಮಾಡಿಕೊಳ್ಳಿ, ನಂತರ ನಮ್ಮ ಬಗ್ಗೆ ಮಾತನಾಡಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

