ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್. ರವಿ ಯವರು ನಾಲ್ಕು ಬಾರಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದೇ ಉದ್ಧಟತನ ಪ್ರದರ್ಶಿಸಿದ್ದಾರೆ. ಕೇರಳದ ರಾಜ್ಯಪಾಲರು ತಮಗೆ ಬೇಡವಾದದ್ದನ್ನು ಓದದೇ ಸಾಂವಿಧಾನಿಕ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ. ಈಗ ಕರ್ನಾಟಕದ ರಾಜ್ಯಪಾಲರ ಸರದಿ. ಕೇಂದ್ರ ಸರಕಾರದ ಗುಲಾಮರಂತೆ ವರ್ತಿಸುವ ಈ ರಾಜ್ಯಪಾಲರುಗಳು ಒಕ್ಕೂಟ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ರಾಜ್ಯಪಾಲರು ಕೇಂದ್ರ ಸರಕಾರದ ವಿಧೇಯ ಏಜೆಂಟ್ ಎಂಬುದನ್ನು ಕರ್ನಾಟಕದ ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ರವರು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.
ಕರ್ನಾಟಕ ಸರಕಾರವು ನಿಯಮದಂತೆ ಈ ವರ್ಷದ ಮೊದಲ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಜನವರಿ 22 ರಿಂದ ನಡೆಸಲು ರಾಜ್ಯಪಾಲರ ಮೂಲಕವೇ ಕರೆಯಲಾಗಿದೆ. ಸಂವಿಧಾನದ 176 ಮತ್ತು 163 ನೇ ವಿಧಿಯ ಪ್ರಕಾರ ರಾಜ್ಯ ಸರಕಾರ ತಯಾರಿಸಿಕೊಟ್ಟ ಭಾಷಣವನ್ನು ಜಂಟಿ ಸದನದಲ್ಲಿ ಓದಬೇಕು, ತದನಂತರ ಸದನದ ಸದಸ್ಯರುಗಳು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸಬೇಕು. ಇದು ಸಂವಿಧಾನಬದ್ಧವಾದ ಸಂಪ್ರದಾಯ. ಒಕ್ಕೂಟ ವ್ಯವಸ್ಥೆಯ ನಿಯಮ.
ಈ ಭಾಷಣವನ್ನು ಓದುವುದರಿಂದ ತಪ್ಪಿಸಿಕೊಳ್ಳಲು ಅಧಿವೇಶನಕ್ಕೆ ಬರುವುದಿಲ್ಲವೆಂದು ರಾಜ್ಯಪಾಲರು ಹಠಹಿಡಿದಿದ್ದರು. ಎಚ್ ಕೆ ಪಾಟೀಲರ ನೇತೃತ್ವದ ಸರಕಾರದ ನಿಯೋಗವೊಂದು ಲೋಕಭವನಕ್ಕೆ ಹೋಗಿ ರಾಜ್ಯಪಾಲರಿಗೆ ಸಂವಿಧಾನಾತ್ಮಕ ಕರ್ತವ್ಯವನ್ನು ನೆನಪಿಸಿ ಬಂದರು. ಅಧಿವೇಶನಕ್ಕೆ ಬರದೇ ಹೋದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾದೀತೆಂದು ಅರಿತ ರಾಜ್ಯಪಾಲರು ಅಧಿವೇಶನಕ್ಕೆ ಬಂದರು. ತಾವೇ ಬರೆದುಕೊಂಡು ಬಂದ ಎರಡು ಸಾಲಿನ ಭಾಷಣವನ್ನು ಹೇಳಿ ಹೊರಟೇ ಹೋದರು. ಇದರಿಂದ ಕೆರಳಿದ ಕಾಂಗ್ರೆಸ್ ಶಾಸಕರು ಧಿಕ್ಕಾರ ಕೂಗಿದರು, ಬಿ.ಕೆ .ಹರಿಪ್ರಸಾದರವರು ಭಾಷಣ ಓದಿಯೇ ಹೋಗಬೇಕೆಂದು ಪಟ್ಟು ಹಿಡಿದು ಅಡ್ಡನಿಂತರು. ಸದನದಲ್ಲಿ ಹೈಡ್ರಾಮಾ ಸೃಷ್ಟಿಯಾಯಿತು. ಮಾರ್ಷಲ್ ಗಳ ನೆರವಿನಿಂದ ರಾಜ್ಯಪಾಲರು ತೆರಳಬೇಕಾಯ್ತು.

ರಾಜ್ಯಪಾಲ ಎನ್ನುವವರು ಯಾವುದೇ ಪಕ್ಷಕ್ಕೆ ಸೇರಿದಂತವರಾಗಿರಬಾರದು. ಸೇರಿದವರಾಗಿದ್ದರೂ ರಾಜ್ಯಪಾಲರಾದಾಗ ರಾಜಕೀಯ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಪಕ್ಷಾತೀತರಾಗಬೇಕು. ಹಾಗೂ ರಾಜ್ಯಪಾಲರನ್ನು ನೇಮಕ ಮಾಡುವುದು ರಾಷ್ಟ್ರಪತಿಗಳೇ ಹೊರತು ಕೇಂದ್ರ ಸರಕಾರವಲ್ಲ. ಇದೆಲ್ಲಾ ಸಾಂವಿಧಾನಿಕ ಕರ್ತವ್ಯ. ಆದರೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದ ವಿರೋಧಿ ಪಕ್ಷಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ರಾಜ್ಯಪಾಲರುಗಳು ಕೇಂದ್ರ ಸರಕಾರದ ವಕ್ತಾರರಂತೆ ನಡೆದುಕೊಂಡು ಜನರಿಂದ ಆಯ್ಕೆಯಾದ ಸರಕಾರದ ಜೊತೆಗೆ ಸಂಘರ್ಷಕ್ಕಿಳಿಯುವುದು, ಕಿರುಕುಳ ಕೊಡುವುದು, ರಾಜ್ಯ ಸರಕಾರಗಳ ಉದ್ದೇಶಿತ ಮಸೂದೆಗಳಿಗೆ ಸಹಿ ಹಾಕದೇ ಸತಾಯಿಸುವುದು ಮಾಮೂಲಿ ಸಂಗತಿಯಾಗಿದೆ.
ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್. ರವಿ ಯವರು ನಾಲ್ಕು ಬಾರಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡದೇ ಉದ್ಧಟತನ ಪ್ರದರ್ಶಿಸಿದ್ದಾರೆ. ಕೇರಳದ ರಾಜ್ಯಪಾಲರು ತಮಗೆ ಬೇಡವಾದದ್ದನ್ನು ಓದದೇ ಸಾಂವಿಧಾನಿಕ ಕರ್ತವ್ಯಕ್ಕೆ ಚ್ಯುತಿ ತಂದಿದ್ದಾರೆ. ಈಗ ಕರ್ನಾಟಕದ ರಾಜ್ಯಪಾಲರ ಸರದಿ. ಕೇಂದ್ರ ಸರಕಾರದ ಗುಲಾಮರಂತೆ ವರ್ತಿಸುವ ಈ ರಾಜ್ಯಪಾಲರುಗಳು ಒಕ್ಕೂಟ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಇಷ್ಟಕ್ಕೂ ಕರ್ನಾಟಕದ ರಾಜ್ಯಪಾಲರು ಕರ್ತವ್ಯ ವಿಮುಖರಾಗಿ ಅಧಿವೇಶನದಿಂದ ಪಲಾಯನ ಮಾಡಿದ್ದಾದರೂ ಯಾಕೆ? ಇತ್ತೀಚೆಗೆ ಕೇಂದ್ರ ಸರಕಾರವು ಮನ್ರೇಗಾ ಹೆಸರು ಮತ್ತು ಯೋಜನೆಯನ್ನು ಬದಲಾಯಿಸಿ ವಿಬಿ ಜಿ ರಾಮ್ ಜಿ ಕಾಯಿದೆಯನ್ನು ಸಂಸತ್ತಿನಲ್ಲಿ ಚರ್ಚೆ ಇಲ್ಲದೇ ಅನುಮೋದಿಸಿ ಕಾಯ್ದೆಯನ್ನಾಗಿಸಿತ್ತು. ಗಾಂಧೀಜಿ ಹೆಸರನ್ನು ಬದಲಾಯಿಸಿದ್ದು, ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೊರೆಸಿದ್ದು ಹಾಗೂ ಅಧಿಕಾರ ಹಂಚಿಕೆಯ ಕೇಂದ್ರೀಕರಣ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಜಂಟಿ ಅಧಿವೇಶನದಲ್ಲಿ ಚರ್ಚಿಸಿ ತನ್ನ ಪ್ರತಿರೋಧ ತೋರಲು ಕರ್ನಾಟಕ ಸರಕಾರ ತಯಾರಿ ನಡೆಸಿತ್ತು. ರಾಜ್ಯಪಾಲರು ಮಾಡಬೇಕಾದ ಭಾಷಣದಲ್ಲೂ ಇದೇ ವಿಷಯಗಳಿದ್ದವು. ಕೇಂದ್ರ ಸರಕಾರದ ಯೋಜನೆಯನ್ನು ವಿರೋಧಿಸುವಂತಹ ಭಾಷಣವನ್ನು ತಾನು ಮಾಡುವುದಿಲ್ಲ ಎಂಬುದೇ ರಾಜ್ಯಪಾಲರ ತಕರಾರಾಗಿತ್ತು.
ಅಧಿವೇಶನದಲ್ಲಿ ರಾಜ್ಯಪಾಲರು ಮಾಡುವ ಭಾಷಣ ರಾಜ್ಯ ಸರಕಾರದ ಯೋಜನೆ ಅನಿಸಿಕೆಯಾಗಿರುತ್ತದೆಯೇ ಹೊರತು ರಾಜ್ಯಪಾಲರದ್ದೋ ಅಥವಾ ಅವರು ಪ್ರತಿನಿಧಿಸುವ ಕೇಂದ್ರ ಸರಕಾರದ್ದೋ ಅಲ್ಲ. ಸರಕಾರ ಮಂಡಿಸುವ ಭಾಷಣವನ್ನು ರಾಜ್ಯಪಾಲರು ಓದಿ ವಿಷಯವನ್ನು ಮಂಡಿಸಿ ಹೋಗಬೇಕಷ್ಟೇ. ಆ ನಂತರ ರಾಜ್ಯಪಾಲರ ಭಾಷಣದ ಮೇಲೆ ಸಭಾಪತಿಗಳ ಅನುಮತಿಯ ಮೇರೆಗೆ ಆಳುವ ಮತ್ತು ವಿರೋಧ ಪಕ್ಷಗಳ ಸದಸ್ಯರುಗಳು ಪರ ವಿರೋಧ ಅಭಿಪ್ರಾಯಗಳನ್ನು ಮಂಡಿಸಿ ಚರ್ಚಿಸಿ ಕೊನೆಗೆ ಬಹುಮತದ ಮೇರೆಗೆ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ಇದು ಅಧಿವೇಶನಗಳನ್ನು ಆಯೋಜಿಸುವ ಸಾಂವಿಧಾನಿಕ ನಿಯಮ. ಆದರೆ ಕೇಂದ್ರ ಸರಕಾರದ ಧೋರಣೆಗಳ ವಿರುದ್ಧದ ಅಂಶಗಳಿರುವುದರಿಂದ ಭಾಷಣವನ್ನೇ ಮಾಡುವುದಿಲ್ಲ ಎನ್ನುವ ರಾಜ್ಯಪಾಲರ ನಿರ್ಧಾರವೇ ಅಸಾಂವಿಧಾನಿಕ. ಇದರಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತದೆ ರಾಜ್ಯಪಾಲರು ಕೇಂದ್ರ ಸರಕಾರದ ಅಣತಿಯಂತೆ ನಡೆಯುವ ಏಜೆಂಟ್ ಎನ್ನುವುದು.
ರಾಜ್ಯ ಸರಕಾರ ಸಿದ್ದಪಡಿಸಿದ ಭಾಷಣವನ್ನು ಓದುವ ಶಿಷ್ಟಾಚಾರವನ್ನು ಉಲ್ಲಂಘಿಸುವ ರಾಜ್ಯಪಾಲರ ವರ್ತನೆಯೇ ಸಂವಿಧಾನಬಾಹಿರ ಹಾಗೂ ಒಕ್ಕೂಟ ವ್ಯವಸ್ಥೆಯ ಆಶಯಕ್ಕೆ ಧಕ್ಕೆಯನ್ನುಂಟು ಮಾಡುವುದಾಗಿದೆ. ರಾಜ್ಯಪಾಲರ ಈ ಅಸಾಂವಿಧಾನಿಕ ನಡೆಯನ್ನು ಕರ್ನಾಟಕ ರಾಜ್ಯ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಬಹುದಾಗಿದೆ. ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಿ ಎಂದು ರಾಷ್ಟ್ರಪತಿಗಳನ್ನು ಒತ್ತಾಯಿಸಬಹುದಾಗಿದೆ. ಎಲ್ಲಕ್ಕಿಂತಲೂ ಮೊದಲು ರಾಜ್ಯಪಾಲರು ಜನಾದೇಶ ಪಡೆದು ಆಡಳಿತ ನಡೆಸುವ ಸರಕಾರಗಳಿಗೆ ನಿರಂತರ ಕಿರುಕುಳ ಕೊಡುವುದನ್ನು ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಸೃಷ್ಟಿಸುವುದನ್ನು ಹಾಗೂ ಇದರ ಹಿಂದೆ ಇರುವ ಕೇಂದ್ರ ಸರಕಾರದ ಶಡ್ಯಂತ್ರಗಳನ್ನು ಜನರಿಗೆ ಮನದಟ್ಟು ಮಾಡಬೇಕಿದೆ. ರಾಜ್ಯ ಸರಕಾರದ ಸ್ವಾಯತ್ತತೆಗೆ ಕೇಂದ್ರ ಸರಕಾರದಿಂದ ಹೇಗೆಲ್ಲಾ ಆತಂಕವಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲೇಬೇಕಿದೆ. ರಾಜ್ಯ ಕೇಂದ್ರ ಸರಕಾರಗಳು ಸಂಘರ್ಷದ ಬದಲು ಸಾಮರಸ್ಯವನ್ನು ಸಾಧಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯತ್ತ ಗಮನ ಕೊಡಬೇಕಿದೆ. ಆದರೆ ಕೇಂದ್ರದಲ್ಲಿ ಸರ್ವಾಧಿಕಾರಿ ನೇತೃತ್ವದ ಸರಕಾರ ಇದ್ದಾಗ ಇದೆಲ್ಲಾ ಅಸಾಧ್ಯದ ಸಂಗತಿಯಾಗಿದೆ. ಕೇಂದ್ರ ಸರಕಾರ ರಾಜ್ಯದ ಮೇಲೆ ಮಾಡುತ್ತಿರುವ ರಾಜಕೀಯ, ಆರ್ಥಿಕ ಹೇರಿಕೆಗಳನ್ನು ಸುಪ್ರೀಂ ಕೋರ್ಟಿನಲ್ಲೇ ಪ್ರಶ್ನಿಸುವ ಅನಿವಾರ್ಯತೆ ಇದೆ. ಕೇಂದ್ರದ ತಾರತಮ್ಯದ ವಿರುದ್ಧ ಜನತಾ ನ್ಯಾಯಾಲಯದಲ್ಲಿ ಜಾಗೃತಿ ಮೂಡಿಸಬೇಕಿದೆ. ಇಲ್ಲದೇ ಹೋದರೆ ನಮ್ಮ ಕರ್ನಾಟಕ ಕೇಂದ್ರ ಸರಕಾರದಿಂದ ನಿರಂತರ ಶೋಷಣೆಗೆ ಒಳಗಾಗುತ್ತದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ರಾಜ್ಯಪಾಲರುಗಳಿಗೆ ಅಧಿಕಾರದ ಮಿತಿ ನೆನಪಿಸಿಕೊಟ್ಟ ಸುಪ್ರೀಂ ಕೋರ್ಟ್ ನ ಚಾರಿತ್ರಿಕ ತೀರ್ಪು


