ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಜಿ.ಆರ್.ಸ್ವಾಮಿನಾಥನ್ ರವರಲ್ಲಿ ಒಂದು ವಿನಂತಿ. ಸಂವಿಧಾನಕ್ಕೆ ನಿಷ್ಠೆ ಬೇಡುವ ಈ ನ್ಯಾಯಪೀಠ ನಿಮ್ಮಂತ ಶ್ರೇಷ್ಠ ಸನಾತನಿಗಳಿಗೆ ಸರಿಹೋಗುವುದಿಲ್ಲ. ರಾಜೀನಾಮೆ ಕೊಟ್ಟು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗೆ ಬನ್ನಿ. ಸಂಘ ಪರಿವಾರ ವಿಶಾಲವಾಗಿದೆ. ಸನಾತನ ಧರ್ಮ ಪ್ರಚಾರಕ್ಕೆ ವೇದಿಕೆಯೂ ಸಿದ್ಧವಾಗಿದೆ. ನಿಮ್ಮಂತ ಸನಾತನವಾದಿಗಳು ದೂರವಿದ್ದಷ್ಟೂ ನ್ಯಾಯಾಂಗ ತನ್ನ ಘನತೆಯನ್ನು ಉಳಿಸಿಕೊಳ್ಳುತ್ತದೆ. ಸಂವಿಧಾನಕ್ಕೆ ಬರಬಹುದಾದ ಕಳಂಕ ದೂರಾಗುತ್ತದೆ. – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಇದಪ್ಪಾ ಮಾತು ಅಂದ್ರೆ. ನ್ಯಾಯಾಂಗದಲ್ಲಿ ಕೆಲವರಿರ್ತಾರೆ ಒಳಗೊಂದು ಹೊರಗೊಂದು. ಬಹಳ ನಾಜೂಕಾಗಿ ತಮ್ಮ ಅಂತರಂಗದ ಅಜೆಂಡಾವನ್ನು ನ್ಯಾಯನಿರ್ಣಯದಲ್ಲಿ ಅಳವಡಿಸಿ ಕೊಂಡಿರ್ತಾರೆ. ಆದರೆ ಮದ್ರಾಸ್ ಹೈಕೋರ್ಟಿನ ನ್ಯಾಯಾಧೀಶರಾದ ಜಿ.ಆರ್.ಸ್ವಾಮಿನಾಥನ್ ರವರು ಹಾಗಲ್ಲ. ಏನಿದ್ದರೂ ನೇರಾ ನೇರಾ. ತಮ್ಮನ್ನು ತಾನೇ ಸನಾತನಿ ಎಂದು ಸಾರ್ವಜನಿಕ ಸಭೆಯಲ್ಲಿ ಹೇಳಿಕೊಳ್ಳುವ ಧೈರ್ಯವನ್ನು ತೋರಿಸಿದ್ದಾರೆ.
“ಸಾರ್ವಜನಿಕ ಕರ್ತವ್ಯಗಳನ್ನು ನಿಭಾಯಿಸುವಾಗ ಸನಾತನ ಧರ್ಮ ಹೃದಯದಲ್ಲಿರಬೇಕು” ಎಂದು ಚೆನ್ನೈನ ಧಾರಾ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಹೇಳುವ ಮೂಲಕ ತಮ್ಮ ಸನಾತನ ಧರ್ಮದ ಭಕ್ತಿ ಮತ್ತು ಆಸಕ್ತಿಯನ್ನು ಅವರು ಬಹಿರಂಗಪಡಿಸಿದ್ದಾರೆ.
ಅಲ್ಲಾ ಸ್ವಾಮಿ ನ್ಯಾಯಾಧೀಶರೇ, ನೀವು ಸಂವಿಧಾನದ ಜ್ಯಾತ್ಯತೀತ ಧರ್ಮನಿರಪೇಕ್ಷ ಆಶಯಕ್ಕೆ ಬದ್ಧನಾಗಿರುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿ ನ್ಯಾಯಪೀಠವನ್ನು ಅಲಂಕರಿಸಿದ್ದು. ಎಲ್ಲಾ ಧರ್ಮೀಯರಿಗೂ ಕಾನೂನಾತ್ಮಕವಾದ ನ್ಯಾಯವನ್ನು ಒದಗಿಸಿಕೊಡುವ ಕಾಯಕಕ್ಕೆ ನೇಮಕವಾದದ್ದು. ಆದರೆ ಸನಾತನ ಧರ್ಮ ಅಂದರೆ ವೈದಿಕ ಧರ್ಮ ಅಲಿಯಾಸ್ ಹಿಂದುತ್ವ ಧರ್ಮವನ್ನು ಹೃದಯದಲ್ಲಿಟ್ಟುಕೊಂಡು ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸುತ್ತೀರಿ ಎನ್ನುತ್ತೀರಲ್ಲಾ ನಿಮಗೆ ಸಂವಿಧಾನ ಬದ್ಧ ನ್ಯಾಯಪೀಠದಲ್ಲೇನು ಕೆಲಸ. ಮೊದಲು ನ್ಯಾಯಾಂಗದ ಕಾರ್ಯಭಾರ ತ್ಯಜಿಸಿ ಆರೆಸ್ಸೆಸ್ ಸಂಘಟನೆ ಸೇರಿ ಇಲ್ಲವೇ ಯಾವುದಾದರೂ ವೈದಿಕ ಮಠಕ್ಕೆ ಪೀಠಾಧಿಕಾರಿಯಾಗಿ ಸನಾತನ ಧರ್ಮ ಪ್ರಚಾರ ಕಾರ್ಯವನ್ನು ಮಾಡಿ ಮೋಕ್ಷ ಪಡೆದುಕೊಳ್ಳಿ. ಸನಾತನ ಧರ್ಮವನ್ನು ಮನದಲ್ಲಿ ಮೆದುಳಲ್ಲಿ ಹೃದಯದಲ್ಲಿ ಎಲ್ಲಿ ಬೇಕೋ ಅಲ್ಲಿ ಇಟ್ಟುಕೊಳ್ಳಿ.

ಯುವರ್ ಆನರ್.. ಸನಾತನ ಧರ್ಮ ಅಂದರೆ ವರ್ಣಬೇಧವನ್ನು ಸಾರುವ, ಅಸಮಾತೆಯನ್ನು ಆಚರಿಸುವ, ಅಸ್ಪೃಶ್ಯತೆಯನ್ನು ಅಳವಡಿಸಿಕೊಂಡಿರುವ ಮಾನವ ವಿರೋಧಿ ಧರ್ಮ ಎನ್ನುವ ಕಲ್ಪನೆಯಾದರೂ ತಮಗಿದೆಯಾ? ಮೇಲು ಕೀಳು , ಉಚ್ಛ ನೀಚ, ಶ್ರೇಷ್ಠ ಕನಿಷ್ಠ ಎನ್ನುವ ತಾರತಮ್ಯವನ್ನು ಬೋಧಿಸುವ ಮನುವಾದಿ ಧರ್ಮವನ್ನು ಅಂತರಂಗದಲ್ಲಿ ಆರಾಧಿಸುವ ನೀವು ನ್ಯಾಯಪೀಠದಲ್ಲಿ ಕೂತು ಹೇಗೆ ತಾರತಮ್ಯ ರಹಿತವಾಗಿ ನ್ಯಾಯದಾನ ಮಾಡಬಲ್ಲಿರಿ?.
ಘನತೆವೆತ್ತ ನ್ಯಾಯಮೂರ್ತಿಗಳೇ, ದಯವಿಟ್ಟು ಸಂವಿಧಾನದ ಪೀಠಿಕೆಯನ್ನು ಓದಿಕೊಳ್ಳಿ. ಧರ್ಮನಿರಪೇಕ್ಷದ ಅರ್ಥವನ್ನು ಕಂಡುಕೊಳ್ಳಿ. ಸಾಂವಿಧಾನಿಕ ವ್ಯವಸ್ಥೆಯ ಮಹೋನ್ನತ ನ್ಯಾಯ ಪೀಠವನ್ನು ಅಲಂಕರಿಸಿರುವ ನೀವು ಸನಾತನಿಯಾಗಿ ಹೇಗೆ ಸರ್ವ ಜಾತಿ ಮತ ಧರ್ಮೀಯರಿಗೆ ತಾರತಮ್ಯವಿಲ್ಲದೇ ನ್ಯಾಯ ಒದಗಿಸಲು ಸಾಧ್ಯ? ಎಲ್ಲರನ್ನೂ ಸಮಾನತೆಯಿಂದ ಪರಿಗಣಿಸ ಬೇಕೆಂದು ನ್ಯಾಯದೇವತೆಯ ಕಣ್ಣನ್ನೇ ಕಟ್ಟಲಾಗಿದೆ. ಅಂತಹುದರಲ್ಲಿ ನಿಮ್ಮಂತ ಘನ ನ್ಯಾಯಾಧೀಶರು ಹೀಗೆ ಒಂದು ಧರ್ಮದ ವ್ಯಸನದಲ್ಲಿ ಏಕಪಕ್ಷೀಯವಾಗಿ ಕರ್ತವ್ಯ ನಿರ್ವಹಿಸದಿರಲು ಸಾಧ್ಯ?. ತಾರತಮ್ಯವಿಲ್ಲದೇ ನ್ಯಾಯದಾನ ಮಾಡಲು ಸಾಧ್ಯ?
ಸನಾತನ ಧರ್ಮ ಸಮರ್ಥಕ ಸಂಘಿ ಸರಕಾರವೇ ಈ ದೇಶವನ್ನು ಆಳುತ್ತಿರುವಾಗ ನಿಮ್ಮಂತಹ ನ್ಯಾಯಪೀಠಾಧಿಕಾರಿಗಳಿಗೆ ಹೀಗೆ ಬಹಿರಂಗವಾಗಿ ಸನಾತನಿ ಎಂದು ಹೇಳಿಕೊಳ್ಳುವ ಸ್ಥೈರ್ಯ ಬರಲು ಸಾಧ್ಯ. ನ್ಯಾಯಪೀಠದಿಂದ ನಿವೃತ್ತಿಯಾದ ಮೇಲೆ ಸಂಘಿ ಸರಕಾರದ ಕೃಪಾಕಟಾಕ್ಷದಿಂದ ಪದವಿ ಪ್ರಶಸ್ತಿ ಅಧಿಕಾರ ಸವಲತ್ತು ಪಡೆಯುವ ಅದಮ್ಯ ಬಯಕೆಯೂ ನಿಮ್ಮ ಬಹಿರಂಗ ಸನಾತನಿ ಹೇಳಿಕೆಯ ಅಂತರಾರ್ಥ ಆಗಿರಬಹುದು. ಈಗಾಗಲೇ ನಿಮ್ಮ ಕೆಲವು ನ್ಯಾಯಾಧಿಪತಿಗಳು ಸಂಘಿ ಪರ ನಿಲುವು ತೆಗೆದುಕೊಂಡು ಜಜ್ಮೆಂಟ್ ಕೊಟ್ಟು ಸಂಘಾಧಿಪತಿಗಳನ್ನು ತೃಪ್ತಿ ಪಡಿಸಿ ನಿವೃತ್ತಿಯ ನಂತರ ಅಧಿಕಾರ ಅನುಕೂಲತೆ ಪಡೆದ ಮಾದರಿ ಹೇಗೂ ನಿಮ್ಮ ಮುಂದಿದೆ.
ಆದರೆ ನಿಮ್ಮ ಈ ಧಾರ್ಮಿಕ ಪಕ್ಷಪಾತ, ಅನಿಸಿಕೆ ಮತ್ತು ಆಕರ್ಷಣೆ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆಯನ್ನುಂಟು ಮಾಡುವಂತಿದೆ. ಸಂವಿಧಾನದ ಧರ್ಮನಿರಪೇಕ್ಷ ಆಶಯಕ್ಕೆ ವಿರುದ್ಧವಾಗಿದೆ. ನಿಮ್ಮಂತ ಸನಾತನಿಗಳಿಂದ ಸರ್ವ ಧರ್ಮ ಸಮಾನ ದೃಷ್ಟಿಕೋನದ ನ್ಯಾಯ ನಿರ್ಣಯ ಅಸಾಧ್ಯವೆಂದು ಅನ್ನಿಸುತ್ತಿದೆ.
ಆದ್ದರಿಂದ ತಮ್ಮಲ್ಲಿ ಒಂದು ವಿನಂತಿ. ಸಂವಿಧಾನಕ್ಕೆ ನಿಷ್ಠೆ ಬೇಡುವ ಈ ನ್ಯಾಯಪೀಠ ನಿಮ್ಮಂತ ಶ್ರೇಷ್ಠ ಸನಾತನಿಗಳಿಗೆ ಸರಿಹೋಗುವುದಿಲ್ಲ. ರಾಜೀನಾಮೆ ಕೊಟ್ಟು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗೆ ಬನ್ನಿ. ಸಂಘ ಪರಿವಾರ ವಿಶಾಲವಾಗಿದೆ. ಸನಾತನ ಧರ್ಮ ಪ್ರಚಾರಕ್ಕೆ ವೇದಿಕೆಯೂ ಸಿದ್ಧವಾಗಿದೆ. ನಿಮ್ಮಂತ ಸನಾತನವಾದಿಗಳು ದೂರವಿದ್ದಷ್ಟೂ ನ್ಯಾಯಾಂಗ ತನ್ನ ಘನತೆಯನ್ನು ಉಳಿಸಿಕೊಳ್ಳುತ್ತದೆ. ಸಂವಿಧಾನಕ್ಕೆ ಬರಬಹುದಾದ ಕಳಂಕ ದೂರಾಗುತ್ತದೆ. ನಿಮ್ಮ ಸನಾತನ ಧರ್ಮ ನಿಮ್ಮ ಹೃದಯದಲ್ಲೇ ಇರುತ್ತದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- http://ಜಿ ರಾಮ್ ಜಿ ; ಕೂಲಿ ಕಾರ್ಮಿಕರ ಉದ್ಯೋಗದ ಹಕ್ಕು ಹರಣ


