ದಾವಣಗೆರೆ: ಅಧಿಕೃತವಾಗಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮುನ್ನವೇ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಮತ್ತೊಂದೆಡೆ, ಅಲ್ಪಸಂಖ್ಯಾತ ಸಮುದಾಯದಿಂದ ಕಾಂಗ್ರೆಸ್ ಮುಖಂಡ ಸಾದಿಕ್ ಪೈಲ್ವಾನ್ ಕೂಡ ನಾಮಪತ್ರ ಸಲ್ಲಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರ ಪ್ರತಿನಿಧಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯ ನಂತರ ಘೋಷಣೆಯಾದ ಚುನಾವಣೆಗೆ ಟಿಕೇಟ್‌ಗಾಗಿ ಪೈಪೋಟಿಯೇ ನಡೆದಿದೆ. ಒಂದೇ ಕುಟುಂಬದ ನಾಲ್ವರು ಸದಸ್ಯರು ಟಿಕಟ್‌ಗಾಗಿ ಹೋರಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿದೆ.
ಈ ಮಧ್ಯೆ, ತಾಯಿ ಪ್ರಭಾ ಮಲ್ಲಿಕಾರ್ಜುನ ಅವರ ಜೊತೆಗೆ ಅಜ್ಜಿ ಮನೆಗೆ ತೆರಳಿ ಅಜ್ಜಿಯ ಆಶೀರ್ವಾದ ಪಡೆದರು. ಬಳಿಕ ಅಲ್ಲಿಂದ ನೇರವಾಗಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ, ಎಸಿ ಹಾಗೂ ಚುನಾವಣಾಧಿಕಾರಿ ಸಂತೋಷ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ನಾಮಪತ್ರ ಸಲ್ಲಿಸಲು ಹೊರಡುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದರು. ಬಿ ಫಾರಂ ಸಿಗುವ ಭರವಸೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಕಾಂಗ್ರೆಸ್ ಕಟ್ಟಿರುವುದೇ ಅಪ್ಪಾಜಿ ಶಾಮನೂರು ಅವರು. ಹೀಗಾಗಿ ನಾನು ಕಾಂಗ್ರೆಸ್ ನಿಂದಲೇ ನಾಮಪತ್ರ ಸಲ್ಲಿಸುತ್ತಿರುವೆ ಎಂದರು.
ಇವತ್ತು ಯುಗಾದಿ ಮತ್ತು ರಂಜಾನ್ ಹಬ್ಬ ಇದೆ. ಆದ್ದರಿಂದ ಎರಡು ಹಬ್ಬದ ಶುಭ ಘಳಿಗೆ ಹಿನ್ನೆಲೆ ನಾಮಪತ್ರ ಸಲ್ಲಿಕೆ ಮಾಡ್ತಿದ್ದೇನೆ. ಬೆಳಗ್ಗೆ ಮನೆ ದೇವರು ಕಲ್ಲೇಶ್ವರ ದೇವರು, ದುರ್ಗಾಂಭಿಕಾ ದೇವಿ ಆಶಿರ್ವಾದ ಪಡೆಯಲಾಗಿದೆ. ಕಾರ್ಯಕರ್ತರು ಎಲ್ಲರ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಕೆ ಮಾಡುತ್ತಿರುವೆ. ಅಲ್ಪಸಂಖ್ಯಾತರು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು. ಕ್ಷೇತ್ರದಲ್ಲಿ ತಾತನಂತೆಯೇ ನಾನು ಸೇವೆ ಸಲ್ಲಿಸುತ್ತೇನೆ. ಬಿ ಫಾರಂ ಸಿಕ್ಕ ತಕ್ಷಣ ಸೋಮವಾರ ಅಧಿಕೃತವಾಗಿ ರಾಜ್ಯ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ತಿಳಿಸಿದರು.
ಸಂಸದೆ ಪ್ರಭಾ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ, ಇವತ್ತು ಶುಭ ಮುಹೂರ್ತ ಇದೆ. ಒಂದು ನಾಮಪತ್ರ ಸಾಂಕೇತಿಕವಾಗಿ ಸಲ್ಲಿಸುತ್ತಿದ್ದೇವೆ. ಅಧಿಕೃತವಾಗಿ ಪಕ್ಷದ ಬಿ ಫಾರಂ ಜೊತೆ ಸೋಮವಾರ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಶಾಮನೂರು ಅವರು ಮಾಡಿದ ಕೆಲಸ ನಮಗೆ ಶ್ರೀರಕ್ಷೆ ಆಗಲಿದೆ. ಈಗ ಯುವಕರು ರಾಜಕೀಯಕ್ಕೆ ಬರಬೇಕು ಎಂದರು. .

