ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.11ರಿಂದ ಹೊರ ರೋಗಿ ಸೇವೆ ರದ್ದುಗೊಳಿಸಿ ಮುಷ್ಕರ ಮಾಡಲು ಮುಂದಾಗಿದ್ದ ಸರ್ಕಾರಿ ವೈದ್ಯರು ಸರ್ಕಾರದ ಸಂಧಾನದಿಂದ ಈಗ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ.
ವೈದ್ಯರ 14 ಬೇಡಿಕೆಗಳಲ್ಲಿ ಸರ್ಕಾರ 13 ಬೇಡಿಕೆಗಳನ್ನು ಮೂರು ತಿಂಗಳೊಳಗಾಗಿ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಹಿಂದಕ್ಕೆ ಪಡೆಯಲಾಗಿದೆ ಎಂದು ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರವೀಂದ್ರನಾಥ ಎಂ.ಮೇಟಿ ತಿಳಿಸಿದ್ದಾರೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಂಗಳವಾರ ರಾತ್ರಿ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಿ ಮೂರು ತಿಂಗಳಲ್ಲಿ ಬೇಡಿಕೆ ಈಡೇರಿಸಲಾಗುವುದು. ನಿಮ್ಮ ಬೇಡಿಕೆ ಈಡೇರಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರ ಹಿಂದಕ್ಕೆ ಪಡೆದರು.
ಈ ಮೊದಲು ಮಾ. 11ರ ಬುಧವಾರದಿಂದ ಮಾ.15 ರ ಭಾನುವಾರದವರೆಗೆ ವೈದ್ಯರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ತುರ್ತು ಕರ್ತವ್ಯದಲ್ಲಿ ಭಾಗಿಯಾಗಲು ನಿರ್ಧರಿಸಿದ್ದರು. ಈ ಅವಧಿಯಲ್ಲಿ ಸರ್ಕಾರ ಸ್ಪಂದಿಸಿ ಬೇಡಿಕೆ ಈಡೇರದಿದ್ದರೆ ಮಾ. 16 ರಿಂದ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.
ವೈದ್ಯರ ಮುಷ್ಕರಕ್ಕೆ ಸರಕಾರಿ ನೌಕರರ ಸಂಘ ಕೂಡ ಬೆಂಬಲ ಸೂಚಿಸಿತ್ತು. ಜಿಲ್ಲಾ, ತಾಲೂಕು ಮಟ್ಟದಲ್ಲೂ ಮುಷ್ಕರ ನಡೆಸಲು ವೈದ್ಯರು ಹಾಗೂ ಸಿಬ್ಬಂದಿ ಮುಂದಾಗಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ವೈದ್ಯಕೀಯ ಸಂಘದ ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಬೇಡಿಕೆಗಳ ಈಡೇರಿಕೆಗೆ ಸಾಧ್ಯ ಇರುವ ಎಲ್ಲಾ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ. ಮುಷ್ಕರ ನಡೆಸದಂತೆ ಅವರ ಮನವೊಲಿಸಲಾಗುವುದು ಎಂದು ಭರವಸೆ ನೀಡಿದ್ದರು.
ವೈದ್ಯಕೀಯ ಸಂಘದ ಪದಾಧಿಕಾರಿಗಳ ಜೊತೆ ಈಗಾಗಲೇ ಎರಡು ಬಾರಿ ಮಾತಿಕತೆಯಾಗಿದೆ. 50 ವರ್ಷಗಳ ಹಿಂದಿನಿಂದಲೂ ಬಾಕಿ ಇರುವ ಬೇಡಿಕೆಗಳನ್ನು ಅವರು ಮಂಡಿಸುತ್ತಿದ್ದಾರೆ. ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ಬದಲಾವಣೆ ಕೌನ್ಸಿಲಿಂಗ್ ಪದ್ಧತಿಯ ವರ್ಗಾವಣೆ ಸೇರಿದಂತೆ ಹಲವಾರು ವಿಚಾರಗಳು ಸರ್ಕಾರದ ಗಮನದಲ್ಲಿದೆ. ವರ್ಗಾವಣೆಯ ನ್ಯೂನತೆಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.

