ನವದೆಹಲಿ: ಚುನಾಯಿತ ಪ್ರತಿನಿಧಿಗಳಿಲ್ಲದೆ ಕಂಗೆಟ್ಟಿದ್ದ ಬೆಂಗಳೂರು ನಾಗರೀಕರಿಗೆ ಗುಡ್ ನ್ಯೂಸ್! ಹಾಗೆಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸದಸ್ಯರಾಗಬೇಕು ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಆಕಾಂಕ್ಷಿಗಳಿಗೂ ಶುಭ ಸುದ್ದಿ. ಸುಪ್ರೀಂ ಕೋರ್ಟ್ ಇಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್ ಅಂತ್ಯದ ಒಳಗಾಗಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಜಿಬಿಎ ಗೆ ಚುನಾವಣೆ ನಡೆಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠದಲ್ಲಿ ನಡೆಯಿತು.
ರಾಜ್ಯ ಸರ್ಕಾರವು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅಂತಿಮ ಮೀಸಲಾತಿ ಪ್ರಕಟಿಸಲು ಫೆಬ್ರುವರಿ 20ರ ವರೆಗೆ ಕಾಲಾವಕಾಶ ಕೇಳಿತ್ತು. ರಾಜ್ಯ ಚುನಾವಣಾ ಆಯೋಗವು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು ಮೇ ಅಂತ್ಯದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸುವುದಾಗಿ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿತ್ತು. ಅಂತಿಮವಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಆಯೋಗದ ಮನವಿಗೆ ಸಹಮತ ವ್ಯಕ್ತಪಡಿಸಿದ್ದು, ಜೂನ್ ಅಂತ್ಯದ ಒಳಗಾಗಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

