ಬೆಂಗಳೂರು : ಇನ್ನೇನು ಏಪ್ರಿಲ್ ಮುಗಿಯುತ್ತಿದೆ. ಇಡೀ ತಿಂಗಳು ಜನ ಬಿಸಿಲಿನಿಂದ ತತ್ತರಿಸುತ್ತಿದ್ದಾರೆ. ಮುಂದಿನ ತಿಂಗಳು ಹೇಗೋ ಏನೋ ಎಂಬ ಆತಂಕ ಈಗಲೇ ಶುರುವಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಮೇ ತಿಂಗಳಲ್ಲಿ ಸೂರ್ಯ ಮತ್ತಷ್ಟು ಪ್ರಕರನಾಗಲಿದ್ದು, ದಾಖಲೆಯ ತಾಪಮಾನ ಇರುವ ಸಾಧ್ಯತೆ ಇದೆ ಅದರಲ್ಲೂ ರಾಜ್ಯದಲ್ಲಿ ಕಂಡುಕೇಳರಿಯದ ಬಿಸಿಲನ್ನು ಅನುಭವಿಸಬೇಕಾಗುತ್ತದೆ. ಬೆಂಗಳೂರು ಅಕ್ಷರಶಃ ಬೆಂದಕಾಳೂರಾಗಲಿದೆ.
3 ರಿಂದ 4 ಉಷ್ಣಾಂಶ ಹೆಚ್ಚಳ ಸಾಧ್ಯತೆ
ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಮೇ ತಿಂಗಳಲ್ಲಿ ಇನ್ನೂ 3-4 ಡಿಗ್ರಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳಿಂದ ವೃದ್ಧರ ತನಕ ಮೇ ತಿಂಗಳು ಮಳೆಯಾಗುವವರೆಗೂ ಎಚ್ಚರಿಕೆಯಿಂದ ಇರುವುದು ಮುಖ್ಯ.
ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ತಂಪಾಗುವಷ್ಟು ಮಳೆಯಾಗುತ್ತಿಲ್ಲ. ಮುಂದಿನ ಮೇ ತಿಂಗಳಲ್ಲಿ ಉಷ್ಣಾಂಶ ಗರಿಷ್ಠ ಮಟ್ಟಕ್ಕೆ ತಲುಪಿದ ನಂತರ ಮಳೆಯಾಗುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.
ದೇಶಾದ್ಯಂತ ಹೆಚ್ಚುತ್ತಿದೆ ಉಷ್ಣಾಂಶ
ಭಾರತವು ಹಾವಾಮಾನ ವೈಪರೀತ್ಯ ಎದುರಿಸುತ್ತಿದೆ. ಪಶ್ಚಿಮ ಮತ್ತು ಮಧ್ಯ ವಲಯದಲ್ಲಿ ಶಾಖದ ಅಲೆಗಳು ಜೋರಾಗುತ್ತಿದೆ. ಉತ್ತರ ಮತ್ತು ಪೂರ್ವದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಹೀಗಾಗಿ, ಭಾರತ ಹವಾಮಾನ ಇಲಾಖೆ ಹಲವಾರು ಪ್ರದೇಶಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ದೇಶದ ಹಲವಾರು ನಗರಗಳು 40° ಉಷ್ಣಾಂಶ ದಾಟುವ ನಿರೀಕ್ಷೆಯಿದ್ದರೂ, ಎತ್ತರದ ಹಿಮಾಲಯದ ಕೆಲವು ಭಾಗಗಳಲ್ಲಿ ಕನಿಷ್ಠ 10°C ಗಿಂತ ಕಡಿಮೆ ತಾಪಮಾನವಿದೆ.
ಪೂರ್ವ ಉತ್ತರ ಪ್ರದೇಶದ ಬಂದಾದಲ್ಲಿ ನಿನ್ನೆ ಅತ್ಯಧಿಕ ಗರಿಷ್ಠ ತಾಪಮಾನ 47.6° ದಾಖಲಾಗಿದ್ದು, ದೇಶದ ದೊಡ್ಡ ಭಾಗಗಳು ತೀವ್ರ ಶಾಖದ ಒತ್ತಡದಲ್ಲಿವೆ. ಹವಾಮಾನ ಇಲಾಖೆ ಅಲರ್ಟ್ ನೀಡುತ್ತಲೇ ಇದ್ದು, ಹೀಟ್ ವೇವ್ನಿಂದ ರಕ್ಷಿಸಿಕೊಳ್ಳುವಂತೆ ಸೂಚಿಸಿದೆ.

