ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಹಲವಾರು ವಿರೋಧ ಪಕ್ಷಗಳು ಬದಲಾದ ಯೋಜನೆಯನ್ನು ವಿರೋಧಿಸುತ್ತಿವೆ. ಸಂಸತ್ತಿನಲ್ಲಿ ಚರ್ಚೆ ಇಲ್ಲದೇ ತರಾತುರಿಯಲ್ಲಿ ಜಾರಿಗೆ ತರಲಾದ ವಿಬಿ ಜಿ ರಾಮ್ ಜಿ ಕಾಯಿದೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ತಯಾರಿ ನಡೆದಿದೆ. ಬಹುತೇಕ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ಕೊಟ್ಟದೆ. ಪಂಜಾಬ್ ಹಾಗೂ ತಮಿಳುನಾಡಿನ ವಿಧಾನ ಸಭೆಗಳಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿದೆ. ಕರ್ನಾಟಕದಲ್ಲಿ ವಿಶೇಷ ಅಧಿವೇಶನ ಕರೆದು ಖಂಡನಾ ನಿರ್ಣಯ ಮಂಡಿಸುವ ತಯಾರಿ ನಡೆದಿದೆ. ಇಡೀ ದೇಶವೇ ಜಿ ರಾಮ ಜಿ ಯೋಜನೆಯನ್ನು ವಿರೋಧಿಸುತ್ತಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಅತೀ ಆತುರದಲ್ಲಿ ಕೇಂದ್ರ ಸರಕಾರವು “ವಿಬಿ- ಜಿ ರಾಮ್ ಜೀ” ಕಾಯಿದೆ ತಂದಾಗಿನಿಂದ ದೇಶಾದ್ಯಂತ ವಿವಾದ ಭುಗಿಲೆದ್ದಿದೆ. ಕೂಲಿ ಕಾರ್ಮಿಕರ ಉದ್ಯೋಗದ ಹಕ್ಕು ಕೇಂದ್ರ ಸರಕಾರದ ಭಿಕ್ಷೆಯ ಮೇಲೆ ಅವಲಂಬನೆಯಾಗಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಮನ್ರೇಗಾ ಯೋಜನೆಯಿಂದ ಗಾಂಧಿ ಹೆಸರು ತೆಗೆದು ರಾಮನ ಹೆಸರಿನಲ್ಲಿ ಮರುನಾಮಕರಣ ಮಾಡಿದ್ದಕ್ಕೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಬಿಜೆಪಿ ಪಕ್ಷ ಮಾತ್ರ ತನ್ನ ನಿಲುವನ್ನು ಉಗ್ರವಾಗಿ ಸಮರ್ಥಿಸಿಕೊಳ್ಳುತ್ತಿದೆ.
2005 ಸೆಪ್ಟಂಬರ್ 7 ರಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ನರೇಗಾ ಎನ್ನುವ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಸಂಸತ್ತಿನಲ್ಲಿ ಅಂಗೀಕಾರ ಪಡೆದು ಕಾಯಿದೆಯನ್ನಾಗಿಸಿತು. ಮುಂದೆ ಅದೇ ಸರಕಾರವು 2009 ಅಕ್ಟೋಬರ್ 2 ರ ಗಾಂಧಿಜಯಂತಿಯಂದು ಗಾಂಧೀಜಿಯವರ ಹೆಸರನ್ನು ಈ ಯೋಜನೆಗೆ ಸೇರಿಸಿ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ” ಅಂದರೆ ಮನ್ರೇಗಾ ಎಂದು ಮರುನಾಮಕರಣ ಮಾಡಿತು. ಆದರೆ ಮೋದಿ ನೇತೃತ್ವದ ಕೇಂದ್ರ ಸರಕಾರವು 2025 ರಲ್ಲಿ “ವಿಕಸಿತ ಭಾರತ – ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಖಾತರಿ ಯೋಜನೆ” ಅಂದರೆ “ವಿಬಿ- ಜಿ ರಾಮ್ ಜಿ” ಎಂದು ಮರುನಾಮಕರಣ ಮಾಡಿ ಕಾಯಿದೆಯನ್ನಾಗಿಸಿತು.
ಈಗಾಗಲೇ 20 ವರ್ಷಗಳಿಂದ ಜಾರಿಯಲ್ಲಿದ್ದ ಉದ್ಯೋಗ ಖಾತರಿ ಯೋಜನೆಯನ್ನು ಈಗ ಇದ್ದಕ್ಕಿದ್ದಂತೆ ಬದಲಾಯಿಸುವ ಅಗತ್ಯವಾದರೂ ಏನಿತ್ತು?. ಈಗಾಗಲೇ 30 ಕ್ಕೂ ಹೆಚ್ಚು ಬಾರಿ ಯುಪಿಎ ಸರಕಾರದ ಯೋಜನೆಗಳನ್ನು ಬಿಜೆಪಿ ಸರಕಾರ ಮರುನಾಮಕರಣ ಮಾಡಿದೆ. ಈ ಮನ್ರೇಗಾ ಯೋಜನೆಯೂ ಸಹ ಅದೇ ರೀತಿ ಮರುನಾಮಕರಣ ಮಾಡಲಾಗಿದೆ ಎಂದುಕೊಂಡರೆ ಅದು ತಪ್ಪು ನಿರ್ಧಾರ. ಯಾಕೆಂದರೆ ಜಿ ರಾಮ್ ಜಿ ಯೋಜನೆಯೇ ಮನ್ರೇಗಾ ಯೋಜನೆಯನ್ನು ತೆಗೆದು ಹಾಕಿ ಅದರ ಆಶಯಕ್ಕೆ ವಿರುದ್ಧವಾದ ಕಾಯಿದೆಯನ್ನು ರೂಪಿಸುವುದಾಗಿದೆ. ಇದು ಕೇವಲ ಮರುನಾಮಕರಣವಲ್ಲ ಮನ್ರೇಗಾಕ್ಕೆ ಮರಣ ಶಾಸನವಾಗಿದೆ.
ಮನ್ರೇಗಾ ಎನ್ನುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಪ್ರಯತ್ನ ಕಳೆದ ಹತ್ತು ವರ್ಷಗಳಿಂದಲೂ ಜಾರಿಯಲ್ಲಿದೆ.
* ಈ ಯೋಜನೆಗೆ ಬೇಕಾದ ಬಜೆಟ್ ಅನುದಾನ ಹಂಚಿಕೆಯನ್ನು ನಿರಂತರವಾಗಿ ಕಡಿತಗೊಳಿಸಲಾಗಿದೆ.
* 2024-25 ರ ಅವಧಿಯಲ್ಲಿಯೇ 60 ಸಾವಿರ ಕೋಟಿ ಅನುದಾನ ಕಡಿತ ಮಾಡಲಾಗಿದೆ.
* ಆಧಾರ ಆಧಾರಿತ ವೇತನ ಪಾವತಿ ವ್ಯವಸ್ಥೆಯಿಂದಾಗಿ ಲಕ್ಷಾಂತರ ಜಾಬ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.
* ಆಧಾರ ರಹಿತ ಕೂಲಿ ಕಾರ್ಮಿಕರನ್ನು ಉದ್ಯೋಗದಿಂದ ವಂಚಿತರನ್ನಾಗಿಸಲಾಗಿದೆ.
* ವೇತನ ಪಾವತಿಯಲ್ಲಿ ವಿಳಂಬ ಧೋರಣೆ ಅನುಸರಿಸರಿಸಲಾಗಿದೆ.
* ಅಂತಿಮವಾಗಿ ಚರ್ಚೆ, ಸಮಾಲೋಚನೆ ನಡೆಸದೇ ಎರಡು ದಶಕಗಳ ಹಳೆಯ ಕಾಯ್ದೆಯನ್ನೇ ನಾಶಮಾಡಿ ಹೊಸ ಕಾಯಿದೆ ತರಲಾಗಿದೆ.

ಯಾಕೆ ಅತೀ ಅವಸರದಲ್ಲಿ ಮನ್ರೇಗಾ ಹೆಸರು ಮತ್ತು ಯೋಜನೆಯನ್ನು ಬದಲಾಯಿಸಲಾಯಿತು?
ಅತಿಯಾದ ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕತೆ ನಿರ್ವಹಣೆ, ರೈತ ಸ್ನೇಹಿ, ವಿಕಸಿತ ಭಾರತ ಅಭಿವೃದ್ಧಿ ಎನ್ನುವುದೆಲ್ಲಾ ಬಿಜೆಪಿ ಸರಕಾರ ಹೇಳುವ ನೆಪಗಳಾಗಿವೆ. ಅದಕ್ಕೆ ಅಸಲಿ ಕಾರಣ ಪಶ್ಚಿಮ ಬಂಗಾಳ ಸರಕಾರ.
ಅದು ಹೇಗೆಂದರೆ, ಮೋದಿ ಸರಕಾರವು ತನ್ನ ದ್ವೇಷ ರಾಜಕಾರಣದಿಂದಾಗಿ 2021 ರಿಂದ ಪಶ್ಚಿಮ ಬಂಗಾಳ ರಾಜ್ಯದ ಮನ್ರೇಗಾ ಯೋಜನೆಗೆ ಹಣಕಾಸು ಬಿಡುಗಡೆ ಸ್ಥಗಿತಗೊಳಿಸಿತ್ತು. ಈ ಯೋಜನೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿತ್ತು. ಕೇಂದ್ರ ಸರಕಾರದ ವಿರುದ್ದ ಪಶ್ಚಿಮ ಬಂಗಾಳ ಮಮತಾ ದೀದಿ ಸರಕಾರವು ನ್ಯಾಯಾಲಯದ ಮೆಟ್ಟಿಲೇರಿತು. ಕಲ್ಕತ್ತಾ ಉಚ್ಚ ನ್ಯಾಯಾಲಯ ಹಾಗೂ ಸುಪ್ರಿಂ ಕೋರ್ಟ್ ಗಳು ” ಪಶ್ಚಿಮ ಬಂಗಾಳಕ್ಕೆ ಬಾಕಿ ಹಣ ಪಾವತಿಸಬೇಕು ಹಾಗೂ ಮನ್ರೇಗಾ ಯೋಜನೆಯನ್ನು ಪುನರಾರಂಭಿಸಬೇಕು” ಎಂದು ಆದೇಶಿಸಿತು. ಈ ಆದೇಶ ಕೇಂದ್ರ ಸರಕಾರಕ್ಕೆ ನುಂಗಲಾರದ ತುತ್ತಾಯಿತು. ಕೋರ್ಟ್ ನಿರ್ದೇಶನ ನೀಡಿದ ಕೆಲವೇ ದಿನಗಳಲ್ಲಿ ತರಾತುರಿಯಲ್ಲಿ ಮನ್ರೇಗಾ ಯೋಜನೆಯನ್ನೇ ಬದಲಾಯಿಸಲಾಯ್ತು. 2025 ನವೆಂಬರ್ 18 ರಂದು ಲೋಕಸಭೆಯಲ್ಲಿ ಜಿ ರಾಮ್ ಜಿ ಬಿಲ್ ಗೆ ಅನುಮತಿ ಪಡೆದು, 2025 ನವೆಂಬರ್ 19 ರಂದು ರಾಜ್ಯಸಭೆಯಲ್ಲೂ ಅನುಮೋದನೆ ಪಡೆಯಲಾಯ್ತು. 20 ನೇ ತಾರೀಕಿನಂದು ರಾಷ್ಟ್ರಪತಿಯವರ ಸಹಿಯೂ ಆಗಿ ವಿಬಿ- ಜಿ ರಾಮ್ ಜಿ ಯೋಜನೆ ಕಾಯಿದೆಯಾಯಿತು. ಅಚ್ಚರಿಯ ಸಂಗತಿ ಏನೆಂದರೆ ಈ ಯೋಜನೆ ಕುರಿತು ಸಾರ್ವಜನಿಕ ಚರ್ಚೆಗೆ ಸಮಯಾವಕಾಶ ಕೊಡಲಿಲ್ಲ. ಸಂಸತ್ತಿನಲ್ಲೂ ಚರ್ಚೆ ನಡೆಸಲಿಲ್ಲ. ಅವಸರದಲ್ಲಿ ಅಸಂವಿಧಾನಿಕವಾಗಿ ಹೊಸ ಯೋಜನೆ ಜಾರಿ ಮಾಡಲಾಯ್ತು.
ಹೊಸ ಯೋಜನೆಯ ಸಾಧಕ ಬಾಧಕಗಳು
ಈ ಹೊಸ ಯೋಜನೆಯ ಸಾಧಕ ಬಾಧಕಗಳನ್ನು ಮನ್ರೇಗಾ ಜೊತೆಗೆ ಹೋಲಿಕೆ ಮಾಡಿ ನೋಡಿದರೆ ಕೇಂದ್ರ ಸರಕಾರದ ಶಡ್ಯಂತ್ರ ಗೊತ್ತಾಗುತ್ತದೆ. ಮನ್ರೇಗಾ ಯೋಜನೆಯಲ್ಲಿ…
* ನೂರು ದಿನಗಳ ಉದ್ಯೋಗ ಖಾತ್ರಿ ಇತ್ತು.
* ಉದ್ಯೋಗ ಕೊಡದೇ ಇದ್ದರೆ ಉದ್ಯೋಗ ಭತ್ಯೆ ಕೊಡಬೇಕಾಗಿತ್ತು.
* ಕೇಂದ್ರ ಸರಕಾರವೇ ಪೂರ್ಣ ಪ್ರಮಾಣದಲ್ಲಿ ಅನುದಾನ ಒದಗಿಸಬೇಕಾಗಿತ್ತು.
* ಗ್ರಾಮ ಸಭೆಗಳಲ್ಲಿ ಕಾಮಗಾರಿ ಕುರಿತು ಚರ್ಚಿಸಿ, ಗ್ರಾಮ ಪಂಚಾಯತಿಗಳು ಕಾರ್ಯಯೋಜನೆ ಅನುಷ್ಠಾನಕ್ಕೆ ತರಬೇಕಾಗಿತ್ತು.
* ಯಾವುದೇ ನಿರ್ಬಂಧವಿಲ್ಲದೇ ವರ್ಷ ಪೂರ್ತಿ 100 ದಿನಗಳ ಕಾಲ ಕೆಲಸ ಪಡೆಯುವ ಹಕ್ಕು ಕಾರ್ಮಿಕರದ್ದಾಗಿತ್ತು.
* ಕಾಮಗಾರಿಗಳ ಬೇಡಿಕೆಯಂತೆ ಅನುದಾನ ಮಂಜೂರಾಗುತ್ತಿತ್ತು.
* ಕಾಮಗಾರಿ ಮತ್ತು ಕೆಲಸದ ಬೇಡಿಕೆಯೇ ಅನುದಾನಕ್ಕೆ ಮಾನದಂಡವಾಗಿತ್ತು
* ಕನಿಷ್ಟ ವೇತನವನ್ನು ಕಾಲಕಾಲಕ್ಕೆ ಪರಿಷ್ಕರಿಸಬೇಕಾಗಿತ್ತು.
* ಈ ಯೋಜನೆ ಯಾವುದೇ ತಾರತಮ್ಯವಿಲ್ಲದೇ ಭಾರತದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುತ್ತಿತ್ತು.
* ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ಹಾಗೂ ನೇರವಾಗಿ ವೇತನ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿತ್ತು.
ವಿಬಿ ಜಿ ರಾಮ್ ಜಿ ಯೋಜನೆ ಹೇಗಿದೆ ಎಂದರೆ…
ಆದರೆ ಈಗ ಮನ್ರೇಗಾ ಬದಲಾಗಿ ಬಿಜೆಪಿ ಸರಕಾರ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆ ಹೇಗಿದೆ ಎಂದರೆ…
* ನೂರು ದಿನಗಳ ಬದಲಾಗಿ 125 ದಿನ ಉದ್ಯೋಗ ಕೊಡಲಾಗುವುದೆಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಆದರೆ ಇಲ್ಲಿವರೆಗೂ ಸರಾಸರಿ 55 ರಿಂದ 60 ದಿನಗಳನ್ನಷ್ಟೇ ಕೂಲಿ ಕಾರ್ಮಿಕ ಕುಟುಂಬ ಬಳಸಿಕೊಂಡಿದೆ. 100 ದಿನ ಬಳಸಿಕೊಳ್ಳಲು ಸಾಧ್ಯವಾಗದೇ ಇರುವಾಗ 125 ದಿನ ಮಾಡಿ ಪ್ರಯೋಜನವೇನು?
* ಮೊದಲು ಮನ್ರೇಗಾದಲ್ಲಿ ಕೇಂದ್ರ ಸರಕಾರವೇ ಇಡೀ ಯೋಜನೆಗೆ ಪೂರ್ತಿ ಹಣ ಕೊಡಬೇಕಾಗಿತ್ತು. ಆದರೆ ಈಗ ಜಿ ರಾಮ್ ಜಿ ಯಲ್ಲಿ ಕೇಂದ್ರ ಸರಕಾರ ಕೇವಲ 60% ಹಣ ಕೊಡುತ್ತಿದ್ದು ಬಾಕಿ 40% ಹಣವನ್ನು ರಾಜ್ಯ ಸರಕಾರ ಭರಿಸಬೇಕಿದೆ. ಈಗಾಗಲೇ ಆರ್ಥಿಕವಾಗಿ ಬಸವಳಿದು ಸಾಲ ಮಾಡಿಕೊಳ್ಳುತ್ತಿರುವ ರಾಜ್ಯ ಸರಕಾರಗಳ ಮೇಲೆ ಈ ಹೆಚ್ಚುವರಿ ರಾಮ್ ಜಿ ಹೊರೆಯನ್ನು ಹೊರೆಸಿದರೆ ಯಾವ ರಾಜ್ಯ ಸರಕಾರ ತಾನೇ ಈ ಯೋಜನೆಯನ್ನು ಜಾರಿಗೆ ತರಲು ಸಾಧ್ಯ?
* ರಾಮ್ ಜಿ ಯೋಜನೆಯಲ್ಲಿ ಕೇಂದ್ರ ಸರಕಾರದ ಮೇಲ್ವಿಚಾರಣೆ ಮೇರೆಗೆ ಕಾಮಗಾರಿ ಹಂಚಿಕೆ ಮಾಡಲಾಗುತ್ತಿದ್ದು ಗ್ರಾಮ ಸಭೆ, ಪಂಚಾಯತಿಗಳ ಹಕ್ಕನ್ನು ಮೊಟಕುಗೊಳಿಸಲಾಗಿದೆ.
* ರಾಮ್ ಜಿ ಯೋಜನೆಯಲ್ಲಿ ಬಿತ್ತನೆ ಕೊಯ್ಲು ಸಮಯದ 60 ದಿನ ಯೋಜನೆ ನಿಲುಗಡೆಯಾಗಲಿದೆ. ಆ ಸಮಯದಲ್ಲಿ ಕಾರ್ಮಿಕರ ಗತಿ ಏನು?
* ರಾಜ್ಯ ಸರಕಾರಗಳ ಮೇಲೆ ಆರ್ಥಿಕ ಹೊರೆಯನ್ನು ಹಾಕಿ ಯೋಜನೆಯ ಸಂಪೂರ್ಣ ನಿಯಂತ್ರಣವನ್ನು ಕೇಂದ್ರ ಸರಕಾರ ಹೊಂದಿದ್ದು ವಿಕೇಂದ್ರಿತ ಯೋಜನೆಯನ್ನು ಕೇಂದ್ರೀಕರಣ ಮಾಡಲಾಗಿದೆ.
* ದೇಶದ ಯಾವುದೇ ಪ್ರದೇಶದ ಕಾರ್ಮಿಕರಿಗೆ ಮನ್ರೇಗಾ ಯೋಜನೆ ಪಡೆಯುವ ಕಾನೂನಾತ್ಮಕ ಹಕ್ಕನ್ನು ತೆಗೆದು ಹಾಕಿ, ಕೇಂದ್ರ ಸರಕಾರ ಕೊಡುವ ಭಿಕ್ಷೆ ಎನ್ನುವಂತೆ ರೂಪಿಸಲಾಗಿದೆ.
* ಈ ಯೋಜನೆಯನ್ನು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ ಪ್ರದೇಶಗಳಲ್ಲಿ ಮಾತ್ರ ಜಾರಿಗೊಳಿಸಲಾಗುತ್ತಿದೆ. ಕೇಂದ್ರದ ಅಧಿಸೂಚನೆಯಿಂದ ಕೈಬಿಟ್ಟಿರುವ ಪ್ರದೇಶಗಳ ಕಾರ್ಮಿಕರಿಗೆ ಉದ್ಯೋಗ ಇಲ್ಲವಾಗಿದೆ.
* ಕಾಮಗಾರಿಗಳ ಬೇಡಿಕೆಯಂತೆ ಅನುದಾನ ಮಂಜೂರಾಗುವುದನ್ನು ಬದಲಾಯಿಸಿ, ಬಿಡುಗಡೆಯಾಗುವ ಅನುದಾನಕ್ಕೆ ತಕ್ಕಂತೆ ಕಾಮಗಾರಿ ಮಾಡಬೇಕಾಗಿದೆ. ಗ್ರಾಮಗಳ ಆದ್ಯತೆ ಹಾಗೂ ಅಗತ್ಯಗಳಿಗೆ ಅವಕಾಶ ಇಲ್ಲವಾಗಿದೆ.
ಹೀಗೆ ಹಣಕಾಸು ಹಂಚಿಕೆ, ಅಧಿಕಾರ ವಿಭಜನೆ ಮೂಲಕ ಹೆಸರು ಬದಲಾವಣೆಯನ್ನೂ ಮಾಡಿದ ಕೇಂದ್ರ ಸರಕಾರ ಯುಪಿಎ ಸರಕಾರದ ಇಡೀ ಯೋಜನೆಯನ್ನು ಬದಲಾಯಿಸಿ ಬಡವರ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ ಹಾಗೂ ಯೋಜನೆಯ ಸಂಪೂರ್ಣ ನಿಯಂತ್ರಣವನ್ನು ತನ್ನದಾಗಿಸಿಕೊಂಡಿದೆ. ರಾಜ್ಯ ಸರಕಾರಗಳು ಕೇವಲ ತಮ್ಮ ಪಾಲಿನ ಹಣವನ್ನು ಹೊಂದಿಸಿ ಕೊಡಬೇಕಾಗಿದೆ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ಮೋದಿ ಸರಕಾರ ಮಾಡಿದ ಸರ್ಜಿಕಲ್ ಸ್ಟ್ರ್ಯಕ್ ಆಗಿದೆ. ಹೀಗೆ ಯೋಜನೆಯ ಬದಲಾವಣೆಯ ಉದ್ದೇಶವೇ ಮನ್ರೇಗಾ ಯೋಜನೆಯನ್ನು ದುರ್ಬಲಗೊಳಿಸುವುದಾಗಿದೆ.
ಮನ್ರೇಗಾ ಯೋಜನೆಯನ್ನು ದುರ್ಬಲಗೊಳಿಸುವ ಹುನ್ನಾರ ….
* ಕಳೆದ ಒಂದು ದಶಕದಿಂದ ಮನ್ರೇಗಾ ಯೋಜನೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.
* ಯೋಜನೆಯ ಬಜೆಟ್ ನ್ನು ನಿರಂತರವಾಗಿ ಕಡಿತಗೊಳಿಸಲಾಗಿದೆ.
* 2024-25 ರಲ್ಲಿ 60 ಸಾವಿರ ಕೋಟಿ ಅನುದಾನ ಕಡಿತ ಮಾಡಲಾಗಿದೆ.
* ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಿಂದಾಗಿ ಲಕ್ಷಾಂತರ ಜಾಬ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ.
* ಅಧಾರ್ ಕಾರ್ಡ್ ರಹಿತ ಕಾರ್ಮಿಕರು ಉದ್ಯೋಗದಿಂದ ವಂಚಿತರಾಗಿದ್ದಾರೆ.
* ವೇತನ ಪಾವತಿಯಲ್ಲಿ ವಿಳಂಬ ಮಾಡಲಾಗುತ್ತಿದೆ.
* ಈಗ ಅಂತಿಮವಾಗಿ ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೇ ಮನ್ರೇಗಾ ಯೋಜನೆಯನ್ನು ನಾಶ ಮಾಡಲಾಗಿದೆ.
ರಾಮ್ ಜಿ ಯೋಜನೆಯಿಂದ ಯಾರಿಗೆ ನಷ್ಟ?
* ತಳ ಸಮುದಾಯಗಳ ಕೂಲಿ ಕಾರ್ಮಿಕರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗಿದೆ.
* 47% ನಷ್ಟು ಫಲಾನುಭವಿ ಮಹಿಳಾ ಕೂಲಿ ಕಾರ್ಮಿಕರ ಕೆಲಸದ ಹಕ್ಕು ಅಪಾಯದಲ್ಲಿದೆ.
* ಮನ್ರೆಗಾ ಯೋಜನೆಯಲ್ಲಿ ಫಲಾನುಭವಿಗಳಾಗಿದ್ದ ಶೇಕಡಾ 51ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಾರ್ಮಿಕರು ಉದ್ಯೋಗದ ಹಕ್ಕಿನಿಂದ ವಂಚಿತರಾಗುತ್ತಾರೆ.
* ತಳ ಸಮುದಾಯಗಳ ಹಾಗೂ ಮಹಿಳಾ ಕೂಲಿ ಕಾರ್ಮಿಕರ ಸಬಲೀಕರಣದ ಉದ್ದೇಶಕ್ಕೆ ಹಿನ್ನಡೆಯಾಗುತ್ತದೆ.

ಜಿ ರಾಮ್ ಜಿ ಯೋಜನೆಯಿಂದಾಗುವ ದುಷ್ಪರಿಣಾಮಗಳು
* ಮನ್ರೇಗಾ ಯೋಜನೆಯ ಉದ್ದೇಶವೇ ಗ್ರಾಮೀಣರ ವಲಸೆ ನಿಲ್ಲಿಸುವುದಾಗಿತ್ತು. ಆದರೆ ಈ ರಾಮ್ ಜಿ ಯೋಜನೆಯಿಂದ ಕಾರ್ಮಿಕರ ಉದ್ಯೋಗದ ಹಕ್ಕಿಗೆ ಅಪಾಯವಿದ್ದು ವಲಸೆ ಹೆಚ್ಚಾಗುವ ಸಂಭವನೀಯತೆ ಇದೆ.
* ವರ್ಷಕ್ಕೆ 60 ದಿನ ಈ ಯೋಜನೆಯ ಸ್ಥಗಿತದಿಂದಾಗಿ ಕೂಲಿ ಕಾರ್ಮಿಕರು ನಿರುದ್ಯೋಗದ ಒತ್ತಡದಿಂದಾಗಿ ಕೆಲಸಕ್ಕಾಗಿ ಪಟ್ಟಣಗಳತ್ತ ವಲಸೆ ಹೋಗುತ್ತಾರೆ.
* ಈ ಯೋಜನೆಯಲ್ಲಿ ಕೊಡುವ 381 ರೂ.ದಿನಗೂಲಿಗಿಂತಲೂ ಹೆಚ್ಚು ದಿನಗೂಲಿ ಪಟ್ಟಣ ನಗರಗಳಲ್ಲಿ ದೊರೆಯುವುದರಿಂದ ಕಾರ್ಮಿಕರು ಮತ್ತೆ ಮರಳಿ ಗ್ರಾಮಕ್ಕೆ ಬರುವುದು ಸಾಧ್ಯವಿಲ್ಲವಾಗುತ್ತದೆ.
* ಮನ್ರೆಗಾದಲ್ಲಿ ಗುತ್ತಿಗೆದಾರರಿಗೆ ಅವಕಾಶವಿರಲಿಲ್ಲ. ಆದರೆ ರಾಮ್ ಜಿ ಯೋಜನೆಯಿಂದಾಗಿ ಕೂಲಿಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರರು ಹುಟ್ಟಿಕೊಳ್ಳುತ್ತಾರೆ.
* ವಲಸೆಯಿಂದಾಗಿ ಕಾರ್ಪೊರೇಟ್ ಕಂಪನಿಗಳಿಗೆ ಕಡಿಮೆ ಕೂಲಿಗೆ ಸಾಕಷ್ಟು ಕೂಲಿ ಕಾರ್ಮಿಕರು ದೊರೆಯುತ್ತಾರೆ, ಹಾಗೂ ಈ ಹೊಸ ಕಾಯ್ದೆಯ ಉದ್ದೇಶವೂ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವುದಾಗಿದೆ.
* ಮನ್ರೇಗಾದಲ್ಲಿ ಕನಿಷ್ಟ ವೇತನ ಕಾರ್ಮಿಕರ ಹಕ್ಕಾಗಿತ್ತು, ಕಾಲಕಾಲಕ್ಕೆ ಪರಿಷ್ಕರಣೆಗೆ ಅವಕಾಶ ಇತ್ತು. ಆದರೆ ರಾಮ್ ಜೀ ಯಲ್ಲಿ ಈ ಕುರಿತ ಪ್ರಸ್ತಾಪವೇ ಇಲ್ಲವಾದ್ದರಿಂದ ಹೆಚ್ಚು ಕೂಲಿ ಹಣಕ್ಕಾಗಿ ಕಾರ್ಮಿಕರ ಸಾಮೂಹಿಕ ವಲಸೆ ನಿರಂತರವಾಗುತ್ತದೆ.
* ವಲಸೆ ಹೆಚ್ಚಾದಷ್ಟೂ ಕೃಷಿ ಕ್ಷೇತ್ರ ನಷ್ಟ ಅನುಭವಿಸುತ್ತದೆ. ರೈತರ ಆತ್ಮಹತ್ಯೆ ಹೆಚ್ಚಾಗುತ್ತದೆ.
2024-25 ರ ಅಂಕಿ ಅಂಶಗಳ ಪ್ರಕಾರ ರಾಷ್ಟ್ರೀಯ ಮಟ್ಟದಲ್ಲಿ 14 ಕೋಟಿಗೂ ಹೆಚ್ಚು ಸಕ್ರಿಯ ಕಾರ್ಮಿಕರು ಜಾಬ್ ಕಾರ್ಡ್ ಹೊಂದಿದ್ದಾರೆ. 5.78 ಕೋಟಿ ಕುಟುಂಬಗಳು ಮನ್ರೇಗಾ ಯೋಜನೆಯಲ್ಲಿ ಉದ್ಯೋಗ ಪಡೆದಿದ್ದಾರೆ. 290 ಕೋಟಿಗೂ ಅಧಿಕ ಮಾನವ ಕೆಲಸದ ದಿನಗಳ ಉದ್ಯೋಗ ಸೃಷ್ಟಿಯಾಗಿವೆ. ಶೇಕಡಾ 58 ರಷ್ಟು ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಕರ್ನಾಟಕದಲ್ಲಿ 89 ಲಕ್ಷ ಕುಟುಂಬಗಳು ಮನ್ರೇಗಾ ಯೋಜನೆಯಲ್ಲಿ ನೋಂದಾಯಿಸಿವೆ. ಸರಾಸರಿ ಪ್ರತಿ ಕುಟುಂಬಕ್ಕೂ 45 ರಿಂದ 50 ದಿನಗಳ ಉದ್ಯೋಗ ವದಗಿಸಲಾಗಿದೆ. ಈಗ ರಾಮ್ ಜಿ ಯೋಜನೆಯಿಂದಾಗಿ ಇಷ್ಟೊಂದು ಕುಟುಂಬಗಳ ಉದ್ಯೋಗದ ಭವಿಷ್ಯ ಸಂಕಷ್ಟದಲ್ಲಿದೆ. ಹೆಚ್ಚುವರಿ ಹಣದ ಹೊರೆ ಹೊರಲಾಗದ ರಾಜ್ಯಗಳು ಉದ್ಯೋಗದ ಅವಕಾಶಗಳನ್ನೇ ಕಡಿತಗೊಳಿಸುವ ಸಾಧ್ಯತೆಯೇ ಹೆಚ್ಚಾಗಿದೆ.
ಮನ್ರೇಗಾ ಯೋಜನೆ ಬದಲಾವಣೆಗೆ ಬಿಜೆಪಿಯವರು ಕೊಡುವ ಕಾರಣಗಳು
ಇಷ್ಟಕ್ಕೂ ಮನ್ರೇಗಾ ಯೋಜನೆ ಬದಲಾವಣೆಗೆ ಬಿಜೆಪಿಯವರು ಕೊಡುವ ಕಾರಣಗಳೇ ವಿಚಿತ್ರವಾಗಿವೆ. ಅವು ಹೇಗಿವೆ ಎಂದರೆ.
* ಗಾಂಧಿಯವರು ರಾಮನ ಆರಾಧಕರಾಗಿದ್ದರು, ಅದಕ್ಕಾಗಿ ಗಾಂಧಿ ಹೆಸರನ್ನು ತೆಗೆದು ರಾಮನ ಹೆಸರನ್ನು ಯೋಜನೆಗೆ ಸೇರಿಸಲಾಗಿದೆ.
* ಮನ್ರೇಗಾ ಯೋಜನೆಯನ್ನು ಬದಲಾಯಿಸಿಲ್ಲ. ಅದನ್ನು ಸುಧಾರಿಸಲಾಗಿದೆ.
* ಮನ್ರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ಅತಿಯಾಗಿತ್ತು ಅದರ ನಿಯಂತ್ರಣಕ್ಕಾಗಿ ರಾಮ್ ಜಿ ಯೋಜನೆ ತರಲಾಗಿದೆ.
* ನೂರು ದಿನದ ಬದಲು 125 ದಿನ ಉದ್ಯೋಗ ಕೊಡಲಾಗುತ್ತದೆ.
ಬದಲಾದ ಯೋಜನೆಗೆ ವಿರೋಧವೇಕೆ?
ಇವೆಲ್ಲಾ ಮನ್ರೇಗಾ ಯೋಜನೆಯ ಮಾರಣ ಹೋಮಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರದವರು ಕೊಡುವ ನೆಪಗಳಾಗಿವೆ. ಸುಧಾರಣೆ ನೆಪದಲ್ಲಿ ಕಾರ್ಮಿಕರ ಕಾನೂನಾತ್ಮಕ ಉದ್ಯೋಗದ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರವಾಗಿದೆ. ಯೋಜನೆಯನ್ನು ಕೇಂದ್ರೀಕರಣ ಮಾಡಿ ಸಂಪೂರ್ಣ ನಿಯಂತ್ರಣವನ್ನುಕೇಂದ್ರ ಸರಕಾರ ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಳ್ಳುವುದಾಗಿದೆ. ಕೂಲಿ ಕಾರ್ಮಿಕರ ಉದ್ಯೋಗದ ಹಕ್ಕನ್ನು ಕಿತ್ತುಕೊಂಡು ಕಾರ್ಪೋರೇಟ್ ಕುಳಗಳಿಗೆ ಕಡಿಮೆ ದಿನಗೂಲಿಗೆ ಕಾರ್ಮಿಕರನ್ನು ಒದಗಿಸಿಕೊಡುವ ಹುನ್ನಾರವಾಗಿದೆ. ಬಿಜೆಪಿಯೇತರ ಸರಕಾರ ಇರುವ ರಾಜ್ಯಗಳ ಮೇಲೆ ಭ್ರಷ್ಟಾಚಾರ ಆರೋಪ ಹೊರೆಸಿ ಆ ರಾಜ್ಯಗಳಿಗೆ ಉದ್ಯೋಗ ಯೋಜನೆಯ ಪ್ರಯೋಜನ ದೊರೆಯದಂತೆ ಮಾಡುವುದಾಗಿದೆ. ರಾಜ್ಯಗಳಿಂದ 40% ಹಣ ಹಾಕಿಸಿ ಕೇಂದ್ರ ಸರಕಾರ ಸಂಪೂರ್ಣವಾಗಿ ಯೋಜನೆಯ ಮೇಲೆ ನಿಯಂತ್ರಣ ಹೊಂದುವುದಾಗಿದೆ.
ಈಗಾಗಲೇ ಕೇಂದ್ರ ಸರಕಾರದಿಂದ ಮಾಹಿತಿ ಹಕ್ಕು ಯೋಜನೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಲಾಗಿದೆ. ಉದ್ಯೋಗ ಖಾತರಿ ಹಕ್ಕಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಆಹಾರದ ಹಕ್ಕು ಹಾಗೂ ಶಿಕ್ಷಣದ ಹಕ್ಕಿಗೂ ಧಕ್ಕೆ ತರುವ ಪ್ರಯತ್ನಗಳಾಗುತ್ತಿವೆ. ಮಹಾತ್ಮಾ ಗಾಂಧಿಯವರ ಹೆಸರನ್ನು ಬದಲಾಯಿಸುವ ಮೂಲಕ ಜನರ ಸ್ಮೃತಿ ಪಟಲದಿಂದ ಗಾಂಧಿಯವರ ಹೆಸರನ್ನು ಅಳಿಸುವ ಪ್ರಯತ್ನ ಜಾರಿಯಲ್ಲಿದೆ.
ವ್ಯಾಪಕ ಜನಾಂದೋಲನ ನಡೆಯಬೇಕಿದೆ…
ಹೀಗಾಗಿ ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಹಲವಾರು ವಿರೋಧ ಪಕ್ಷಗಳು ಬದಲಾದ ಯೋಜನೆಯನ್ನು ವಿರೋಧಿಸುತ್ತಿವೆ. ಸಂಸತ್ತಿನಲ್ಲಿ ಚರ್ಚೆ ಇಲ್ಲದೇ ತರಾತುರಿಯಲ್ಲಿ ಜಾರಿಗೆ ತರಲಾದ ವಿಬಿ ಜಿ ರಾಮ್ ಜಿ ಕಾಯಿದೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ತಯಾರಿ ನಡೆದಿದೆ. ಬಹುತೇಕ ಕಾರ್ಮಿಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ರೈತ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ ಕೊಟ್ಟದೆ. ಪಂಜಾಬ್ ಹಾಗೂ ತಮಿಳುನಾಡಿನ ವಿಧಾನ ಸಭೆಗಳಲ್ಲಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗಿದೆ. ಕರ್ನಾಟಕದಲ್ಲಿ ವಿಶೇಷ ಅಧಿವೇಶನ ಕರೆದು ಖಂಡನಾ ನಿರ್ಣಯ ಮಂಡಿಸುವ ತಯಾರಿ ನಡೆದಿದೆ. ಇಡೀ ದೇಶವೇ ಜಿ ರಾಮ ಜಿ ಯೋಜನೆಯನ್ನು ವಿರೋಧಿಸುತ್ತಿದೆ. ಬಿಜೆಪಿ ಹಾಗೂ ಸಂಘ ಪರಿವಾರಗಳು ಸಮರ್ಥಿಸಿಕೊಳ್ಳುತ್ತಿವೆ. ಸಮಸ್ತ ಕಾರ್ಮಿಕರು ಜಾಗೃತರಾಗಿ ತಮ್ಮ ಉದ್ಯೋಗದ ಹಕ್ಕಿಗಾಗಿ ಹೋರಾಟಕ್ಕೆ ನಿಂತರೆ ಮಾತ್ರ ಈ ಘಾತುಕ ಕಾಯ್ದೆಯನ್ನು ತಡೆಯಬಹುದಾಗಿದೆ. ಮತ್ತೊಂದು ಜನಾಂದೋಲನಕ್ಕೆ ವೇದಿಕೆ ಸಿದ್ಧವಾಗಿದೆ. ಅದನ್ನು ಮುನ್ನಡೆಸುವವರ ಅಗತ್ಯವಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ರಸ್ತೆ ಪಕ್ಕ ಅಡುಗೆ, ಬೀದಿಯಲ್ಲೇ ಊಟ ಮಾಡಿಸುವ ಹೊಸ ಕಾನೂನು!


