ಟೆಹ್ರಾನ್: ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ಯೆಯಾದ ಅಲಿ ಲಾರಿಜಾನಿ ಅವರ ಸ್ಥಾನಕ್ಕೆ ಇರಾನ್ ಸರ್ಕಾರ ಈಗ ಹೊಸ ಮುಖ್ಯಸ್ಥರನ್ನು ನೇಮಿಸಿದೆ. ಇರಾನ್‌ನ ಪ್ರಭಾವಿ ಭದ್ರತಾ ಪಡೆ ಐಆರ್‌ಜಿಸಿ (IRGC) ಮಾಜಿ ಕಮಾಂಡರ್ ಮೊಹಮ್ಮದ್ ಜೊಲ್ಘಾದರ್ ಅವರಿಗೆ ರಾಷ್ಟ್ರೀಯ ಭದ್ರತಾ ಮಂಡಳಿಯ ಲೀಡರ್ ಪಟ್ಟ ನೀಡಲಾಗಿದೆ.
ಮೊಹಮ್ಮದ್ ಜೊಲ್ಘಾದರ್ ಅವರ ನೇಮಕಾತಿಗೆ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅಧಿಕೃತವಾಗಿ ಅನುಮೋದನೆ ನೀಡಿದ್ದಾರೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೂಡ ಈ ನೇಮಕಕ್ಕೆ ಸಮ್ಮತಿ ಸೂಚಿಸಿದ್ದಾರೆ. ನಿವೃತ್ತ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ಕಮಾಂಡರ್ ಆಗಿರುವ ಜೊಲ್ಘಾದರ್ ಅವರಿಗೆ ದೇಶದ ಭದ್ರತಾ ವ್ಯವಸ್ಥೆಯ ಮೇಲೆ ಹೆಚ್ಚಿನ ಹಿಡಿತವಿದೆ. ಸದ್ಯದ ಉದ್ವಿಗ್ನ ಪರಿಸ್ಥಿತಿಯಲ್ಲಿ ಇವರ ಅನುಭವ ಇರಾನ್‌ಗೆ ಬಹಳ ಮುಖ್ಯವಾಗಿದೆ.
ಯುದ್ಧದ 19ನೇ ದಿನದಂದು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಲಾರಿಜಾನಿ ಅವರು ಹತ್ಯೆಯಾಗಿದ್ದರು. ಇದು ಇರಾನ್‌ನ ಭದ್ರತಾ ವ್ಯವಸ್ಥೆಗೆ ದೊಡ್ಡ ಹೊಡೆತ ನೀಡಿತ್ತು. ಲಾರಿಜಾನಿ ಅವರ ನಿಧನದ ನಂತರ ದೇಶದ ಭದ್ರತೆಯನ್ನು ಬಲಪಡಿಸಲು ಮತ್ತು ಇಸ್ರೇಲ್ ವಿರುದ್ಧದ ಕಾರ್ಯತಂತ್ರಗಳನ್ನು ರೂಪಿಸಲು ಖಮೇನಿ ಅವರು ಅತ್ಯಂತ ನಂಬಿಕಸ್ತ ಅಧಿಕಾರಿ ಜೊಲ್ಘಾದರ್ ಅವರನ್ನು ಆಯ್ಕೆ ಮಾಡಿದ್ದಾರೆ.
ಯಾರು ಈ ಮೊಹಮ್ಮದ್ ಜೊಲ್ಘಾದರ್?
ಮೊಹಮ್ಮದ್ ಜೊಲ್ಘಾದರ್ ಅವರು ಇರಾನ್ ಸೈನ್ಯದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದವರು. ಐಆರ್‌ಜಿಸಿಯಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಇವರು, ಇರಾನ್‌ನ ಭದ್ರತಾ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ರಾಷ್ಟ್ರೀಯ ಭದ್ರತಾ ಮಂಡಳಿಯ ನೇತೃತ್ವ ವಹಿಸಿಕೊಳ್ಳುವ ಮೂಲಕ ಇರಾನ್‌ನ ಮುಂದಿನ ರಕ್ಷಣಾ ಯೋಜನೆಗಳ ಸಾರಥಿಯಾಗಿದ್ದಾರೆ.

