ಮೈಸೂರು : ಇದೀಗ ಮೈಸೂರು ನಗರದಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೊಟೇಲ್ ಉದ್ಯಮಕ್ಕೆ ಭಾರಿ ಹೊಡೆತ ಬೀಳುತ್ತದೆ ಎಂಬ ಆತಂಕವನ್ನು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ವ್ಯಕ್ತಪಡಿಸಿದ್ದಾರೆ.
ಶನಿವಾರ ದಿಢೀರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವ ನಗರವಾಗಿದೆ. ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಕಡಿಮೆ ಆಗಿದೆ. ಹೋಟೆಲ್ ಗೆ ಕರೆ ಮಾಡಿ ಮೈಸೂರಿಗೆ ಬಂದರೆ ಊಟ ಸಿಗತ್ತಾ ಎಂದು ಕೇಳಿ ಬುಕ್ ಮಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಖಾಸಗಿ ಕಂಪನಿಗಳಿಂದ ಹೆಚ್ಚಿನ ಬೆಲೆಗೆ ಗ್ಯಾಸ್ ತೆಗೆದುಕೊಂಡು ಹೋಟೆಲ್ ನಡೆಸಲಾಗುತ್ತಿದೆ. ಇಲ್ಲದಿದ್ದರೆ ಶೇ. 50 ರಷ್ಟು ಹೋಟೆಲ್ ಗಳು ಮುಚ್ಚಿ ಹೋಗಿವೆ. ಆಹಾರ ಸಚಿವ ಮುನಿಯಪ್ಪ ಹೋಟೆಲ್ ಮಾಲೀಕರು ಒಂದು ವಾರ ಸಹಕಾರ ಕೊಡುವಂತೆ ಹೇಳಿದ್ದಾರೆ. ನಾವು ಸಹಕಾರ ಕೊಡುತ್ತಿದ್ದೇವೆ ಎಂದು ಹೇಳಿದರು.
ಆದರೆ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೋಟೆಲ್ ಉದ್ಯಮ ನಂಬಿಕೊಂಡು ಬದುಕುತ್ತಿರುವವರು ಬೀದಿಗೆ ಬೀಳುತ್ತಾರೆ. ಹೊರಗಿನಿಂದ ಬರುವವರ ಊಟಕ್ಕೆ ತೊಂದರ ಆಗುತ್ತಿದೆ. ಹೋಟೆಲ್ ವಹಿವಾಟು ಇಲ್ಲದೆ ತರಕಾರಿಗಳ ಬೆಲೆಯೂ ಕುಸಿಯುತ್ತಿದೆ. ಪರಿಣಾಮ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಷಾದಿಸಿದರು.
ರಾಜ್ಯ ಸರ್ಕಾರ ರೈತರ ಹಿತದೃಷ್ಟಿ ಹಾಗು ಪ್ರವಾಸಿಗರ ಹಿತದೃಷ್ಟಿಯಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮೈಸೂರಿನ ಕಾರ್ಯಕ್ರಮಕ್ಕೆ ಒಂದು ಲೋಡ್ ಗ್ಯಾಸ್ ಸಿಲಿಂಡರ್ ಕೊಡುವಂತೆ ಸಿಎಂ ಸಿದ್ದರಾಮಯ್ಯ ಶಿಫಾರಸು ಮಾಡಿದ್ದಾರೆ. ಅಲ್ಲಿ 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಆಗಿತ್ತು. ಇದೇ ರೀತಿ ನಮಗೂ ಕೂಡ ಗ್ಯಾಸ್ ಸಿಲಿಂಡರ್ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಲಕ್ಷ್ಮಣ್ ನಾನ್ವೆಜ್ ಹೊಟೇಲ್ ಬಂದ್ : ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯದಿಂದ ಮೈಸೂರಿನ ಹೆಸರಾಂತ ಲಕ್ಷ್ಮಣ್ ನಾನ್ ವೆಜ್ ಹೋಟೆಲ್ ಬಂದ್ ಮಾಡಲಾಗಿದೆ. ಮೈಸೂರಿನ ಹೃದಯ ಭಾಗದಲ್ಲಿರುವ ಲಕ್ಷ್ಮಣ್ ಮೆಸ್ಗೆ ರಾಜ್ಯದ ಇತರ ಜಿಲ್ಲೆಗಳಿಂದ ಜನರು ಬಂದು ತಮಗಿಷ್ಟವಾದ ನಾನ್ ವೆಜ್ ತಿಂದು ತೆರಳುತ್ತಿದ್ದರು. ಆದರೀಗ ಸಿಲಿಂಡರ್ ಕೊರತೆಯಿಂದಾಗಿ ಕಳೆದ ಬಂದ್ ಆಗಿದೆ.
ಕೃತಕ ಅಭಾವ ಸೃಷ್ಟಿ : ದೇಶದಲ್ಲಿ ವಾಣಿಜ್ಯ ಸಿಲಿಂಡರ್ ಸರಬರಾಜಿನಲ್ಲಿ ಅಭಾವ ಕೃತಕ ಅಭಾವ ಸೃಷ್ಟಿಸಲಾಗಿದೆ. ದೇಶದಲ್ಲಿ ಯಾವುದೇ ರೀತಿಯ ಗ್ಯಾಸ್ ಸಮಸ್ಯೆ ಇಲ್ಲ.ಯಾವ್ಯಾವ ರಾಜ್ಯದಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ಮಾಡಲಾಗ್ತಿದೆ ಅನ್ನೋ ಮಾಹಿತಿ ಇದೆ. ಕೃತಕ ಅಭಾವವನ್ನು ಆಯಾಯ ರಾಜ್ಯಗಳು ತಡೆಗಟ್ಟಬೇಕು. ಎಂದು ಮಾಜಿ ಸಚಿವ ಸಾ ರಾ ಮಹೇಶ್ ಆಗ್ರಹಿಸಿದ್ದಾರೆ.

