ಆರೆಸ್ಸೆಸ್ ಸಂಘದ ಸರಸಂಚಾಲಕರಾದ ಮೋಹನ್ ಭಾಗವತರು ನಿಜವನ್ನೇ ಹೇಳಿದ್ದಾರೆ. ಅವರ ಸಂಘದ ಹಿಂದೂ ರಾಷ್ಟ್ರಕ್ಕೆ “ಸಂವಿಧಾನದ ಅನುಮೋದನೆ ಅನಗತ್ಯ” ಎಂದು ಕೋಲ್ಕತ್ತಾದ ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಡಿಸೆಂಬರ್ 21 ರಂದು ಹೇಳುವ ಮೂಲಕ ಸಂಘದ ಒಡಲಾಳದ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಸನಾತನಿ ಭಾಗವತರು ನುಡಿದ ಮಾತುಗಳ ಸಾರಾಂಶ ಏನೆಂದರೆ..
* ಭಾರತವು ಹಿಂದೂ ರಾಷ್ಟ್ರ ಎಂಬುದು ಸತ್ಯ..
* ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆಂಬುದಕ್ಕೆ ಹೇಗೆ ಅನುಮೋದನೆ ಅಗತ್ಯವಿಲ್ಲವೋ ಹಾಗೆಯೇ ಭಾರತ ಹಿಂದೂರಾಷ್ಟ್ರ ಎಂದು ಹೇಳುವುದಕ್ಕೂ ಸಂವಿಧಾನದ ಅನುಮತಿ ಬೇಕಿಲ್ಲ.
* ಭಾರತದಲ್ಲಿ ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರೆಗೂ ಭಾರತವು ಹಿಂದೂ ರಾಷ್ಟ್ರವಾಗಿಯೇ ಉಳಿಯಲಿದೆ.
* ಹಿಂದುಸ್ಥಾನವು ಹಿಂದೂ ರಾಷ್ಟ್ರ.
* ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವ, ಭಾರತೀಯ ಸಂಸ್ಕೃತಿಯನ್ನು ಗೌರವಿಸುವ, ಭಾರತೀಯ ಪೂರ್ವಜರ ವೈಭವವನ್ನು ಸ್ಮರಿಸುವ ಒಬ್ಬ ವ್ಯಕ್ತಿ ಈ ಭೂಮಿಯಲ್ಲಿ ಜೀವಂತ ಇರುವವರೆಗೂ ಭಾರತವು ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ. ಇದೇ ಸಂಘದ ಸಿದ್ದಾಂತ.
* ಸಂಸತ್ತು ತಿದ್ದುಪಡಿ ಮಾಡಿ ಹಿಂದೂರಾಷ್ಟ್ರ ಪದವನ್ನು ಸೇರಿಸಲಿ ಬಿಡಲಿ ಅದಕ್ಕೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ನಾವು ಹಿಂದೂಗಳು ಮತ್ತು ನಮ್ಮದು ಹಿಂದೂ ರಾಷ್ಟ್ರ ಎನ್ನುವುದು ಸತ್ಯ.
* ಸಂಘವು ಹಿಂದೂಗಳನ್ನು ಸಂಘಟಿಸುತ್ತದೆ ಮತ್ತು ಹಿಂದೂಗಳ ರಕ್ಷಣೆಯನ್ನು ಪ್ರತಿಪಾದಿಸುತ್ತದೆ.
* ನಾವು ಕಟ್ಟಾ ರಾಷ್ಟ್ರೀಯವಾದಿಗಳು ಎಂಬುದು ಜನರಿಗೆ ಅರ್ಥವಾಗಿದೆ, ಆದರೆ ನಾವು ಮುಸ್ಲಿಂ ವಿರೋಧಿಗಳಲ್ಲ.
* ಸಂಘದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಜನರು ಶಾಖೆಗಳಿಗೆ ಬೇಟಿ ನೀಡಿ ಕಾರ್ಯವೈಖರಿಯನ್ನು ನೋಡಬೇಕು.

ಭಾಗವತರ ಈ ಮಾತುಗಳೆಲ್ಲವೂ ಆರೆಸ್ಸೆಸ್ ಎನ್ನುವ ಮನುವಾದಿ ರಾಷ್ಟ್ರೀಯವಾದಿ ಸಂಘದ ಸಿದ್ಧಾಂತಗಳೇ ಆಗಿವೆ. ಇಷ್ಟು ವರ್ಷಗಳ ಕಾಲ ತರೆಮರೆಯಲ್ಲಿದ್ದು ತಮ್ಮ ಈ ಸನಾತನಿ ಸಿದ್ಧಾಂತವನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತಿದ್ದ ಆರೆಸ್ಸೆಸ್ ಈಗ ಭಾಗವತರ ಬಾಯಲ್ಲಿ ಬಹಿರಂಗವಾಗಿಯೇ ತನ್ನ ಉದ್ದೇಶವನ್ನು ಸ್ಪಷ್ಟ ಪಡಿಸುತ್ತಿದೆ. ಯಾಕೆಂದರೆ ಈ ಸಂಘಕ್ಕೆ ಈಗ ನೂರು ವರ್ಷ ತುಂಬಿದೆ, ಈ ದೇಶವನ್ನು ಹಿಂದೂ ಹೆಸರಿನ ಹಿಂದುತ್ವವಾದಿ ರಾಷ್ಟ್ರವನ್ನಾಗಿ ಆದಷ್ಟು ಬೇಗ ಮಾಡುವ ಆತುರದಲ್ಲಿದೆ. ಹೀಗಾಗಿ ಸಂಘದ ಹಿಡನ್ ಅಜಂಡಾ ಸತ್ಯಗಳು ಬಹಿರಂಗವಾಗುತ್ತಿವೆ..
ಅರೆಸ್ಸೆಸ್ ದೃಷ್ಟಿಕೋನದಲ್ಲಿ ಭಾಗವತರು ಹೇಳಿದ್ದರಲ್ಲಿ ಯಾವುದೇ ಅತಿಶಯೋಕ್ತಿ ಏನಿಲ್ಲ. ಆರೆಸ್ಸೆಸ್ ಎನ್ನುವ ರಾಷ್ಟ್ರೀಯವಾದಿ ಸಂಘ ಮೊದಲಿನಿಂದಲೂ ಸಂವಿಧಾನವನ್ನು ಮಾನ್ಯ ಮಾಡದೇ ವಿರೋಧಿಸಿಕೊಂಡೇ ಬಂದಿದೆ. ಅದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದಾಗಿದೆ.
* 1949 ರ ನವೆಂಬರ್ 30 ರಂದು ಆರೆಸ್ಸೆಸ್ ಮುಖವಾಣಿ ಆರ್ಗನೈಜರ್ ಪತ್ರಿಕೆಯಲ್ಲಿ “ಸಂವಿಧಾನದಲ್ಲಿ ಪ್ರಾಚೀನ ಭಾರತದ ಅನನ್ಯ ಸಂವಿಧಾನಾತ್ಮಕ ಅಭಿವೃದ್ಧಿಯ ಉಲ್ಲೇಖವಿಲ್ಲ. ಮನುಸ್ಮೃತಿಯ ನಿಯಮಗಳು ಇಂದಿಗೂ ವಿಶ್ವದ ಮೆಚ್ಚುಗೆಗೆ ಪಾತ್ರವಾಗಿವೆ” ಎಂದು ಟೀಕಿಸಲಾಗಿತ್ತು.
* ಆರೆಸ್ಸೆಸ್ ಸಂಘದ ಎರಡನೇ ಸರಸಂಘಚಾಲಕ್ ಎಂ.ಎಸ್.ಗೋಳ್ವಾಲ್ಕರ್ ಅವರು ತಮ್ಮ “ಬಂಚ್ ಆಫ್ ಥಾಟ್ಸ್” ಪುಸ್ತಕದಲ್ಲಿ ಸಂವಿಧಾನವನ್ನು “ಪಾಶ್ಚಿಮಾತ್ಯ ದೇಶಗಳ ಸಂವಿಧಾನಗಳ ಮಿಶ್ರಣ, ಇದರಲ್ಲಿ ಭಾರತೀಯತೆ ಏನೂ ಇಲ್ಲ, ಮನು ಮಾನವಜಾತಿಯ ಮೊದಲ ಹಾಗೂ ಶ್ರೇಷ್ಠ ಕಾನೂನುದಾತ” ಎಂದು ಬರೆದು ಅಂಬೇಡ್ಕರರ ಸಂವಿಧಾನದ ಬಗ್ಗೆ ತಮ್ಮ ಅಸಹನೆಯನ್ನು ತೋರಿದ್ದಾರೆ.
* ಭಾರತದ ಸಂವಿಧಾನವು ಭಾರತೀಯ ಸಂಸ್ಕೃತಿ ಸಂಪ್ರದಾಯ ಮತ್ತು ಸನಾತನ ಧರ್ಮದ ಮೂಲಗಳಾದ ಮನುಸ್ಮೃತಿಯನ್ನು ಆಧಾರವಾಗಿಟ್ಟುಕೊಳ್ಳದೇ ಇರುವುದನ್ನು ಆರೆಸ್ಸೆಸ್ ವಿರೋಧಿಸುತ್ತಾ ಬಂದಿದೆ.
* ಸಂವಿಧಾನದಲ್ಲಿರುವ ಸಮಾನತೆ, ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯದ ತತ್ವಗಳು ಮನುಸ್ಮೃತಿಯ ವರ್ಣವ್ಯವಸ್ಥೆಗೆ ವಿರುದ್ಧವೆಂದೇ ಆರೆಸ್ಸೆಸ್ ಪರಿಗಣಿಸಿದೆ.
* ಸಂವಿಧಾನದ ಮೂಲಕ ಹಿಂದೂ ಮಹಿಳೆಯರಿಗೆ ಆಸ್ತಿ ಹಕ್ಕು ನೀಡುವ ‘ಹಿಂದೂ ಕೋಡ್ ಬಿಲ್’ ಗೆ ಆರೆಸ್ಸೆಸ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು ಇದು ಹಿಂದೂ ಸಂಪ್ರದಾಯಕ್ಕೆ ವಿರುದ್ಧ ಎಂದು ಪ್ರತಿಪಾದಿಸಿತ್ತು.
* ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಸಂವಿಧಾನ ಬದಲಾಯಿಸಲು ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಕ್ಕೆ ಇದೇ ಆರೆಸ್ಸೆಸ್ ಮತ್ತು ಬಿಜೆಪಿ ಮೌನ ಸಮ್ಮತಿಯನ್ನು ವ್ಯಕ್ತಪಡಿಸಿದ್ದವು.
* ಸಂಘಿಗಳು ಸಂವಿಧಾನದ ಪ್ರತಿಯನ್ನು ಸಾರ್ವಜನಿಕವಾಗಿ ಸುಟ್ಟಾಗಲೂ ಈ ಸನಾತನಿಗಳು ವಿರೋಧಿಸಿರಲಿಲ್ಲ.
ಹೀಗೆ ಅನೇಕಾನೇಕ ಉದಾಹರಣೆಗಳನ್ನು ಕೂಲಂಕಷವಾಗಿ ಗಮನಿಸಿದಾಗ ಎಂದೂ ಸಹ ಈ ಆರೆಸ್ಸೆಸ್ ನವರು ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳದೇ ವಿರೋಧಿಸುತ್ತಾ ಬಂದಿರುವುದು ಸ್ಪಷ್ಟವಾಗುತ್ತದೆ.

ಈ ಆರೆಸ್ಸೆಸ್ ಸಂಘಟನೆಗೆ ಸಂವಿಧಾನದ ಶಕ್ತಿ ಗೊತ್ತಾಗಿದ್ದು ಈ ಸಂಘಟನೆಯನ್ನು ನಿಷೇಧಿಸಿದಾಗ. 1949 ರಲ್ಲಿ ಸನಾತನಿಗಳ ಸಂಚಿನ ಭಾಗವಾಗಿ ಯಾವಾಗ ಗಾಂಧೀಜಿಯವರ ಹತ್ಯೆ ಆಯಿತೋ ಆಗ ಆರೆಸ್ಸೆಸ್ ಸಂಘವನ್ನು ನಿಷೇಧಿಸಲಾಯ್ತು. ಆಗಲೇ ಮೊದಲ ಬಾರಿಗೆ ಗೋಳ್ವಾಲ್ಕರ್ ರವರು ನಿಷೇಧ ತೆರುವು ಗೊಳಿಸಲು “ಸಂವಿಧಾನಕ್ಕೆ ನಿಷ್ಠೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವ” ನೀಡುತ್ತೇವೆಂದು ಭರವಸೆ ಕೊಟ್ಟು ನಿಷೇಧದ ಬೀಸೋ ದೊಣ್ಣೆ ಯಿಂದ ಸಂಘವನ್ನು ರಕ್ಷಿಸಿಕೊಂಡರು. ಆ ನಂತರ ಆರೆಸ್ಸೆಸ್ ಅನಧಿಕೃತವಾಗಿ ಸಂವಿಧಾನವನ್ನು ಒಪ್ಪಿಕೊಂಡಿದೆ ಎಂದು ಹೇಳಿಕೊಳ್ಳುತ್ತಾ ಬಂದಿದೆಯಾದರೂ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ನಂತರ ತನ್ನ ಸಂವಿಧಾನ ವಿರೋಧಿತನವನ್ನು ತೋರಿಸುತ್ತಲೇ ಬಂದಿದೆ. ಸಂವಿಧಾನದ ಪೀಠಿಕೆಯಲ್ಲಿರುವ ಸೆಕ್ಯುಲರ್ ಮತ್ತು ಸೋಷಲಿಸ್ಟ್ ಪದಗಳನ್ನು ವಿರೋಧಿಸುತ್ತಲೇ ಬಂದಿದೆ. ಯಾಕೆಂದರೆ ಈ ಪದಗಳು ಸಂಘದ ಮನುವಾದಿ ಹಿಂದೂರಾಷ್ಟ್ರ ಸ್ಥಾಪನೆಗೆ ಅಡ್ಡಿಯಾಗಿವೆ.
ಈಗ ಆರೆಸ್ಸೆಸ್ ಶತಕದ ಗಡಿ ದಾಟಿರುವಾಗ ಸಂವಿಧಾನ ವಿರೋಧಿ ಹೇಳಿಕೆಗಳು ಭಾಗವತರ ಬಾಯಲ್ಲಿ ಬರುತ್ತಿವೆ. ಸಂವಿಧಾನದ ಮೂಲ ತತ್ವಗಳನ್ನೇ ಪ್ರಶ್ನಿಸಲಾಗುತ್ತಿದೆ. ಅದಕ್ಕೆ ರಾಷ್ಟ್ರೀಯತೆ, ರಾಷ್ಟ್ರೀಯವಾದ, ಹಿಂದೂ ರಾಷ್ಟ್ರ ಎಂದೆಲ್ಲಾ ಭಾವನಾತ್ಮಕ ಲೇಪನ ಮಾಡಲಾಗುತ್ತಿದೆ.
* ಯಾವ ಸರಕಾರೇತರ ಸಂಘ ಇವತ್ತಿನವರೆಗೂ ಸಂವಿಧಾನದ ಅಡಿಯಲ್ಲಿ ನೋಂದಣಿಯಾಗದೇ ಕಾರ್ಯ ನಿರ್ವಹಿಸುತ್ತಿದೆಯೋ ಅದೇ ಸಂವಿಧಾನ ವಿರೋಧಿ ಕೃತ್ಯವಾಗಿದೆ.
* ಯಾವ ಸಂಘಟನೆ ಕೋಟ್ಯಂತರ ಹಣವನ್ನು ಸಂಗ್ರಹಿಸಿ ಸರಕಾರಕ್ಕೆ ತೆರಿಗೆ ಕಟ್ಟದೇ ಲೆಕ್ಕಪತ್ರಗಳನ್ನು ಬಹಿರಂಗಪಡಿಸದೇ ಕಾರ್ಯನಿರ್ವಹಿಸುತ್ತದೋ ಅದು ಕಾನೂನು ವಿರೋಧಿತನವಾಗಿದೆ.
* ಎಲ್ಲಾ ಜಾತಿ ಧರ್ಮಗಳಿರುವ ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತವನ್ನು ಹಿಂದೂರಾಷ್ಟ್ರ ಎಂದು ಒಂದು ಧರ್ಮದ ದೇಶವಾಗಿಸುವ ಹುನ್ನಾರವೇ ದೇಶದ್ರೋಹವಾಗಿದೆ.
ಹೀಗೆ ಸಂವಿಧಾನ ವಿರೋಧಿ, ದೇಶದ್ರೋಹಿ ಮನುವಾದಿ ಸಂಘಟನೆ ಈ ದೇಶದ ಸಂವಿಧಾನಕ್ಕೆ ಅಪಾಯಕಾರಿಯಾಗಿದೆ. ಹಿಂದೂ ಹೆಸರಲ್ಲಿ ಭಾವನಾತ್ಮಕವಾಗಿ ಜನರನ್ನು ಸಂವಿಧಾನದ ವಿರುದ್ಧ ಎತ್ತಿಕಟ್ಟುವ ಸಂಘಟನಾತ್ಮಕ ಚಟುವಟಿಕೆಗಳು ರಾಷ್ಟ್ರದ್ರೋಹದ ಸಂಚುಗಳಾಗಿವೆ.
ಭಾಗವತರು ಹೇಳುತ್ತಾರೆ ಸೂರ್ಯ ಉದಯಿಸಲು ಯಾರ ಅನುಮೋದನೆ ಬೇಕಿಲ್ಲವೋ ಹಾಗೆ ಹಿಂದೂ ರಾಷ್ಟ್ರ ಎನ್ನುವುದಕ್ಕೆ ಸಂವಿಧಾನದ ಅನುಮತಿ ಬೇಕಿಲ್ಲ ಎಂದು. ಈ ಒಂದು ಮಾತಿಗಾಗಿ ಈ ಸಂಘವನ್ನು ಮತ್ತೆ ನಿಷೇಧಿಸಬಹುದಾಗಿದೆ. ಯಾಕೆಂದರೆ ಭಾರತ ಎಂದೂ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರವಲ್ಲ. ಇಷ್ಟಕ್ಕೂ ಹಿಂದೂ ಎನ್ನುವುದೂ ಧರ್ಮವೇ ಅಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಹಿಂದೂ ಎನ್ನುವುದು ಧರ್ಮವೇ ಅಲ್ಲ ಎಂದಾಗ ಹಿಂದೂರಾಷ್ಟ್ರ ಎನ್ನುವುದೇ ಅಸಮಂಜಸ.
ಈ ಆರೆಸ್ಸೆಸ್ ಎಂಬುದರ ಅಂತಿಮ ಉದ್ದೇಶ ಹಿಂದುತ್ವ ರಾಷ್ಟ್ರದ ಸ್ಥಾಪನೆ ಮಾಡುವುದು ಹಾಗೂ ಮನುಸ್ಮೃತಿಯನ್ನು ಸಂವಿಧಾನವನ್ನಾಗಿ ಜಾರಿಗೆ ತರುವುದು. ಮತ್ತೆ ಅಸಮಾನತೆ ಆಧಾರಿತ ಜಾತಿವ್ಯವಸ್ಥೆಯ ಸನಾತನ ಚಾತುರ್ವರ್ಣವನ್ನು ಅನುಷ್ಠಾನಗೊಳಿಸುವುದು. ವೈದಿಕಶಾಹಿ ಆಡಳಿತವನ್ನು ಅಸ್ತಿತ್ವಕ್ಕೆ ತರುವುದು ಅಲ್ಪಸಂಖ್ಯಾತರಾದ ವೈದಿಕರಿಂದ ಅಸಾಧ್ಯ. ಅದಕ್ಕೆ ಹಿಂದುತ್ವದ ಬದಲಾಗಿ ಹಿಂದೂ ಹೆಸರಿನಲ್ಲಿ ಎಲ್ಲಾ ಹಿಂದುಳಿದ ಜಾತಿ ಜನಾಂಗದವರ ಬೆಂಬಲವನ್ನು ಪಡೆದುಕೊಳ್ಳಲು ಹಿಂದೂರಾಷ್ಟ್ರ ಎನ್ನುವ ರಾಷ್ಟ್ರೀಯವಾದಿ ಭ್ರಮೆಯನ್ನು ಆರೆಸ್ಸೆಸ್ ಪ್ರಚಾರ ಮಾಡುತ್ತಿದೆ.

ಭಾರತೀಯ ಸಂಸ್ಕೃತಿಯನ್ನು ಗೌರವಿಸುವವರೆಗೂ ಭಾರತ ಹಿಂದೂ ರಾಷ್ಟ್ರವಾಗಿ ಉಳಿಯುತ್ತದೆ ಎಂದು ಭಾಗವತರು ಹೇಳುತ್ತಾರೆ. ಹಾಗಾದರೆ ಈ ಭಾರತೀಯ ಸಂಸ್ಕೃತಿ ಎಂದರೇನು?. ಈ ಮನುವಾದಿಗಳು ಮಾಡಿದ ಶ್ರೇಣಿಕೃತ ಜಾತಿ ವ್ಯವಸ್ಥೆಯಾ? ಅಸಮಾನತೆಯೇ ಪ್ರಧಾನವಾದ ಚಾತುರ್ವರ್ಣ್ಯದ ತಾರತಮ್ಯವಾ? ಸನಾತನ ಕಾಲದಿಂದ ಆಚರಿಸಿಕೊಂಡು ಬಂದ ಅಸ್ಪೃಶ್ಯತೆಯಾ?, ಮಹಿಳೆಯರ ಶೋಷಣೆಯಾ? ಇದೆಲ್ಲವೂ ಸೇರಿದ್ದು ಮನುವಾದಿ ಭಾರತೀಯ ಸಂಸ್ಕೃತಿಯಾಗಿದೆ. ಇಂತಹ ಸಂಸ್ಕೃತಿಯ ಸ್ಥಾಪನೆಗೆ ಆರೆಸ್ಸೆಸ್ ಸಂಘ ಪ್ರಯತ್ನಿಸುತ್ತಿದೆ. ಈ ಸನಾತನ ಸಂಸ್ಕೃತಿಯ ಜಾರಿಗೆ ಹಿಂದೂರಾಷ್ಟ್ರ ಬೇಕೆಂದು ಪ್ರತಿಪಾದಿಸುತ್ತಿದೆ.
“ಭಾರತೀಯ ಪೂರ್ವಜರ ವೈಭವವನ್ನು ಸ್ಮರಿಸುವ ವ್ಯಕ್ತಿ ಜೀವಂತ ಇರುವವರೆಗೂ ಭಾರತ ಹಿಂದೂರಾಷ್ಟ್ರವಾಗಿರುತ್ತದೆ” ಎಂದು ಭಾಗವತರು ಭಾವನಾತ್ಮಕ ಕಾರ್ಡನ್ನು ಉರುಳಿಸುತ್ತಿದ್ದಾರೆ. ಹಾಗಾದರೆ ಯಾವ ಭಾರತೀಯ ಪೂರ್ವಜರನ್ನು ಸ್ಮರಿಸಿಕೊಳ್ಳಬೇಕಿದೆ. ಬೌದ್ಧ ಧರ್ಮೀಯರನ್ನು ಹಿಂಸಿಸಿ ಆ ಧರ್ಮವನ್ನೇ ಗಡಿಪಾರು ಮಾಡಿದ ಶುಂಗ ರಾಜನನ್ನು ಸ್ಮರಿಸಬೇಕಾ? ವೈಚಾರಿಕತೆಯನ್ನು ಪ್ರತಿಪಾದಿಸಿ ಮೌಢ್ಯಾರಾಧನೆಯನ್ನು ವಿರೋಧಿಸಿದ ಚಾರ್ವಾಕರನ್ನು ಹೇಳ ಹೆಸರಿಲ್ಲದಂತೆ ಸಂಹರಿಸಿದ ಶಂಕರಾಚಾರ್ಯರನ್ನು ಸ್ಮರಿಸಿಕೊಳ್ಳಬೇಕಾ? ವೈದಿಕರ ಜೀವವಿರೋಧಿತನ ಮತ್ತು ದೇವರ ಹೆಸರಲ್ಲಿ ಮಾಡುವ ಮೌಢ್ಯವನ್ನು ವಿರೋಧಿಸಿ ದುಡಿಯುವ ವರ್ಗವನ್ನು ಸಂಘಟಿಸಿ ಸಮಾನತಾ ಧರ್ಮವನ್ನು ಬೋಧಿಸಿದ ಬಸವಣ್ಣನವರನ್ನೇ ಹತ್ಯೆ ಮಾಡಿ ಶಿವಶರಣರನ್ನೇ ಹಿಂಸಿಸಿ ಕೊಲ್ಲುವಂತೆ ಮಾಡಿದ ಕಲ್ಯಾಣದ ಪುರೋಹಿತಶಾಹಿಯನ್ನು ಸ್ಮರಿಸೋಣವೇ? ಇಂತಹ ಭಾರತೀಯ ವೈದಿಕಶಾಹಿಗಳ ಸಂಸ್ಕೃತಿ ಮತ್ತೆ ಮರುಕಳಿಸುವುದನ್ನು ನೆನೆಪಿಸಿಕೊಂಡರೇ ನರಕ ದರ್ಶನವಾದಂತಾಗುತ್ತದೆ. ಇನ್ನು ಈ ಭಾಗವತರು ಹೇಳಿದಂತೆ ಮನುವಾದಿ ಪ್ರಣೀತ ಹಿಂದೂರಾಷ್ಟ್ರ ಸ್ಥಾಪನೆಯಾದರೆ ಈ ದೇಶ ಸಾವಿರಾರು ವರ್ಷಗಳ ಕಾಲ ಹಿಂದಕ್ಕೆ ಹೋಗಿ ಚಾತುರ್ವರ್ಣ್ಯ ವ್ಯವಸ್ಥೆಯಲ್ಲಿ ಈ ದೇಶದ ಜನತೆ ಮತ್ತೆ ನೂರಾರು ವರ್ಷಗಳ ಕಾಲ ನರಳಬೇಕಾಗುತ್ತದೆ.
ಹೀಗಾಗಿ ಈ ದೇಶದ ಜನತೆ ಈ ಸಂಘಿಗಳ ಹುನ್ನಾರಗಳನ್ನು ಬೇಗ ಅರ್ಥಮಾಡಿಕೊಳ್ಳಬೇಕಿದೆ. ಎಲ್ಲಾ ಜಾತಿ ಧರ್ಮ ಜನಾಂಗದವರಿಗೂ ಸಮಾನತೆಯನ್ನು ಕೊಟ್ಟಿರುವ ಅಂಬೇಡ್ಕರ್ ವಿರಚಿತ ಭಾರತದ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಸೇರಿಸಲು ಕಾಂಗ್ರೆಸ್ ‘ಸಂಚು’ ರೂಪಿಸಿತ್ತೇ?


