ಅಪ್ಪನ ಮನೆ ಸೇರಿದ ಗಂಗೆ ಅಣ್ಣ ತಮ್ಮಂದಿರ ಕುಹಕದ ಮಾತುಗಳನ್ನು ಸಹಿಸಲಾರದೆ ಮನೆ ಬಿಟ್ಟು ಹೊರಡಲು ತೀರ್ಮಾನಿಸುತ್ತಾಳೆ. ಇದನ್ನು ಗಮನಿಸಿದ ಅಪ್ಪ ಆಕೆಗೆ ಹತ್ತಿರದಲ್ಲಿಯೇ ಒಂದು ಬಾಡಿಗೆ ಮನೆ ಮಾಡಿಕೊಡುತ್ತಾನೆ. ಮೋಹನನ ಸೊದರ ಮಾವ ಜತೆಗೆ ನಿಂತು ಸಹಾಯ ಮಾಡುತ್ತಾನೆ. ಗರ್ಭಿಣಿಯಾಗಿದ್ದವಳು ಎರಡನೆಯ ಹೆಣ್ಣುಮಗುವಿಗೆ ಜನ್ಮ ನೀಡಿ ಹೊಸಬದುಕು ಕಟ್ಟಿಕೊಳ್ಳುವ ದೃಢ ನಿರ್ಧಾರ ಮಾಡುತ್ತಾಳೆ. ಗಂಗೆಯ ನಿರ್ಧಾರ ಈಡೇರಿತೇ? ಓದಿ, ವಾಣಿ ಸತೀಶ್ ಅವರ ʼತಂತಿ ಮೇಲಿನ ನಡಿಗೆʼ ಯ 65 ನೇ ಕಂತು.
ನಾಲ್ಕು ತಿಂಗಳ ಹಸಿ ಮೈ ಬಾಣಂತಿ ಗಂಗೆ, ಬತ್ತದ ಕೆಸರು ಗದ್ದೆಗಿಳಿದು ನಾಟಿ ಮಾಡುವಾಗ ಇಡೀ ಊರೆ ಬಾಯ ಮೇಲೆ ಬೆರಳಿಟ್ಟು ಕೊಂಡಿತ್ತು. ಕೈ ನಡೆಯದ ಅಪ್ಪ ಕೈ ಚೆಲ್ಲಿ ಕೂತಿದ್ದ. ಮೈಮುರಿದು ದುಡಿಯುತ್ತಿದ್ದ ಅಪ್ಪಜ್ಜಣ್ಣನ ಹೆಡ್ಡತನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದ ಊರ ಐನಾತಿ ಜನ ಪುಡಿಗಾಸನ್ನು ಅವನ ಮೂತಿಗೊರೆಸಿ ಬಾಯಿ ಮುಚ್ಚಿಸಿ ಕಳುಹಿಸಿ ಬಿಡುತ್ತಿದ್ದರು.
ಹೀಗೆ ಅಪ್ಪಜ್ಜಣ್ಣ ತರುತ್ತಿದ್ದ ಪುಡಿಗಾಸು ಮನೆಯ ಯಾವ ಬಂಗಕ್ಕೂ ಎಟುಕದಾದಾಗ ಗಂಗೆ ಅನಿವಾರ್ಯವಾಗಿ ದುಡಿಮೆಗೆ ಇಳಿಯ ಬೇಕಾಯಿತು. ಗಂಗೆಯ ಪಡಿ ಪಾಟಲು ಕಂಡ ಊರ ಜನ ” ಇರೋಳೊಬ್ಳು ತಂಗಿನ ಬಾಳುಸ್ನಾರ್ದ ನಾಮರ್ದ್ ನನ್ಮಕ್ಳು” ಎಂದು ಬೆನ್ನಿಗೆ ಬಿದ್ದ ಗಂಗೆಯ ಅಣ್ಣ ತಮ್ಮಂದಿರ ವಿರುದ್ಧ ಕಟಕಿ ಆಡಿಕೊಂಡು ಓಡಾಡುತ್ತಿದ್ದರು.
ಈ ಜನರ ಮಾತುಗಳನ್ನು ಒಂದಷ್ಟು ಕಾಲ ಅಂಡಿನ ಮೇಲೆಯೇ ಒರೆಸಿಕೊಂಡು ಬಂದ ಚಂದ್ರಹಾಸ, ಒಂದು ದಿನ ಕುಡಿದಿದ್ದು ವಿಪರೀತಕ್ಕೇರಿ, ತನ್ನಿಬ್ಬರು ತಮ್ಮಂದಿರೊಂದಿಗೆ ಗಂಗೆಯ ಮನೆಗೆ ನುಗ್ಗಿದವನೇ “ಗಂಡುನ್ನ ಬುಟ್ಬಂದು ಈ ಊರಲ್ಲಿ ನಮ್ಮ ಮಾನ ಹರಾಜಾಕ್ತಿದ್ಯೇನೆ ಬೋಸುಡಿ ಮುಂಡೆ” ಎಂದು ಅರಚಾಡಿ ಮಕ್ಕಳೊಂದಿಗೆ ಉಣ್ಣುತ್ತಾ ಕುಳಿತಿದ್ದವಳನ್ನು ಎಳೆದಾಡಿ ಮೈ ಹಣ್ಣಾಗುವಂತೆ ಬಡಿದು ಬಂದಿದ್ದ. ವಿಷಯ ತಿಳಿದ ಅಪ್ಪ ಪೋಲಿಸರಿಗೆ ದೂರು ಕೊಡಿಸಲು ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಗಿ ” ಹೋಗ್ಲಿ ಬುಡ್ರಪ್ಪ ಬೆನ್ನಿಗ್ಬಿದ್ದೋರು ; ನನ್ಗು ನನ್ನ ಮಕ್ಳಿಗೋ ನಾಳಿಕೇನಾರ ಆದ್ರೆ ಅವ್ರೆ ನೋಡ್ಬೇಕಲ್ವ..” ಎಂದು ಅಪ್ಪನನ್ನು ಸುಮ್ಮನಾಗಿಸಲು ಪ್ರಯತ್ನಿಸಿದ್ದಳು. “ಈ ಲಫಂಗ್ನನ್ಮಕ್ಳು ನಿನ್ನ ನೋಡ್ತರೆ ಅಂತ ಇನ್ನೂ ಆಸೆ ಇಟ್ಕೋಂಡು ಕೂತಿದ್ಯೆಲ್ಲ ದಡ್ಡಿ. ನೀನಿಂಗೆ ಮೆತ್ತುಗಿದ್ರೆ ಹುರ್ದು ಮುಕ್ಬುಟ್ಟಾರು ಆಟೆಯ. ಇವತ್ತಿನ ಕಾಲ್ದಾಗೆ ಯಾರ್ಗೆ ಯಾರು ಆಗದಿಲ್ಲ ನಮ್ಮ ಬಂದು ಬಸ್ತಲ್ಲಿ ನಾವಿರ್ಬೇಕು ನಡಿ” ಎಂದ ಅಪ್ಪನ ಮಾತನ್ನು ನಯವಾಗಿಯೇ ತಳ್ಳಿ ಹಾಕಿದ ಗಂಗೆ ನಾಕು ದಿನ ಹಾಸಿಗೆಯಲ್ಲಿಯೇ ಹೊರಳಾಡಿ ಸುಧಾರಿಸಿಕೊಂಡು ಮೇಲೆದ್ದಳು.
ಆ ವರ್ಷ ಮಲೆನಾಡಿನ ಮಳೆಗಾಲ ಜೋರಾಗಿಯೇ ಹಿಡಿದು ಕೂತಿತ್ತು. ಬೆಳಗಿನಿಂದ ಸಂಜೆವರೆಗೂ ಕೆಸರುಗದ್ದೆಯಲ್ಲೇ ಓಡಾಡುತ್ತಿದ್ದ ಗಂಗೆಯ ಮೈಯನ್ನು ಶೀತ ನಿಧಾನವಾಗಿ ಆವರಿಸಿ ಕಾಲುಗಳು ಊದಿಕೊಳ್ಳತೊಡಗಿದ್ದವು. ಮನೆಯಲ್ಲುಳಿದರೆ ಹೊಟ್ಟೆಪಾಡಿದ ಕಥೆ ಏನು?ಎಂದು ಯೋಚಿಸಿ ಮತ್ತೆ ದಿನಗೂಲಿಗಾಗಿ ಗದ್ದೆಗಿಳಿದ ಗಂಗೆ ತನ್ನೆಲ್ಲಾ ಆಯಾಸ ಅಸಹಾಯಕತೆಗಳನ್ನೆಲ್ಲ ಬದಿಗೊತ್ತಿ, ಮಕ್ಕಳು ತವರು ಮನೆ ಬಾಗಿಲಲ್ಲಿ ಕೈಚಾಚಿ ನಿಲ್ಲದಂತೆ ಎಚ್ಚರ ವಹಿಸಿದಳು.
ಒಂದು ದಿನ ಉಸಿರು ಬುರುಡೆಯಂತಾಗಿದ್ದ ಗಂಗೆಯ ಕಾಲ ಬೆರಳ ಸಂದುಗಳಲ್ಲಿ ಕಾಣಿಸಿಕೊಂಡ ನೀರಗುಳ್ಳೆಗಳು ನೋಡ ನೋಡುತ್ತಿದ್ದಂತೆ ಒಡೆದು ವೃಣವಾಗಿ ಮೊಣಕಾಲವರೆಗೂ ಆವರಿಸಿಕೊಂಡಿತ್ತು. ನೀರೊಡೆದು ಜಿನುಗುಡುತ್ತಿದ್ದ ಕಾಲುಗಳನ್ನು ಅಲುಗಾಡಿಸಲಾಗದೆ ಕೂತ ಮಗಳಿಗಾಗಿ ಎಲ್ಲಾ ನಾಟಿ ಮದ್ದುಗಳನ್ನು ಮಾಡುತ್ತಲಿದ್ದ ಅಪ್ಪ, ಒಂದು ದಿನ ತಾನೆ ಜಡಿ ಮಳೆ ಗಾಳಿಗೆ ತತ್ತರಿಸಿ ಗೂರಲು ಉಲ್ಬಣಗೊಂಡು ಹಾಸಿಗೆ ಹಿಡಿದು ಮಲಗಿಬಿಟ್ಟ. ಪ್ರತಿ ಮಳೆಗಾಲದಂತೆ ಈ ಮಳೆಗಾಲವೂ…. ಎಂದು ನಿಸೂರಾದ ಮನೆಯವರು ಅಪ್ಪನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಭಾವ ಹೀನರ ನಡುವೆ ದಿನ ದಿನವು ಗುಟುಕು ಉಸಿರಿಗಾಗಿ ಚಡಪಡಿಸುತ್ತಿದ್ದ ಅಪ್ಪ ಯಾವ ಆಸ್ಪತ್ರೆ ವೈದ್ಯಗಳು ಇಲ್ಲದೆ ಇದ್ದಕ್ಕಿದ್ದಂತೆ ಒಂದು ದಿನ ತಟ್ಟನೆ ತನ್ನ ದೇಹ ಬಿಟ್ಟು ಹೊರಟೇ ಬಿಟ್ಟ.
ಹಾಗೆ ಹೋಗುವ ನಟ್ಟ ನಡುರಾತ್ರಿ ತನ್ನ ಮನೆಯಲ್ಲಿ ಹುಚ್ಚು ಲೋಕದ ನಿದ್ದೆಯಲ್ಲಿ ಕೊಚ್ಚಿ ಹೋಗಿದ್ದ ಮಗಳ ಕೆನ್ನೆಗೆ ಬಾರಿಸಿ “ನೀನು ನನ್ನಂಗೆ ಮೆತ್ತುಗಿದ್ರೆ ಇಲ್ಲಿ ಬದ್ಕಕಾಗಕಿಲ್ಲ ಇನ್ಮುಂದುಕಾದ್ರು ಒಂಚೂರು ಗಡ್ಸಾಗು…ಏಳೇಳೀಗ ನಾನೋಯ್ತಿದಿನಿ ಕಂತೆ ಕಳುಸ್ಕೊಡು ” ಎಂದು ಫಳ್ಳನೆ ಮಿಂಚಿ ಮರೆಯಾದ. “ಎಲ್ಲಿಗೊಯ್ತಿರ್ರಪ್ಪ…” ಎಂದು ನಿದ್ದೆಗಣ್ಣಿನಲ್ಲೇ ಅಪ್ಪನನ್ನು ತಡೆದು ನಿಲ್ಲಿಸುವಂತೆ ಕೈ ಅಡ್ಡ ಬೀಸುತ್ತಾ ಕಣ್ಣು ತರೆದ ಗಂಗೆಯ ಕಿವಿಗೆ ಎದೆ ಹೊಡೆದು ಹೋಗುವಂತಹ ಅವ್ವನ ಅಳುವಿನ ಸದ್ದು ಕೇಳಿಸಿತು. ಮಲಗಿದ್ದ ಮಕ್ಕಳನ್ನು ಹಾಗೆಯೇ ಬಿಟ್ಟು ಕುಂಟುತ್ತಾ ಅಪ್ಪನ ಮನೆಗೆ ಓಡಿ ಬಂದಳು. ಶವವಾಗಿ ಮಲಗಿದ್ದ ಅಪ್ಪನ ಮುಖ ನೋಡ ನೋಡುತ್ತಲೇ ದೊಪ್ಪನೆ ಕುಸಿದು ಬಿದ್ದ ಗಂಗೆ, ಎಚ್ಚೆತ್ತಾಗ ಸಾಕಷ್ಟು ತಾಸು ಕಳೆದು ಹೋಗಿತ್ತು. ತನ್ನ ಸುತ್ತಲೂ ಗಾಳಿ ಹಾಕುತ್ತಾ ಕೂತಿದ್ದ ಊರ ಹೆಂಗಸರ ಮಾತು ಸಾಂತ್ವನಕ್ಕಿಂತಲೂ ಹೆಚ್ಚಾಗಿ ಅವಳ ದುರದೃಷ್ಟವನ್ನೇ ಎತ್ತಾಡಿ ಭರ್ಜಿಯಿಂದ ಇರಿದಂತೆ ಅವಳ ಇದ್ದ ಬದ್ದ ಕಸುವನ್ನೆಲ್ಲಾ ಹೊಸಕಿ ಹಾಕಿತ್ತು.
ಯಾರೋ ಎತ್ತಿಕೊಂಡು ಬಂದು ಅಪ್ಪನ ಪಕ್ಕ ಮಲಗಿಸಿದ್ದ ತನ್ನ ಎರಡು ಮಕ್ಕಳು ತಾತನ ಮೇಲೆಲ್ಲಾ ಹರಿದಾಡುತ್ತಾ ಆಟವಾಡುತ್ತಿದ್ದವು. ಐದು ವರ್ಷದ ದೊಡ್ಡ ಕೂಸು ಯೆಶಿ “ಆಚೆಗ್ ಕರ್ಕೊಂಡೋಗು ಏಳ್ ತಾತಾ” ಎಂದು ಯಾರು ಕರೆದರು ಹೋಗದೆ ಜೋರಾಗಿ ಅಳುತ್ತಾ ಚಂಡಿಹಿಡಿದು ಕೂತಿತ್ತು. ತನ್ನ ಮತ್ತು ಅಪ್ಪನ ಹೊರತಾಗಿ ಯಾರ ಪ್ರೀತಿಯ ಪರಿಮಳವನ್ನು ಕಾಣದ ಮಕ್ಕಳನ್ನು ಕಂಡು ಗಂಗೆಯ ಕರುಳು ಚುರುಗುಟ್ಟಿತು. “ಹಾಳ್ ಮನೆ ದೇವ್ರೆ ನಿಂಗೇನು ಕಣ್ಣಿಲ್ವೇನಪ್ಪ ನಮ್ಮಪ್ಪನ್ಯಾಕೆ ಬಲಿ ತಕ್ಕೊಂಡೆ. ನಾನು ನನ್ ಮಕ್ಳು ನಿಂಗೇನ್ ಅನ್ಯಾಯ ಮಾಡಿದ್ವಪ್ಪ” ಎಂದು ಎದೆ ಎದೆ ಬಡಿದುಕೊಳ್ಳ ತೊಡಗಿದಳು. ಯಾರ ಸಾಂತ್ವನಕ್ಕೂ ಬಗ್ಗದ ಅವಳ ಕಣ್ಣೀರು ಜನ್ಮಕ್ಕಾಗುವಷ್ಟು ಬಸಿದು ಕೊಂಡಿತು. ಕೈ ಚೆಲ್ಲಿ ಕೂತ ಜನ ಅತ್ತು ಹಗುರಾಗಿ ಬಿಡಲೆಂದು ಸುಮ್ಮನಾದರು. ಹೀಗೆ ಗಂಗೆಯ ತಾರಾಟ ಗೋರಾಟಗಳ ನಡುವೆಯೇ ಅಪ್ಪನ ಶವಯಾತ್ರೆ ಮುಗಿಸಿ ಎಲ್ಲರೂ ತಣ್ಣಗೆ ಮನೆ ಸೇರಿದರು. ಗಂಗೆ ಮಾತ್ರ ವಾರ ಕಳೆದರು ಅನ್ನ ನೀರು ಮುಟ್ಟದೆ ಚಾಪೆಯಲ್ಲಿಯೇ ಬಿದ್ದುಕೊಂಡು ಸತ್ತ ಅಪ್ಪನನ್ನು ಗೋಗರೆದು ಕರೆಯುತ್ತಿದ್ದಳು.
“ದಿನಾ ಹಿಂಗೆ ಅತ್ಕೊಂಡ್ ಕೂತ್ಕೋ. ನಾಳೆ ಹೊಟ್ಟೆಗಿಲ್ದೆ ನಿನ್ನ್ ಮಕ್ಳೂ ನಿಗ್ರುಕೊತವೆ ನೋಡ್ತಿರು” ಅಪ್ಪಜ್ಜಣ್ಣ ಆಡಿದ ಕಟು ಮಾತು ಗಂಗೆಯನ್ನು ವಾಸ್ತವಕ್ಕೆಳೆದು ತಂದಿತ್ತು. ಕಾಲಿಗತ್ತಿದ ಇಸುಬು ಗುಣವಾಗದ ಹೊರತು ಇವಳು ಮೇಲೇಳಲು ಸಾಧ್ಯವಿಲ್ಲ ಎಂದು ಅರಿತಿದ್ದ ಅಪ್ಪಜ್ಜಣ್ಣ, ಕಂಡ ಕಂಡವರಲ್ಲಿ ” ನಮ್ಮ ಗಂಗಮ್ಮುನ್ ಕಾಲ್ಗೆ ಇಸ್ಬಾಗೈತೆ ಯಾರಾನ ಒಂಚೂರು ಔಸ್ತಿ ಮಾಡ್ಕೊಡಿ” ಎಂದು ಕೇಳಿಕೊಂಡು ತಿರುಗುತ್ತಿದ್ದ. ಒಂದು ದಿನ ಅಚಾನಕವಾಗಿ ಎದುರು ಸಿಕ್ಕ ಗೋಣಿಬೀಡಿನ ಬೆಳ್ಳಪ್ಪಣ್ಣ, ಅಮ್ಮತ್ತಿಯ ಮಲೆಕುಡಿಯರ ಮುದುಕಿ ಮುತ್ತಮ್ಮಜ್ಜಿಯ ಬಳಿ ಗಂಗೆಯನ್ನು ಕರೆದುಕೊಂಡು ಹೋಗಿ ಕೂರಿಸಿದ.
ಎಳೆ ಬಾಳೆಯ ಸುಳಿಯಂತೆ ನಾಜೂಕಾಗಿದ್ದ ಗಂಗೆಯ, ಕಷ್ಟ ಸುಖಗಳನ್ನೆಲ್ಲ ಕೇಳಿ ಮರುಗಿದ ಮುತ್ತಮ್ಮಜ್ಜಿ ” ಕಷ್ಟ ಸುಖ ಮನುಷ್ಯನಿಗ್ಬರ್ದೇ ಮರಕ್ಬತ್ತದ ಮಗಳೇ. ಎಲ್ಲಾ ಬರ್ತವೇ ಅವಾಗೇ ಹೋಗ್ತವೇ ಅಲ್ಲಿವರ್ಗೂ ಒಂದಿಷ್ಟು ಸಹಿಸ್ಕೊಬೇಕು. ಅಂಜ್ಬಾರ್ದು ಮಗಳೇ” ಎಂದು ಧೈರ್ಯ ತುಂಬಿ ಒಳಗೆ ಕೂತಿದ್ದವರನ್ನೆಲ್ಲಾ ಹೊರಗೆ ಕಳುಹಿಸಿ ಗಂಗೆಯ ಎದುರು ದಗದಗನೇ ಉರಿಯುವ ದೀಪ ಹಚ್ಚಿ ಕೊಂಡು ಕುಳಿತಳು. ತನ್ನ ಕೈಲಿದ್ದ ದಪ್ಪನೆಯ ದಬ್ಬಳ ತೋರಿಸಿ “ನೋಡು ಮಗ್ಳೇ ಇದನ್ನ ಕಾಯ್ಸಿ ನಿನ್ನ ಕಾಲ್ ಬೆರಳ ಮೇಲೆ ಇಡ್ತೀನಿ ತಡ್ಕೊಳಕಾಗ್ತದ ನಿನ್ ಕೈಲಿ” ಎಂದಳು. ದೃಢವಾಗಿ ಕುಳಿತಿದ್ದ ಗಂಗೆ “ನಾನು ನನ್ನ ಮಕ್ಳುನ್ನ ಸಾಕ್ಬೇಕು ಏನಾದ್ರು ಸೈಸ್ಕೊತಿನಿ ಅದೆನ್ ಮಾಡ್ತಿಯೋ ಮಾಡಜ್ಜಿ” ಎಂದು ಗಟ್ಟಿಯಾಗಿ ಕಣ್ಣು ಮುಚ್ಚಿ ಕುಳಿತಳು.
ತಾರಸ್ತರದಲ್ಲಿ ತುಳು ಪಾಡ್ದನ ಹಾಡತೊಡಗಿದ ಮುತ್ತಜ್ಜಿ ರವರವನೇ ಕಾದು ಕೆಂಪಾದ ದಬ್ಬಳದ ಮೊನೆಯನ್ನು ಎರಡು ಮೂರು ಬಾರಿ ಗಂಗೆಯ ಕಾಲ ಬೆರಳುಗಳ ಮೇಲಿಟ್ಟು ಸರಕ್ಕನೆಳೆದು ತೆಗೆದಳು. ಪ್ರಾಣವೇ ಹೋಗಿಬಂದಂತೆ ಕುಳಿತಲ್ಲೇ ವಿಲಿಗುಟ್ಟಿದ ಗಂಗೆ ಆ ನೋವನ್ನು ಹಲ್ಲು ಕಚ್ಚಿ ಸೈರಿಸಿದಳು. ಕಣ್ಣು ತೆರೆದಾಗ ಬೆಂಕಿ ಇಟ್ಟಂತೆ ಉರಿಯುತ್ತಿದ್ದ ಎರಡು ಕಾಲ ಬೆರಳುಗಳು ಕಾಲುವೆಗಳಂತೆ ಬಾಯಿ ತೆರೆದು ಇಬ್ಭಾಗವಾಗಿ ಕೂತಿದ್ದವು. ಅದರೊಳಕ್ಕೆ ಚೊಗಟೆ ಸೊಪ್ಪಿನ ಒಣಪುಡಿ ತುಂಬಿದ ಮುತ್ತಜ್ಜಿ “ನೀ ಬಾಳ ಗಟ್ಟಿಗಿತ್ತಿ ಇದ್ದಿ ಮಗ್ಳೇ .ಬಿಡ್ದಂಗೆ ದಿನಾ ಮೂರು ಹೊತ್ತು ಇದುನ್ನ ಹಾಕು. ಇನ್ನು ಹದಿನೈದು ದಿನದಲ್ಲಿ ನಿನ್ ಇಸ್ಬು ಮಂಗಮಾಯ ತಿಂಗಳ್ಬೆಳಕಾಗಿ ಬಿಡ್ತದೆ” ಎಂದು ಗಂಗೆಯ ದೃಷ್ಟಿ ತೆಗೆದು ಔಷಧಿ ಕೊಟ್ಟು ಕಳುಹಿಸಿದಳು.
64ನೆಯ ಸಂಚಿಕೆ ಓದಿದ್ದೀರಾ? ಬದುಕಿನತ್ತ ಮುಖಮಾಡಿದ ಗಂಗೆ
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.