ಬೆಳ್ತಂಗಡಿ: ಬಜರಂಗದಳದ ಮೂವರು ವ್ಯಕ್ತಿಗಳು ಸೇರಿ 17 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿ, ಅಪಹರಿಸಿ ಜೀವ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕನು ಮಾನಸಿಕವಾಗಿ ಜರ್ಜರಿತನಾಗಿ ಆತ್ಮಹತ್ಯೆಗೆ ಮನಸ್ಸು ಮಾಡುತ್ತಿದ್ದಾನೆ ಎಂದು ಬಾಲಕನ ತಂದೆ ದೂರಿನಲ್ಲಿ ಉಲ್ಲೇಖಿಸಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ನಡೆದು 7 ದಿನಗಳ ನಂತರ, ಮಾರ್ಚ್ 18 ರಂದು ದೂರು ದಾಖಲಿಸಲಾಗಿದೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ.
ಪ್ರಕರಣದ ವಿವರ : ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಗೆಳೆಯರೊಂದಿಗೆ ಬಂದಿದ್ದ ಅಪ್ರಾಪ್ತ 17 ವಯಸ್ಸಿನ ಮುಸ್ಲಿಂ ಬಾಲಕನ ಮೇಲೆ ಬಜರಂಗದಳದ ಕಾರ್ಯಕರ್ತರ ಗುಂಪೊಂದು ಬಾಲಕನಿಗೆ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳಿ ಅಮಾನುಷವಾಗಿ ಹಲ್ಲೆ ನಡೆಸಿ ಅಪಹರಿಸಿ ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ ಮಾ.11 ರಂದು ತನ್ನ ಸ್ನೇಹಿತರೊಂದಿಗೆ ಉಜಿರೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದಾನೆ. ರಾತ್ರಿ 8.30 ರ ಸುಮಾರಿಗೆ ಜಾತ್ರೆಯಲ್ಲಿ ಆತನ ಸ್ನೇಹಿತರು ಜಾಯೆಂಟ್ ವೀಲ್ ಮೇಲೆ ಹತ್ತಿದ ಸಂದರ್ಭದಲ್ಲಿ ಅವರ ಮೊಬೈಲ್ ಹಿಡಿದುಕೊಂಡು ಸಮೀಪದಲ್ಲಿ ನಿಂತಿದ್ದ ಬಾಲಕನನ್ನು ಉಜಿರೆಯ ಭಜರಂಗದಳದ ಕಾರ್ಯಕರ್ತರು ಎನ್ನಲಾದ ಗೌರವ್ ಶೆಟ್ಟಿ ಹಾಗೂ ರಮೇಶ್ ಇತರರೊಂದಿಗೆ ಸೇರಿ ನೀನು ಮುಸ್ಲಿಮಾ ಎಂದು ಪ್ರಶ್ನಿಸಿದ್ದಾರೆ.
ಹೌದು ಎಂದಾಗ ಆತನ ಮೇಲೆ ಇವರು ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈವೇಳೆ ಆತನ ಸ್ನೇಹಿತರು ಬಿಡಿಸಲು ಬಂದರೂ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ. ಜಾತ್ರೆಯ ನಡುವೆ ಜನಸಂದಣಿ ಹೆಚ್ಚಾದಾಗ ಬಾಲಕನ್ನು ಅಲ್ಲಿಂದ ಬೈಕ್ ನಲ್ಲಿ ತಂಡ ಅಪಹರಿಸಿದ್ದು ಸುಮಾರು ಐದು ಕಿ.ಮೀ. ದೂರದವರೆಗೆ ಕೊಂಡೊಯ್ದು ಅಲ್ಲಿ ನಿರ್ಜನ ಪ್ರದೇಶದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿಯ ತಂಡ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

