ಬೆಂಗಳೂರು : “ಬೆಳಗಾವಿಯಲ್ಲಿ ಇರುವ ಮರಾಠಿ ಭಾಷಿಗರು ಕೂಡ ಕರ್ನಾಟಕದವರೇ. ಎಲ್ಲರೂ ಐಕ್ಯತೆಯಿಂದ ಒಟ್ಟಿಗೆ ಹೋಗುವುದು ಮೊದಲ ಕರ್ತವ್ಯವಾಗಬೇಕು. ಕರ್ನಾಟಕದ ಭೂಮಿ, ನಮ್ಮ ಕನ್ನಡ ಭಾಷೆಗೆ ಮೊದಲ ಆದ್ಯತೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬೆಳಗಾವಿಯ ಗ್ರಾಮೀಣ ಭಾಗದ ಜನರಿಗೆ ನಮ್ಮ ಸರ್ಕಾರ ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಅವರು ನಮ್ಮ ನೀರು, ಗಾಳಿ ಕುಡಿಯುತ್ತಿದ್ದಾರೆ. ನಮ್ಮ ಭೂಮಿಯಲ್ಲಿ ವಾಸವಾಗಿದ್ದಾರೆ, ವ್ಯವಸಾಯ ಮಾಡುತ್ತಿದ್ದಾರೆ. ಈ ಬಜೆಟ್ ಅಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಕೃಷಿ ಭೂಮಿಗಳಿಗೆ ನೀರನ್ನು ಒದಗಿಸಲು ರೂ.900 ಕೋಟಿ ವೆಚ್ಚದಲ್ಲಿ ಯೋಜನೆ ಘೋಷಣೆ ಮಾಡಲಿದ್ದೇವೆ” ಎಂದರು.
ಲೋಕಸಭಾ ಮತ್ತು ರಾಜ್ಯಸಭೆ ವಿಚಾರವಾಗಿ ಪ್ರಶ್ನಿಸಿದಾಗ “ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಹುತೇಕ ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗುತ್ತೇವೆ. ಈ ವಿಚಾರವಾಗಿ ನಾನು ಮತ್ತು ಮುಖ್ಯಮಂತ್ರಿಗಳು ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ. ಈಗ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಸಭೆ ಮಾಡುತ್ತೇವೆ, ನಂತರ ಸ್ಕ್ರೀನಿಂಗ್ ಸಮಿತಿ ಸದಸ್ಯರು ಚರ್ಚಿಸಿ ಹೈಕಮಾಂಡಿಗೆ ಪಟ್ಟಿ ಕಳಿಸುತ್ತೇವೆ” ಮತ್ತು “ರಾಜ್ಯಸಭೆಗೆ ನಾವು ರಾಜ್ಯದಿಂದ ಹೆಸರುಗಳನ್ನು ಸೂಚಿಸುತ್ತೇವೆ. ನಂತರ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ” ಎಂದರು.