ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಸಂಬಂಧಟ್ಟಂತೆ ಒತ್ತಡಕ್ಕೆ ಹಲವು ನೌಕರರು ಮೃತಪಟ್ಟಿದ್ದಾರೆ. ಈ ದುರಂತ ಚುನಾವಣಾ ಆಯೋಗದ ಮುಖ್ಯಸ್ಥರ ಕೈಗಳಿಗೆ ರಕ್ತದ ಕಲೆ ಅಂಟಿಸಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಟೀಕಿಸಿದೆ.
ಈ ವಿಷಯ ಕುರಿತು ಚರ್ಚಿಸಲು ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಯಾನ್ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗವು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ ) ಜ್ಞಾನೇಶ್ ಕುಮಾರ್ ಅವರನ್ನು ಭೇಟಿ ಮಾಡಿತ್ತು.
ನಂತರ ಮಾತನಾಡಿದ ಒಬ್ರಯಾನ್, ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿಗಳು ಸೇರಿದಂತೆ 40 ಮಂದಿ ಬಿಎಲ್‌ಒಗಳು ಅಸುನೀಗಿದ್ದಾರೆ. ಈ ಸಂಬಂಧ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಐದು ಪ್ರಶ್ನೆಗಳನ್ನು ಕೇಳಿದ್ದೆವು. ಆದರೆ ಅವರು ಯಾವುದೇ ಪ್ರಶ್ನೆಗೂ ಉತ್ತರ ಕೊಡಲಿಲ್ಲ. ನಿಮ್ಮ ಕೈಗಳಿಗೆ ರಕ್ತದ ಕಲೆ ಅಂಟಿದೆ ಎಂದೇ ಅವರಿಗೆ ಹೇಳಿದ್ದೇವೆ ಎಂದರು.
ಎಸ್‌ಐಆರ್ ಅನ್ನು ಟಿಎಂಸಿ ವಿರೋಧಿಸುತ್ತಿಲ್ಲ. ಆದರೆ ಮುಖ್ಯ ಆಯುಕ್ತರು ಮತ್ತು ಚುನಾವಣಾ ಆಯೋಗವು ಕೈಗೊಂಡ ವಿಧಾನವನ್ನು ಮಾತ್ರ ನಾವು ವಿರೋಧಿಸುತ್ತಿದ್ದೇವೆ ಎಂದು ಒಬ್ರಯಾನ್ ಸ್ಪಷ್ಟಪಡಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮೃತಪಟ್ಟ 40 ಮಂದಿಯ ಪಟ್ಟಿಯನ್ನು ಆಯುಕ್ತರಿಗೆ ನೀಡಲಾಗಿದೆ. ಆದರೆ ಆಯೋಗವು ಈ ಆರೋಪಗಳನ್ನು ತಳ್ಳಿಹಾಕಿದೆ ಎಂದು ಪಕ್ಷದ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ ಹೇಳಿದ್ದಾರೆ. ಪಶ್ಚಿಮ ಬಂಗಾಳ ಸೇರಿದಂತೆ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ.

