ಆತ್ಮಹತ್ಯೆ ಯೋಚನೆಗಳು ಥಟ್ಟೆಂದು ಹೊಳೆಯುವ `ಐಡಿಯಾ’ಗಳಲ್ಲ! ಅವು ಮಿದುಳಿನಲ್ಲಿ ಸಂಕೀರ್ಣ ರಾಸಾಯನಿಕ ಬದಲಾವಣೆಗಳಿಂದ, ಹೊರಗಿನ ಒತ್ತಡಗಳಿಂದ ಕ್ರಮೇಣ ರೂಪುಗೊಳ್ಳುವ ಆಲೋಚನಾ ಪ್ರಕ್ರಿಯೆಗಳು. ಅದನ್ನು ಸಕಾಲದಲ್ಲಿ ಸರಳವಾಗಿ ಪ್ರಶ್ನಿಸುವ ಮೂಲಕ ಕಂಡುಹಿಡಿಯುವುದು, ಸ್ವತಃ ನರಳುತ್ತಿರುವ ವ್ಯಕ್ತಿಗೂ ತನ್ನ ಭಾವನೆಗಳನ್ನು ತೆರೆದಿಡುವ ಅವಕಾಶ ನೀಡುತ್ತದೆ – ಡಾ.ಕೆ.ಎಸ್.ಪವಿತ್ರ, ಮನೋವೈದ್ಯೆ, ಶಿವಮೊಗ್ಗ.
ಸಾವಿನ ಭೀತಿ ಎಲ್ಲರಿಗೂ ಪರಿಚಿತವಾಗಿರುವಂಥದ್ದೇ. ಆದರೆ ಈ ಭೀತಿಯನ್ನು ದಾಟಿ ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕೊಲೆಗೈಯುವ ಮಾನಸಿಕ ಸ್ಥಿತಿಯ ಹಿಂದೆ ಕಾರಣಗಳೇನಿರಬಹುದು? ಆತ್ಮಹತ್ಯೆಯ ವಿಷಯದಲ್ಲಿ ಇಂತಹ ಸವಾಲುಗಳನ್ನು ತೆರೆದ ಮನಸ್ಸಿನಿಂದ, ನಿಸ್ಸಂಕೋಚವಾಗಿ ಎತ್ತಿ ಚರ್ಚಿಸಬೇಕಾದ ಅಗತ್ಯ ಈ ಹೊತ್ತಿನದು.
ಆತ್ಮಹತ್ಯೆಯ ಬಗ್ಗೆ ಮುಕ್ತವಾಗಿ, ಸಹಾನುಭೂತಿಯಿಂದ ಮಾತನಾಡುವುದು, ಅದರ ಬಗೆಗಿನ ತಪ್ಪು ನಂಬಿಕೆಗಳನ್ನು ಪ್ರಶ್ನಿಸಿ, ಸರಿ ಉತ್ತರಗಳನ್ನು ಪಡೆದುಕೊಳ್ಳುವುದು, ಪ್ರೀತಿ ಪಾತ್ರರಲ್ಲಿ-ತಮ್ಮಲ್ಲಿ ಖಿನ್ನತೆಯ ಲಕ್ಷಣಗಳು, ಆತ್ಮಹತ್ಯೆಯ ಮುನ್ಸೂಚನೆಗಳನ್ನು ಸಕಾಲದಲ್ಲಿ ಗುರುತಿಸಿ, ಶೀಘ್ರ ಚಿಕಿತ್ಸೆಗೆ ಮುಂದಾಗುವುದು, `ನನಗೆ ಸಾಯಬೇಕೆನಿಸುತ್ತಿದೆ’ ಎಂದು ಯಾರಾದರೂ ಹೇಳಿದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಮಾಹಿತಿ-ತರಬೇತಿ ಪಡೆಯುವುದು, ಆತ್ಮಹತ್ಯೆಯ ಬಗ್ಗೆ ಮಾಧ್ಯಮಗಳು, ಕಥೆ-ಕಾದಂಬರಿ-ಸಿನಿಮಾಗಳು ಚಿತ್ರಿಸುವ ರೀತಿಯನ್ನು ಬದಲಿಸುವುದು ಇವೆಲ್ಲವೂ ಸ್ವಹತ್ಯೆಯ ತಡೆಯುವಿಕೆಯಲ್ಲಿ ಬಹು ಮುಖ್ಯವಾಗುತ್ತವೆ.
ಆತ್ಮಹತ್ಯೆಯ ಬಗ್ಗೆ ಹಲವು ಗಮನಾರ್ಹ ಅಧ್ಯಯನಗಳು ಭಾರತದಲ್ಲಿ, ನಮ್ಮ ಕನ್ನಡ ನಾಡಿನಲ್ಲಿ ನಡೆದಿವೆ. ಅದಕ್ಕೆ ಕಾರಣಗಳೂ ಇವೆ. ಯುವ ಜನರ ಆತ್ಮಹತ್ಯೆಯಲ್ಲಿ ಭಾರತ ಬಹು ಮುಂದೆ! ಪ್ರತಿ ವರ್ಷ ಸುಮಾರು 13,000 ವಿದ್ಯಾರ್ಥಿಗಳು ಭಾರತದಲ್ಲಿ ಆತ್ಮಹತ್ಯೆಗೆ ತುತ್ತಾಗುತ್ತಾರೆ. ಕೇವಲ ಓದಿನ ಒತ್ತಡ, ಪೋಷಕರ ಅತಿ ನಿರೀಕ್ಷೆಗಳು ಮಾತ್ರ ಇದರ ಕಾರಣವಲ್ಲ. ಹತಾಶೆ-ನಿರಾಶೆಗಳನ್ನು ನಿಭಾಯಿಸುವ, ಅವುಗಳಿಂದ ಹೊರಬರುವ ಮಾರ್ಗಗಳನ್ನು ಮಕ್ಕಳಿಗೆ ಕಲಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಒಂದು ಸಮಾಜವಾಗಿ ನಾವು – ಇಬ್ಬರೂ ಸೋತಿದ್ದೇವೆ ಎಂಬುದರ ಪ್ರತಿಫಲನ ಈ ಎಳೆಯರ ಆತ್ಮಹತ್ಯೆಗಳು. ಪರೀಕ್ಷೆಗಳಲ್ಲಿ ಹೇಗೆ ಅಂಕ ಗಳಿಸಬೇಕು ಎಂಬ ಬಗ್ಗೆ ಅಪಾರ ತರಬೇತಿಯ ಜೊತೆಗೆ, ಜೀವನದ ಅನಿಶ್ಚಿತತೆಯನ್ನು ಸಹಜವಾಗಿ ಸ್ವೀಕರಿಸಿ, ಒಪ್ಪಿಕೊಳ್ಳುವ ಕಿಂಚಿತ್ ತರಬೇತಿಯನ್ನು ನಾವು ನೀಡುವಲ್ಲಿ ಹಿಂದೆ ಬಿದ್ದಿದ್ದೇವೆ!
ಆತ್ಮಹತ್ಯೆಯ ಅತಿ ಮುಖ್ಯ ಮುನ್ಸೂಚನೆಯೆಂದರೆ “ಮುಂದೇನೂ ಉಳಿದಿಲ್ಲ”- ಎಂಬ ಭರವಸೆಯೇ ಮಾಯವಾದ ಖಿನ್ನತೆಯ ಮನಃಸ್ಥಿತಿ. “Ideas of hopelessness” ಎಂದು ಮನೋವೈದ್ಯಕೀಯ ಜಗತ್ತು ಗುರುತಿಸುವ ಈ ಹಂತದಲ್ಲಿ ಸಹಾಯ ಸಿಕ್ಕರೆ ಅಮೂಲ್ಯ ಜೀವ ಉಳಿಯಬಹುದು ಎಂಬ ಬಗ್ಗೆ ಎಲ್ಲೆಡೆ ಮಾಹಿತಿಯೇನೋ ಲಭ್ಯವಿದೆ. ಅಂತಹ ಸಹಾಯವೂ ಈಗ ಟೆಲಿ ಮಾನಸ್ – 14416 ಕರೆಯಿಂದ ಸಾರ್ವತ್ರಿಕವಾಗಿ ಸುಲಭವೂ ಹೌದು. ಆದರೆ ಅಷ್ಟೇ ವ್ಯಾಪಕವಾಗಿ ತಪ್ಪು ನಂಬಿಕೆಗಳೂ ಆತ್ಮಹತ್ಯೆಯ ಬಗ್ಗೆ ಪ್ರಚಲಿತವಾಗಿವೆ.

ಮನೋವೈದ್ಯೆಯಾಗಿ ಖಿನ್ನ ಮನಸ್ಥಿತಿಯಿಂದ ನರಳುವ ವ್ಯಕ್ತಿಯನ್ನು ನಾನು “ನಿಮಗೆ ಸಾಯಬೇಕೆಂಬ ಯೋಚನೆ ಬರುತ್ತಿದೆಯೇ?” ಎಂದು ಪ್ರಶ್ನಿಸಿದರೆ, ಇಂತಹ ಪ್ರಶ್ನೆಯೇ ವ್ಯಕ್ತಿಯನ್ನು ಸಾಯಲು ಪ್ರೇರೇಪಿಸಿಬಿಡಬಹುದು ಎಂದು ಕುಟುಂಬದವರು ಭಯಪಡುತ್ತಾರೆ. ಇದರ ಹಿನ್ನೆಲೆಯಲ್ಲಿರುವುದು ಆತ್ಮಹತ್ಯೆಯ ಬಗೆಗಿರುವ ಅಜ್ಞಾನ. ಬಹುಜನರಿಗೆ ಇಂದಿಗೂ ಇರುವ ತಪ್ಪು ನಂಬಿಕೆಯೆಂದರೆ ‘ಸಾಯುವ ಬಗ್ಗೆ ಮಾತನಾಡದಿರುವುದೇ ಸೂಕ್ತವಾದದ್ದು’. ಆದರೆ ವೈಜ್ಞಾನಿಕವಾದ ಸತ್ಯವೇ ಬೇರೆ. ಆತ್ಮಹತ್ಯೆ ಯೋಚನೆಗಳು ಥಟ್ಟೆಂದು ಹೊಳೆಯುವ `ಐಡಿಯಾ’ಗಳಲ್ಲ! ಅವು ಮಿದುಳಿನಲ್ಲಿ ಸಂಕೀರ್ಣ ರಾಸಾಯನಿಕ ಬದಲಾವಣೆಗಳಿಂದ, ಹೊರಗಿನ ಒತ್ತಡಗಳಿಂದ ಕ್ರಮೇಣ ರೂಪುಗೊಳ್ಳುವ ಆಲೋಚನಾ ಪ್ರಕ್ರಿಯೆಗಳು. ಅದನ್ನು ಸಕಾಲದಲ್ಲಿ ಸರಳವಾಗಿ ಪ್ರಶ್ನಿಸುವ ಮೂಲಕ ಕಂಡುಹಿಡಿಯುವುದು, ಸ್ವತಃ ನರಳುತ್ತಿರುವ ವ್ಯಕ್ತಿಗೂ ತನ್ನ ಭಾವನೆಗಳನ್ನು ತೆರೆದಿಡುವ ಅವಕಾಶ ನೀಡುತ್ತದೆ.
ಆತ್ಮಹತ್ಯೆಯನ್ನು ತಡೆಯುವ ಒಂದು ವಿಧಾನ ಅದರ ಮೂಲ ಕಾರಣವಾದ ಖಿನ್ನತೆಯನ್ನು ಚಿಕಿತ್ಸೆ ನೀಡಿ ಸಹಜ ಸ್ಥಿತಿಗೆ ಮನಸ್ಸನ್ನು ತರುವುದು. ಚಿಕಿತ್ಸೆಯಿಂದ ಆತ್ಮಹತ್ಯೆ ಆಲೋಚನೆಗಳು ಇಲ್ಲವಾಗುವುದೇ, `ಆತ್ಮಹತ್ಯೆಯ ಮನಃಸ್ಥಿತಿ’ ಒಂದು ಆರೋಗ್ಯದ ಸಮಸ್ಯೆ ಎಂಬುದನ್ನು ಖಚಿತಪಡಿಸುತ್ತದೆ.
ಆತ್ಮಹತ್ಯೆಯನ್ನು ತಡೆಯುವ ಮಾರ್ಗಗಳನ್ನು ರೂಪಿಸಲು ಮನೋವೈದ್ಯಕೀಯ ಜಗತ್ತು ಹಲವು ರೀತಿಗಳಲ್ಲಿ ಸಮಸ್ಯೆಯನ್ನು ಅರಿಯಲು ಪ್ರಯತ್ನಿಸುತ್ತಲೇ ಇದೆ. ಈ ಸಮಸ್ಯೆಯನ್ನು ಅರಿಯಲು ಅಧ್ಯಯನಗಳನ್ನು ಮಾಡುವ ವಿಧಾನಗಳು ವೈವಿಧ್ಯಮಯ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮರಣದ ಕಾರಣವನ್ನು, ತಿಳಿಯುತ್ತೇವಷ್ಟೆ. ಅದೇ ರೀತಿ `ಮಾನಸಿಕ ಮರಣೋತ್ತರ ಪರೀಕ್ಷೆ’ ‘ Psychological autopsy ಎಂಬ ವಿಧಾನದಿಂದ ಆತ್ಮಹತ್ಯೆಯ ಕಾರಣವನ್ನು, ಅದಕ್ಕೆ ಅಂತಿಮವಾಗಿ ಕಾರಣವಾದ ಸನ್ನಿವೇಶವನ್ನು ಅಧ್ಯಯನ ಮಾಡಲಾಗುತ್ತದೆ. ವಿವಿಧ ವರ್ಗದ, ವಯಸ್ಸಿನ ಜನರಲ್ಲಿ ಆತ್ಮಹತ್ಯೆಗೆ ದಾರಿಯಾಗುವ ಅಂಶಗಳನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ. ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದವರನ್ನು ಸಂದರ್ಶಿಸಿ ಆ ಹೊತ್ತಿನ ಸಂಕೀರ್ಣ ಮನಃಸ್ಥಿತಿ, ಅದರಿಂದ ಅವರು ಹೊರ ಬಂದ ಬಗೆಗಳನ್ನು ತಿಳಿಯಲಾಗುತ್ತದೆ.
ಈ ವಿಧಾನಗಳಲ್ಲಿ ಮತ್ತೊಂದು ವಿಶಿಷ್ಟ ಮಾರ್ಗವೆಂದರೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಬರೆದಿಟ್ಟ ಆತ್ಮಹತ್ಯೆಯ ಪತ್ರಗಳನ್ನು ಅಧ್ಯಯನ ಮಾಡುವುದು. ಮೈಸೂರಿನ ಜೆ.ಎಸ್.ಎಸ್. ಕಾಲೇಜಿನ ಮನೋವೈದ್ಯಕೀಯ ತಂಡ ಅಂತಹ ಆತ್ಮಹತ್ಯಾ ಪತ್ರಗಳನ್ನು ಪರಿಶೀಲಿಸಿ ಕೆಲವು ಅಂಶಗಳನ್ನು ದಾಖಲಿಸಿದೆ. ಸಾಯುವ ಮೊದಲು, ಇಬ್ಬಗೆಯ ಮನಃಸ್ಥಿತಿಯಲ್ಲಿ ಬರೆದಿರುವ ಈ ಪತ್ರಗಳು ಮನಸ್ಸಿನ ಒಳಗೆ ಹಣಿಕಿ ನೋಡಬಹುದಾದ ಕಿಂಡಿಗಳಾಗಬಲ್ಲವು. ಕ್ಷಮೆ-ನಾಚಿಕೆ-ತಪ್ಪಿತಸ್ಥ ಭಾವನೆಗಳನ್ನು ಸಾಮಾನ್ಯವಾಗಿ ಆತ್ಮಹತ್ಯಾ ಪತ್ರಗಳು ಹೊರಹಾಕುತ್ತವೆ. ಅಂದರೆ ಮತ್ತೆ ಅವು ಆತ್ಮಹತ್ಯೆಯ ಬಲವಾದ ಮುನ್ಸೂಚನೆಯಾದ ಭರವಸೆಯಿರದಿರುವ, ಭವಿಷ್ಯವಿಲ್ಲದಿರುವ ಹತಾಶೆಯನ್ನೇ ಪ್ರತಿಬಿಂಬಿಸುತ್ತವೆ. `ಬೇರೆಯವರು ಏನೆಂದುಕೊಳ್ಳಬಹುದು/ಜನರನ್ನು ಎದುರಿಸಲು ಸಾಧ್ಯವಿಲ್ಲ’ ಎಂಬ ಇತರರ ಅಭಿಪ್ರಾಯ-ನಡವಳಿಕೆಗಳನ್ನು ತಾನೇ ಊಹಿಸಿಕೊಂಡು, ಇದೇ ಪೂರ್ವಗ್ರಹದಿಂದ ಜೀವ ಕಳೆದುಕೊಳ್ಳುವ ಅಪಾಯಕ್ಕೆ ಕೈ ಹಾಕುವ ಪ್ರವೃತ್ತಿಯೂ ಈ ಪತ್ರಗಳಿಂದ ಸ್ಪಷ್ಟವಾಗುತ್ತದೆ. ಹೆಚ್ಚಿನ ಆತ್ಮಹತ್ಯಾ ಪತ್ರಗಳಲ್ಲಿ ಕಾಣುವ ಮತ್ತೊಂದು ಅಂಶವೆಂದರೆ “ತನ್ನ ಕುಟುಂಬದವರು ನರಳಬಾರದು /ತನಗಿರುವ ಪ್ರೀತಿಯನ್ನು ಅವರಿಗೆ ವ್ಯಕ್ತಪಡಿಸುವುದು” ಎಂಬುದು. ಈ ಎಲ್ಲ ಅಂಶಗಳನ್ನೂ ಆತ್ಮಹತ್ಯೆಯನ್ನು ತಡೆಗಟ್ಟುವ ಕ್ರಮಗಳಲ್ಲಿ ಚರ್ಚಿಸುವುದು ಬಹು ಉಪಯುಕ್ತ. ಸಮಸ್ಯೆಗಳಿಗೆ ಪರಿಹಾರ ಹುಡುಕುವ ತಮ್ಮ ಸಾಮರ್ಥ್ಯವನ್ನು ಆತ್ಮಹತ್ಯೆಯನ್ನು ಆಶ್ರಯಿಸುವ ವ್ಯಕ್ತಿಗಳು ಕಡಿಮೆ ಅಂದಾಜು ಮಾಡಿರುತ್ತಾರೆ ಎಂಬುದು ಕೂಡ ಈ ಪತ್ರಗಳಿಂದ ಸ್ಪಷ್ಟವಾಗುತ್ತದೆ.
ಸಾಹಿತ್ಯ-ಸಿನಿಮಾಗಳಲ್ಲಿ ಬರುವ ಸಾವಿನ ಚಿತ್ರಣಗಳು ಬಹಳಷ್ಟು ಬಾರಿ ಆತ್ಮಹತ್ಯೆಯನ್ನು ಚಿತ್ರಿಸುತ್ತವೆ ಎಂದು ಹಲವು ಅಧ್ಯಯನಗಳು ಗುರುತಿಸಿವೆ. ದುರಂತವೆಂದರೆ ಹೇಗೆ ಬದುಕಬೇಕು ಎಂಬುದನ್ನು ಚಿತ್ರಿಸಬೇಕಾದ ಜೀವನಪ್ರೀತಿಯ ಸಾಹಿತ್ಯ-ಸಿನಿಮಾಗಳು ಆತ್ಮಹತ್ಯೆಯಿಂದ ಸಾಯದೇ ಉಳಿದವರ ಕಥೆಗಳನ್ನು, ಅನುಭವ ಕಥನಗಳನ್ನು ಚಿತ್ರಿಸಲು ಸೋತಿರುವುದು! ಆತ್ಮಹತ್ಯೆಯಿಂದ ಬದುಕುಳಿದು ಬಂದ ವ್ಯಕ್ತಿಗಳ ಜೀವನ ಕಥನಗಳನ್ನು ಮನಮುಟ್ಟುವಂತೆ ಚಿತ್ರಿಸುವ ಸವಾಲನ್ನು ಚಿತ್ರರಂಗ-ಕಥೆ-ಕಾದಂಬರಿಕಾರರು ಸ್ವೀಕರಿಸಿ ಗೆಲ್ಲುವತ್ತ ಮನಸ್ಸು ಮಾಡಬೇಕು. “ಆತ್ಮಹತ್ಯೆಯೆಂದರೆ ಅದು ಪೂರ್ಣ ಸಾವಲ್ಲ/ಅವರು ಯಾವುದೋ ಒಂದು ರೂಪದಲ್ಲಿ ಬದುಕುಳಿಯುತ್ತಾರೆ. ತಮ್ಮ ಅಂತ್ಯಕ್ರಿಯೆಯನ್ನು ನೋಡುತ್ತಾರೆ, ತಮ್ಮ ಸಾವು ಇತರರ ಮೇಲೆ ಬೀರುವ ಪ್ರಭಾವವನ್ನು ವೀಕ್ಷಿಸಬಲ್ಲರು” ಇಂತಹ ನಂಬಿಕೆಗಳು ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ಕಾಣಸಿಗುತ್ತವೆ. ಇಂತಹ ನಂಬಿಕೆಗಳನ್ನು ಸಿನಿಮಾ-ಕಾದಂಬರಿಗಳು ಮತ್ತಷ್ಟು ಪ್ರಚೋದಿಸುತ್ತವೆ. ಇವು ನಿಜವೋ ಸುಳ್ಳೋ ಎಂಬ ನ್ಯಾಯನಿರ್ಣಯಕ್ಕಿಂತ, ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡವರ ಆತ್ಮೀಯರ ನರಳುವಿಕೆ-ಅನಂತರದ ಬದುಕೆಂಬ ಕಟು ಸತ್ಯಗಳನ್ನು ಸಮಾಜ ತೆರೆದ ಕಣ್ಣು-ಮನಸ್ಸುಗಳಿಂದ ಸ್ಪಷ್ಟವಾಗಿ ನೋಡಲೇಬೇಕು.
ಆತ್ಮಹತ್ಯೆಯಿಂದ ಬದುಕುಳಿದವರ ಕಥೆಗಳು ನಮಗೆ ಬೇಕೇ ಬೇಕು. ಅದು ಆತ್ಮಹತ್ಯೆಯನ್ನು ತಡೆಯುತ್ತದೆ ಎಂಬ ಕಾರಣಕ್ಕಲ್ಲ. ಅಥವಾ ಬದುಕಲು ಕಾರಣಗಳನ್ನು ಅದು ನೀಡುತ್ತದೆ ಎಂಬುದಕ್ಕೂ ಅಲ್ಲ. ಮತ್ತೆ?! ಕಥೆಯನ್ನು ಪೂರ್ಣಗೊಳಿಸಲು / ರೂಪಿಸಲು ಒಂದಕ್ಕಿಂತ ಹೆಚ್ಚು ದಾರಿಗಳಿವೆ. ಆತ್ಮಹತ್ಯೆಯನ್ನು ತಡೆಯಲೂ ಅಷ್ಟೆ! ಕಲ್ಪನೆಯಲ್ಲಾಗಲೀ, ನಿಜಜೀವನದಲ್ಲಾಗಲೀ ಹಲವು ದಾರಿಗಳಿವೆ ಎಂಬುದನ್ನು ತೋರಿಸಲು!!!
ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಜೀವನ ಸಂಗಾತಿಯನ್ನು ಕಳೆದುಕೊಳ್ಳುವ ವ್ಯಕ್ತಿ ಶೋಕದ ತೀವ್ರತೆಯಲ್ಲಿ ಆತ್ಮಹತ್ಯೆಯ ಯೋಚನೆ ಮಾಡುವುದು, ತನ್ನ ಆತ್ಮೀಯರು ಈ ಜಗತ್ತಿನಲ್ಲಿ ಇಲ್ಲದಿರುವಾಗ ತಾನು ಈ ಪ್ರಪಂಚದಲ್ಲಿರುವುದೇ ತಪ್ಪು ಎಂಬ ಮನಃಸ್ಥಿತಿಯಲ್ಲಿ ನರಳುವುದು ಸಾಮಾನ್ಯವಾಗಿ ಕಂಡು ಬರುವಂತಹದ್ದು. ಅದರಲ್ಲಿಯೂ ಶೋಕ ಕರಗುವ ಪ್ರಕ್ರಿಯೆಯಲ್ಲಿ ಸಾವು ನಡೆದ ತಕ್ಷಣದ ಸಮಯದಷ್ಟೇ ತೀವ್ರವಾಗಿ ಭಾವನೆಗಳ ಮಹಾಪೂರ ಕಂಡುಬರುವ ಮೊದಲೆರಡು ವರ್ಷಗಳ ‘ಪುಣ್ಯತಿಥಿ’ಯ ಸಂದರ್ಭ ವಿಶೇಷವಾಗಿ ಕುಟುಂಬದವರು ಗಮನಿಸಬೇಕಾದ್ದು.
ಆತ್ಮಹತ್ಯೆಯನ್ನು ತಡೆಯಲು ಹಲವು ವಿಧಾನಗಳಿವೆ! ಆಪ್ತತೆಯಿಂದ ಕಿವಿಗೊಟ್ಟು ಕೇಳುವುದು, ಸಹಾಯ ಹಸ್ತ ಚಾಚುವುದು, ಸಾಹಿತ್ಯ-ಸಿನಿಮಾಗಳ ಮೂಲಕ `ಬದುಕುವ’ ನಂಬಿಕೆಯನ್ನು ಹರಡುವುದು!

ಡಾ.ಕೆ.ಎಸ್.ಪವಿತ್ರ
ಮನೋವೈದ್ಯೆ, ಶಿವಮೊಗ್ಗ
ಇದನ್ನೂ ಓದಿ- ಸಾಂವಿಧಾನಿಕ ಸೌಹಾರ್ದತೆ ಮತ್ತು ಮಕರ ಸಂಕ್ರಾಂತಿ


