ಶಂಕರನಾರಾಯಣದ ಪ್ರಾಥಮಿಕ ಶಾಲೆ ಸ್ಥಾಪನೆಯಾದುದು 1896 ರಲ್ಲಿ ಎಂದು ಅಂತರ್ಜಾಲ ಮಾಹಿತಿ ಹೇಳುತ್ತದೆ. ನಾನು ಪ್ರಾಥಮಿಕ ಶಿಕ್ಷಣ ಪಡೆದ ಆ ದಿನಗಳಲ್ಲಿಯೂ ಮೂಲಸೌಕರ್ಯಗಳ ಮಟ್ಟಿಗೆ ಅಲ್ಲಿದ್ದ ಕೊರತೆಗಳನ್ನು ನೋಡುವಾಗ ಇದು ನಿಜವಿರಲೂಬಹುದು (ಮುಂದೆ, ಊರ ದೇವಸ್ಥಾನಕ್ಕೆ ಹೋಗುವ ದಾರಿಯ ಬಲ ಭಾಗದ ಎತ್ತರದ ವಿಶಾಲ ಜಾಗದಲ್ಲಿ, ಅತ್ಯಂತ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ, ಅಲ್ಲಿಗೆ ಪ್ರಾಥಮಿಕ ಶಾಲೆ ಸ್ಥಳಾಂತರಗೊಂಡಿತು ಎಂದು ಕೇಳಿದ್ದೇನೆ).
ಇದಕ್ಕೆ ಹೋಲಿಸಿದರೆ, 1958 ರಲ್ಲಿ ಸ್ಥಾಪನೆಯಾದ ಶಂಕರನಾರಾಯಣ ಹೈಸ್ಕೂಲು 1970 ರ ದಶಕದ ಆ ದಿನಗಳಲ್ಲಿಯೇ ಮೂಲಸೌಕರ್ಯಗಳ ಮಟ್ಟಿಗೆ ಬಹುಮಟ್ಟಿಗೆ ಪರಿಪೂರ್ಣವಾಗಿತ್ತು. ಪಕ್ಕದ ಊರುಗಳಲ್ಲಿ ಹೈಸ್ಕೂಲು ಸೌಲಭ್ಯವೇ ಇರದ ಕಾರಣ, ದೂರದ ಹಾಲಾಡಿ, ವಂಡ್ಸೆ, ಸಿದ್ಧಾಪುರ ಮೊದಲಾದ ಊರುಗಳ ವಿದ್ಯಾರ್ಥಿಗಳೂ ವಿದ್ಯಾರ್ಜನೆಗಾಗಿ ಬರುತ್ತಿದ್ದುದು ಶಂಕರನಾರಾಯಣಕ್ಕೇ.
ಪೇಟೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ, ಶಂಕರನಾರಾಯಣ- ಸಿದ್ಧಾಪುರ ಮಾರ್ಗದ ಅಂಚಿನ, ವಿಸ್ತಾರವಾದ ಜಾಗದಲ್ಲಿ ಆ ಕಾಲಕ್ಕೆ ಸುಸಜ್ಜಿತ ಎನ್ನಬಹುದಾದ ಕಟ್ಟಡವನ್ನು ಅದು ಹೊಂದಿತ್ತು. ಶಾಲೆಯ ಉತ್ತರಕ್ಕೆ ಶಂಕರನಾರಾಯಣ- ಸಿದ್ಧಾಪುರ ರಸ್ತೆ, ಪಶ್ಚಿಮಕ್ಕೆ ಮತ್ತು ದಕ್ಷಿಣಕ್ಕೆ ವಿಸ್ತಾರವಾದ ಬೆಟ್ಟ ಗುಡ್ಡಗಳು, ಅದರ ತುಂಬಾ ಗೇರು ಮರಗಳು. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಒಮ್ಮೊಮ್ಮೆ, ನಾವು ಕೆಲ ವಿದ್ಯಾರ್ಥಿಗಳ ಪಟಾಲಂ ಸುತ್ತಲಿನ ಗೇರುಮರಗಳಿಗೆ ಧಾಳಿ ಮಾಡಿ, ಗೇರು ಬೀಜ ಸಂಗ್ರಹಿಸಿ, ಅದರ ಸಿಪ್ಪೆ ಸುಟ್ಟು ಬೀಜ ತಿಂದು ಬರುತ್ತಿದ್ದೆವು. ಭೂ ಅತಿಕ್ರಮಣ ಇಂದಿನ ಪ್ರಮಾಣದಲ್ಲಿ ಇಲ್ಲದ ಕಾರಣ, ಆಗ ಎಲ್ಲೆಲ್ಲೂ ವಿಸ್ತಾರವಾದ ಸರಕಾರಿ ಜಾಗಗಳನ್ನು ಕಾಣಬಹುದಿತ್ತು. ಅಂತಹ ಜಮೀನುಗಳಲ್ಲಿ ಗೇರು, ಮಾವು, ಹೆಬ್ಬಲಸು ಮೊದಲಾದ ಫಲ ನೀಡುವ ಮರಗಳಿರುತ್ತಿದ್ದವು. ಸರಕಾರದ್ದು ಅಂದರೆ ಎಲ್ಲರದ್ದೂ ಅಲ್ಲವೇ? ಯಾರು ಬೇಕಾದರೂ ಕೊಯ್ಯಬಹುದು.
ಹೊಲದ ಬದಿಯಲ್ಲಿ ಬುತ್ತಿಯೂಟ
ಇನ್ನು, ಪೂರ್ವಕ್ಕೆ ಒಂದಿಷ್ಟು ದೂರ ಸರಿದರೆ ಪೊದೆಗಳು, ಮರಗಳು, ಸದಾ ನೀರು ಹರಿಯುವ ತೋಡು ಮತ್ತು ಹಸಿರು ಗದ್ದೆಗಳಿದ್ದವು. ಪೇಟೆಯಿಂದ ದೂರ ಇದ್ದುದರಿಂದ ಹೈಸ್ಕೂಲು ಪರಿಸರದಲ್ಲಿ ಅಂಗಡಿ ಮುಂಗಟ್ಟುಗಳು ಇರಲಿಲ್ಲ. ಸ್ವಲ್ಪ ದೂರದಲ್ಲಿ ಪುಟ್ಟದೊಂದು ಕ್ಯಾಂಟೀನ್ ಇತ್ತು. ಅಲ್ಲಿನ ಭಟ್ಟರು ಮನೆಯಲ್ಲಿ ಮಾಡಿ ತಂದ ಇಡ್ಲಿ ಚಟ್ನಿ ಅಲ್ಲಿ ಮಾರುತ್ತಿದ್ದರು. ಅದು ಕೆಲವೇ ಹೊತ್ತಿನಲ್ಲಿ ಖಾಲಿಯಾಗುತ್ತಿತ್ತು. ಅಲ್ಲಿಗೆ, ಆ ದಿನದ ಮಟ್ಟಿಗೆ ಕ್ಯಾಂಟೀನ್ ಕ್ಲೋಸ್. ಮಧ್ಯಾಹ್ನದ ಊಟದ್ದೊಂದು ದೊಡ್ಡ ಸಮಸ್ಯೆ. ನಾವು ಮನೆಯಿಂದ ಬುತ್ತಿ ಕಟ್ಟಿಕೊಂಡು ಬರುತ್ತಿದ್ದೆವು. ಮಧ್ಯಾಹ್ನದ ಊಟದ ಬಿಡುವಿನಲ್ಲಿ ಅದನ್ನು ಹಿಡಿದುಕೊಂಡು ನಾನು ಈಗಷ್ಟೇ ಉಲ್ಲೇಖಿಸಿದೆನಲ್ಲ, ಆ ಸಾಕಷ್ಟು ನೀರು ಇರುವ ಹೊಲದತ್ತ ಸರಿದು, ಅದರ ಅಂಚಿನಲ್ಲಿ ಕುಳಿತು ತಿಂದು, ತೋಡಿನ ನೀರಿನಲ್ಲಿ ಬುತ್ತಿ ತೊಳೆದುಕೊಂಡು ಬರುತ್ತಿದ್ದೆವು. ಬರುವಾಗ ಮಾವಿನ ಮರದಿಂದ ಮಾವಿನ ಕಾಯಿ ಕದ್ದು ತರಲು ಮರೆಯುತ್ತಿರಲಿಲ್ಲ. ಮಾವಿನ ಮರದ ಮಾಲೀಕರು ಒಮ್ಮೊಮ್ಮೆ ಬಯ್ಯುತ್ತಾ, ಅಟ್ಟಿಸಿಕೊಂಡು ಬರುತ್ತಿದ್ದರು. ನಾವು ಯಮವೇಗದಲ್ಲಿ ಓಡಿ ಶಾಲೆ ಸೇರಿಕೊಳ್ಳುತ್ತಿದ್ದೆವು. ಅನಾನುಕೂಲದ ನಡುವೆಯೂ ಹೊಲದ ಬದಿಯಲ್ಲಿ ಊಟ ಮಾಡುತ್ತಿದ್ದುದು ಒಂದು ಖುಷಿಯ ಮತ್ತು ಹಸಿರು ಅನುಭವ.
ಶಂಕರನಾರಾಯಣ- ಹಾಲಾಡಿ ರಸ್ತೆಯ ತಲ್ಲಂಜೆಯ ನಮ್ಮ ಮನೆಯಿಂದ ಹೈಸ್ಕೂಲಿಗೆ ಹೆಚ್ಚೆಂದರೆ ಎರಡು ಕಿಲೋಮೀಟರ್ ದೂರ ಇರಬಹುದು. ಒಮ್ಮೊಮ್ಮೆ ಮಧ್ಯಾಹ್ನದ ಹೊತ್ತು, ಓಡಿಕೊಂಡೇ ಮನೆಗೆ ಹೋಗಿ, ಊಟ ಮಾಡಿ, ಓಡಿಕೊಂಡೇ ವಾಪಸ್ ಬರುತ್ತಿದ್ದುದೂ ಇತ್ತು. ಕಂಬೈಂಡ್ ಬುಕ್ಕಿಂಗ್ ಸರ್ವಿಸ್ ನ ಕಾಲ ಅದು. ಹನುಮಾನ್ ಟ್ರಾನ್ಸ್ ಪೋರ್ಟ್, ಶಂಕರ್ ವಿಠಲ್, ಗಜಾನನ ಮೋಟರ್ಸ್ ಮೊದಲಾದ ಬಸ್ ಗಳು ಊರುಗಳನ್ನು ಸಂಪರ್ಕಿಸುತ್ತಿದ್ದವು. ಅದರಲ್ಲಿ ಹತ್ತು ಪೈಸೆ ಕೊಟ್ಟರೆ ನಮ್ಮ ಮನೆಯಿಂದ ಹೈಸ್ಕೂಲು ತಲಪಬಹುದಿತ್ತು. ಆದರೆ, ಅಷ್ಟು ಹಣವೂ ಇದ್ದಿರದ ಕಾಲ ಅದು. ನಾಲ್ಕು ವರ್ಷಗಳ ಹೈಸ್ಕೂಲು ಜೀವನ ಕಾಲದಲ್ಲಿ ಎಲ್ಲೋ, ಒಂದೋ, ಎರಡೋ ಬಾರಿ ಬಸ್ ನಲ್ಲಿ ಹೈಸ್ಕೂಲ್ ಗೆ ಹೋಗಿರಬಹುದು. ಉಳಿದಂತೆ ನಡಿಗೆಯೇ ಸಂಚಾರ ಸಾಧನ.
ನಿಜ ಅರ್ಥದ ಶಿಕ್ಷಣಕ್ಕೆ ಅತ್ಯಂತ ಸೂಕ್ತ ಎನಿಸುವ ಪ್ರಶಾಂತ ಪರಿಸರ. ಎತ್ತರದ ಜಾಗದಲ್ಲಿ ಮಂಗಳೂರು ಹೆಂಚಿನ ಮಾಡುಳ್ಳ ಉದ್ದನೆಯ ಕಟ್ಟಡ, ಅದರಲ್ಲಿ ಎಂಟರಿಂದ ಪಿಯುಸಿ ತನಕದ ತರಗತಿ ಕೊಠಡಿಗಳು, ಆಫೀಸು, ಪ್ರಾಂಶುಪಾಲರ ಕೋಣೆ, ಕೈಮಗ್ಗದ ಕೊಠಡಿ, ದೈಹಿಕ ಶಿಕ್ಷಕರ ಕೊಠಡಿ, ಪ್ರಯೋಗಾಲಯ, ಕಟ್ಟಡದ ಮುಂಭಾಗದಲ್ಲಿ ಕೈತೋಟ, ವಿಶಾಲವಾದ ಮೈದಾನ, ಅದರ ಅಂಚಿನಲ್ಲಿ ಸದಾ ನೀರಿರುವ ಒಂದು ತೆರೆದ ಬಾವಿ, ಶಾಲಾ ಕಟ್ಟಡದ ಮುಂಬದಿಯಲ್ಲಿ ಧ್ವಜಸ್ತಂಭ, ಹಿಂಬದಿಯಲ್ಲಿ ಗಾಳಿ ಗಿಡಗಳ ತೋಪು, ಅದನ್ನು ದಾಟಿದರೆ ಬೃಹತ್ ಗುಡ್ಡವನ್ನು ಕತ್ತರಿಸಿ ಮಾಡಿದ ಫುಟ್ ಬಾಲ್, ಕ್ರಿಕೆಟ್, ಕ್ರೀಡಾಕೂಟ ಇತ್ಯಾದಿಗಳಿಗೆ ಪ್ರಶಸ್ತವಾದ ವಿಸ್ತಾರವಾದ ಮೈದಾನ. ಸರಕಾರಿ ಜಮೀನು ಅಪಾರ ಇದ್ದ ಆ ಕಾಲದಲ್ಲಿ ಆ ಗುಡ್ಡವನ್ನು ಇನ್ನೂ ಕತ್ತರಿಸಿ ಹೊಸ ಮೈದಾನ ನಿರ್ಮಿಸುವುದಕ್ಕೂ ಅವಕಾಶ ಇತ್ತು. ಆದರೆ ಈಗಿನ ಗುಡ್ಡ ಕತ್ತರಿಸುವ ದೈತ್ಯ ಯಂತ್ರಗಳು ಆಗ ಇಲ್ಲದುದರಿಂದ ಮತ್ತು ಎಲ್ಲದಕ್ಕೂ ಮಾನವ ಶ್ರಮವೇ ಅನಿವಾರ್ಯವಾಗಿದ್ದುದರಿಂದ ಆ ಗುಡ್ಡಗಳೆಲ್ಲವೂ ಸುರಕ್ಷಿತವಾಗಿದ್ದವು.
ಮುಂದೆ ಹೈಸ್ಕೂಲಿನ ಅದೇ ಹಳೆಯ ಕಟ್ಟಡಕ್ಕೆ ಪೂರ್ವ ತುದಿಯಲ್ಲಿ ಅಡ್ಡಲಾಗಿ ಹೊಸದೊಂದು ಕಟ್ಟಡ ತಲೆ ಎತ್ತಿತು. ಅದರಲ್ಲಿ ವಾರ್ಷಿಕೋತ್ಸವದ ಕಾರ್ಯಕ್ರಮಗಳಿಗೆ ಸೂಕ್ತವಾದ ವೇದಿಕೆ ಕೂಡಾ ಇತ್ತು. ಇತರ ದಿನಗಳಲ್ಲಿ ಅಲ್ಲಿ ತರಗತಿ ಚಟುವಟಿಕೆಗಳೂ ನಡೆಯುತ್ತಿದ್ದವು.
ಪಠ್ಯೇತರ ಚಟುವಟಿಕೆಗಳಿಗೆ ಎಲ್ಲಿಲ್ಲದ ಆದ್ಯತೆ
ನಮ್ಮ ಹೈಸ್ಕೂಲು ಜೀವನದಲ್ಲಿ ಪಠ್ಯ ಚಟುವಟಿಕೆಗಳಿಗೆ ಎಷ್ಟು ಆದ್ಯತೆ ಇತ್ತೋ, ಅಷ್ಟೇ ಆದ್ಯತೆ ಅಥವಾ ಒಂದಿಷ್ಟು ಹೆಚ್ಚೇ ಆದ್ಯತೆ ಪಠ್ಯೇತರ ಚಟುವಟಿಕೆಗಳಿಗೆ ಇತ್ತು. ಉದಾಹರಣೆಗೆ ಶಾಲಾ ಕಟ್ಟಡವನ್ನು ಉಲ್ಲೇಖಿಸುವಾಗ ಕೈಮಗ್ಗದ ಬಗ್ಗೆ ಹೇಳಿದ್ದೆನಲ್ಲ. ಕೈಮಗ್ಗ ಚಲಾಯಿಸುವ ಬಗ್ಗೆ ಮಕ್ಕಳಿಗೆ ತರಬೇತಿ ನೀಡುವ ಬಗ್ಗೆಯೇ ಒಂದು ಕೊಠಡಿ ತುಂಬಾ ಕೈಮಗ್ಗವಿತ್ತು. ಅದರ ತರಬೇತಿ ನೀಡುವುದಕ್ಕಾಗಿ ಒಬ್ಬರು ಮೇಷ್ಟ್ರೂ ಇದ್ದರು. ಶೆಟ್ಟಿಗಾರ್ ಎಂದೇನೋ ಅವರ ಹೆಸರು. ಅವರು ತುಳುನಾಡಿನವರು ಎಂದು ಕಾಣುತ್ತದೆ. ಅವರಿಗೆ ತುಳುವೂ ಬರುತ್ತಿತ್ತು. ಶಾಲಾ ಪಕ್ಕದಲ್ಲಿ ಅವರು ಸ್ವಂತ ಮನೆ ಕೂಡಾ ಮಾಡಿಕೊಂಡಿದ್ದರು. ಅವರನ್ನು ನಾವು ʼಮಗ್ಗದ ಮಾಷ್ಟ್ರುʼ ಎಂದೇ ಕರೆಯುತ್ತಿದ್ದುದು. ಆದರೆ ನಾವು ಹೈಸ್ಕೂಲು ಸೇರುವ ಕಾಲಕ್ಕೆ ಆ ಮಗ್ಗ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಅದನ್ನು ರಿಪೇರಿ ಮಾಡುವ ವ್ಯವಸ್ಥೆ ಇರಲಿಲ್ಲವೋ ಅಥವಾ ಇತರ ಕಾರಣವೋ ಗೊತ್ತಿಲ್ಲ. ಅದು ಒಂದು ವಸ್ತು ಸಂಗ್ರಹಾಲಯದ ಶೋ ಪೀಸ್ ನಂತೆ ಇದ್ದು, ನಾವು ಅದನ್ನು ಕಿಟಕಿಯ ಮೂಲಕ ಇಣುಕಿ ನೋಡಿ ಖುಷಿಪಡುತ್ತಿದ್ದೆವು.
ಬೇರೆ ಕಡೆಯ ವಿಷಯ ನನಗೆ ಗೊತ್ತಿಲ್ಲ. ಕರಾವಳಿಯ ಜನಪದರ ಬದುಕಿನ ಇತಿಹಾಸ ಗೊತ್ತಿದ್ದವರಿಗೆ ಒಂದು ವಿಷಯದ ಅರಿವಿರುತ್ತದೆ. ಅದೆಂದರೆ, ಒಂದು ಕಾಲಕ್ಕೆ ಬಹುತೇಕ ಪ್ರತಿ ಮನೆಯೂ ಮಗ್ಗದ ಮನೆಗಳಾಗಿದ್ದವು. ಹಳೆಯ ಕೆಲ ಮನೆಗಳನ್ನು ನೋಡಿದರೆ ಅಲ್ಲಿ ಕೈಮಗ್ಗಕ್ಕಾಗಿಯೇ ನಿರ್ಮಿಸಿದ ಕಟ್ಟಡಗಳನ್ನು ಈಗಲೂ ನೋಡಬಹುದು. ಕೈಮಗ್ಗದ ಬಟ್ಟೆಗಳಿಗೆ ಇಲ್ಲಿನ ಅನೇಕ ಊರುಗಳು ಪ್ರಸಿದ್ಧವಾಗಿದ್ದು, ಅದನ್ನು ಪುನರುಜ್ಜೀವನಗೊಳಿಸುವ ಕೆಲಸಗಳು ಕೆಲವೆಡೆ ಈಗಲೂ ನಡೆಯುತ್ತಿವೆ. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದಾರೆ. ಬಹುಷಃ ಶಾಲಾ ಮಕ್ಕಳನ್ನು ಮುಂದಣ ಬದುಕಿಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ, ಕೈಮಗ್ಗ ಚಲಾಯಿಸುವಂತಹ ವೃತ್ತಿಕೌಶಲವನ್ನು ತುಂಬುವ ಉದ್ದೇಶದಿಂದಲೋ ಏನೋ, ಆಗ ಶಾಲೆಗಳಲ್ಲಿಯೂ ಈ ತರಬೇತಿ ಒದಗಿಸಲಾಗುತ್ತಿತ್ತು. ಮಕ್ಕಳಿಗೆ ಓದು ಬರೆಹದ ಜ್ಞಾನ ಮಾತ್ರವಲ್ಲ, ಅವರನ್ನು ವಾಸ್ತವಿಕ ಬದುಕಿಗೂ ತಯಾರು ಮಾಡುವ ಮುಂಗಾಣ್ಕೆ ಅಂದಿನ ಶಿಕ್ಷಣ ತಜ್ಞರಿಗೆ ಇತ್ತು ಎಂಬುದಕ್ಕೆ ಇದು ಸಣ್ಣ ಉದಾಹರಣೆ.
ಹೈಸ್ಕೂಲಿನ ಕೈಮಗ್ಗ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಆದರೆ ಮಗ್ಗದ ಮಾಷ್ಟರರನ್ನು ಏನು ಮಾಡುವುದು? ಅವರು ಖಾಯಂ ಉದ್ಯೋಗಿಯಲ್ಲವೇ? ಅವರನ್ನು ಕ್ರಾಫ್ಟ್ ಮಾಷ್ಟರ್ ಮಾಡಲಾಯಿತು. ಪಾಠ ಚಟುವಟಿಕೆಗಳ ನಡುವಿನ ʼಕೆಲಸದ ಅನುಭವʼದ ತರಗತಿಗಳಲ್ಲಿ, ಅವರು ನಮ್ಮನ್ನು ಮೈದಾನಕ್ಕೆ ಕರೆದೊಯ್ಯುತ್ತಿದ್ದರು. ಅಲ್ಲಿ ನಾವು ಹಾರೆ, ಪಿಕ್ಕಾಸು ಹಿಡಿದು ಕೈತೋಟ ನಿರ್ಮಿಸುವುದು, ಹೊಸ ಕೊಠಡಿ ನಿರ್ಮಾಣದ ಪಂಚಾಂಗಕ್ಕೆ ಮಣ್ಣು ಹಾಕುವುದು, ಶಾಲಾ ಕಟ್ಟಡದ ಸುತ್ತ ಕಸ ತೆಗೆದು ಸ್ವಚ್ಚಗೊಳಿಸುವುದು ಇತ್ಯಾದಿ ಮಾಡುತ್ತಿದ್ದೆವು. ಇಂತಹ ಕೆಲಸಗಳ ಮೂಲಕ ʼಕೈ ಕೆಸರಾದರೆ ಬಾಯಿ ಮೊಸರುʼ ಎಂಬ ಜೀವನ ತತ್ತ್ವವನ್ನು ಸದ್ದಿಲ್ಲದೆ ಮಕ್ಕಳಿಗೆ ದಾಟಿಸಲಾಗುತ್ತಿತ್ತು. ಕೆಸರಿನಲ್ಲಿ ಕೆಲಸ ಮಾಡುವುದು ಕೆಟ್ಟದಲ್ಲ, ನಿಜ ಬದುಕಿನ ಮಟ್ಟಿಗೆ ಅದು ಅನಿವಾರ್ಯ ಕೂಡಾ ಎಂಬ ಪಾಠ ನಮ್ಮೊಳಗೆ ಇಳಿಯುತ್ತಿತ್ತು.
ಕ್ರೀಡೆಗೆ ಅಪಾರ ಪ್ರೋತ್ಸಾಹ
ಹೈಸ್ಕೂಲು ಎಂದಾಗ ಮುಖ್ಯವಾಗಿ ನೆನಪಾಗುವ ಸಂಗತಿಯೆಂದರೆ ಅಲ್ಲಿ ಆಟೋಟಗಳಿಗೆ ಇರುತ್ತಿದ್ದ ಅಪಾರ ಅವಕಾಶಗಳು. ಕ್ರೀಡಾ ಸಲಕರಣೆಗಳನ್ನು ಇರಿಸಲೆಂದೇ ಒಂದು ಪ್ರತ್ಯೇಕ ಕೊಠಡಿ ಇತ್ತು. ಅಲ್ಲಿ ವಿಕೆಟ್, ಬಾಲ್, ಬ್ಯಾಟು, ವಾಲಿಬಾಲ್, ಫುಟ್ ಬಾಲ್, ಬೇಸ್ ಬಾಲ್, ದೇಹದ ತೂಕ ಅಳೆಯುವ ಯಂತ್ರ. ದೇಹದ ಎತ್ತರ ಅಳೆಯುವ ಸಾಧನ ಹೀಗೆ ಎಲ್ಲ ಸಲಕರಣೆಗಳು ಇರುತ್ತಿದ್ದವು. ತರಬೇತಾದ ಒಬ್ಬರು ದೈಹಿಕ ಶಿಕ್ಷಕರಿದ್ದರು. ಅವರ ಹೆಸರು ಬಾಲಕೃಷ್ಣ ಶೆಟ್ಟಿ. ತಪ್ಪು ಮಾಡಿದಾಗ ಅವರು ಅಮಾನುಷವಾಗಿ ಶಿಕ್ಷಿಸುತ್ತಿದ್ದರು. ವಾರವೂ ಲೆಫ್ಟ್ ರೈಟ್, ಕದಂ ತಾಲ್ ಕವಾಯತು ನಡೆಯುತ್ತಿತ್ತು. ಹೆಣ್ಣುಮಕ್ಕಳಿಗೆ ಟೆನ್ನಿ ಕಾಯ್ಟ್, ಶಟ್ಲ್ ಬ್ಯಾಡ್ಮಿಂಟನ್, ತ್ರೋಬಾಲ್, ಖೋ ಖೋ ಇತ್ಯಾದಿ ಆಟಗಳ ಅವಕಾಶವಿದ್ದರೆ, ಗಂಡುಮಕ್ಕಳಿಗೆ ಖೋ ಖೋ, ಕಬಡ್ಡಿ, ಶಟ್ಲ್, ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್, ವಾಲಿಬಾಲ್, ಫುಟ್ ಬಾಲ್ ಎಲ್ಲ ಆಟಗಳಿಗೂ ಅವಕಾಶವಿತ್ತು. ನೀವು ನಂಬುತ್ತೀರೋ ಇಲ್ಲವೋ, ನಾವು ಬೇಸ್ ಬಾಲ್ ಕೂಡಾ ಆಡಿದ್ದೆವು. ಅದೊಂದು ತುಂಬಾ ಸಂಕೀರ್ಣ ನಿಯಮಗಳಿರುವ ಕ್ರೀಡೆ.

ವಾರ್ಷಿಕ ಕ್ರೀಡಾ ಕೂಟದ ಸಂದರ್ಭದಲ್ಲಿ ಪಂದ್ಯಾಟಗಳ ಸ್ಪರ್ಧೆಗಳಲ್ಲದೆ, ಓಟ, ಲಾಂಗ್ ಜಂಪ್, ಹೈಜಂಪ್, ಹ್ಯಾಮರ್ ತ್ರೋ, ಗುಂಡೆಸೆತ, ಜಾವಲಿನ್ ಎಸೆತ, ನೂರು, ಇನ್ನೂರು ಮೀಟರ್ ಓಟ ಎಲ್ಲವೂ ಇರುತ್ತಿತ್ತು. ಇವೆಲ್ಲವೂ ನಡೆಯುತ್ತಿದ್ದುದು ಶಾಲಾ ಹಿಂಭಾಗದ ವಿಸ್ತಾರವಾದ ಮೈದಾನದಲ್ಲಿ. ಅಲ್ಲಿ ಫುಟ್ ಬಾಲ್ ಪಂದ್ಯವೂ ನಡೆಯುತ್ತಿತ್ತು. ಕ್ರಿಕೆಟ್ ಅಂತೂ ಶಾಲಾ ದಿನಗಳಲ್ಲಿ ಮಾತ್ರವಲ್ಲ, ರಜಾ ದಿನಗಳಲ್ಲಿಯೂ ನಡೆಯುತ್ತಿತ್ತು. ಆ ಕ್ರಿಕೆಟ್ ನ ಕತೆಯಂತೂ ಮಜಾ ಇರುತ್ತಿತ್ತು. ಮೈದಾನದ ಸುತ್ತ ಅಪಾರ ಪೊದೆಗಳಿದ್ದುದರಿಂದ ನಮ್ಮ ಹೆಚ್ಚಿನ ವೇಳೆಯೆಲ್ಲವೂ ಕಳೆದು ಹೋದ ಬಾಲ್ ಹುಡುಕುವುದರಲ್ಲಿಯೇ ವ್ಯಯವಾಗುತ್ತಿತ್ತು. ನಮ್ಮ ಶಾಲೆಯಲ್ಲಿ ಆನಂದ ಮರಕಾಲ ಎಂಬ ಯುವಕನೊಬ್ಬನಿದ್ದ. ಆತ ಎಲ್ಲಾ ಕ್ರೀಡೆಗಳಲ್ಲಿಯೂ ಮುಂದೆ ಇರುತ್ತಿದ್ದ. ಆತನ ಬೌಲಿಂಗ್ ಎದುರಿಸುವುದು ಬಹಳ ಕಷ್ಟವಿತ್ತು. ಶ್ರಮ ಜೀವನದ ಕಾರಣವೋ ಏನೋ, ಒಳ್ಳೆಯ ಮೈಕಟ್ಟು ಹೊಂದಿದ್ದ ಆತ ಚೆಂಡೆಸೆದನೆಂದರೆ ವಿಕೆಟ್ ಉರುಳಿತೆಂದೇ ಅರ್ಥ.
ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ ನಾನು ಶಟ್ಲ್ ಬ್ಯಾಡ್ಮಿಂಟನ್, ಬಾಲ್ ಬ್ಯಾಡ್ಮಿಂಟನ್, ಬೇಸ್ ಬಾಲ್, ಫುಟ್ ಬಾಲ್ ಹೀಗೆ ಎಲ್ಲ ಆಟಗಳನ್ನೂ ಆಸಕ್ತಿಯಿಂದ ಆಡುತ್ತಿದ್ದೆ. ಆದರೆ ಹೆಚ್ಚು ಆಸಕ್ತಿ ಮತ್ತು ಪರಿಣತಿ ಇದ್ದುದು ಕ್ರಿಕೆಟ್ ನಲ್ಲಿ. ರಜಾ ದಿನಗಳಲ್ಲಿಯೂ ಹೈಸ್ಕೂಲ್ ಮೈದಾನಕ್ಕೆ ಬಂದು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು. ಒಳ್ಳೆಯ ಬೌಲರ್ ಆಗಿದ್ದ ಕಾರಣಕ್ಕೆ ನಾನು ಹೈಸ್ಕೂಲಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದೆ. ಅಂತರ್ ಹೈಸ್ಕೂಲ್ ಕ್ರಿಕೆಟ್ ಸ್ಪರ್ಧೆಗೆ ನಮ್ಮನ್ನು ನಮ್ಮ ಪಿಟಿ ಮಾಷ್ಟ್ರು ಕರೆದೊಯ್ಯುತ್ತಿದ್ದರು.
ಒಮ್ಮೆ ಏನಾಯಿತೆಂದರೆ, ನಾವು ಅನೇಕ ದಿನಗಳ ಕಾಲ ಕ್ರಿಕೆಟ್ ತರಬೇತಿ ನಡೆಸಿದೆವು. ಯಾವ ತಂಡವನ್ನೂ ಸೋಲಿಸಬಹುದು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೂಡಿತು. ನಾನು ಮುಖ್ಯವಾಗಿ ಆರಂಭಿಕ ಬೌಲರ್ ಆಗಿದ್ದೆ. ಸರಿ ಕುಂದಾಪುರ ಹೈಸ್ಕೂಲು ಮತ್ತು ಶಂಕರನಾರಾಯಣ ಹೈಸ್ಕೂಲು ನಡುವೆ ಸ್ಪರ್ಧೆ ಎಂದು ನಿರ್ಧಾರವಾಯಿತು. ನಮ್ಮದೋ ಹಳ್ಳಿ ಶಾಲೆ. ಅವರದ್ದು ಆಗಲೇ ಪೇಟೆಯ ಶಾಲೆ, ಆಧುನಿಕತೆ, ಆಟೋಟಗಳಿಗೆ ಹೆಚ್ಚು ತೆರೆದುಕೊಂಡು, ಹೆಚ್ಚು ಅನುಭವ, ಪರಿಣತಿ ಗಳಿಸಿದವರು. ಅಲ್ಲದೆ ನಮ್ಮ ನಡುವಿನ ಸ್ಪರ್ಧೆ ನಡೆದುದು ಕೋಟೇಶ್ವರದಲ್ಲಿ. ಅಲ್ಲಿನ ಮೈದಾನವೋ ಕಡಲ ಕರೆಯ ಮರಳು ಹಾಸಿನಂತಿತ್ತು. ನಾವು ಗಡುಸಾದ ನೆಲದಲ್ಲಿ ಆಡಿ, ಅದರಲ್ಲೇ ವೇಗದ ಚೆಂಡು ಎಸೆಯಲು ರೂಢಿ ಮಾಡಿಕೊಂಡಿದ್ದವರು. ಕೋಟೇಶ್ವರದ ಆ ಮರಳಿನ ಮೈದಾನದಲ್ಲಿ ನಮ್ಮ ಚೆಂಡು ಪುಟಿಯುತ್ತಲೇ ಇರುತ್ತಿರಲಿಲ್ಲ. ಹಾಗಾಗಿ ನಾವು ಎರಡು ಇನ್ನಿಂಗ್ಸ್ ನಲ್ಲಿ ಗಳಿಸಿದ ಸ್ಕೋರ್ ಅನ್ನು ಅವರು ಒಂದೇ ಇನ್ನಿಂಗ್ಸ್ ನಲ್ಲಿ ಹೊಡೆದು, ಹೀನಾಯ ಸೋಲು ಉಣಿಸಿ, ನಮ್ಮನ್ನು ಮನೆಗೆ ಕಳುಹಿಸಿದರು. ಆದರೆ ಒಂದೇ ಒಂದು ಸಮಾಧಾನ ಎಂದರೆ ಈ ಪಂದ್ಯದಲ್ಲಿಯೂ ಗರಿಷ್ಠ ರನ್ ಮತ್ತು ಗರಿಷ್ಠ ವಿಕೆಟ್ ಗಳಿಸಿದವನು ನಾನೇ ಆಗಿದ್ದೆ!
ಶ್ರೀನಿವಾಸ ಕಾರ್ಕಳ
ಇದನ್ನೂ ಓದಿ- ಅದೊಂದು ದೊಡ್ಡ ಕಥೆ-ಆತ್ಮಕಥನ ಸರಣಿ 13-ಪ್ರಾಥಮಿಕ ಶಾಲೆಗೆ ವಿದಾಯ


