ಪ್ರಾಕೃತಿಕ ಬದಲಾವಣೆಯಲ್ಲಿ ಮನುಷ್ಯನು ಹುಡುಕುವ ಸಂತೋಷ ಮತ್ತು ಸೌಹಾರ್ದತೆಯ ರೂಪಕವಾಗಿ ಮಕರ ಸಂಕ್ರಾಂತಿಯ ಹಬ್ಬವು ರೂಪುಗೊಂಡಿದೆ. “ಎಳ್ಳು ಬೆಲ್ಲ ತಿಂದು ಬದುಕೋಣ” ಬದುಕಿನ ಸೌಹಾರ್ದತೆಯನ್ನು ಈ ವಿಚಾರವು ಪ್ರತಿಪಾದಿಸುತ್ತದೆ. ಸೌಹಾರ್ದತೆಯು ಸಮೃದ್ಧಿಗೆ ದಾರಿಯಾಗುತ್ತದೆ. ಬದುಕಿನ ನಕಾರಾತ್ಮಕತೆಯನ್ನು ನಾಶ ಮಾಡುವುದನ್ನು ಸಂಕ್ರಾಂತಿಯ ಸುಡುವ ಮತ್ತು ಕಿಚ್ಚು ಹಾಯಿಸುವ ಪ್ರಸಂಗಗಳಲ್ಲಿ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಸೌಹಾರ್ದತೆಯ ಮೂಲಕ ಹೊಸ ಕನಸುಗಳನ್ನು ಕಟ್ಟಲು ಮಕರ ಸಂಕ್ರಾಂತಿಯು ದಾರಿಯಾಗುತ್ತದೆ – ಡಾ. ಗಣನಾಥ ಎಕ್ಕಾರು, ಲೇಖಕರು ಮತ್ತು ಜಾನಪದ ವಿದ್ವಾಂಸರು.
ಮನುಷ್ಯ ಜೀವನ ಸಂಸ್ಕೃತಿ ಮತ್ತು ಪ್ರಕೃತಿ ನಡುವೆ ಮಹತ್ವದ ಸಂಬಂಧವಿದೆ. ಮನುಷ್ಯನು ಪ್ರಕೃತಿಯ ಆಗುಹೋಗುಗಳನ್ನು ಅವಲಂಬಿಸಿಯೆ ತನ್ನ ಸಂಸ್ಕೃತಿಯನ್ನು ನಿರ್ಮಿಸಿಕೊಂಡಿದ್ದಾನೆ. ಈ ಪ್ರಕ್ರಿಯೆ ಅಪ್ರಜ್ಞಾಪೂರ್ವಕವಾಗಿರಲೂ ಬಹುದು. ಆದರೆ ಒಂದು ಪ್ರಾಕೃತಿಕ ಸಂಬಂಧ ಇದ್ದೆ ಇರುತ್ತದೆ. ಒಂದು ರಿತಿಯಲ್ಲಿ ಸಂಸ್ಕೃತಿಯನ್ನು ನಿರ್ಧರಿಸುವುದೇ ಪ್ರಕೃತಿ ಎಂದರೂ ತಪ್ಪಿಲ್ಲ. ಮಳೆ, ಬಿಸಿಲು, ಕಾಡು ಗುಡ್ಡ, ನದಿ, ಸಮುದ್ರ – ಹೀಗೆ ಎಲ್ಲವೂ ಮಾನವ ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತದೆ. ಈ ಕಾರಣದಿಂದಲೇ ಸಂಸ್ಕೃತಿಯಲ್ಲಿ ಬಹುತ್ವವಿದೆ. ಏಕ ಸಂಸ್ಕೃತಿ ಎಂಬ ಪ್ರತಿಪಾದನೆಯೆ ಅಪದ್ಧವಾದುದು.
ಮೇಲಿನ ವಿಚಾರಕ್ಕೆ ಒಳ್ಳೆಯ ಉದಾಹರಣೆ ಮಕರ ಸಂಕ್ರಾಂತಿ ಹಬ್ಬ. ಸೂರ್ಯನು ತನ್ನ ಪಥವನ್ನು ಬದಲಿಸಿ ಭೂಮಿ ಮತ್ತು ಸೂರ್ಯನ ನಡುವಿನ ಸ್ವರೂಪದಲ್ಲಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಸಹಜವಾಗಿ ಪ್ರಕೃತಿಯ ಮೇಲೂ ಪರಿಣಾಮ ಬೀರುತ್ತದೆ. ನಂಬಿಕೆಯ ಪ್ರಕಾರ ಸೂರ್ಯನು ಧನುರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯ ಆಳ್ವಿಕೆ ಇರುವ ಮಕರ ರಾಶಿ ಪ್ರವೇಶಿಸುತ್ತಾನೆ ಎಂಬುದು ನಂಬಿಕೆ. ದಕ್ಷಿಣಾಯನದಿಂದ ಉತ್ತರಾಯಣದ ಕಡೆ ಚಲಿಸುತ್ತಾನೆ ಎಂಬುದು ಪೌರಾಣಿಕ ನಂಬಿಕೆ. ಇದಕ್ಕೆ ಸಂಬಂಧಿಸಿದ ಹಲವು ಪೌರಾಣಿಕ ಕಥೆಗಳು ಅಸ್ತಿತ್ವದಲ್ಲಿದೆ. ಪುರಾಣ ಕಥೆಗಳು ಏನೇ ಇದ್ದರೂ ಅವು ಪ್ರಕೃತಿಯ ಬದಲಾವಣೆಯ ಹಿನ್ನೆಲೆಯಲ್ಲಿ ನಂತರ ಸಾಂಸ್ಕೃತಿಕ ಪ್ರಕ್ರಿಯೆಯಲ್ಲಿ ಹುಟ್ಟಿ ಕೊಂಡಿರುವುದು.

ಹಬ್ಬಗಳು ಸಂಸ್ಕೃತಿಯ ಉಪ ಉತ್ಪಾದನೆಗಳು. ಕೆಲವು ಹಬ್ಬಗಳು ಪ್ರಾದೇಶಿಕವಾಗಿರುತ್ತವೆ. ಅಂದರೆ ದೇಶದ ಕೆಲವು ಭಾಗಗಳಲ್ಲಿ ಅಸ್ತಿತ್ವದಲ್ಲಿರುತ್ತವೆ. ದೇಶಾದ್ಯಂತ ವ್ಯಾಪಿಸಿರುವ ಕೆಲವೇ ಕೆಲವು ಹಬ್ಬಗಳಲ್ಲಿ ಮಕರ ಸಂಕ್ರಾತಿಯು ಒಂದು. ದೇಶದ ಉತ್ತರ-ದಕ್ಷಿಣ ಈಶಾನ್ಯ ಹೀಗೆ ಎಲ್ಲಾ ಭಾಗಗಳಲ್ಲೂ ಇದನ್ನು ಆಚರಿಸಲಾಗುತ್ತದೆ. ಪ್ರಾಕೃತಿಕ ಬದಲಾವಣೆ ಮನುಷ್ಯ ಜೀವನದಲ್ಲಿ ತರುವ ಬದಲಾವಣೆಯೇ ಇದಕ್ಕೆ ಮುಖ್ಯ ಕಾರಣವೆಂದರೂ ತಪ್ಪಲ್ಲ. ಕರ್ನಾಟಕದಲ್ಲೂ ಈ ಹಬ್ಬದಲ್ಲಿ ಪ್ರಾದೇಶಿಕ ಭಿನ್ನತೆಯಿದೆ.
ಕೃಷಿಯನ್ನು ಜೀವನಾಡಿಯಾಗಿಟ್ಟುಕೊಂಡ ರೈತ ಸಮುದಾಯಕ್ಕೆ ಮಕರ ಸಂಕ್ರಾಂತಿಯು ಬದುಕಿನ ಭವ್ಯತೆಯ ಸಂಕೇತವಾಗಿದೆ. ಸಂಕ್ರಾಂತಿ ಸುಗ್ಗಿ ಮೊದಲಾದ ಪದಗಳು ಬದುಕಿನಲ್ಲಿ ಸಮೃದ್ಧಿ ಮತ್ತು ಅಭಿವೃದ್ಧಿಯನ್ನು ಸಂಕೇತಿಸುತ್ತದೆ. ಮಕರ ಸಂಕ್ರಾಂತಿಯು ಸುಗ್ಗಿಯ ಕಾಲ. ಕರಾವಳಿಯನ್ನು ಗಮನಿಸಿದರೆ ನವೆಂಬರ್ ತಿಂಗಳಲ್ಲಿ ಬರುವ ದೀಪಾವಳಿಯು ಸಮೃದ್ಧಿಯ ಸಂಕೇತವಾಗಿದೆ. ಇದರಿಂದ ಮಕರ ಸಂಕ್ರಾಂತಿಯು ಕರಾವಳಿ ಪ್ರದೇಶದಲ್ಲಿ ಮಹತ್ವದ ಹಬ್ಬವೇನಲ್ಲ. ಆದರೆ ದೇಶದ ಕೆಲವು ಭಾಗದ ರೈತರಿಗೆ ಅದರಲ್ಲೂ ಉತ್ತರ ಮತ್ತು ಮಧ್ಯ ಕರ್ನಾಟಕದ ರೈತರಿಗೆ ಮಕರ ಸಂಕ್ರಾಂತಿಯು ಸುಗ್ಗಿಯ ಕಾಲ. ಸಮೃದ್ಧಿಯಾದ ಬೆಳೆಯು ಮನೆಗೆ ಬರುವುದರಿಂದ ಸಹಜವಾಗಿಯೇ ಸಂಪತ್ತಿನ ವೃದ್ಧಿಯಾಗಿರುತ್ತದೆ. ಕರಾವಳಿಯಲ್ಲಿ ದೀಪಾವಳಿಯ ಸಂದರ್ಭದಲ್ಲಿ ಹಟ್ಟಿಯಲ್ಲಿರುವ ಪಶುಗಳಿಗೆ ದೀಪ ತೋರಿಸುವಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ದನಗಳನ್ನು ಕಿಚ್ಚು ಹಾಯಿಸಿ ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಎಳ್ಳು – ಬೆಲ್ಲ ಹಂಚುವ ಸಂಭ್ರಮವಿದೆ. ಮಕರ ಸಂಕ್ರಾಂತಿಯು ಹೊಸ ಭರವಸೆ, ಸಂಪತ್ತು, ಸಮೃದ್ಧಿ ಮತ್ತು ಸಂತೋಷವನ್ನು ಸಂಕೇತಿಸುತ್ತದೆ.
ಬಹುತ್ವವು ಭಾರತೀಯ ಸಂಸ್ಕೃತಿಯ ಜೀವದಾತು. ಈ ಬಹುತ್ವದ ಪರಿಕಲ್ಪನೆಯಿಂದಲೇ ನಮ್ಮ ಸಂವಿಧಾನದ ಮೂಲತತ್ವಗಳು ರೂಪುಗೊಂಡಿವೆ. ಸಂವಿಧಾನದ ಅನುಷ್ಠಾನದಲ್ಲಿ ಬಹುತ್ವವನ್ನು ಒಪ್ಪಿಕೊಂಡು ಸೌಹಾರ್ದತೆಯಿಂದ ಬದುಕುವುದು ಅತಿ ಮುಖ್ಯವಾಗುತ್ತದೆ. ಎಳ್ಳು-ಬೆಲ್ಲದ ಮಿಶ್ರಣವು ಈ ಸೌಹಾರ್ದತೆಯ ಸಂಕೇತವಾಗುತ್ತದೆ. ಜೀವನದಲ್ಲಿ ಸಿಹಿ-ಕಹಿ, ಕಷ್ಟ-ಸುಖ ನೋವು – ನಲಿವು ಎಲ್ಲವೂ ಇರುತ್ತದೆ. ಅದೆಲ್ಲವನ್ನು ಒಪ್ಪಿಕೊಂಡು ಸೌರ್ಹಾರ್ದತೆಯಿಂದ ಬದುಕಿದಾಗಲೇ ಬದುಕಿಗೆ ಅರ್ಥ ಬರುತ್ತದೆ. ಪ್ರಾಕೃತಿಕ ಬದಲಾವಣೆಯಲ್ಲಿ ಮನುಷ್ಯನು ಹುಡುಕುವ ಸಂತೋಷ ಮತ್ತು ಸೌಹಾರ್ದತೆಯ ರೂಪಕವಾಗಿ ಮಕರ ಸಂಕ್ರಾಂತಿಯ ಹಬ್ಬವು ರೂಪುಗೊಂಡಿದೆ. “ಎಳ್ಳು ಬೆಲ್ಲ ತಿಂದು ಬದುಕೋಣ” ಬದುಕಿನ ಸೌಹಾರ್ದತೆಯನ್ನು ಈ ವಿಚಾರವು ಪ್ರತಿಪಾದಿಸುತ್ತದೆ. ಸೌಹಾರ್ದತೆಯು ಸಮೃದ್ಧಿಗೆ ದಾರಿಯಾಗುತ್ತದೆ. ಬದುಕಿನ ನಕಾರಾತ್ಮಕತೆಯನ್ನು ನಾಶ ಮಾಡುವುದನ್ನು ಸಂಕ್ರಾಂತಿಯ ಸುಡುವ ಮತ್ತು ಕಿಚ್ಚು ಹಾಯಿಸುವ ಪ್ರಸಂಗಗಳಲ್ಲಿ ಕಾಣುವುದಕ್ಕೆ ಸಾಧ್ಯವಾಗುತ್ತದೆ. ಸೌಹಾರ್ದತೆಯ ಮೂಲಕ ಹೊಸ ಕನಸುಗಳನ್ನು ಕಟ್ಟಲು ಮಕರ ಸಂಕ್ರಾಂತಿಯು ದಾರಿಯಾಗುತ್ತದೆ. ಪ್ರತಿವರ್ಷ ಜನವರಿ 14 ನೇ ತಾರೀಕಿನಂದು ಉಂಟಾಗುವ ಪ್ರಾಕೃತಿಕ ಬದಲಾವಣೆಯ ಸನ್ನಿವೇಶವನ್ನು ಸಂಸ್ಕೃತಿಯಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ.
ಸಂಸ್ಕೃತಿಯು ಮನುಷ್ಯ ಜೀವನದಲ್ಲಿ ಸಂವಹನದ ಮಹತ್ವದ ಶಕ್ತಿಯಾಗಿದೆ. ಒಂದು ರೀತಿಯಲ್ಲಿ ಸಂವಹನ ಮುಖ್ಯ ರೂವಾರಿಯಾಗಿದೆ. ದೀಪಾವಳಿ, ಮಕರ ಸಂಕ್ರಾಂತಿ ಹಬ್ಬವು ಈ ಸೌಹಾರ್ದತೆಗೆ ನಂಬಿಕೆ ಮತ್ತು ಪ್ರೀತಿ ವಿಶ್ವಾಸಗಳನ್ನು ಸಂವಹನ ಮಾಡುವ ಪ್ರಕ್ರಿಯೆಯಾಗಿದೆ. ಆಚರಣೆಯನ್ನು ಮಾತ್ರ ಹಬ್ಬವೆಂದು ಪರಿಭಾವಿಸಿದಲ್ಲಿ ಹಬ್ಬವೊಂದು ಯಾಂತ್ರಿಕ ಆಚರಣೆಯಾಗುತ್ತದೆ. ಆದರೆ ಹಬ್ಬಗಳು ನೀಡುವ ಸಂವಹನದ ಸಂದೇಶವನ್ನು ಅರ್ಥ ಮಾಡಿಕೊಂಡು ಬದುಕಿದಾಗ ಮಾತ್ರ ಹಬ್ಬಗಳಿಗೆ ಸಾಂಸ್ಕೃತಿಕ ಅರ್ಥ ಒದಗುತ್ತದೆ. ಆಗ ಕಿಚ್ಚು ಹಾಯಿಸುವುದು, ಎಳ್ಳು ಬೆಲ್ಲ ವಿನಿಮಯ, ಜೋಕುಲಿ ಆಟ, ಗಾಳಿಪಟ ಹಾರಿಸುವುದು ಇದೆಲ್ಲದಕ್ಕಾಗಿ ಸೌಹಾರ್ದತೆ ಮತ್ತು ಸಹೋದರತೆಯ ಅರ್ಥ ಬರುತ್ತದೆ. ಆಗ ನಿಜವಾದ ಸಾಂವಿಧಾನಿಕ ಮೌಲ್ಯಗಳಲ್ಲಿ ಬದುಕಲು ಸಾಧ್ಯವಾಗುತ್ತದೆ. ಏಕ ಸಂಸ್ಕೃತಿಯ ಪ್ರತಿಪಾದನೆ ಅವ್ಯಾಹತವಾಗಿ ಸಾಗುತ್ತಿರುವ ಇಂದಿನ ಸಂದರ್ಭದಲ್ಲಿ ಭಾವೈಕ್ಯತೆ ಮತ್ತು ಸೌಹಾರ್ದತೆಯನ್ನು ಸಾರುವ ಮಕರ ಸಂಕ್ರಾಂತಿಯ ಹಬ್ಬದ ಅರಿವಿನ ಬೆಳಕು ಮುಖ್ಯವಾಗುತ್ತದೆ.
ಡಾ.ಗಣನಾಥ ಎಕ್ಕಾರು
ಲೇಖಕರು ಮತ್ತು ಜಾನಪದ ವಿದ್ವಾಂಸರು
ಇದನ್ನೂ ಓದಿ- ಅತಿದಾರಿದ್ರ್ಯದ ನಿರ್ಲಕ್ಷಿತ ರೋಗ: ‘ನೋಮ’


