ಇಂಗ್ಲಿಷ್‌ನಲ್ಲಿ : ಎ. ರಾಜೇಂದ್ರ ಪ್ರಸಾದ್, ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
ಕನ್ನಡದಲ್ಲಿ ಡಾ. ಎಚ್. ಎಸ್. ಅನುಪಮಾ ಅವರ ಕಸ್ತೂರಬಾ ಜೀವನ ಕಥನ `ನಾನು ಕಸ್ತೂರ್’ ಮೂರನೆಯ ಮುದ್ರಣ ಕಂಡು ಹೊರಬಂದಿದೆ. ಪುಸ್ತಕವನ್ನು ಚಂದಕಚೆರ್ಲ ರಮೇಶಬಾಬು ಮೂರು ವರ್ಷಗಳ ಕೆಳಗೆ ತೆಲುಗಿಗೆ `ನೇನು ಕಸ್ತೂರಬಾ ನಿ’ ಎಂಬ ಶೀರ್ಷಿಕೆ ನೀಡಿ ಅನುವಾದಿಸಿದ್ದಾರೆ. ತೆಲುಗು ಆವೃತ್ತಿ ಓದಿದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ. ಚ. ಎ. ರಾಜೇಂದ್ರ ಪ್ರಸಾದ್ ಅವರು ಬರೆದ ಇಂಗ್ಲಿಷ್ ಬರಹದ ಕನ್ನಡಾನುವಾದ ಡಾ. ಎಚ್. ಎಸ್. ಅನುಪಮಾ ಅವರದು. 1944, ಫೆಬ್ರವರಿ 22ರಂದು ಕಸ್ತೂರಬಾ ಗಾಂಧಿ ಪುಣೆಯ ಆಗಾಖಾನ್ ಜೈಲಿನಲ್ಲಿ ಮರಣ ಹೊಂದಿದರು. ಕಸ್ತೂರಬಾ ಸ್ಮರಣೆಯ ಲೇಖನ ಇಲ್ಲಿದೆ.
ಡಾ. ಎಚ್. ಎಸ್. ಅನುಪಮಾ ಅವರ ಕನ್ನಡ ಪುಸ್ತಕ `ನಾನು ಕಸ್ತೂರ್’ದ ತೆಲುಗು ಅನುವಾದ ` ನೇನು ಕಸ್ತೂರಬಾ ನಿ’. ಈ ಪುಸ್ತಕವನ್ನು ಓದುವುದೆಂದರೆ ಕುತೂಹಲ, ರೋಮಾಂಚನ, ಧಡಧಡ ಎದೆಬಡಿತ, ಏನೋ ಕಳೆದುಕೊಂಡ ಭಾವದೊಂದಿಗೆ ಹೆಚ್ಚು ಕಡಿಮೆ ನಾವು ಮರೆತ ನಮ್ಮ ಪುರಾತನರ ಮನೆಯನ್ನು ಹೊಕ್ಕು ಬಂದ ಹಾಗೆ. ವಿವರವಾಗಿ ಸಂಶೋಧಿಸಿ, ದಾಖಲೆಗಳನ್ನು ಆಧರಿಸಿ ಬರೆದ ಈ ಜೀವನ ಚರಿತ್ರೆಯು ಆತ್ಮಚರಿತ್ರಾತ್ಮಕ ಧಾಟಿಯಲ್ಲಿದೆ. ಅನುಪಮಾ ಅವರ ಬರವಣಿಗೆಯ ಜಾದೂ ಕಸ್ತೂರಬಾ ಅವರ ಜೊತೆಗೆ ಮುಖಾಮುಖಿ ಮಾತುಕತೆಯನ್ನಾಡಿದ, ಭಾರತದ ಪ್ರತಿ ಯುವತಿಯೊಂದಿಗೂ ಎಲ್ಲರ ತಾಯಿಯಾದ ಬಾ ಮಾತನಾಡುತ್ತಿರುವರೇನೋ ಎನ್ನುವ ವಿಶಿಷ್ಟ ಅನುಭವವನ್ನು ನೀಡುತ್ತದೆ. ಲೇಖಕಿ ಬಾಪು ಅವರ ಭಾವಜಗತ್ತಿಗೆ ಅಸೂಕ್ಷ್ಮರಾಗದೆಯೇ ಬಾ ಅವರ ಭಾವಲೋಕದ ಆಳಾಳದ, ಮೂಲೆಮೂಲೆಗಳ ಸ್ತರಗಳಿಗೆ ನಮ್ಮನ್ನು ಸುತ್ತಾಡಿಸಿ ಬರುತ್ತಾರೆ.
ಈ ಪುಸ್ತಕಕ್ಕೆ ಅತ್ಯಂತ ಸೂಕ್ತವಾದ ವಿಮರ್ಶಾತ್ಮಕ ಮತ್ತು ಮೌಲಿಕ ಮುನ್ನುಡಿಯನ್ನು ತೆಲುಗಿನ ಖ್ಯಾತ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ವೋಲ್ಗಾ ಬರೆದಿದ್ದಾರೆ. ಅತ್ಯಂತ ಪ್ರಸಿದ್ಧ ವ್ಯಕ್ತಿಯ ಪತ್ನಿಯಾಗಿ, ನಾಲ್ಕು ಮಕ್ಕಳ ತಾಯಿಯಾಗಿ ಬಾ ಹಾದು ಬಂದದ್ದನ್ನು ಅತ್ಯಂತ ಸೂಕ್ಷ್ಮವಾಗಿ ಅಭಿವ್ಯಕ್ತಿಸಿರುವ ಅನುಪಮಾ ಅವರ ಶೈಲಿಯನ್ನು ಸಶಕ್ತವಾಗಿ ವೋಲ್ಗಾ ಮುನ್ನುಡಿಯಲ್ಲಿ ಎತ್ತಿ ತೋರಿಸಿದ್ದಾರೆ. ಅದರ ತೆಲುಗು ಅನುವಾದ ಎಷ್ಟು ಸಶಕ್ತವಾಗಿದೆಯೆಂದರೆ ಅನುಪಮಾ ಅವರು ಇದನ್ನು ತೆಲುಗಿನಲ್ಲೇ ಬರೆದಿರಬಹುದು ಎಂದು ನನಗನಿಸಿದೆ. ಬರೆಯುವ ಮುನ್ನ ಲೇಖಕಿ ಮಾಡಿಕೊಂಡ ತಯಾರಿ ವಿಸ್ತೃತವೂ, ವಿಶಿಷ್ಟವೂ ಆಗಿದೆ. ಪುಸ್ತಕದ ಆರಂಭದಲ್ಲಿ ಅವರು ಪೋರಬಂದರದ ಬಾ ಮನೆಗೆ ನೀಡಿದ ಭೇಟಿಯ ಬಗೆಗೆ ಓದುತ್ತ ನಾವೂ ಅವರೊಡನೆ ಅಲ್ಲೆಲ್ಲ ಸುತ್ತಾಡಿ ಬಂದಂತೆ ಆಗುತ್ತದೆ.

`ನೇನು ಕಸ್ತೂರಬಾ ನಿ’ ಸರಳವಾಗಿ ಕಸ್ತೂರಬಾ ಹೇಳಿಕೊಂಡ ತನ್ನ ಬಾಳ ಕಥನ. ಬಾ-ಬಾಪು ಜೀವನದ ಬಗೆಗೆ ಅದ್ಭುತ ಒಳನೋಟಗಳನ್ನು ಬಿಚ್ಚಿಟ್ಟಿರುವ ಕೃತಿ. ಯಾವುದು ದೈವೀಕರಿಸಲ್ಪಟ್ಟದ್ದು, ಯಾವುದು ವಾಸ್ತವ ಎಂದು ತೆಗೆದು ತೋರಿಸುವ ಪುಸ್ತಕ. ಮೂರು ಆಯಾಮಗಳ, ಚಲನಶೀಲವಾದ, ತಾನೇ ಬೆಳೆಯುತ್ತ ಹೋಗಬಲ್ಲ ನಿರೂಪಣಾ ತಂತ್ರದಲ್ಲಿ ಅನುಪಮಾ ಕಸ್ತೂರಬಾ ಅವರ `ಬಾಳಪಯಣ’ವನ್ನು ಕಟೆದಿದ್ದಾರೆ. ತಾನು ರೂಪಿಸಿದ ಪಕ್ಷ, ಸಿದ್ಧಾಂತಗಳು ಸವಾಲು ಎದುರಿಸುತ್ತಿದ್ದ ಕಾಲದ ಗಾಂಧಿಯನ್ನೂ ಕಟೆದು ನಿಲ್ಲಿಸಿದ್ದಾರೆ. ಫ್ಲಾಶ್‍ಬ್ಯಾಕ್ ಆಗಿ ನಿರೂಪಿಸಲ್ಪಟ್ಟಿದ್ದರೂ, ಅಲ್ಲಿಲ್ಲಿ ಭೂತಭವಿಷ್ಯಗಳನ್ನು ಸೇರಿಸಿ ಹೆಣೆದುಕೊಂಡದ್ದು ಬಿಟ್ಟರೆ ಸರಳರೇಖಾತ್ಮಕವಾಗಿ ಕಥನ ಓದಿಸಿಕೊಳ್ಳುತ್ತ ಹೋಗುತ್ತದೆ.
ಈ ಪುಸ್ತಕ ವೋಲ್ಗಾ ಸೂಚಿಸಿದಂತೆ ಎರಡು ರೀತಿಯಿಂದ ಪ್ರಸ್ತುತವಾಗಿದೆ. ಪ್ರಖ್ಯಾತ ಸಮಾಜ ಸುಧಾರಣಾಕಾರರ ಪತ್ನಿಯರ ಬಾಳನ್ನು ಇದು ಕೇಂದ್ರಸ್ಥಾನಕ್ಕೆ ತರುತ್ತದೆ. ಜೋತಿಬಾ ಫುಲೆಯವರ ಸಂಗಾತಿ ಸಾವಿತ್ರಿಬಾಯಿ ಫುಲೆ, ವೀರೇಶಲಿಂಗಂ ಪಂತುಲು ಅವರ ಸಂಗಾತಿ ರಾಜ್ಯಲಕ್ಷ್ಮಿ ಮತ್ತು ಅವರಂತಹವರ ಬಗೆಗೆ ನಮ್ಮನ್ನು ಯೋಚಿಸಲು ಹಚ್ಚುತ್ತದೆ. ಇತಿಹಾಸವನ್ನು ಹಿಂದೆಹಿಂದೆ ಹೋಗುತ್ತ ಅರಸಿದರೆ ಬುದ್ಧನಾದ ಸಿದ್ಧಾರ್ಥನ ಸಂಗಾತಿ ಯಶೋಧರೆಯ ಕಡೆಗೂ ನಮ್ಮ ಗಮನ ಹರಿಯುವಂತೆ ಮಾಡುತ್ತದೆ. ಭವಿಷ್ಯದಲ್ಲಿ ತಾನು ಹೊಂದಲಿರುವ ಸಾಕ್ಷಾತ್ಕಾರಕ್ಕಾಗಿ ಮನೆ ತೊರೆದು ಹೋಗುವೆನೆಂಬ ಸುಳಿವು ನೀಡದೆ ಪತ್ನಿ ಯಶೋಧರೆ, ಮಗ ರಾಹುಲನನ್ನು ತೊರೆದು ಹೋದವನ ಬಗೆಗೆ, ಮನೆಯಲ್ಲಿ ಉಳಿದವರ ಬಗೆಗೆ ವ್ಯಾಕುಲಗೊಳ್ಳುವಂತೆ ಮಾಡುತ್ತದೆ. ಓದುತ್ತ ಓದುತ್ತ ಭಾರತದ ಪಿತೃಪ್ರಧಾನ ವ್ಯವಸ್ಥೆಯ ಅಡಿಪಾಯ ಯಾವುದೆಂಬ ಯೋಚನೆಗೆ ಓದುಗರನ್ನು ದೂಡುತ್ತದೆ.
ಕಥಾನಾಯಕಿ ಬಾ ಪುಸ್ತಕದ ಕೊನೆಯಲ್ಲಿ ಅಚ್ಚರಿಯಿಂದ ಉದ್ಗರಿಸುವ ಒಂದು ಪ್ರಸಂಗವಿದೆ. ಬ್ರಹ್ಮಚರ್ಯ ಅನುಸರಿಸುವ ನಿರ್ಧಾರವಿರಲಿ, ಉಪವಾಸ ಕೂರುವುದಿರಲಿ ಅಥವಾ ಆಶ್ರಮವಾಸದಲ್ಲಿ ಸ್ವಚ್ಛತೆಗಾಗಿ ಪ್ರತಿಯೊಬ್ಬರೂ ಶೌಚದ ಮಡಕೆಯನ್ನು ಸ್ವಚ್ಛಗೊಳಿಸ ಬೇಕೆನ್ನುವುದಿರಲಿ – ಬಾಪುವಿನಂತೆ ಬಾ ಏನಾದರೂ ತನ್ನಿಷ್ಟದಂತೆ ಒಂದು ವೇಳೆ ನಡೆದಿದ್ದರೆ, ಏಕಮುಖಿಯಾಗಿ ನಿರ್ಧಾರ ತೆಗೆದುಕೊಂಡಿದ್ದರೆ ಏನಾಗುತ್ತಿತ್ತು? ಬೇರೆಯವರೂ ತನ್ನದೇ ದಾರಿ ಹಿಡಿಯುವಂತೆ ಮನವೊಲಿಸಿ, ಪರಿವರ್ತಿಸಿಬಿಟ್ಟಿದ್ದರೆ ಏನಾಗಬಹುದಿತ್ತು? ತನಗಾಗಿ ಮತ್ತು ತನ್ನ ಕುಟುಂಬಕ್ಕಾಗಿ ವ್ಯಯಿಸಲು ಸಮಯವೇ ಇಲ್ಲದಷ್ಟು ಪತ್ನಿ ಬಾ ವ್ಯಸ್ತಳಾಗಿದ್ದರೆ ಪತಿಯಾಗಿ ಬಾಪು ಅವಳನ್ನು ಅನುಸರಿಸುತ್ತ, ಮಕ್ಕಳ ಕಡೆಗೆ ಗಮನ ಕೊಡಲು ಅಸಾಧ್ಯವಾದರೂ ಅವಳ ಪ್ರಯೋಗಗಳಲ್ಲಿ ಭಾಗಿಯಾಗುತ್ತಿದ್ದರೆ? ಇಂತಹ ಕಷ್ಟದ ಉತ್ತರಕ್ಕೆ ತಡಕಾಡುವ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಲೇ ಪುಸ್ತಕವು ಬಾ ತಾನು ಮನದಾಳದಲ್ಲಿ ಅನುಭವಿಸಿದ ಗೊಂದಲ, ದ್ವಂದ್ವ, ಯಾತನೆಗಳಿಗೆ ಧ್ವನಿ ಒದಗಿಸುತ್ತದೆ.
***

`ನೇನು ಕಸ್ತೂರಬಾ ನಿ’ ಪುಸ್ತಕವು ಗುಜರಾತಿನ ಬನಿಯಾ ಸಮುದಾಯದ ಒಬ್ಬ ಸಾಮಾನ್ಯ ಯುವಕ `ಮೋಕ’ (ಮೋಹನದಾಸ ಕರಮಚಂದ ಗಾಂಧಿಯನ್ನು ಹಾಗೆ ಕರೆಯುತ್ತಿರಬಹುದು ಎಂದು ಸೂಚಿಸಲಾಗಿದೆ) ಮಹಾತ್ಮನಾಗಿ ಬೆಳೆದ ಪರಿಯನ್ನು ಚಿತ್ರಿಸುತ್ತದೆ. ಅಂದಿನ ಕಾಲದಲ್ಲಿ ಮಹಿಳೆಯರಿಗೆ ಸಾಮಾನ್ಯ ಅಡೆತಡೆಗಳಾಗಿದ್ದ ಶಿಕ್ಷಣ ಅಲಭ್ಯತೆ, ಸಾಮಾಜಿಕ ಸಂಪರ್ಕದ ಕೊರತೆ, ಬಾಲ್ಯ ವಿವಾಹಗಳ ನಡುವೆಯೇ ಕಸ್ತೂರ್ ಮಕನ್‍ಜಿ ಕಪಾಡಿಯಾ ಎಂಬ ಸಾಮಾನ್ಯ ಯುವತಿಯು ತನ್ನ ತಾನರಿಯುತ್ತ, ತನ್ನ ತಾ ನಿಗ್ರಹಿಸಿಕೊಳ್ಳುತ್ತ, ಸ್ವಯಂ ರೂಪಿಸಿಕೊಳ್ಳುತ್ತ ಪತ್ನಿತ್ವವನ್ನು ನಿಭಾಯಿಸಿದ ಕಥನವನ್ನೂ ಬಿಚ್ಚಿಡುತ್ತದೆ.
ಓದುತ್ತ ಹೋದಂತೆ ಜೀವಂತ ಕಸ್ತೂರಬಾ ನಮ್ಮೆದುರು ಬಂದು ನಿಲ್ಲುತ್ತಾರೆ. ಅಷ್ಟೇ ಅಲ್ಲ, ಪ್ರತಿ ಮಹಿಳೆಯ ಚಿತ್ರಣವೂ ನಮ್ಮ ಕಣ್ಣೆದುರು ತಂತಾನೇ ಬಿಡಿಸಿಕೊಳ್ಳುತ್ತದೆ. ಬಾ ಅವರ ಕಥನವನ್ನು ವಾಸ್ತವ ನೆಲೆಯಲ್ಲಿ ನಿರೂಪಿಸಿದ್ದು ಉತ್ಸಾಹಿ, ಚೈತನ್ಯದ ಚಿಲುಮೆಯಾಗಿದ್ದ ತರುಣಿ ಕಸ್ತೂರ್ ಅನುಭವಿಸಿದ ನಿರೀಕ್ಷೆಗಳು, ಭ್ರಮನಿರಸನಗಳು, ರೋಮಾಂಚನಗಳು ಅರಿವಿಗೆ ದಕ್ಕುತ್ತವೆ. ಬಾ ಹುಡುಗಿಯಾಗಿ, ಮೋಕ ಹುಡುಗನಾಗಿದ್ದಾಗಿನಿಂದ ಆರಂಭಗೊಳ್ಳುವ ಕಥಾನಕವು ಅವರು ಬಾಲ್ಯ ವಿವಾಹವಾಗುವುದು, ತಾರುಣ್ಯಕ್ಕೆ ಕಾಲಿಡುವುದು, ಮದುವೆ ಊರ್ಜಿತಗೊಳ್ಳುವುದನ್ನು ವಿವರಿಸುತ್ತದೆ. ಬಾಲ್ಯದ ಮುಗ್ಧ ಲೋಕದಿಂದ ವೈವಾಹಿಕ ಅನುಭವ ಲೋಕಕ್ಕೆ ಪಯಣಿಸುವ ಬಾ ಅಂದಿನ ಬಹುತೇಕ ಯುವತಿಯರಂತೆ ತೀವ್ರ ಭಾವುಕ ತರುಣ ಗಂಡನ ಜೊತೆ ಹೊಂದಿಕೊಳ್ಳಲು ಸಾಹಸ ಪಡುತ್ತಾಳೆ. ಮೊದಲ ಬಸುರು ಗರ್ಭಪಾತದಲ್ಲಿ ಕೊನೆಯಾಗುವುದು, ಮೊದಲ ಮಗ ಹರಿಯ ಜನನ, ಮೋಕ `ಹರಿಯ ಅಪ್ಪ’ ಎಂದು ಕರೆಸಿಕೊಳ್ಳುವುದು, ಲಂಡನ್ನಿಗೆ ಮೋಕ ಹೋದಾಗ ಆಗುವ ಅಗಲಿಕೆ, ಅಲ್ಲಿಂದ ಹಿಂತಿರುಗಿದ ಬಳಿಕವೂ ಯಶಸ್ವಿ ಬ್ಯಾರಿಸ್ಟರ್ ಆಗಲು ಸಾಧ್ಯವಾಗದೇ ದಕ್ಷಿಣ ಆಫ್ರಿಕಾಗೆ ಹೋಗುವುದು, ಪತಿಯ ಸಾಮೀಪ್ಯ ಸಿಗದೇ ಬಾ ತಲ್ಲಣಿಸುವುದು ಕಥನದಲ್ಲಿ ಅನಾವರಣಗೊಳ್ಳುತ್ತ ಹೋಗುತ್ತದೆ. ಏಕಾಂಗಿಯಾಗಿ ಮಕ್ಕಳ ಬೆಳೆಸುವ, ಪತಿಯಿಂದ ದೂರವಿದ್ದರೂ ಹೀಗೇ ಇರಬೇಕೆಂದು ಆತನ ದಿಗ್ದರ್ಶನಕ್ಕೆ ಒಳಗಾಗುವ, ಗಂಡ ಜೊತೆಯಿಲ್ಲದೆ ಒಂಟಿತನ ಅನುಭವಿಸುವ, ಅವನೊಡನೆ ಬಾಳ ಹೆಜ್ಜೆ ಹಾಕುವ ನಿರೀಕ್ಷೆಯ ಬಾ ಅಲ್ಲಿ ಕಾಣಿಸುತ್ತಾಳೆ.

ದಕ್ಷಿಣ ಆಫ್ರಿಕಾದ ದೀರ್ಘ ವಾಸದಲ್ಲಿ ಕಸ್ತೂರ್-ಮೋಕ ಭಾಯಿ ದಂಪತಿಗಳು ಬಾ-ಬಾಪು ಆದ, ಕೊನೆಗೆ ಬಾಪು ಮಹಾತ್ಮನೇ ಆಗಿಹೋದ ಸಂದರ್ಭದಲ್ಲಿ ಬಹುಶಃ ಕಸ್ತೂರ್‌ಗೆ ಬಿಕ್ಕಟ್ಟು ಎದುರಾಗುತ್ತದೆ. ಮಹಾತ್ಮನಾಗುವ ಹಾದಿಯಲ್ಲಿ ಗಾಂಧಿ ತ್ಯಜಿಸಿದ್ದು ಬಹಳವಿದೆ. ದೈಹಿಕ ಸುಖ, ಅಪೇಕ್ಷೆಗಳಿಂದ ದೂರವಿರುವ ನಿರ್ಧಾರ ಮಾಡುವಾಗ ಕಸ್ತೂರಬಾಗೆ ಹೇಗನಿಸಬಹುದೆಂಬ ಯೋಚನೆಯಿಲ್ಲದೆ ದಾಂಪತ್ಯ ಸುಖವನ್ನೂ ತ್ಯಜಿಸುವುದು; ಕಠೋರ ನಿರ್ಧಾರಗಳನ್ನು ಎಲ್ಲರೂ ಒಪ್ಪುವಂತೆ ಮಾಡಲು ಉಪವಾಸ ಕೂರುವುದು ಬಾ ದೃಷ್ಟಿಯಲ್ಲಿ ಚಿತ್ರಿಸಲ್ಪಟ್ಟಿದೆ. ಆಶ್ರಮ ಜೀವನವನ್ನು ಅಪ್ಪಿಕೊಳ್ಳುವ ಬಾಪುವಿನ ನಿರ್ಧಾರಕ್ಕೆ ಕಸ್ತೂರ್ ತಲೆಬಾಗಬೇಕಾಗುತ್ತದೆ. ಆಹಾರ, ವಸತಿ, ಉಡುಪುಗಳೆಲ್ಲದರಲ್ಲೂ ಸರಳತೆ ಪಾಲಿಸಬೇಕಾಗುತ್ತದೆ. ತ್ಯಾಗ ಜೀವನ ನಡೆಸುವಾಗ ಅದನ್ನು ಅರಗಿಸಿಕೊಳ್ಳಲಾಗದೇ ಅಕಸ್ಮಾತ್ ಮಾಡಿದ ತನ್ನ ಸಣ್ಣಪುಟ್ಟ ಪ್ರಮಾದಗಳಿಗೂ ಕ್ಷಮೆ ಸಿಗದೆ, ಸಾರ್ವಜನಿಕವಾಗಿ ಬಾಪು ಪ್ರಾಯಶ್ಚಿತ್ತ ಮಾಡಿಕೊಳ್ಳುವುದನ್ನು ಸುಮ್ಮನೆ ನೋಡಬೇಕಾಗುತ್ತದೆ. ಇಡಿಯ ಕಥನದಲ್ಲಿ ನಮ್ಮನ್ನು ವಿಷಾದಗೊಳ್ಳುವಂತೆ ಮಾಡುವುದು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬಾ ತನ್ನ ಪತಿಯ ಪ್ರಯೋಗಗಳನ್ನು ಸ್ವೀಕರಿಸಲು, ತಾಳ್ಮೆಯ ಅನುಕೂಲೆ ಪತ್ನಿಯಾಗಲು ತೆರುವ ಬೆಲೆ ಮತ್ತು ಅವಳ ಅಭಿಪ್ರಾಯವನ್ನು ಲಘುವಾಗಿ ಪರಿಗಣಿಸಿರುವ ಸಂದರ್ಭಗಳು.
ಪುಸ್ತಕದ ಬಾ ಎರಡು `ಗಾಂಧಿ’ ವ್ಯಕ್ತಿತ್ವಗಳನ್ನು ಗುರುತಿಸಿದ್ದಾರೆ. ಒಂದು ಪತಿ ಗಾಂಧಿ. ಈ ವ್ಯಕ್ತಿತ್ವ ಅವರಿಗೆ ಸಾಕಾರವಾದದ್ದು, ಸಾಮೀಪ್ಯದಲ್ಲಿ ಒದಗಿಬಂದದ್ದು ಅತಿ ಕಡಿಮೆ. `ನಾನು’ ಎಂಬುದನ್ನು ಬಿಡಲಾಗದ ಪತಿಯನ್ನು ಗುರುತಿಸುವ ಬಾ, ಬಾಪು ಮಹತ್ತರವಾದ ಏನನ್ನೋ ಸಾಧಿಸಲು ತನ್ನ ಮಾಮೂಲಿ ಪತ್ನಿತ್ವದ ಬೆಲೆ ತೆರಬೇಕಾಗಿದೆಯೆನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಇಲ್ಲಿ ಕಾಣಿಸಲಾದ ಮತ್ತೊಂದು ಗಾಂಧಿ ತನ್ನ ಮೇಲೆ ತಾನೇ ಕಠೋರ ಪ್ರಯೋಗಗಳನ್ನು ಮಾಡಿಕೊಳ್ಳುವ, ಹೇರಿಕೊಳ್ಳುವ ಗಾಂಧಿ. ಅದನ್ನು ಸುತ್ತಲವರೂ ಅನುಸರಿಸುವಂತೆ ತಂತ್ರ ಹೂಡುವ ಗಾಂಧಿ. ನಿರೂಪಣೆಯು ಸಮಾನ ಅನುಭೂತಿಯಿಂದ ಗಾಂಧಿ ಎಂಬ ನೈಜ ವ್ಯಕ್ತಿತ್ವವನ್ನು ನಮ್ಮೆದುರು ಚಿತ್ರಿಸುವುದರಿಂದ ಕಥನ ಇನ್ನಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ತನ್ನ ಸುತ್ತಲ ಸಮಾಜವು ಎಷ್ಟೇ ಅಪನಂಬಿಕೆ-ಅಪಹಾಸ್ಯ ಮಾಡುತ್ತಿದ್ದರೂ ತನ್ನ ನ್ಯಾಯಯುತ ದಾರಿಯೆಡೆಗೆ ಅದನ್ನು ತರುವ ಗಾಂಧಿಯ ಬದ್ಧತೆ, ಅದನ್ನು ಆಗುಮಾಡಲು ಅನುಸರಿಸುವ ಸತ್ಯಾಗ್ರಹ, ಉಪವಾಸಗಳ ಬಗೆಗೆ ಆಪ್ತವಾದ ವಿಶ್ಲೇಷಣೆ ದೊರಕುತ್ತದೆ. ಕೊನೆಗೆ ಪುಸ್ತಕವು ತನ್ನಿಂದ ಭೌತಿಕವಾಗಿ ದೂರವೇ ಆಗಿ ಹೋದ ಬಾಪುವನ್ನು ಹಂಬಲಿಸುವ ಬಾ ಅವರ ಮರಣ ಕಾಲದ ಭಾವ-ಸಂಕಟಗಳೊಂದಿಗೆ ಮುಗಿತಾಯಕ್ಕೆ ಬರುತ್ತದೆ.
ಈ ಪುಸ್ತಕವು ಕಸ್ತೂರಬಾ ಎಂಬ ವ್ಯಕ್ತಿತ್ವಕ್ಕೆ ಸಲ್ಲಿಸಿದ ಸಮರ್ಥ ಕಾಣಿಕೆಯಾಗಿದೆ. ಅಷ್ಟೇ ಅಲ್ಲ, ಭಾರತದ ಎಲ್ಲ ಪ್ರಭಾವಿ ವ್ಯಕ್ತಿಗಳ ಅನಾಮಿಕ ಪತ್ನಿಯರ ಬದುಕುಗಳಿಗೆ ಕಟ್ಟಿದ ಅಕ್ಷರ ಸ್ಮಾರಕವಾಗಿದೆ. ಕೃತಿಕಾರರಾದ ಡಾ. ಎಚ್. ಎಸ್. ಅನುಪಮಾ ಅವರಿಗೆ ಅಭಿನಂದನೆಗಳು. (ಪುಸ್ತಕದ ಪ್ರತಿಗಳಿಗಾಗಿ ಸಂಪರ್ಕ: 9480286844)
ಇಂಗ್ಲಿಷ್ ಮೂಲ : ಪ್ರೊ. ಚ. ಎ. ರಾಜೇಂದ್ರ ಪ್ರಸಾದ್
ಕನ್ನಡಕ್ಕೆ : ಡಾ. ಎಚ್ ಎಸ್ ಅನುಪಮಾ


