ಜೈನ ಧರ್ಮದ “ಅಶೋಕವನ” ಎಂಬ ಗ್ರಂಥದಲ್ಲಿ ರಾಜಕೀಯವಾಗಿ ಉನ್ನತ ಸ್ಥಾನದಲ್ಲಿದ್ದ ಅಶೋಕ ಅತ್ಯಂತ ದುಷ್ಟ ಮನುಷ್ಯ ಎಂದು ಚಿತ್ರಿಸಲಾಗಿದೆ. ಇವೆಲ್ಲ ಅಶೋಕ ಬೌದ್ಧ ಧರ್ಮ ಸ್ವೀಕಾರ ಮಾಡುವ ಮುನ್ನ ಅವನಿಗೆ ಆರೋಪಿಸಿದ ಗುಣಲಕ್ಷಣಗಳು. ಈ ರೀತಿಯ ಆರೋಪಗಳನ್ನು ಆತನ ಮೇಲೆ ಹೊರಿಸಿ ಇವನೊಬ್ಬ ಕ್ರೂರಿ ದುಷ್ಟನೆಂದು ತೋರಿಸಿರುವ ಉದ್ದೇಶವೇನೆಂದರೆ ಅಶೋಕ ಧಮ್ಮ ಸ್ವೀಕಾರ ಮಾಡುವ ಮುನ್ನ ಹೇಗಿದ್ದ, ನಂತರ ಹೇಗೆ ಬದಲಾದ ಎಂದು ನಿರೂಪಿಸಲು – ಡಾ. ನಾಗೇಶ್ ಮೌರ್ಯ, ಬೌದ್ಧ ಚಿಂತಕರು.
ಭಾರತದ ಭವ್ಯ ಪರಂಪರೆಯಲ್ಲಿ ನಮಗೆ ಸಿಕ್ಕಿರುವ ಮತ್ತು ಸಿಗುತ್ತಿರುವ ದೊಡ್ಡ ಮಟ್ಟದ ದಾಖಲೆಗಳೆಂದರೆ ಅದು ಬೌದ್ಧ ಧಮ್ಮಕ್ಕೆ ಸೇರಿದವು ಮತ್ತು ಬುದ್ಧರದೇ ಆಗಿವೆ. ಭಾರತದಲ್ಲಿ ಎಲ್ಲೆ ಉತ್ಖನನ ಮಾಡಿದರೂ ಬುದ್ಧರ ಮೂರ್ತಿಗಳು, ವಿಹಾರಗಳು, ಚೈತ್ಯಾಲಯಗಳು, ಸ್ಥೂಪಗಳು, ಶಾಸನಗಳು ದೊರೆಯುತ್ತವೆ. ಭಾರತದಲ್ಲಿ ಬುದ್ಧರ ವಿಚಾರಗಳನ್ನು ಕೊಂದಿದ್ದಕ್ಕಾಗಿ ಭಾರತವು ಕತ್ತಲೆಯ ಯುಗವನ್ನು ಕಾಣಬೇಕಾಯ್ತು. ಬುದ್ಧರ ಪರಂಪರೆಯನ್ನು ಮರೆ ಮಾಚಿದ್ದಕ್ಕಾಗಿ ದೇಶ ಹಿಂದುಳಿಯಿತು. ಇಂತಹ ವಿಶ್ವ ಪಾರಂಪರಿಕ ಸಂಸ್ಕೃತಿಯನ್ನು ಕಟ್ಟಿದ್ದು ಸಾಮ್ರಾಟ್ ಅಶೋಕ. ಅಖಂಡ ಭಾರತವನ್ನು ಆಳಿದ ಮೊದಲ ಸಾಮ್ರಾಟ ಅಶೋಕ, ತನ್ನ ಬಹುತೇಕ ಅಧಿಕಾರವಧಿಯನ್ನು ಧಮ್ಮದ ಮೂಲಕ ಮುನ್ನಡೆಸಿದ ಧಮ್ಮರಾಜ. ತಾನು ಮಾಡಿದ್ದು ಒಂದೇ ಒಂದು ಯುದ್ಧ ಅದು ಕಳಿಂಗ ಯುದ್ಧ. ರಾಜ ಅನಂತ ಪದ್ಮನಾಭನನ್ನು ಸೋಲಿಸಿ, ಯುದ್ಧದಲಿ ಕಂಡ ಅಪಾರ ಸಾವು ನೋವುಗಳಿಂದ ಮನಃಪರಿವರ್ತನೆಗೊಂಡು ಬೌದ್ಧ ಧಮ್ಮವನ್ನು ಸ್ವೀಕರಿಸಿದನು. ವಿಶ್ವದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಒಬ್ಬ ರಾಜ ಇನ್ನೂ ಮುಂದೆ ಖಡ್ಗ ಹಿಡಿದು ಯುದ್ಧ ಮಾಡುವುದಿಲ್ಲವೆಂದು ಶಪಥ ಮಾಡಿದನು ಮತ್ತು ಅದರಂತೆಯೆ ನಡೆದುಕೊಂಡನು. ಅಷ್ಟೇ ಅಲ್ಲ ಬೌದ್ಧ ಧಮ್ಮವನ್ನು ರಾಜಧಮ್ಮವನ್ನಾಗಿ ಮಾಡಿಕೊಂಡು ಮೂವ್ವತ್ತು ವರ್ಷಗಳಿಗೂ ಹೆಚ್ಚು ಕಾಲ ಮೌರ್ಯ ಸಾಮ್ರಾಜ್ಯವನ್ನು ಆಳ್ವಿಕೆ ಮಾಡುತ್ತಾನೆ. ಇದನ್ನು ಭಾರತದ ನಿಜವಾದ ಸುವರ್ಣಯುಗವೆಂದು ಇತಿಹಾಸಕಾರರು ಕರೆದಿದ್ದಾರೆ.
ಶ್ರೀಲಂಕಾದ ಪಾಳಿ ಸಾಹಿತ್ಯದ ಮೂಲಗಳ ಪ್ರಕಾರ ಸಾಮ್ರಾಟ್ ಅಶೋಕ ಪಟ್ಟಾಭಿಷೇಕವಾದ ನಾಲ್ಕನೇ ವರ್ಷದಲ್ಲಿ ಬೌದ್ಧ ಧಮ್ಮವನ್ನು ಸ್ವೀಕಾರ ಮಾಡಿದನು. ರಾಜನಾಗುವ ಮೊದಲು ಅಶೋಕನು ಒರಟ, ಕಠೋರ ಮತ್ತು ಹಿಂಸಾತ್ಮಕ ಗುಣಗಳನ್ನು ಹೊಂದಿದ್ದನು. ಅಧಿಕಾರಕ್ಕಾಗಿ ಆತ ಹೇಗೆಲ್ಲ ಸಹೋದರರನ್ನು ಹಿಂಸಿಸಿ ಕೊಂದನು ಎಂಬುದನ್ನು ಪಾಳಿ ಸಾಹಿತ್ಯದ ಮೂಲಗಳು ಹೇಳುತ್ತವೆ. ಸಂಸ್ಕೃತದ “ದಿವ್ಯವದನ” ಎಂಬ ಗ್ರಂಥವು ಅಶೋಕನು ನೋಡಲು ಕೂರೂಪಿಯಾಗಿದ್ದನು. ಬೆಂಕಿಯುಗುಳುವಂತ ಸ್ವಭಾದವನಾಗಿದ್ದನು. ಅವನೊಬ್ಬ ಭಯಾನಕ ಶೋಷಕ, ಭಯೋತ್ಪಾಕ ಮತ್ತು ಪರಿಚಯವಿಲ್ಲದ ಸಂದರ್ಶಕರನ್ನು ಹಾಗೂ ದಾರಿ ಹೋಕರನ್ನು ಅವನ ಏಜೆಂಟ್ (ಚಂಡಗಿರಿಕ)ನ ಮೂಲಕ ಕೊಲ್ಲಿಸುತ್ತಿದ್ದನು. ಅಲ್ಲದೆ ಅಶೋಕನ ಮೇಲೆ ಐನೂರು ಮಂತ್ರಿಗಳನ್ನು ಶಿರಚ್ಛೇದ ಮಾಡಿದ ಆರೋಪ ಮತ್ತು ನ್ಯಾಯಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಐನೂರು ಮಹಿಳೆಯರನ್ನು ಬೆಂಕಿಯಿಂದ ಸುಟ್ಟ ಆರೋಪವನ್ನು ಉಲ್ಲೇಖಿಸಿದೆ.

ಜೈನ ಧರ್ಮದ “ಅಶೋಕವನ” ಎಂಬ ಗ್ರಂಥದಲ್ಲಿ ರಾಜಕೀಯವಾಗಿ ಉನ್ನತ ಸ್ಥಾನದಲ್ಲಿದ್ದ ಅಶೋಕ ಅತ್ಯಂತ ದುಷ್ಟ ಮನುಷ್ಯ ಎಂದು ಚಿತ್ರಿಸಲಾಗಿದೆ. ಇವೆಲ್ಲ ಅಶೋಕ ಬೌದ್ಧ ಧರ್ಮ ಸ್ವೀಕಾರ ಮಾಡುವ ಮುನ್ನ ಅವನಿಗೆ ಆರೋಪಿಸಿದ ಗುಣಲಕ್ಷಣಗಳು. ಈ ರೀತಿಯ ಆರೋಪಗಳನ್ನು ಆತನ ಮೇಲೆ ಹೊರಿಸಿ ಇವನೊಬ್ಬ ಕ್ರೂರಿ ದುಷ್ಟನೆಂದು ತೋರಿಸಿರುವ ಉದ್ದೇಶವೇನೆಂದರೆ ಅಶೋಕ ಧಮ್ಮ ಸ್ವೀಕಾರ ಮಾಡುವ ಮುನ್ನ ಹೇಗಿದ್ದ, ನಂತರ ಹೇಗೆ ಬದಲಾದ ಎಂದು ನಿರೂಪಿಸಲು ಬೌದ್ಧ ಲೇಖಕರು, ವಿದ್ವಾಂಸರು ಹೀಗೆ ಚಿತ್ರಿಸಿದ್ದಾರೆ. ಇನ್ನೊಂದು ವರ್ಗದ ಅಭಿಪ್ರಾಯವೆಂದರೆ, ಅಶೋಕ ಬೌದ್ಧ ಧಮ್ಮ ಸ್ವೀಕಾರ ಮಾಡಿದ್ದರಿಂದ ಸಹಿಸದೆ ಅವನ ವಿರುದ್ಧ ಉದ್ದೇಶಪೂರ್ವಕವಾಗಿಯೆ ಹೀಗೆ ಅಪಪ್ರಚಾರ ಮಾಡಲಾಗಿದೆ.
ಮೇಲಿನ ದಾಖಲೆಗಳಿಂದ ತಿಳಿದು ಬರುವುದೇನೆಂದರೆ ಅಶೋಕನ ಧಮ್ಮ ಸ್ವೀಕಾರ ನಡೆದದ್ದು ಅವನ ಪಟ್ಟಾಭಿಷೇಕವಾದ ನಾಲ್ಕು ವರ್ಷಗಳ ನಂತರ. ಕಳಿಂಗ ದೇಶದ ಮೇಲೆ ಯುದ್ಧ ಮಾಡಿ ಯುದ್ಧದಿಂದುಂಟಾದ ಸಾವು ನೋವುಗಳು ಅವನನ್ನು ಇನ್ನಿಲ್ಲದಂತೆ ಕಾಡಿದ ಪರಿಣಾಮ ಸಾಮ್ರಾಜ್ಯ ವಿಸ್ತರಣೆಯಿಂದಾಗಬಹುದಾದ ಸಾವು ನೋವುಗಳಿಗಿಂತ ಒಳ್ಳೆಯತನದಿಂದ, ಸನ್ನಡತೆಯಿಂದ ಜನರ ಪ್ರೀತಿಯನ್ನು, ನೆರೆಹೊರೆಯವರೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಸಾಧಿಸಿದರೆ ಯುದ್ಧದ ಅವಶ್ಯಕತೆಯೆ ಇರುವುದಿಲ್ಲ ಎಂಬ ಅರಿವು ಅವನೊಳಗೆ ಮೂಡಿ ಬೌದ್ಧ ಧಮ್ಮ ಸ್ವೀಕರಿಸಿದನು. ಇದನ್ನು ಅವನ ಶಿಲಾಶಾಸನ (ರಾಕ್ ಎಡಿಕ್ಟ್ XIII) ದಲ್ಲಿ ಸ್ವತಃ ಅಶೋಕ ಅವನ ಮನಸ್ಸಿನೊಳಗಿನ ಭಾವನಾತ್ಮಕ ಅನುಭವಗಳನ್ನು ಹೇಳಿ ಕೆತ್ತಿಸಿದ್ದಾನೆ. ಅದರಲ್ಲಿ ಹೇಗೆ ಯುದ್ಧ ಅವನನ್ನು ಬದಲಾಯಿಸಿತು ಎಂಬುದನ್ನು ನೋಡಬಹುದು. ವೈದಿಕ ಧರ್ಮಶಾಸ್ತ್ರಗಳಂತೆ ದಿಗ್ವಿಜಯವೆಂದರೆ ಸಾಮ್ರಾಜ್ಯ ವಿಸ್ತರಣೆ ನೀತಿಯೆ ದೊಡ್ಡ ರಾಜನೀತಿ ಎಂಬುದರಿಂದ ʼಧಮ್ಮವಿಜಯದಿಂದʼ ಸನ್ನಡತೆಯ ಮೂಲಕ ವಿಜಯ ಗಳಿಸುವ ನೀತಿಯೆ ಶ್ರೇಷ್ಠವಾದುದು ಎನ್ನುವುದನ್ನು ಈ ಶಾಸನದ ಮೂಲಕ ಜಗತ್ತಿಗೆ ಸಾರಿದನು. ಈ ಶಾಸನದ ಉದ್ದೇಶ ಬಹಳ ನಿರ್ಧಿಷ್ಟವಾಗಿದೆ. ಅದು ತನ್ನ ಮಕ್ಕಳು ಮತ್ತು ಮೊಮ್ಮಕ್ಕಳು ಶಸ್ತ್ರಗಳಿಂದ ವಿಜಯ ಸಾಧಿಸುವುದನ್ನು ತಡೆಯುವುದಾಗಿತ್ತು. ಅವರು ಸಹ ಧಮ್ಮದ ಮೂಲಕವೇ ವಿಜಯವನ್ನು ಸಾಧಿಸಬೇಕೆನ್ನುವುದು ಅಶೋಕನ ಆಶಯವಾಗಿತ್ತು.

ಕಳಿಂಗ ಯುದ್ಧದ ನಂತರ ಅಶೋಕನ ಮಾನಸಿಕ ತುಮುಲಗಳಿಗೆ, ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಬಲ್ಲವರು ಅವನ ಆಸ್ಥಾನದಲ್ಲಿ ಯಾರು ಇರಲಿಲ್ಲ. ಬ್ರಾಹ್ಮಣರಾಗಲಿ, ಅಜೀವಕರಾಗಲಿ, ನಿಗಂಥನಾಥರಾಗಲಿ ಅಶೋಕನಿಗೆ ಸಮಾಧಾನವಾಗುವ ರೀತಿಯಲ್ಲಿ ಉತ್ತರಿಸಲಾಗಿಲ್ಲ. ಹಾಗಾಗಿ ಇವರ್ಯಾರು ಅವನಿಗೆ ಒಪ್ಪಿಗೆಯಾಗಲಿಲ್ಲ. ಬೇರೆ ಯಾರಾದರೂ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾಗ ಆಕಸ್ಮಿಕವಾಗಿ ಅಶೋಕನ ಕಣ್ಣಿಗೆ ಒಬ್ಬ ಬೌದ್ಧ ಭಿಕ್ಷು ʼನಿಗ್ರೋಧʼ ಬೀಳುತ್ತಾನೆ. ಇವನಿಂದ ಉತ್ತರ ಸಿಗಬಹುದೆ ಎಂದು ತಿಳಿಯಲು ಉತ್ಸುಕನಾಗಿ ನಿಗ್ರೋಧನನ್ನು ಅರಮನೆಯೊಳಗೆ ಕರೆತರಲು ಸೈನಿಕರಿಗೆ ಅಶೋಕ ಹೇಳುತ್ತಾನೆ. ನಂತರ ನಿಗ್ರೋಧನು ʼಅಪ್ಪಮಾದʼ (ಎಚ್ಚರಿಕೆ) ಎಂಬ ವಿಷಯದ ಮೇಲೆ ಪ್ರವಚನ ನೀಡುತ್ತಾನೆ. ಬುದ್ಧರ ವ್ಯಾಖ್ಯಾನಗಳನ್ನು ಕೇಳಿದ ಮೇಲೆ ಅಶೋಕನು ಇನ್ನೂ ಹೆಚ್ಚಿನ ವಿಚಾರಗಳನ್ನು ಅರಿಯಲು ಭಯಸುತ್ತಾನೆ. ನಿಗ್ರೋಧನು ನಾನು ತುಂಬ ಕಿರಿಯ ಭಿಕ್ಷು, ಇತ್ತೀಚೆಗಷ್ಟೇ ಧಮ್ಮವನ್ನು ಕಲಿಯಲು ಶುರು ಮಾಡಿದ್ದೇನೆ, ನನ್ನ ಗುರುಗಳು ʼಮೊಗ್ಗಲಿಪುತ್ತತಿಸ್ಸʼರು ಈ ವಿಚಾರಗಳನ್ನು ಸೊಗಸಾಗಿ ಆಳವಾಗಿ ತಿಳಿಸಿಕೊಡುತ್ತಾರೆ. ತಾವು ದಯವಿಟ್ಟು ಅವರಿರುವ ʼಕುಕ್ಕುಟರಾಮʼ ವಿಹಾರ ಪಾಠಲಿಪುತ್ರದಲ್ಲಿದೆ. ಅಲ್ಲಿಗೆ ಬಂದರೆ ಧಮ್ಮದ ಬಗ್ಗೆ ಹೆಚ್ಚಿನ ಮಾಹಿತಿ ಅರಿಯಬಹುದು ಎಂದು ಹೇಳುತ್ತಾನೆ.
ಮೊಗ್ಗಲಿಪುತ್ತ ತಿಸ್ಸಾರಿಂದ ಬುದ್ಧರ ಧಮ್ಮವನ್ನು ಆರು ತಿಂಗಳುಗಳ ಕಾಲ ನಿರಂತರವಾಗಿ, ಸಂಪೂರ್ಣವಾಗಿ ಕೇಳಿ ತಿಳಿದುಕೊಳ್ಳುತ್ತಾನೆ. ಸಾಮ್ರಾಟ್ ಅಶೋಕನು ಧಮ್ಮಾಸೋಕನಾಗಿ ಬದಲಾಗುತ್ತಾನೆ, ದೇವನಾಂಪ್ರಿಯ ಅಶೋಕನೆಂದು ಬಿರುದಾಂಕಿತನಾಗುತ್ತಾನೆ. ಧಮ್ಮಾಸೋಕನು ತನ್ನ ಆಡಳಿತಾವಧಿಯಲ್ಲಿ ೮೪,೦೦೦.೦೦ ಬೌದ್ಧ ಸ್ತೂಪಗಳನ್ನು ಕಟ್ಟುವ ಯೋಜನೆಯನ್ನು ಹಾಕಿ ಅವುಗಳನ್ನು ತನ್ನ ಆಡಳಿತಾವಧಿಯಲ್ಲಿ ಪೂರ್ಣಗೊಳಿಸುತ್ತಾನೆ. ಒಂದೊಂದು ಸ್ತೂಪವನ್ನು ಬುದ್ಧರ ಒಂದೊಂದು ಪ್ರವಚನದ ಸಂಕೇತವಾಗಿ, ನೆನೆಪಿನಾರ್ಥವಾಗಿ ನಿರ್ಮಾಣ ಮಾಡಿಸಿದನೆಂದು ಬೌದ್ಧ ದಾಖಲೆಗಳು ಹೇಳುತ್ತವೆ. ಬೌದ್ಧ ದಾಖಲೆಗಳ ಪ್ರಕಾರ ಧಮ್ಮಾಸೋಕನು ಆದರ್ಶ ಆಡಳಿತಗಾರನಾಗಿ ಬೌದ್ಧ ಧಮ್ಮಕ್ಕೆ ಮಹತ್ತರ ಕೊಡುಗೆಗಳನ್ನು ನೀಡಿದ್ದಾನೆ. ಕಲ್ಲಿನ ಮೇಲೆ ಬುದ್ಧರ ಸಂದೇಶಗಳನ್ನು ಕೊರೆಸುವ ಮೂಲಕ ಸಾಮಾನ್ಯ ಜನರಿಗೆ ಬುದ್ಧರ ಧಮ್ಮವನ್ನು ತಿಳಿಸಿಕೊಟ್ಟಿದ್ದು ಅವನ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ. ತನ್ನ ಸಾಮ್ರಾಜ್ಯದ ಉದ್ದಗಲಕ್ಕೂ ಈ ರೀತಿಯ ಸಾವಿರಾರು ಕಲ್ಲಿನ ಶಿಲಾ ಶಾಸನಗಳನ್ನು, ಸ್ತೂಪಗಳನ್ನು, ವಿಹಾರಗಳನ್ನು ಕಾಣಬಹುದು. ಬುದ್ಧ ಧಮ್ಮದ ಸಾರವನ್ನು ಸಾಮಾನ್ಯ ಜನರ ಆಡು ಭಾಷೆಯಲ್ಲಿ ಅವರಿಗೆ ತಿಳಿಸುವ ಪ್ರಯತ್ನ ನಿಜಕ್ಕೂ ಅಶೋಕನಿಗೆ ಧಮ್ಮ ಪ್ರಚಾರದಲ್ಲಿ ಎಷ್ಟು ಆಸಕ್ತಿಯಿತ್ತು ಎಂಬುದನ್ನು ತೋರಿಸುತ್ತದೆ. ಬುದ್ಧರ ಜೀವನಕ್ಕೆ ಸಂಬಂಧಿಸಿದಂತೆ ವಾಸ್ತುಶಿಲ್ಪಗಳ ಮೂಲಕ ಜನರಿಗೆ ಧಮ್ಮ ಬೋಧಿಸಿದ್ದು ಐತಿಹಾಸಿಕವಾಗಿ ಮೊದಲ ಪ್ರಯತ್ನವಾಗಿತ್ತು. ತನ್ನ ಇಬ್ಬರು ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರೆಯರನ್ನು ಧಮ್ಮ ಪ್ರಸಾರಕ್ಕಾಗಿ ಶ್ರೀಲಂಕಾಗೆ ಕಳುಹಿಸಿದನು. ಇದು ಕೂಡ ಐತಿಹಾಸಿಕವಾಗಿ ತೆಗೆದುಕೊಂಡ ಅತಿ ದೊಡ್ಡ ನಿರ್ಧಾರವಾಗಿತ್ತು. ಮುಂದೆ ಇವರಿಬ್ಬರು ಶ್ರೀಲಂಕಾದಲ್ಲಿ ಬೌದ್ಧ ಧಮ್ಮಕ್ಕೆ ಗಟ್ಟಿಯಾದ ತಳಪಾಯ ಹಾಕಿದರು. ಇವರು ಅರಹಂತತ್ವ ಪಡೆದುಕೊಂಡು ಅಲ್ಲಿಯೇ ಪರಿನಿಬ್ಬಾಣವಾದರು.
(ಮುಂದುವರೆಯುವುದು….)
ಡಾ. ನಾಗೇಶ್ ಮೌರ್ಯ, ಬೆಂಗಳೂರು
ಬೌದ್ಧ ಚಿಂತಕರು
ಇದನ್ನೂ ಓದಿ-ಚೇತನ್ ಅನಿಸಿಕೆ ಮತ್ತು ಡಾ.ರಾಜ್ ಅಭಿಮಾನಿಗಳ ಆಕ್ರೋಶ


