ಬೆಂಗಳೂರು: ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಈ ಐಪಿಎಲ್ ಸೀಜನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳನ್ನು ಸಂತಸದ ಹೊಳೆಯಲ್ಲಿ ತೇಲಿಸುತ್ತಿದ್ದಾರೆ. ಭುವನೇಶ್ವರ್ ಕುಮಾರ್ (ಭುವಿ) ಮತ್ತೊಮ್ಮೆ ವಿಂಟೇಜ್ ಫಾರ್ಮ್ ಪ್ರದರ್ಶಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ರೋಮಾಂಚಕ ಪಂದ್ಯದಲ್ಲಿ ಭುವಿ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡಿ RCBಗೆ ಜಯ ತಂದುಕೊಟ್ಟಿದ್ದಾರೆ.
ರಾಯಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಭುವಿ ಅವರ ಬೌಲಿಂಗ್‌ನಿಂದ ಅಗ್ರ ಕ್ರಮಾಂಕದ ಬ್ಯಾಟರ್ ಗಳನ್ನು ಕಳೆದುಕೊಂಡಿತು. ಭುವಿ ತಮ್ಮ ನಾಲ್ಕು ಓವರ್ ಗಳಲ್ಲಿ 23ರನ್ ಗಳಿಗೆ 4 ವಿಕೆಟ್ ಪಡೆದು ಹಿಗ್ಗಿದರು. ಮುಂಬೈ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಕೇವಲ 166/7 ಗಳಿಸಲು ಶಕ್ತವಾಯಿತು.
ಮುಂಬೈನ ಆರಂಭಿಕ ಆಟಗಾರರಾದ ರಿಯಾನ್ ರಿಕಲ್ಟನ್, ರೋಹಿತ್ ಶರ್ಮಾ, ತಿಲಕ್ ಕುಮಾರ್ ಅವರ ವಿಕೆಟ್ ಗಳನ್ನು ಪವರ್ ಪ್ಲೇನಲ್ಲೇ ಔಟ್ ಮಾಡಿದ ಭುವಿ ನಂತರ ಅಪಾಯಕಾರಿಯಾಗಿ ಬ್ಯಾಟ್ ಮಾಡುತ್ತಿದ್ದ ತಿಲಕ್ ಕುಮಾರ್ ಅವರನ್ನು ಔಟ್ ಮಾಡಿದರು.
ಅಲ್ಪ ಮೊತ್ತವನ್ನು ಚೇಸ್ ಮಾಡುವಾಗ RCB ತಂಡ ಒತ್ತಡದಲ್ಲಿತ್ತು. ಕೊನೆಯ ಓವರ್‌ನಲ್ಲಿ ಭುವಿ ಬ್ಯಾಟ್‌ನಿಂದಲೂ ಮಿಂಚಿದರು – ಒಂದು ಅದ್ಭುತ ಸಿಕ್ಸ್ ಹೊಡೆದು ತಂಡವನ್ನು 2 ವಿಕೆಟ್‌ಗಳಿಂದ ಗೆಲ್ಲಿಸಿದರು. ಈ ಆಲ್‌ರೌಂಡ್ ಪ್ರದರ್ಶನಕ್ಕೆ ಭುವಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು.
ಈ ಜಯದೊಂದಿಗೆ RCB ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಮುಂಬೈ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ಕ್ರಿಕೆಟ್ ದಂತಕಥೆಗಳ ಬೆಂಬಲ: ಮಾಜಿ ಭಾರತೀಯ ಬ್ಯಾಟ್ಸ್‌ಮನ್ ಮತ್ತು ಆಯ್ಕೆ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್ ಭುವಿ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಮಾತನಾಡುತ್ತಾ, “ವೌ! ವೌ! ವೌ! ವಿಂಟೇಜ್ ಭುವಿ! ಮೊದಲ ಓವರ್‌ನಲ್ಲಿ ರಿಕಲ್ಟನ್, ಎರಡನೇ ಓವರ್‌ನಲ್ಲಿ ನಕಲ್ ಬಾಲ್ ಬಳಸಿ ರೋಹಿತ್ ಶರ್ಮಾ, ನಂತರ ಸೂರ್ಯಕುಮಾರ್ ಯಾದವ್ ಅವರನ್ನು ಡಕ್‌ಗೆ ಔಟ್ ಮಾಡಿದರು. ಇಂಡಿಯಾ ತಂಡಕ್ಕೆ ಭುವನೇಶ್ವರ್ ಕುಮಾರ್ ಮರಳಬೇಕು” ಎಂದು ಹೇಳಿದ್ದಾರೆ.
ಆಶ್ವಿನ್ ಅವರ #BringBackBhuvi ಕರೆ: ಮಾಜಿ ಭಾರತೀಯ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅವರು ಭುವಿ ಪರವಾಗಿ ಧ್ವನಿ ಎತ್ತಿದ್ದಾರೆ. ಜಿಯೋಸ್ಟಾರ್‌ನಲ್ಲಿ ಮಾತನಾಡುತ್ತಾ, “ಇದು ಭುವನೇಶ್ವರ್ ಕುಮಾರ್ ಅವರ ದಿನ. ಈ ಸೀಸನ್ ಅವರದ್ದೇ ಆಗಿದೆ. ಸಮಯ ಸರಿಯಾಗಿದ್ದರೆ ಯಾರೂ ತಡೆಯಲಾರರು. ಅವರು ಕಷ್ಟಪಟ್ಟು ಫಿಟ್‌ನೆಸ್ ಉಳಿಸಿಕೊಂಡಿದ್ದಾರೆ. ಪ್ರತಿ ಟಿ20 ಪಂದ್ಯವನ್ನು ಆಡಿದ್ದಾರೆ. ಅವರು ಭಾರತ ತಂಡಕ್ಕೆ ಮರಳಬೇಕು. #BringBackBhuvi ಟ್ರೆಂಡ್ ಆಗಲಿ. ಹೊಸ ಚೆಂಡಿನಲ್ಲಿ ಅವರು ಚಮತ್ಕಾರ ಮಾಡುತ್ತಾರೆ. ಡೆತ್ ಓವರ್‌ಗಳಲ್ಲಿ ನಿಯಂತ್ರಣ ಇಟ್ಟುಕೊಳ್ಳುತ್ತಾರೆ, ಒತ್ತಡದಲ್ಲಿ ಸಿಕ್ಸ್ ಹೊಡೆಯುತ್ತಾರೆ. BCCI ಅವರನ್ನು ಗಮನಿಸಲಿ” ಎಂದು ಹೇಳಿದ್ದಾರೆ.
36 ವರ್ಷದ ಭುವನೇಶ್ವರ್ ಕುಮಾರ್ ಐಪಿಎಲ್ 2026ರಲ್ಲಿ ಇಪ್ಪತ್ತು ವಿಕೆಟ್ ಗಳಿಸುವ ಮೂಲಕ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂದಿದ್ದಾರೆ. ಫಿಟ್‌ನೆಸ್ ಸುಧಾರಣೆ ಮತ್ತು ಸತತ ಪ್ರಯತ್ನದಿಂದ ಮತ್ತೆ ತನ್ನ ಫಾರ್ಮ್ ಕಾಪಾಡಿಕೊಂಡಿದ್ದಾರೆ. ಅವರು ಭಾರತ ತಂಡಕ್ಕೆ ಮರಳುವ ಅವಕಾಶ ಇದೆ ಎಂಬ ಭರವಸೆ ಈಗ ಎಲ್ಲರಲ್ಲೂ ಹುಟ್ಟಿದೆ.
ಭುವಿ ಅವರ ಈ ಪುನರಾಗಮನವು ಭಾರತೀಯ ಕ್ರಿಕೆಟ್‌ಗೆ ದೊಡ್ಡ ಲಾಭವಾಗುವ ಸಾಧ್ಯತೆ ಇದೆ. ಅಭಿಮಾನಿಗಳ ಬೇಡಿಕೆಯನ್ನು BCCI ಗಂಭೀರವಾಗಿ ಪರಿಗಣಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

