ಜೆರುಸಲೆಮ್ : ಇಸ್ರೇಲ್ ಸಂಸತ್ತಿನ (ಕ್ನೆಸೆಟ್) ರಾಷ್ಟ್ರೀಯ ಭದ್ರತಾ ಸಮಿತಿ ಅತ್ಯಂತ ಕ್ರೂರ ಮತ್ತು ಭಯಾನಕ ಮರಣದಂಡನೆ ಮಸೂದೆಗೆ ಅನುಮೋದನೆ ನೀಡಿದ್ದು, ಈ ಮಸೂದೆ ಜಾರಿಯಾದ ನಂತರ ಸಾವಿರಾರು ಪ್ಯಾಲೆಸ್ಟೀನಿಯರನ್ನು ಸಾಮೂಹಿಕವಾಗಿ ಗಲ್ಲಿಗೆ ಗಾಕುವ ಸಾಧ್ಯತೆ ಇದೆ.
ಮಸೂದೆಯು ಈಗ ಸಂಸತ್ತಿನ ಪೂರ್ಣ ಸಭೆಯಲ್ಲಿ ಎರಡನೇ ಮತ್ತು ಮೂರನೇ ಬಾರಿ ಮಂಡನೆಯಾಗಲಿದ್ದು, ಮುಂದಿನ ವಾರದಲ್ಲಿ ಅಂತಿಮ ಮತದಾನ ನಡೆಯುವ ಸಾಧ್ಯತೆ ಇದೆ. ಇದು ಜಾರಿಯಾದರೆ, ಇಸ್ರೇಲ್ ತನ್ನ ಇತಿಹಾಸದಲ್ಲಿ ಅತ್ಯಂತ ಕರಾಳ ಸ್ವರೂಪದಲ್ಲಿ ಮರಣದಂಡನೆಯನ್ನು ವ್ಯಾಪಕವಾಗಿ ಬಳಸುವಂತಾಗುತ್ತದೆ. ಅದೂ ಕೂಡ ಪ್ಯಾಲೆಸ್ಟೀನಿಯನ್ನರ ವಿರುದ್ಧ ಮಾತ್ರ.
ಫಾರ್-ರೈಟ್ ರಾಷ್ಟ್ರೀಯ ಭದ್ರತಾ ಸಚಿವ ಇತಾಮರ್ ಬೆನ್-ಗ್ವಿರ್ ಅವರ ಒಟ್ಜ್ಮಾ ಯೆಹುದಿತ್ (ಜ್ಯೂಯಿಷ್ ಪವರ್) ಪಕ್ಷದ ಸದಸ್ಯೆ ಲಿಮೋರ್ ಸೋನ್ ಹಾರ್-ಮೆಲೆಚ್ ಅವರು ತಂದ ಈ ಮಸೂದೆಯ ಪ್ರಕಾರ ಉಗ್ರ ಕೃತ್ಯಗಳಲ್ಲಿ ತೊಡಗಿ ಇಸ್ರೇಲಿಗರನ್ನು ಹತ್ಯೆ ಮಾಡಿದವರಿಗೆ ಕಡ್ಡಾಯ ಮರಣದಂಡನೆ ವಿಧಿಸಬೇಕು. ಶಿಕ್ಷೆಯು ಗಲ್ಲು ಹಾಕುವುದರ ಮೂಲಕ ಜಾರಿಗೊಳ್ಳುತ್ತದೆ. ತೀರ್ಪು ಪ್ರಕಟಗೊಂಡ 90 ದಿನಗಳೊಳಗೆ ಶಿಕ್ಷೆಯನ್ನು ಜಾರಿ ಮಾಡಬೇಕು.
ಮಸೂದೆಯಲ್ಲಿ ಮೇಲ್ಮನವಿ ಮತ್ತು ಕ್ಷಮಾದಾನದ ಅವಕಾಶಗಳನ್ನು ಸೀಮಿತಗೊಳಿಸಲಾಗಿದೆ. ಪ್ಯಾಲೆಸ್ಟೀನ್ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಾಗುವ ಸೈನ್ಯ ನ್ಯಾಯಾಲಯಗಳಲ್ಲಿ ಸರಳ ಬಹುಮತದಿಂದಲೇ ಶಿಕ್ಷೆ ವಿಧಿಸಬಹುದು.
ಈ ಮಸೂದೆಯು ಕ್ರೂರ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಮಾನವ ಹಕ್ಕು ಸಂಸ್ಥೆಗಳು ತೀವ್ರವಾಗಿ ಖಂಡಿಸಿವೆ. ಪ್ಯಾಲೆಸ್ಟೀನಿಯನ್ನರು ಆಕ್ರಮಿತ ಪ್ರದೇಶಗಳಲ್ಲಿ ಸೈನ್ಯ ನ್ಯಾಯಾಲಯಗಳಲ್ಲಿ ವಿಚಾರಣೆಯಾಗುತ್ತಾರೆ – ಅಲ್ಲಿ ಅವರ ಹಕ್ಕುಗಳು ತುಂಬಾ ಕಡಿಮೆ. ಆದರೆ ಇಸ್ರೇಲಿ ಯಹೂದಿಗಳು ಸಿವಿಲ್ ನ್ಯಾಯಾಲಯಗಳಲ್ಲಿ ವಿಚಾರಣೆಯಾಗುತ್ತಾರೆ – ಅಲ್ಲಿ ಜೀವಾವಧಿ ಶಿಕ್ಷೆಗೆ ಅವಕಾಶವಿದೆ. ಇದು ಎರಡು ಬಗೆಯ ನ್ಯಾಯ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಎಂದು ಅಂತರರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳು ಹೇಳುತ್ತಿವೆ. ಅಮ್ನೆಸ್ಟಿ ಇಂಟರ್ನ್ಯಾಷನಲ್‌ನಂತಹ ಸಂಸ್ಥೆಗಳು ಇದನ್ನು “ವರ್ಣಭೇದ ನೀತಿಯ ಮತ್ತೊಂದು ಆಯುಧʼʼ ಎಂದು ಬಣ್ಣಿಸಿದೆ.
ವಿಶ್ವಸಂಸ್ಥೆ ಮಾನವ ಹಕ್ಕು ತಜ್ಞರು, ಯುರೋಪಿಯನ್ ಯೂನಿಯನ್ ಮತ್ತು ಹಲವು ಮಾನವ ಹಕ್ಕು ಸಂಘಟನೆಗಳು ಈ ಮಸೂದೆಯನ್ನು ಅಮಾನವೀಯ ಮತ್ತು ಕ್ರೂರ ಎಂದು ಖಂಡಿಸಿವೆ. “ಇದು ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಪ್ಯಾಲೆಸ್ಟೀನಿಯನ್ನರ ವಿರುದ್ಧ ತಾರತಮ್ಯ ಮಾಡುತ್ತದೆ” ಎಂದು ವಿಶ್ವಸಂಸ್ಥೆಯ ತಜ್ಞರು ಹೇಳಿದ್ದಾರೆ. ಈಗಾಗಲೇ ಇಸ್ರೇಲ್ ಜೈಲುಗಳಲ್ಲಿ ಪ್ಯಾಲೆಸ್ಟೀನ್ ಖೈದಿಗಳ ಮೇಲೆ ಯಾತನೆ, ಕೊಲೆ ಮತ್ತು ಅಮಾನವೀಯ ವರ್ತನೆಗಳ ಆರೋಪಗಳು ದಾಖಲಾಗಿವೆ. ಈ ಮಸೂದೆ ಜಾರಿಯಾದರೆ ಅದು “ಸಾಮೂಹಿಕ ಗಲ್ಲು ಶಿಕ್ಷೆ”ಗಳಿಗೆ ದಾರಿ ಮಾಡಿಕೊಡಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಇಸ್ರೇಲ್ ತನ್ನ ಸ್ಥಾಪನೆಯ ನಂತರ ಕೇವಲ ಒಂದು ಬಾರಿ ಮಾತ್ರ ಅಧಿಕೃತವಾಗಿ ಮರಣದಂಡನೆ ಜಾರಿಗೊಳಿಸಿದೆ (1962ರಲ್ಲಿ ನಾಜಿ ಅಪರಾಧಿ ಅಡಾಲ್ಫ್ ಐಚ್‌ಮನ್‌ಗೆ). ಈಗ ಈ ಮಸೂದೆಯು ಆ ನಿಯಮವನ್ನು ಬದಲಾಯಿಸಿ, ಪ್ಯಾಲೆಸ್ಟೀನ್ ಖೈದಿಗಳ ವಿರುದ್ಧ ಮಾತ್ರ ಬಳಸುವಂತೆ ಮಾಡುತ್ತಿದೆ. ಇದು ಯುದ್ಧಾಪರಾಧಕ್ಕೆ ಸಮಾನವಾದ ಕ್ರಮ ಎಂದು ಮಾನವಹಕ್ಕು ಕಾರ್ಯಕರ್ತರು ಹೇಳುತ್ತಿದ್ದಾರೆ.
ಇಸ್ರೇಲ್‌ನ ಎಡಪಂಥೀಯ ಪಕ್ಷಗಳು, ವಿರೋಧ ಪಕ್ಷಗಳು ಮತ್ತು ಮಾನವ ಹಕ್ಕು ಸಂಘಟನೆಗಳು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. “ಇದು ನ್ಯಾಯವಲ್ಲ, ಪ್ರತೀಕಾರ” ಎಂದು ಅವರು ಹೇಳುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯುರೋಪಿಯನ್ ಯೂನಿಯನ್ ಸಹ “ಇದು ಕಳವಳಕ್ಕೆ ಕಾರಣವಾಗಿದೆ” ಎಂದು ಹೇಳಿದೆ.
ಈ ಕ್ರೂರ ಮರಣದಂಡನೆಯು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಅದು ಮಾನವತೆಯ ಮೇಲೆ ಕಪ್ಪು ನೆರಳು ಬೀರುತ್ತದೆ. ಪ್ಯಾಲೆಸ್ಟೀನ್ ಜನರ ಮೇಲೆ ಇನ್ನಷ್ಟು ಅನ್ಯಾಯ ಮತ್ತು ಹಿಂಸೆಗೆ ಇದು ದಾರಿ ಮಾಡಿಕೊಡುತ್ತದೆ. ಜಗತ್ತು ಈ ಅಮಾನವೀಯ ಕ್ರಮವನ್ನು ತಡೆಯಬೇಕು ಎಂದು ಮಾನವ ಹಕ್ಕು ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ.

