ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಿಚ್ಚು ರಾಜ್ಯದ ಅಡುಗೆ ಮನೆಗಳಿಗೆ ನೇರವಾಗಿ ತಟ್ಟಿದೆ. ವಾಣಿಜ್ಯ ಬಳಕೆಯ (Commercial) ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಆಹಾರದ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿದ್ದರೆ, ಇತ್ತ ಸರ್ಕಾರಿ ಶಾಲೆಗಳ ಮಕ್ಕಳ ಬಿಸಿಯೂಟಕ್ಕೂ ಈಗ ಗ್ಯಾಸ್ ಕಂಟಕ ಎದುರಾಗಿದೆ.
ಸರ್ಕಾರಿ ಶಾಲೆಗಳಿಗೂ ತಟ್ಟಿದ ಗ್ಯಾಸ್ ಬಿಸಿ
ಬರೀ ಹೋಟೆಲ್‌ಗಳಷ್ಟೇ ಅಲ್ಲ, ಸರ್ಕಾರಿ ಶಾಲೆಗಳ ಬಿಸಿಯೂಟ ತಯಾರಿಕೆಗೂ ಸಿಲಿಂಡರ್‌ಗಳ ಕೊರತೆ ಎದುರಾಗಿದೆ. ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿ ಪರದಾಡುತ್ತಿದ್ದಾರೆ. ತಿಂಗಳಿಗೆ ಮೂರು ಸಿಲಿಂಡರ್‌ಗಳು ಬೇಕಿದ್ದ ಜಾಗದಲ್ಲಿ ಕೇವಲ ಒಂದು ಸಿಲಿಂಡರ್ ಮಾತ್ರ ಪೂರೈಕೆಯಾಗುತ್ತಿದ್ದು, ಮಕ್ಕಳ ಹಸಿವು ನೀಗಿಸುವುದು ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ.
ಗ್ಯಾಸ್ ಇಲ್ಲದೆ ಸೌದೆ ಒಲೆ ಮೊರೆ ಹೋದ ಹೋಟೆಲ್‌ಗಳು
ಬೆಂಗಳೂರಿನಲ್ಲಿ ಗ್ಯಾಸ್ ಸಿಗದೆ ಹೋಟೆಲ್‌ಗಳು ಅಕ್ಷರಶಃ ಸ್ತಬ್ಧವಾಗುತ್ತಿವೆ. ಅನಿವಾರ್ಯವಾಗಿ ನಗರದ ಕೆಲವು ಹೋಟೆಲ್‌ಗಳು ಈಗ ಹಳೆಯ ಕಾಲದ ಸೌದೆ ಒಲೆಗಳ ಮೊರೆ ಹೋಗಿವೆ. ಬೆಂಗಳೂರಿನ ಹೆಸರಾಂತ ‘ಅಪ್ಪಾಜಿ ಹೋಟೆಲ್’ ಸೇರಿದಂತೆ ಹಲವು ಕಡೆ ಸೌದೆ ತಂದು ಅಡುಗೆ ಮಾಡಲಾಗುತ್ತಿದೆ. ಕೆಲವು ಹೋಟೆಲ್ ಮಾಲೀಕರು ತುರ್ತಾಗಿ 5-6 ಸೌದೆ ಒಲೆಗಳನ್ನು ಖರೀದಿಸಲು ಮುಂದಾಗಿದ್ದಾರೆ. ಆದರೆ, ನಗರ ಪ್ರದೇಶದಲ್ಲಿ ಸೌದೆ ಒಲೆ ಬಳಸುವುದು ಪ್ರಾಯೋಗಿಕವಾಗಿ ಮತ್ತು ಪರಿಸರದ ದೃಷ್ಟಿಯಿಂದ ಕಷ್ಟಕರವಾಗಿದೆ.

ಪಿಜಿ ನಿವಾಸಿಗಳಿಗೂ ಊಟದ ಸಂಕಷ್ಟ
ನಗರದ ಸುಮಾರು 15,000ಕ್ಕೂ ಹೆಚ್ಚು ಪಿಜಿಗಳಲ್ಲಿ ನೆಲೆಸಿರುವ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳು ಈಗ ಊಟಕ್ಕಾಗಿ ಪರದಾಡುತ್ತಿದ್ದಾರೆ. ಸಿಲಿಂಡರ್ ಸಿಗದೆ ಪಿಜಿ ಮಾಲೀಕರು ಅಡುಗೆಯನ್ನು ಕಡಿತಗೊಳಿಸಿದ್ದಾರೆ. ರೊಟ್ಟಿ-ದೋಸೆಯಂತಹ ತಿಂಡಿಗಳ ಬದಲು ಕೇವಲ ರೈಸ್ ಐಟಂಗಳಿಗೆ ಸೀಮಿತಗೊಳಿಸಲಾಗಿದೆ. ಬಿಸಿ ನೀರಿನ ಗೀಸರ್‌ಗಳಿಗೂ ಗ್ಯಾಸ್ ಇಲ್ಲದೆ ನಿವಾಸಿಗಳು ತಣ್ಣೀರಿನಲ್ಲೇ ಸ್ನಾನ ಮಾಡುವ ಪರಿಸ್ಥಿತಿ ಬಂದಿದೆ.
ಸರ್ಕಾರದ ಪ್ರಯತ್ನ ಏನು: ಸಚಿವ ಮುನಿಯಪ್ಪ ಹೇಳಿಕೆ
ಈ ಗಂಭೀರ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ, “ಆಯಿಲ್ ಕಂಪನಿಗಳ ರಾಜ್ಯ ಮುಖ್ಯಸ್ಥರೊಂದಿಗೆ ತುರ್ತು ಸಭೆ ನಡೆಸಲಾಗಿದೆ” ಎಂದು ತಿಳಿಸಿದ್ದಾರೆ.ರಾಜ್ಯಕ್ಕೆ ಪ್ರತಿದಿನ 50,000 ವಾಣಿಜ್ಯ ಬಳಕೆ ಸಿಲಿಂಡರ್ ಮತ್ತು 5,000 ಮೆಟ್ರಿಕ್ ಟನ್ ಗೃಹಬಳಕೆ ಗ್ಯಾಸ್ ಅವಶ್ಯಕತೆ ಇದೆ. ಯುದ್ಧದಿಂದಾಗಿ ಹಡಗು ಸಂಚಾರ ಸ್ಥಗಿತಗೊಂಡಿರುವುದು ಪೂರೈಕೆಯಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ. ಮನೆ ಬಳಕೆಯ ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಕಂಪನಿಗಳಿಗೆ ಸೂಚಿಸಲಾಗಿದೆ.
ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹3,000 ದಾಟಿದ್ದರೂ ಲಭ್ಯವಿಲ್ಲದ ಕಾರಣ ಹೋಟೆಲ್ ಉದ್ಯಮ ಅಸ್ತವ್ಯಸ್ತಗೊಂಡಿದೆ. ಸ್ವಿಗ್ಗಿ-ಜೊಮಾಟೋ ಆರ್ಡರ್‌ಗಳು ಕೂಡ ಹೋಟೆಲ್‌ಗಳ ಈ ಅನಿಶ್ಚಿತತೆಯಿಂದಾಗಿ ವಿಳಂಬವಾಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ವಾರಾಂತ್ಯದ ವೇಳೆಗೆ ನಗರದ ಶೇ. 80ರಷ್ಟು ಹೋಟೆಲ್‌ಗಳು ಮತ್ತು ಪಿಜಿ ಕಿಚನ್‌ಗಳು ಸಂಪೂರ್ಣವಾಗಿ ಬಂದ್ ಆಗುವ ಭೀತಿ ಇದೆ.

