ಬೆಂಗಳೂರು : ಇರಾನ್ ಹಾಗೂ ಅಮೆರಿಕಾ, ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದ ಅನಿಲ ಪೂರೈಕೆ ಸ್ಥಗಿತಗೊಂಡಿದ್ದು ಪಿಜಿ, ಹೋಟೆಲ್ ಹಾಗೂ ರೆಸ್ಟೋರೆಂಟ್ ಸೇವೆಗಳ ಮೇಲೆ ಪರಿಣಾಮ ಬೀರಿದೆ.
ಬೆಂಗಳೂರು ನಗರ ಸೇರಿದಂತೆ ಇಡೀ ರಾಜ್ಯದಲ್ಲಿ ವಾಣಿಜ್ಯ ಬಳಕೆಗೆ ಬಳಸುವ ಸಿಲಿಂಡರ್ಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಗ್ಯಾಸ್ ವಿತರಣಾ ಕಂಪನಿಗಳು ವಾಣಿಜ್ಯ ಸಿಲಿಂಡ್ಗಳ ಬುಕ್ಕಿಂಗ್ ನಿಲ್ಲಿಸಿವೆ. ಇದರಿಂದ ಬೆಂಗಳೂರು ನಗರ ಸೇರಿದಂತೆ ವಿವಿಧ ನಗರಗಳ ಹೋಟೆಲ್ಗಳು ಬಾಗಿಲು ಮುಚ್ಚಿವೆ. ಇನ್ನೊಂದು ವಾರದಲ್ಲಿ ಇದೇ ಬಿಸಿ ಗೃಹ ಬಳಕೆಯ ಸಿಲಿಂಡರ್ಗೂ ತಟ್ಟಲಿದೆ ಎಂಬ ಆತಂಕ ನಾಗರಿಕರಲ್ಲಿ ಎದುರಾಗಿದೆ.
ಸಿಲಿಂಡರ್ ಸ್ಟಾಕ್ ಹೊಂದಿದ ಹೋಟೆಲ್ಗಳು ಮಾತ್ರ ಬಾಗಿಲು ತೆರೆದು ಅಹಾರ ತಯಾರಿಸಿ ಒದಗಿಸುತ್ತಿವೆ. ಹೊಸ ಸಿಲಿಂಡರ್ ಲಭ್ಯ ಇಲ್ಲದ ಹೋಟೆಲ್ಗಳು ಮುಚ್ಚಿವೆ. ಕದಂಬ, ಕಾಮತ್, ಉಡುಪಿ ವೈಭವ, ಶ್ರೀಕೃಷ್ಣ ವೈಭವ, ಅಯ್ಯೋಧ್ಯೆ ಗ್ರ್ಯಾಂಡ್, ಹಳ್ಳಿಮನೆ, ನಮ್ಮೂರ ತಿಂಡಿ ಸೇರಿದಂತೆ ಪ್ರಮುಖ ಹೊಟೇಲ್ಗಳು ಬಾಗಿಲು ಮುಚ್ಚಿವೆ. ಶೇ. 50ರಷ್ಟು ಹೋಟೆಲ್ಗಳು ಒಂದೆರಡು ದಿನದಲ್ಲಿ ಬಾಗಿಲು ಮುಚ್ಚಲಿವೆ.
ಬಹುತೇಕ ಹೊಟೇಲ್ ಗಳಲ್ಲಿ ಕೇವಲ ಇಡ್ಲಿಮ ಚಟ್ನಿ, ಅನ್ನ ಸಾಂಬಾರ್ ಅಷ್ಟೇ ನೀಡಲಾಗುತ್ತಿದೆ. ಗ್ರಾಹಕರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ.
ಇನ್ನೂ ಪ್ರಸ್ತುತ ನಗರದಲ್ಲಿ 15 ಸಾವಿರ ಪಿಜಿಗಳಲ್ಲಿದ್ದು, 10 ಲಕ್ಷಕ್ಕೂ ಹೆಚ್ಚರು ಜನರು ವಾಸಿಸುತ್ತಿದ್ದಾರೆ. ಇನ್ನು ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇದೀಗ ಉಂಟಾಗಿರುವ ಗ್ಯಾಸ್ ಕೊರತೆಯಿಂದಾಗಿ ಪಿಜಿ ಮಾಲೀಕರು ಅಡುಗೆ ಮಾಡುವುದಕ್ಕೂ ಚಿಂತಿಸುವಂತಾಗಿದೆ. ಕೆಲವು ಪಿಜಿಗಳಲ್ಲಿ ಊಟ ಸ್ಥಗಿತಗೊಳಿಸಿದೆ. ಹೀಗಾಗಿ, ಉದ್ಯೋಗಿಗಳು ವರ್ಕ್ ಫ್ರಂ ಹೋಂ ಪಡೆದು ಊರುಗಳತ್ತ ಪ್ರಯಾಣಿಸಿದ್ದಾರೆ.
ದೇವಾಲಯಗಳ ಪ್ರಸಾದ ತಯಾರಿಕೆಯೂ ಬಂದ್: ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಪ್ರಸಾದ ತಯಾರಿಕಾ ಘಟಕಗಳು ಬಾಗಿಲು ಮುಚ್ಚಿವೆ. ಬೆಂಗಳೂರಿನ ಬನಶಂಕರಿ ದೇವಾಲಯ, ಕಾಡುಮಲ್ಲೇಶ್ವರ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳ ಪ್ರಸಾದ ತಯಾರಿಕಾ ಘಟಕಗಳು ಬಾಗಿಲು ಮುಚ್ಚಿವೆ.
ಕುಸಿದ ಗ್ರಾಹಕರ ಸಂಖ್ಯೆ: ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹೋಟೆಲ್ಗಳಿಗೆ ತೆರಳುವ ಗ್ರಾಹಕರ ಸಂಖ್ಯೆ ಶೇ.10ಕ್ಕೆ ಕುಸಿದಿದೆ. ಹೋಟೆಲ್ಗಳಲ್ಲಿ ಕಡಿಮೆ ಗ್ಯಾಸ್ ಬಳಸಿ ತಯಾರಿಸುವ ಅಹಾರ ಪದಾರ್ಥಗಳನ್ನು ಮಾತ್ರ ನೀಡಲಾಗುತ್ತಿದೆ. ಚಪಾತಿ, ಪೂರಿ, ವಿವಿಧ ರೊಟ್ಟಿಗಳ ತಯಾರಿಕೆಯನ್ನು ನಿಲ್ಲಿಸಲಾಗಿದೆ. ಹೋಟೆಲ್ಗಳು ಅನ್ನ ಸಾಂಬಾರು, ಕಾಫೀ, ಟೀ ಹಾಲು ಮಾತ್ರ ತಯಾರಿಸಿ ಗ್ರಾಹಕರಿಗೆ ಒದಗಿಸುತ್ತಿವೆ.
ಹೆಚ್ಚು ಕಾಲ ಬೇಯುವ ಕುರುಕು ತಿಂಡಿಗಳಾದ ಬಜ್ಜಿ, ವಡೆ, ಬೋಂಡ, ಗೋಬಿ ಮಂಚೂರು ಸೇರಿದಂತೆ ಎಲ್ಲ ರೀತಿಕ ಕುರುಕು ತಿಂಡಿಗಳ ತಯಾರಿಕೆಯನ್ನು ನಿಲ್ಲಿಸುವುದಾಗಿ ಹೋಟೆಲ್ ಮಾಲೀಕರ ಸಂಘ ಹೇಳಿದೆ.
ಸಿಲಿಂಡರ್ ಪೂರೈಕೆ ಸರಿಯಾಗುವವರೆಗೂ ಅನಿಲವನ್ನು ಹಿತ ಮಿತವಾಗಿ ಬಳಕೆ ಮಾಡುವಂತೆ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ಸೌದೆ ಒಲೆಗೆ ಹೆಚ್ಚಿದ ಬೇಡಿಕೆ: ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಆಧುನಿಕ ತಂತ್ರಜ್ಞಾನ ಬಳಸಿ ತಯಾರಿಸಿರುವ ಸೌದೆ ಒಲೆಗಳ ಖರೀದಿಗೆ ಮುಂದಾಗಿದ್ದಾರೆ. ಆದರೆ ಬೆಂಗಳೂರು ನಗರದಲ್ಲಿ ವಾಯು ಮಾಲಿನ್ಯ ಅಧಿಕವಾಗುವುದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸೌದೆ ಒಲೆಗಳ ಬಳಕೆಗೆ ಅನುಮತಿ ನೀಡುವುದು ಕಷ್ಟ. ಹೀಗಾಗಿ ಅನ್ಯ ಮಾರ್ಗ ಇಲ್ಲದೆ ಮಾಲೀಕರು ಹೋಟೆಲ್ ಬಂದ್ ಮಾಡುವ ಸ್ಥಿತಿ ಬಂದಿದೆ.

