ಮರ್ಯಾದಾಗೇಡು ಹತ್ಯೆ ನಿಗ್ರಹಿಸಲು “ಮಾನ್ಯಾ ಕಾಯ್ದೆ” ಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

Most read

ಬೆಂಗಳೂರು : ಡಿ. 21 ರಂದು ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ನಡೆದ ದಲಿತ ಹುಡುಗನನ್ನು ಪ್ರೀತಿಸಿ ಮದುವೆಯಾದ ಲಿಂಗಾಯತ ಸಮುದಾಯದ ಮಾನ್ಯಾಳನ್ನು ಆಕೆಯ ತಂದೆಯೇ ಕೊಂದು ʼಮರ್ಯಾದಾಗೇಡುʼ ಹತ್ಯೆ ನಡೆಸಿದ್ದ. ರಾಜ್ಯದಲ್ಲಿ ಮತ್ತೆ ಮತ್ತೆ ಮರ್ಯಾದಾಗೇಡು ಹತ್ಯೆಗಳು ನಡೆಯುತ್ತಲೇ ಇದ್ದು ಇವುಗಳನ್ನು ತಡೆಯಲು ಕಠಿಣವಾದ ಪ್ರತ್ಯೇಕ ಕಾಯ್ದೆ ಜಾರಿಯಾಗಬೇಕೆಂದು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆಯಲಾಗಿದ್ದು ಮಾನವೀಯ ಕಳಕಳಿಯ ಸಾವಿರಕ್ಕೂ ಹೆಚ್ಚು ಮನಸುಗಳು ಅಭಿಯಾನವನ್ನು ಬೆಂಬಲಿಸಿದವು. ಅಭಿಯಾನವನ್ನು ಬೆಂಬಲಿಸಿದ ಹೆಸರುಗಳುಳ್ಳ ಮನವಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಲಾಯಿತು ಎಂದು ಅಭಿಯಾನದ ಮುಖ್ಯಸ್ಥರೂ, ಪತ್ರಕರ್ತರೂ, ಲೇಖಕರೂ ಆಗಿರುವ ಎನ್.ರವಿಕುಮಾರ್ (ಟೆಲೆಕ್ಸ್) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯ ಪೂರ್ಣ ಪಠ್ಯ ಇಲ್ಲಿದೆ-

ರಾಜ್ಯದಲ್ಲಿ  ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ.  ಇದೊಂದು ಆತಂಕಕಾರಿ ಬೆಳವಣಿಗೆ. ಇದೊಂದು “ಜಾತಿ ಭಯೋತ್ಪಾದನೆ” CAST TERRERIOSIM.

ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ   ಅಂತರ್ಜಾತಿ ವಿವಾಹಗಳು ಪರಿಹಾರ ಎಂಬುದನ್ನು ಮಹಾ ಮಾನವತಾವಾದಿಗಳಾದ ಬಸವಣ್ಣ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕರಾರುವಕ್ಕಾಗಿ ಪ್ರತಿಪಾದಿಸಿದ್ದರು ಮತ್ತೂ ಅದನ್ನು ಅನುಷ್ಠಾನ ಗೊಳಿಸುವಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು.

ವಿಪರ್ಯಾಸವೆಂದರೆ, ಅಂತರ್ಜಾತಿ  ವಿವಾಹಗಳನ್ನು  ಒಪ್ಪಲಾರದ ಜಾತೀಯತೆಯ ರೋಗಪೀಡಿತ ಮನೋಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ ಮತ್ತು ಹೆಚ್ಚಾಗುತ್ತಲೇ ಇದೆ.  ಇದು  ಸಮಸಮಾಜ ನಿರ್ಮಾಣದ ಎಲ್ಲಾ ಬಗೆಯ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕಿ ಬಿಡುತ್ತದೆ.

ಇಂತಹ ಮನೋಸ್ಥಿತಿ ಎಷ್ಟೊಂದು ಕ್ರೌರ್ಯವನ್ನು ಮೆರೆಯುತ್ತಿದೆ ಎಂದರೆ  ಅಂತರ್ಜಾತಿ ವಿವಾಹವಾದ ಮಕ್ಕಳನ್ನು, ಪರಸ್ಪರ ಪ್ರೀತಿಸಿದವರನ್ನು  ತಮ್ಮ ಪೋಷಕರೇ ಕಾನೂನಿನ ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ  ʼಮರ್ಯಾದಾಗೇಡು ಹತ್ಯೆʼ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ/ ಮೌಲ್ಯ  ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ.

ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ  ಇಚ್ಛಾಶಕ್ತಿ   ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ  ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು “ಘೋರ ಅಪರಾಧ” ಎಂದು ಪರಿಗಣಿಸಬೇಕು.

ಸರ್ಕಾರ ಇಂತಹ ಘೋರ ಅಪರಾಧಗಳನ್ನು ನಿಗ್ರಹಿಸುವ ಬಗ್ಗೆ ಸರ್ಕಾರಗಳು ಕೈಗೊಳ್ಳಬಹುದಾದ ಕ್ರಮವೇನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರ ಅಭಿಪ್ರಾಯ ಸಂಗ್ರಹಣೆಗೆ ಮುಂದಾದಾಗ  ಅದೊಂದು ಅಭಿಯಾನ ರೂಪದಲ್ಲಿ ಈ ನಾಡಿನ ಸಾಮಾನ್ಯರೂ ಸೇರಿದಂತೆ ಪತ್ರಕರ್ತರು, ಲೇಖಕರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೆ ಅಪರಾಧ ಕೃತ್ಯಗಳನ್ನು ತಡೆಯಲು ಕಾನೂನುಗಳು ಇದ್ದಾಗ್ಯೂ ಜಾತಿ ಆಧಾರಿತ ಕ್ರೌರ್ಯಗಳು ನಡೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ  ದಲಿತ ಸಮುದಾಯದ ಹುಡುಗನನ್ನು ಮದುವೆಯಾಗಿ  ತುಂಬು ಗರ್ಭಿಣಿಯಾಗಿದ್ದ ಸ್ವಂತ ಮಗಳನ್ನೆ ತಂದೆಯೊಬ್ಬ ಜಾತಿ ದ್ವೇಷದಿಂದ ಕೊಂದು ಹಾಕಿರುವುದು, ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಮಸಮಾಜದ  ಕ್ರಾಂತಿಪುರುಷ ಬಸವಣ್ಣನವರ ಈ ನಾಡಿಗೆ ದೊಡ್ಡ ಕಳಂಕ. ಇಂತಹ ಜಾತಿಯ ಕ್ರೌರ್ಯಗಳು ರಾಜ್ಯಾದ್ಯಂತ ಪದೇ ಪದೇ  ನಡೆಯುತ್ತಲೆ ಇವೆ. ಇವುಗಳನ್ನು  ನಿಗ್ರಹಿಸಲು ಕಠಿಣ ಕಾನೂನು ರೂಪಿಸಬೇಕಾಗಿದೆ ಎಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ಅಭಿಯಾನದ   ಜನಾಭಿಪ್ರಾಯವನ್ನು ಸಂಕ್ಷಿಪ್ತರೂಪವಾಗಿ ತಮ್ಮ ಗಮನಕ್ಕೆ ತರುತ್ತಿದ್ದೇವೆ.

ಸರ್ಕಾರ ಡಿ.21 ರಂದು  ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ನಡೆದ ಮರ್ಯಾದಾಗೇಡು ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ (CASTE TERRORISM) ಬಲಿಯಾದ  “ಮಾನ್ಯಾ”ಳ  ಹೆಸರಲ್ಲಿ  ಉಗ್ರ ಶಿಕ್ಷೆಯ ಕಾಯ್ದೆಯನ್ನು  ರೂಪಿಸಬೇಕಾಗಿದೆ.

ಜಾತಿವೈಷಮ್ಯ ಪಿಡುಗುಗಳನ್ನು ನಿವಾರಿಸಲು ಜನರಲ್ಲಿ  ಸಾಮಾಜಿಕ ಅರಿವು  , ಮಾನವೀಯ ವಿವೇಕವನ್ನು ಮೂಡಿಸುವುದು ಅಗತ್ಯವೆನಿಸಿದರೂ ನಾಗರೀಕ ಸಮಾಜವನ್ನು ಕಟ್ಟುವಲ್ಲಿ ಕಾಯ್ದೆ-ಕಾನೂನಿನ ಕಟ್ಟಪಾಡುಗಳು ಮತ್ತು ಅವುಗಳನ್ನು ಇಚ್ಛಾಶಕ್ತಿಯಿಂದ ಅನುಷ್ಠಾನಗೊಳಿಸುವ ಹೊಣೆಗಾರಿಕೆಯೂ ಅತ್ಯಗತ್ಯ.

 ಈ ಹಿನ್ನಲೆಯಲ್ಲಿ ಸರ್ಕಾರ ಮರ್ಯಾದಾಗೇಡು  ಹೆಸರಿನಲ್ಲಿ ನಡೆಯುವ ಜಾತಿಯ ಕ್ರೌರ್ಯಗಳನ್ನು ಹತ್ತಿಕ್ಕಲು ಪ್ರತ್ಯೇಕವಾಗಿ ಕಠಿಣ ಕಾಯ್ದೆ ರೂಪಿಸಲು ತಾವು ಮುಂದಾಗಬೇಕು. ಈ ಮೂಲಕ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಲಿ.

 ಈ ಉಗ್ರ ಶಿಕ್ಷೆಯ ಕಾಯ್ದೆಗೆ  “ಮಾನ್ಯಾ ಕಾಯ್ದೆ” ಎಂದು ಹೆಸರಿಡುವ ಮೂಲಕ  ಇದುವರೆಗೂ ಈ ರಾಜ್ಯದಲ್ಲಿ ಮರ್ಯಾದಾಗೇಡು ಹತ್ಯೆಗೆ ಬಲಿಯಾದ ಜೀವಗಳನ್ನು ಪ್ರತಿನಿಧಿಸುವಂತಾಗಲಿ. ಈ ನಿಟ್ಟಿನಲ್ಲಿ ತಾವು ದಿಟ್ಟ ಕ್ರಮವನ್ನು ಕೈಗೊಳ್ಳುತ್ತೀರಿ ಎಂಬ ವಿಶ್ವಾಸದಿಂದ  ಮನವಿ ಮಾಡಿಕೊಳ್ಳುತ್ತಿದ್ದೇವೆ.

(ಅಭಿಯಾನಕ್ಕೆ ಸಹಮತಿ ವ್ಯಕ್ತಪಡಿಸಿದವರ  ಹೆಸರುಗಳನ್ನು ಮನವಿ ಪತ್ರದಲ್ಲಿ ದಾಖಲಿಸಲಾಗಿದೆ.)

More articles

Latest article