ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಊಹಾಪೋಹ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಎಲ್ಲ 140 ಶಾಸಕರೂ ನನ್ನವರೇ ಆಗಿದ್ದು, ಗುಂಪುಗಾರಿಕೆ ಮಾಡುವುದು ನನ್ನ ರಕ್ತದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದ್ದು, ಒಂದು ಗುಂಪು ದೆಹಲಿಗೆ ಭೇಟಿ ನೀಡಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಹಿನ್ನಲೆಯಲ್ಲಿ ಅವರು ತಮ್ಮ’ಎಕ್ಸ್’ನಲ್ಲಿ ಖಾತೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಗೆ ನಿರ್ಧರಿಸಿದ್ದಾರೆ. ಪಕ್ಷದ ಎಲ್ಲ ಶಾಸಕರೂ ಸಚಿವ ಸ್ಥಾನಕ್ಕೆ ಅರ್ಹರೇ ಆಗಿದ್ದಾರೆ. ಹಾಗಾಗಿ ಅವರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುವುದು ತಪ್ಪೇನಲ್ಲ. ಅದು ಅವರ ಹಕ್ಕು, ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮುಂದಿನ ಬಜೆಟ್ ಗಳನ್ನು ತಾನೇ ಮಂಡಿಸುವುದಾಗಿ ಹೇಳುವ ಮೂಲಕ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರಿಗೆ ನಾನು ಶುಭ ಕೋರುತ್ತೇನೆ. ನಾವೆಲ್ಲರೂ ಅವರೊಂದಿಗೆ ಕೆಲಸ ಮಾಡಲು ಸಿದ್ಧರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

