ಬೆಂಗಳೂರು : ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಘೋಷಣೆಯಾಗಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ನಿರ್ಣಯವನ್ನು ಒಳಮೀಸಲಾತಿ ಹೋರಾಟಗಾರರು ಕೈಗೊಂಡಿದ್ದಾರೆ.
ಈ ಸಂಬಂಧ ಹೋರಾಗಾರರು ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಬಳಿಕ ಪತ್ರಿಕಾ ಹೇಳಿಕೆ ನೀಡಿರುವ ಹೋರಾಟಗಾರರು, ಒಳ ಮೀಸಲಾತಿ ಜಾರಿ ಸಂಬಂಧ ದ್ರೋಹ ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
35 ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಭರವಸೆಯನ್ನು ಹೊಂದಿದ್ದೇವು. ಕಾಂಗ್ರೆಸ್ ನೇತೃತ್ವದ ಸರ್ಕಾರ ಎರಡು ವರ್ಷಗಳಿಂದ ನಿರಂತರವಾಗಿ ಉದಾಸೀನ ತೋರುತ್ತಿದೆ. ಸರ್ಕಾರ ಮಾತ್ರ ಸಾಮಾಜಿಕ ನ್ಯಾಯದ ನಿರಾಕರಣೆ ಮಾಡುತ್ತಿದೆ. ಒಳಮೀಸಲಾತಿ ಕುರಿತು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿತ್ತು. ಆದರೆ ಒಂದು ದಿನ ಮುಂಚಿತವಾಗಿ ಸರ್ಕಾರ ಉಪಚುನಾವಣೆ ಎಂಬ ಕುಂಟುನೆಪವನ್ನು ಮುಂದಿಟ್ಟುಕೊಂಡು ಶುಕ್ರವಾರ ನಡೆಯಬೇಕಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಒಳಮೀಸಲಾತಿ ಹೋರಾಟಗಾರರ ಅಭಿಪ್ರಾಯಗಳನ್ನು ಪಡೆಯದೇ ಅನಿರ್ಧಿಷ್ಟಾವಧಿಗೆ ಮುಂದೂಡಿ ಒಳಮೀಸಲಾತಿಗೆ ಬಹುದೊಡ್ಡ ದ್ರೋಹ ಎಸಗಿದ್ದಾರೆ. ಇದನ್ನು ಸಮಗ್ರ ಒಳಮೀಸಲಾತಿ ಹೋರಾಟಗಾರರು ಖಂಡಿಸುತ್ತೇವೆ ಎಂದಿದ್ದಾರೆ.
ದಾವಣಗೆರೆ ಹಾಗೂ ಬಾಗಲಕೋಟೆಯಲ್ಲಿ ಘೋಷಣೆಯಾಗಿರುವ ಉಪಚುನಾವಣೆಯಲ್ಲಿ ಒಳಮೀಸಲಾತಿ ಹೋರಾಟಕ್ಕೆ ದ್ರೋಹ ಮಾಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಕಳೆದ 35 ವರ್ಷಗಳಿಂದ ಸಾಮಾಜಿಕ ನ್ಯಾಯದ ಈ ಬೇಡಿಕೆಯನ್ನು ಬೆಂಬಲಿಸಿದ್ದ ಕರ್ನಾಟಕದ ಎಲ್ಲಾ ಪ್ರಜ್ಞಾವಂತರು ನಮ್ಮ ಈ ನಿಲುವನ್ನು ಬೆಂಬಲಿಸಬೇಕೆಂದು ವಿನಂತಿ ಮಾಡಿದ್ದಾರೆ. ಅಲ್ಲದೇ, ಒಳಮೀಸಲಾತಿ ಜಾರಿ ಇಲ್ಲದೆ ತುಂಬಲು ಹೊರಟಿರುವ 56,432 ಹುದ್ದೆಗಳನ್ನು ಮುಂದಿನ ಸಚಿವ ಸಂಪುಟ ಸಭೆ ನಡೆಯುವವರೆಗೂ ಸರ್ಕಾರ ನೇಮಕಾತಿ ಮಾಡಬಾರದೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಾಮಾಜಿಕ ನ್ಯಾಯವನ್ನು ನಿರಾಕರಣೆ ಮಾಡಿದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಹರಿಕಾರರಾದ ಬಾಬು ಜಗಜೀವನ್ ರಾಮ್ ಹಾಗೂ ವಿಶ್ವರತ್ನ ಡಾ. ಬಿ. ಆರ್ ಅಂಬೇಡ್ಕರ್ ರವರ ಜಯಂತಿಯನ್ನು ಆಚರಿಸಲು ಯಾವುದೇ ನೈತಿಕತೆ ಇರುವುದಿಲ್ಲ. ಸಮುದಾಯಗಳು ಮಹನೀಯರ ಜಯಂತಿಯನ್ನು ಆಚರಿಸುತ್ತೇವೆ. ವಿಧಾನಸೌಧ ಮುಂಭಾಗದ ಆಚರಣೆ ಸೇರಿದಂತೆ, ಜಿಲ್ಲಾ ಮಟ್ಟದಲ್ಲಿ ಈ ಮಹನೀಯರ ಜಯಂತಿಯನ್ನು ಆಚರಿಸಲು ಸರ್ಕಾರ ಮುಂದಾದರೆ ಒಳಮೀಸಲಾತಿ ಹೋರಾಟಗಾರರು ಮುತ್ತಿಗೆ ಹಾಕುವುದಾಗಿ ಹಾಗೂ ದಾವಣಗೆರೆ ಉಪ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಮುಂದಿನ ರಾಜ್ಯ ಸಮಿತಿ ಸಭೆಯನ್ನು ದಾವಣಗೆರೆಯಲ್ಲೇ ಕರೆಯಲಾಗಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾರಸಂದ್ರ ಮುನಿಯಪ್ಪ, ಅಂಬಣ್ಣ ಅರೋಲಿಕರ್, ಬಸವರಾಜ್ ಕೌತಾಳ್, ನರಸಪ್ಪ ದಂಡೋರ, ಬಿ. ಆರ್ ಭಾಸ್ಕರ್ ಪ್ರಸಾದ್, ಕರಿಯಪ್ಪ ಗುಡಿಮನಿ, ಎಂ ಗುರುಮೂರ್ತಿ, ಬಿ.ಪಿ ಪ್ರಕಾಶ್ ಮೂರ್ತಿ, ಆರ್ ಮುನಿಯಪ್ಪ
ಪಿ. ಮೂರ್ತಿ, ವೈ. ಸಿ ಕಾಂಬ್ಳೆ, ಚಾವಡೆ ಲೋಕೇಶ್ ಇದ್ದರು.

