ಅದೊಂದು ದೊಡ್ಡ ಕಥೆ ಆತ್ಮಕಥನ ಸರಣಿ ಭಾಗ- 11 ನಾನು ಶಾಲೆ ಸೇರಿದೆ

Most read

ಅದು 1967 ರ ಮೇ 23. ನಾನು ಶಾಲೆ ಸೇರಿದೆ. ಆಗೆಲ್ಲ ಬೇಸಗೆ ರಜೆ ಕಳೆದು ಶಾಲೆ ಶುರುವಾಗುತ್ತಿದ್ದುದು ಮೇ 23 ರಂದು. ಅದಾಗಲೇ ಒಂದೆರಡು ಮಳೆಯೂ ಬಿದ್ದಿರುತ್ತಿತ್ತು. ಮೇ ಆರಂಭದಲ್ಲಿಯೇ ಅಪ್ಪ ಶಂಕರನಾರಾಯಣದ ಸರಕಾರಿ ಶಾಲೆಗೆ ಹೋಗಿ ನನ್ನ ಹೆಸರನ್ನು ದಾಖಲಿಸಿ ಬಂದಿದ್ದರು.

ಶಂಕ್ರಾಣದ ಸರಕಾರಿ ಶಾಲೆಗೆ ಆಗ ಸರಿಯಾದ ಜಾಗ ಇರಲಿಲ್ಲ. ಹಾಗಾಗಿ ಪೇಟೆಯಿಂದ ಈಶಾನ್ಯಕ್ಕೆ ಸೌಡದ ದಾರಿಯ ಬದಿಯ ಕಟ್ಟದಲ್ಲಿ ಒಂದರಿಂದ ಮೂರನೆಯ ತರಗತಿಯ ವರೆಗೆ ಇದ್ದರೆ, ನಾಲ್ಕರಿಂದ ಏಳರ ತನಕದ ತರಗತಿಗಳು ನಡೆಯುತ್ತಿದ್ದುದು ಪೇಟೆ ನಡುವಿನ ಕಟ್ಟಡದಲ್ಲಿ. ಆ ಶಾಲೆಗೆ ಸರಿಯಾದ ಆಟದ ಮೈದಾನವೂ ಇರಲಿಲ್ಲ. ಒಂದು ವಾಲಿಬಾಲ್‌ ಕೋರ್ಟ್‌ ನಷ್ಟೇ ವಿಸ್ತಾರವಾದ ಮೈದಾನ ಇದ್ದುದು. ಇಲ್ಲಿ ಕಬಡ್ಡಿ ಆಡಿ ಕೆಳಗಿನ ಮುಖ್ಯ ರಸ್ತೆಗೆ ಬಿದ್ದು ತಲೆ ಒಡೆದುಕೊಂಡವರು ಅನೇಕರು (ಅದೃಷ್ಟಕ್ಕೆ ಶಾಲೆಗೆ ತಾಗಿಕೊಂಡಂತೆಯೇ ಸರಕಾರಿ ಆಸ್ಪತ್ರೆ ಇತ್ತು). ಖೋ ಖೋ, ಕ್ರಿಕೆಟ್‌ ಇತ್ಯಾದಿ ಆಡಬೇಕಿದ್ದರೆ ಪಕ್ಕದ ಕಲ್ಲುಕುಟಿಗ ದೈವಸ್ಥಾನದ ಗದ್ದೆಗೆ ಹೋಗಬೇಕು.

ನನ್ನ ಹಿರಿಯ ಅಣ್ಣ ಸುಬ್ರಹ್ಮಣ್ಯ ನನ್ನನ್ನು ಮೊದಲ ದಿನ ಶಾಲೆಗೆ ಕರೆದುಕೊಂಡು ಹೋದ. ಕುತೂಹಲ, ಭಯ, ಖುಷಿ ಇತ್ಯಾದಿ ಮಿಶ್ರ ಭಾವನೆಗಳೊಂದಿಗೆ ಶಾಲೆಯತ್ತ ನಡೆದೆ. ಹೆಗಲಿಗೊಂದು ಚೀಲ, ಅದರಲ್ಲಿ ಸ್ಲೇಟು, ಬಳಪದ ಕಡ್ಡಿ. ಪುಸ್ತಕ ಇನ್ನೂ ಕೈ ಸೇರಿರಲಿಲ್ಲ. ಶಾಲೆಗೆಂದು ಹೊಸ ಉಡುಪು ಸಿಕ್ಕಿತ್ತು. ಉಡುಪು ಇದ್ದುದೇ ಎರಡು ಜತೆ (ಮನೆಯಲ್ಲಿ ಇದ್ದುದು ಸಾಮಾನ್ಯವಾಗಿ ಲಂಗೋಟಿಯಲ್ಲಿ). ಕಾಲಿಗೆ ಚಪ್ಪಲಿ ಇರಲಿಲ್ಲ. ಚಪ್ಪಲಿ ಆ ಕಾಲದಲ್ಲಿ ದೊಡ್ಡ ಲಕ್ಷುರಿ. ಮಳೆಗಾಲದಲ್ಲಿ ಒದ್ದೆಯಾಗದಂತೆ ಈಗಿನ ಬಟ್ಟೆ ಕೊಡೆ ಇರಲಿಲ್ಲ. ಇದ್ದುದು ತಾಳೆ ಓಲಿಯಿಂದ ಮಾಡಲಾದ ವಾಮನ ಛತ್ರಿ. ಮಳೆ ಬರುವಾಗ ತಲೆಯ ಮೇಲೆ ಹಿಡಿದುಕೊಳ್ಳುತ್ತಿದ್ದ ಛತ್ರಿಯನ್ನು ಮಳೆ ಇಲ್ಲದಾಗ ರಸ್ತೆಯ ಮೇಲೆ ಉರುಳಿಸುತ್ತಾ ಆಟವಾಡುತ್ತಾ ಹೋಗುತ್ತಿದ್ದೆವು. ಹಾಗಾಗಿ ವರುಷಕ್ಕೆ ಒಂದು ಛತ್ರಿ ಸಾಲುತ್ತಿರಲಿಲ್ಲ.

ಶಾಲೆಯನ್ನು ನೋಡುತ್ತಿದ್ದುದು ಮೊದಲ ಬಾರಿ. ಮೇಸ್ಟ್ರು ಎಂದರೆ ಭಯ. ಸುತ್ತೆಲ್ಲ ಅಪರಿಚಿತ ಹುಡುಗ ಹುಡುಗಿಯರು. ಮೊದಲ ದಿನವಾದುದರಿಂದ ಮಧ್ಯಾಹ್ನಕ್ಕೆ ಆ ದಿನದ ತರಗತಿಗಳು ಕೊನೆಗೊಂಡವು. ನನ್ನನ್ನು ಮನೆಗೆ ಕರೆದುಕೊಂಡು ಹೋಗಲು ಬಂದ ಅಣ್ಣ ಶಾಲಾ ಗೋಡೆಯ ಮರೆಯಲ್ಲಿ ಇಣುಕುತ್ತಿದ್ದ. ಹೀಗೆ ಮೊದಲ ದಿನದ ಶಾಲೆ ಮುಗಿಯಿತು.

ನಮಗೆ ಆಗ ಶಿಕ್ಷಕರಾಗಿ ಇದ್ದುದು ದಲಿತ ಸಮುದಾಯದಿಂದ ಬಂದ ಜಾನಕಿ ಮತ್ತು ತೇಜಪ್ಪ ಶೆಟ್ಟಿ. ಪಾಠಗಳು ಹೊರೆಯಾಗುವಂತಿರಲಿಲ್ಲ. ಅಕ್ಷರಾಭ್ಯಾಸ ಸುಸೂತ್ರವಾಗಿ ಮುಂದುವರಿಯಿತು. ಸಂಜೆ ದಿನವೂ ಆಟವಾಡಲು ಸಮಯ. ಆಟಕ್ಕೆ ಸರಿಯಾದ ಜಾಗ ಇರಲಿಲ್ಲ. ಹಾಗಾಗಿ ನಮ್ಮ ಆಟ ರಸ್ತೆಯಲ್ಲಿ ಅಲ್ಲಿ ಇಲ್ಲಿ ಎಲ್ಲ. ಆಟವಾದರೂ ಏನು? ಕಳ್ಳ ಪೋಲಿಸ್‌ ಆಟ, ಚೆಂಡಿನಿಂದ ಹೊಡೆದುಕೊಳ್ಳುವ ಆಟ ಇತ್ಯಾದಿ ಅಷ್ಟೇ. ಕೊನೆಗೆ ಜನಗಣಮನದೊಂದಿಗೆ ಆ ದಿನದ ಶಾಲಾ ಚಟುವಟಿಕೆ ಮುಗಿಯುತ್ತಿತ್ತು. ʼಜಯ ಹೇʼ ಎಂಬ ವಾಕ್ಯ ಪೂರ್ತಿಯಾಗುವ ಮುನ್ನವೇ ಹೋ ಎಂದು ಅರಚುತ್ತಾ ಶಾಲೆಯಿಂದ ಮನೆಯತ್ತ ಓಡುತ್ತಿದ್ದೆವು. ಶಾಲೆ ಬಿಟ್ಟಿತು ಎಂಬುದು ನಮ್ಮ ಬೊಬ್ಬೆಯಿಂದಲೇ ಊರವರಿಗೆ ತಿಳಿಯುತ್ತಿತ್ತು.

ಈಗಿನಂತೆ ಬಿಸಿಯೂಟದ ಐಷಾರಾಮ ಇಲ್ಲದ ಆ ಕಾಲದಲ್ಲಿಯೂ ನಮಗೆ ಮಧ್ಯಾಹ್ನ ಜೋಳದ ಉಪ್ಪಿಟ್ಟಿನ ವ್ಯವಸ್ಥೆ ಇರುತ್ತಿತ್ತು (ಬಹುಷಃ ಅಮೆರಿಕದ ಕೊಡುಗೆ ಇರಬೇಕು). ಶಂಕ್ರಾಣದ ದೇವಸ್ಥಾನದಲ್ಲಿ ಭಟ್ಟರೊಬ್ಬರು ಉಪ್ಪಿಟ್ಟು ಮಾಡುತ್ತಿದ್ದರು. ಅದನ್ನು ನಾವು ಕೆಲವರು ಹೊತ್ತು ಶಾಲೆಗೆ ತರುತ್ತಿದ್ದೆವು. ಹೀಗೆ ತಂದವರಿಗೆ ಮೊದಲ ಪಾಲು. ಹಾಗಾಗಿ ಜೋಳದ ರವೆ ಪ್ಯಾಕ್‌ ಆಗಿ ಬಂದ ಖಾಕಿ ಕಾಗದದಲ್ಲಿ ಮೊದಲು ನಮಗೆ ಬೇಕಾದಷ್ಟು ತೆಗೆದಿಟ್ಟು ಬಳಿಕ ಉಳಿದವರಿಗೆ ಕೊಡುತ್ತಿದ್ದೆವು. ಉಪ್ಪಿಟ್ಟಿಗೆ ಒಗ್ಗರಣೆ ಇತ್ಯಾದಿ ಏನೂ ಇರುತ್ತಿರಲಿಲ್ಲ. ಎಣ್ಣೆ ಮತ್ತು ಉಪ್ಪು ಮಾತ್ರ ಹೆಚ್ಚುವರಿಯಾಗಿ ಅದರಲ್ಲಿರುತ್ತಿದ್ದುದು. ಆದರೂ ಮನೆಯಲ್ಲಿ ಆ ಉಪ್ಪಿಟ್ಟಿಗೂ ಗತಿ ಇಲ್ಲದ ಕಾಲದಲ್ಲಿ ಮತ್ತು ಹಸಿದ ಹೊಟ್ಟೆಗೆ ಅದು ಮೃಷ್ಟಾನ್ನವಾಗಿರುತ್ತಿತ್ತು.

ನಮಗೆ ಶಂಕ್ರಾಣ ಎಂದರೆ ಏನು ಎಂದು ಗೊತ್ತಿತ್ತು. ಹಾಲಾಡಿ ಎಂದರೆ ಗೊತ್ತಿತ್ತು. ಆದರೆ ಅಮೂರ್ತವನ್ನು ಕಲ್ಪಿಸಿಕೊಳ್ಳುವಷ್ಟು ದೊಡ್ಡವರು ನಾವಾಗಿರಲಿಲ್ಲ. ಹಾಗಾಗಿ ಭಾರತ ದೇಶ ಎಂದರೂ ಶಂಕ್ರಾಣದಂತೆ ಒಂದು ಜಾಗ ಅಂದುಕೊಂಡುಬಿಟ್ಟಿದ್ದೆ. ಅಂದ ಮೇಲೆ ಸ್ವಾತಂತ್ರ್ಯ, ಸ್ವಾತಂತ್ರ್ಯ ಹೋರಾಟ, ಸ್ವಾತಂತ್ರ್ಯ ಹೋರಾಟಗಾರರು ಎಂದರೆ ಏನು ಎಂದು ಹೇಗೆ ಅರ್ಥವಾಗಬೇಕು? ಆದರೂ ಮೊದಲ  ಬಾರಿ ಗಾಂಧೀಜಿಯನ್ನು ಪುಟ್ಟ ಹುಡುಗನೊಬ್ಬ ಕೋಲು ಹಿಡಿದುಕೊಂಡು ಕರೆದುಕೊಂಡು ಹೋಗುತ್ತಿದ್ದ ಚಿತ್ರ ಮುಖಪುಟದಲ್ಲಿರುವ ಪುಸ್ತಕ ನನ್ನನ್ನು ಆಕರ್ಷಿಸಿತ್ತು.

ಗಾಂಧಿಯನ್ನು ಕೊಂದು ಇನ್ನೂ ಇಪ್ಪತ್ತು ವರ್ಷವೂ ಕಳೆದಿರದಿದ್ದ ಕಾಲದಲ್ಲಿ ಗಾಂಧಿ ಪ್ರಭಾವ ಜೋರಾಗಿಯೇ ಇತ್ತು. ಗಾಂಧಿ ಇಂದಿನ ತಲೆತೊಳೆಯಲ್ಪಟ್ಟ ತಲೆಮಾರಿನವರು ಹೇಳುವ ಹಾಗೆ ದುಷ್ಟನಾಗಿರಲಿಲ್ಲ. ಬದಲಿಗೆ ಗೋಡ್ಸೆ ದುಷ್ಟನಾಗಿದ್ದ. ಗಾಂಧಿಯನ್ನು ಗೋಡ್ಸೆ ಗುಂಡಿಟ್ಟು ಕೊಂದ ಎಂದಾಗ ನಮ್ಮಂತಹ ಚಿಕ್ಕವರಲ್ಲಿಯೂ ಬೇಸರ ಮತ್ತು ಸಿಟ್ಟು ಮೂಡುತ್ತಿತ್ತು. ಗೋಡ್ಸೆಯನ್ನು ಗಲ್ಲಿಗೆ ಹಾಕಿದರಂತೆ ಎಂದಾಗ ನಮಗೆ ಗಲ್ಲು ಎಂದರೆ ಏನೆಂದೇ ಅರ್ಥವಾಗುತ್ತಿರಲಿಲ್ಲ.

ಗಾಂಧಿ ಪ್ರಭಾವ ಜೋರಾಗಿತ್ತು ಎಂದೆನಲ್ಲ. ಸೌಡದಿಂದ ನರಸಿಂಹ ಅಡಿಗ ಎಂಬ ಮೇಷ್ಟರೊಬ್ಬರು ಕನ್ನಡ ಪಾಠ ಮಾಡಲು ಬರುತ್ತಿದ್ದರು. ಕಚ್ಚೆ, ಜುಬ್ಬಾ, ತಲೆಗೆ ನೆಹರೂ ಟೋಪಿ ನೋಡಿದವರಿಗೆ ಅವರು ಸ್ವಾತಂತ್ರ್ಯ ಹೋರಾಟಗಾರರಂತೆ ಕಾಣಿಸುತ್ತಿದ್ದರು. 1910ರ ಸುಮಾರಿಗೆ ಹುಟ್ಟಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳುವುದನ್ನೂ ಕೇಳಿದ್ದೆ. ಇನ್ನೇನು ನಿವೃತ್ತಿಯ ಅಂಚಿನಲ್ಲಿದ್ದ ಅಡಿಗರು ಮಹಾ ಧಾರ್ಮಿಕ ವ್ಯಕ್ತಿ. ಮನೆಯಲ್ಲಿ ನಿತ್ಯದ ಪೂಜೆ ಎಲ್ಲ ಮುಗಿಸಿ ನಡೆದೇ ಅವರು ಶಾಲೆಗೆ ಬರುವಾಗ ಮಧ್ಯಾಹ್ನ ಹನ್ನೊಂದು ಆಗಿರುತ್ತಿತ್ತು. ಆದರೂ ಅವರಿಗೊಂದು ರಿಯಾಯಿತಿ ಇತ್ತು.

ಪಾಠ, ಓದು, ಕಾಪಿ ಬರೆವಣಿಗೆ, ಅಪರೂಪಕ್ಕೊಂದು ಕಿರು ಪರೀಕ್ಷೆ, ವರ್ಷದ ಕೊನೆಯಲ್ಲಿ ದೊಡ್ಡ ಪರೀಕ್ಷೆ. ಆಗ ಶಾಲೆ ಎಂದರೆ ಇಷ್ಟೇ. ಹೊರೆಯಿಲ್ಲದ ಕಾರಣ ಪಾಠವೂ ಆಟವೇ ಆಗಿರುತ್ತಿತ್ತು.

ಪಾಸ್‌ ಪೈಲ್‌ ಎಂಬ ಕ್ರೌರ್ಯ

ಈಗ ʼರಿಸಲ್ಟ್‌ʼ ಎನ್ನುತ್ತಾರಲ್ಲ ನಮ್ಮ ಕಾಲದಲ್ಲಿ ಅದನ್ನು ಕರೆಯುತ್ತಿದ್ದು ʼಪಾಸ್‌ ಪೈಲ್‌ʼ ಎಂದೇ. ಈಗಿನಂತೆ ಅಂಕಗಳ ಪೈಪೋಟಿ, ೯೯ ತೆಗೆದರೂ ತೃಪ್ತಿ ಇರದ ಕಾಲ ಅದಾಗಿರಲಿಲ್ಲ. ಪಾಸೋ ಪೈಲೋ ಎಂಬುದಷ್ಟೇ ಮುಖ್ಯ. ಅಂಕ ಎಷ್ಟು ಎಂದು ಯಾರೂ ಕೇಳುತ್ತಿರಲಿಲ್ಲ. ಆದರೂ ಪಾಸ್‌ ಪೈಲಿನ ದಿನ ಮಾತ್ರ ನಮಗೆಲ್ಲ ಅತ್ಯಂತ ಆತಂಕದ ದಿನ. ಆ ದಿನ ಮೇಷ್ಟ್ರು ಹಾಜರಿ ಪುಸ್ತಕ ಹಿಡಿದುಕೊಂಡು ನಮ್ಮ ಮುಂದೆ ಹಾಜರಾಗುತ್ತಿದ್ದಂತೆಯೇ ಎದೆ ಬಡಿತ ನಮಗೇ ಕೇಳಿಸುವಷ್ಟು ಹೆಚ್ಚುತ್ತಿತ್ತು. ʼಈಗ ನಾನು ಯಾರ ಹೆಸರನ್ನು ಹೇಳುತ್ತೇನೆಯೋ ಅವರು ಪಾಸು, ಅವರು ಮುಂದಿನ ತರಗತಿಯಲ್ಲಿ ಹೋಗಿ ಕುಳಿತುಕೊಳ್ಳಬೇಕು. ಯಾರ ಹೆಸರು ಹೇಳುವುದಿಲ್ಲವೋ ಅವರು ಫೈಲು. ಅವರು ಇಲ್ಲೇ ಕುಳಿತುಕೊಳ್ಳಬೇಕುʼ ಎನ್ನುತ್ತಿದ್ದರು ಮೇಷ್ಟ್ರು. ಸರಿ, ಆರಂಭದಿಂದ ನಡು ನಡುವೆ ಕೆಲವು ಹೆಸರು ಬಿಟ್ಟು ಉಳಿದವರ ಹೆಸರು ಹೇಳುತ್ತಿದ್ದರು. ನಮ್ಮ  ಸರದಿ ಬಂದಾಗ ಪದಗಳಲ್ಲಿ ವರ್ಣಿಸಲಾಗದ ಆತಂಕ. ಹೆಸರು ಹೇಳುತ್ತಿದ್ದಂತೆಯೇ ಸಮಾಧಾನ ಮತ್ತು ಖುಷಿ. ಆದರೆ ಇಡೀ ವರ್ಷ ನಮ್ಮ ಜೀವದ ಗೆಳೆಯರಾಗಿದ್ದು, ಈಗ ಫೇಲಾಗಿ ನಮ್ಮಿಂದ ದೂರವಾಗುವ ಗೆಳೆಯರನ್ನು ನೋಡುವಾಗ ತಡೆಯಲಾಗದ ದುಃಖ. ಆ ಫೇಲಾದ ಮಕ್ಕಳು ಗೋಳೋ ಎಂದು ತಲೆ ಚಚ್ಚಿಕೊಂಡು ಅಳುವುದನ್ನು ನೋಡುವಾಗ ನಮಗೂ ಅಳು ಬರುತ್ತಿತ್ತು.

ಆಗಿನ ಪಾಸು ಪೈಲಿನ ಆ ಪದ್ಧತಿ ಮಾತ್ರ ನಿಜಕ್ಕೂ ಅತ್ಯಂತ ಕ್ರೂರ ಎಂದು ಈಗಲೂ ಅನಿಸುತ್ತಿದೆ. ಶಾಲೆ, ಓದು, ಪರೀಕ್ಷೆ, ಅಂಕ, ಪಾಸು ಫೈಲು ಎಂದರೆ ಏನೆಂದೇ ಅರ್ಥವಾಗದ ಆ ಪುಟಾಣಿಗಳನ್ನೂ ʼನೀನು ವೇಸ್ಟ್‌ʼ ಎಂಬ ಭಾವನೆ ಮೂಡಿಸುವಂತಹ ಕ್ರಮ ಎಷ್ಟು ಸರಿ? ಪಾಸು ಫೈಲು ಘೋಷಿಸುವ ಆ ದಿನಗಳನ್ನು ನೆನೆದಾಗ ಈಗಲೂ ಮೈ ಜುಂ ಎನಿಸುತ್ತದೆ.

ಹೀಗೆ ಸಣ್ಣ ತರಗತಿಗಳಲ್ಲಿ ಫೈಲು ಮಾಡುತ್ತಿದ್ದ ಕಾರಣಕ್ಕೇ ಏಳನೇ ತರಗತಿಗೆ ಬರುವಾಗ ಕೆಲವರು ದೊಡ್ಡ ಗಂಡಸರಂತೆ ಕಾಣಿಸುತ್ತಿದ್ದರು. ಇಂತಹ ಮಕ್ಕಳು ತಮ್ಮ ಸಹಪಾಠಿಗಳಿಗಿಂತ ಮೂರ್ನಾಲ್ಕು ವರ್ಷ ಹಿರಿಯರಾಗಿದ್ದು ತಮ್ಮ ಮೈಕಟ್ಟಿನ ಕಾರಣಕ್ಕೆ ಶಾಲಾ ಕಬಡ್ಡಿ ತಂಡದಲ್ಲಿ ಸ್ಥಾನ ಪಡೆದು ಶಾಲೆಗೆ ʼಕೀರ್ತಿʼ ತರುತ್ತಿದ್ದುದೂ ಇತ್ತು.

ನಾನು ಓದಿನಲ್ಲಿ ಬಹಳ ಬುದ್ಧಿವಂತನೇನೂ ಆಗಿರಲಿಲ್ಲ. ಆದರೆ ದಡ್ಡನೂ ಆಗಿರಲಿಲ್ಲ (ಮುಂದೆ ಬಿ ಎಡ್‌ ತನಕ ಓದಿದೆ. ಒಮ್ಮೆಯೂ ಫೇಲಾಗಲಿಲ್ಲ). ಮಕ್ಕಳ ಮನಸನ್ನು ಸೆಳೆಯುವ  ಕತೆ ಮತ್ತು ಕವಿತೆಗಳು ಇರುತ್ತಿದ್ದುದರಿಂದ ಕನ್ನಡ ಇಷ್ಟವಾಗಿರುತ್ತಿತ್ತು. ತಪ್ಪಿಲ್ಲದೆ ಬರೆಯುವುದನ್ನು ಬೇಗನೇ ನಮಗೆ ಕಲಿಸಿಕೊಟ್ಟರು.

ಪೇಟೆಯಾಚೆಯ ಶಾಲೆಯಲ್ಲಿ ಮೂರನೇ ತರಗತಿಯ ಓದು ಮುಗಿಯಿತು. ನಾಲ್ಕನೆಯ ತರಗತಿಯಿಂದ ಪೇಟೆಯ ಮಧ್ಯದ ಮುಖ್ಯ ಶಾಲೆಯಲ್ಲಿ ಓದು ಮುಂದುವರಿಯಿತು. ನಮಗೆ ಅಲ್ಲಿ ಶಿಕ್ಷಕರಾಗಿ ಇದ್ದುದು, ಕರುಣಾಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ರಘುರಾಮ ಭಂಡಾರಿ, ನಾಗರಾಜ ಮಿತ್ಯಂತ,  ನರಸಿಂಹ ಅಡಿಗ, ಶ್ರೀನಿವಾಸ ಮುಚ್ಚಿಂತಾಯ, ಅಲ್ಲದೆ ಆನಂದ ಮತ್ತು ರಾಜೀವ (?) ಎಂದು ನೆನಪು.

ಕರುಣಾಕರ ಶೆಟ್ಟಿ ಅರ್ಥವಾಗುವಂತೆ ಪಾಠ ಹೇಳುತ್ತಿದ್ದರು. ಅವರು ನೀಡುತ್ತಿದ್ದ ಭಯಂಕರ ಶಿಕ್ಷೆ ಎಂದರೆ, ಹೊಟ್ಟೆಯ ಮಧ್ಯಭಾಗದ ಚರ್ಮವನ್ನು ಚಿವುಟುತ್ತಿದ್ದುದು. ಅಪಾರ ನೋವು. ವಿಶ್ವನಾಥ ಶೆಟ್ಟಿ ವೃತ್ತಿಯಲ್ಲಿ ಆಸಕ್ತಿಯಿಲ್ಲದ ಮಹಾ ಸಿಡುಕ. ವಾಲಿಬಾಲ್‌ ಸರ್ವಿಸ್‌ ನಲ್ಲಿ ಅವರು ಎಡ ಕೈಯಲ್ಲಿ ಹೊಡೆದ ಚೆಂಡು ಬಾಹ್ಯಾಕಾಶದ ವರೆಗೆ ತಲಪಿ ಭೂಮಿಗೆ ಮರಳುತ್ತಿತ್ತು. ಅದು ಸ್ಪಿನ್‌ ಆಗುತ್ತಿದ್ದುದರಿಂದ ಅದು ಯಾರಿಗೂ ಸಿಗದೆ ನೆಲ ಮುಟ್ಟುತ್ತಿತ್ತು. ಇದೊಂದೇ ಅವರ ಬಗೆಗಿನ ಒಳ್ಳೆಯ ನೆನಪು. ರಘುರಾಮ ಭಂಡಾರಿ ನಮಗೆ ಹಿಂದಿ ಹೇಳಿಕೊಡುತ್ತಿದ್ದರು. ನಾನು ಹಿಂದಿಯಲ್ಲಿ ಮುಂದೆ ಇದ್ದೆ. ಆದ್ದರಿಂದ  ನಾನು ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿ. ವಾರ್ಷಿಕೋತ್ಸವ ಸಮಯದಲ್ಲಿ ನನಗೆ ಹಿಂದಿಯ ಬಗ್ಗೆ ಒಂದು ಪ್ರೈಝ್‌ ಕೊಡುವಂತೆ ಮಾಡಿದ್ದರು. ಅವರ ಮಗನೂ ಅದೇ ಶಾಲೆಯಲ್ಲಿ ಓದುತ್ತಿದ್ದ. ಓದಿನಲ್ಲಿ ತುಸು ಹಿಂದೆ. ನನ್ನನ್ನು ತೋರಿಸಿ, ʼನೋಡು ಅವ ಎಷ್ಟು ಚೆನ್ನಾಗಿ ಓದುತ್ತಾನೆ, ನಿನಗೇನು ಧಾಡಿ? ಎಂದು ಆತನನ್ನು ನನ್ನ ಮುಂದೆಯೇ ನಿಂದಿಸುತ್ತಿದ್ದರು.

ನಾಗರಾಜ ಮಿತ್ಯಂತರು ಪೊಲೀಸ್‌ ಇಲಾಖೆ ಸೇರುವ ಬದಲು ಶಿಕ್ಷಣ ಇಲಾಖೆಗೆ ಬಂದಿದ್ದಾರೋ ಏನೋ ಎಂದು ಅನಿಸುತ್ತಿತ್ತು. ಮಹಾ ಸಿಡುಕ. ಶಾಲೆಯ ಅಷ್ಟೂ ಮಕ್ಕಳ ಮುಂದೆಯೇ ದೈಹಿಕ ಶಿಕ್ಷೆ ನೀಡಿ ಅವಮಾನಿಸುತ್ತಿದ್ದರು. ಒಮ್ಮೆ ಪರೀಕ್ಷೆಯಲ್ಲಿ ನಾನು ಎಲ್ಲರಿಗಿಂತ ಮೊದಲೇ ಉತ್ತರಿಸಿ ಪೇಪರ್‌ ಅವರ ಕೈಗಿತ್ತೆ. ಗಣಿತದ ಪರೀಕ್ಷೆ ಅದು. ಅದರ ಉತ್ತರಗಳಲ್ಲಿ ಮೀಟರ್‌, ಲೀಟರ್‌ ಇತ್ಯಾದಿ ಪರಿಮಾಣಗಳನ್ನು ನಾನು ಸರಿಯಾಗಿ ಬರೆದಿರಲಿಲ್ಲ. ಹಾಗಾಗಿ ನೂರಾರು ಮಕ್ಕಳ ಮುಂದೆ ಅಲ್ಲೇ ನನಗೆ ಸಿಕ್ಕಾಪಟ್ಟೆ ಹೊಡೆದರು. ದೇಹಕ್ಕಾದ ಗಾಯ ಮಾಸುತ್ತದೆ. ಆದರೆ ಮನಸಿಗಾದ ಗಾಯ ಸಾಯುವ ತನಕವೂ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದಲೇ ಈಗಲೂ ಅವರನ್ನು ಮರೆಯಲಾಗುತ್ತಿಲ್ಲ. ಅಲ್ಲದೆ ಮಹಾ ಜಾತಿವಾದಿಯಾಗಿದ್ದ ಮನುಷ್ಯ. ತರಗತಿಯಲ್ಲಿ ಎಲ್ಲರೆದುರೇ ಜಾತಿ ನಿಂದನೆ ಮಾಡುತ್ತಿದ್ದ. ನನ್ನ ಹೆಸರಿನೊಂದಿಗೆ ಗೌಡ ಎಂಬುದೇನೂ ಇರಲಿಲ್ಲ. ಆದರೆ ನನ್ನ  ಜಾತಿ ಆತನಿಗೆ ಗೊತ್ತಿತ್ತು. ಹಾಗಾಗಿ ʼಗೋಡಾ ಮೈದಾನ್‌ ಮೆ ಹೆʼ ಎಂದು ಅವಮಾನಿಸುತ್ತಿದ್ದ. ಮುಂದೆ ಈ ಮನುಷ್ಯ ಶಿಕ್ಷಣ ಇಲಾಖೆ ತೊರೆದು ರೆವಿನ್ಯೂ ಇಲಾಖೆಯಲ್ಲಿ ಅಧಿಕಾರಿಯಾದರು ಎಂದು ಹೇಳುವುದನ್ನು ಕೇಳಿದ್ದೇನೆ.

ನರಸಿಂಹ ಅಡಿಗರು ತೀರಾ ಸಾಧು ಮನುಷ್ಯ. ಕನ್ನಡ ಪಾಠ ಮಾಡುತ್ತಿದ್ದರು. ಅಪ್ಪಟ ಗಾಂಧಿವಾದಿ. ಕನ್ನಡ  ಪಾಠವನ್ನೂ ಪ್ರಾಕ್ಟಿಕಲ್‌ ಆಗಿ ಹೇಗೆ ಕಲಿಸಬಹುದು ಎಂಬುದನ್ನು ಅವರಿಂದ ಕಲಿತೆ. ಪುಣ್ಯಕೋಟಿ ಪಾಠ ಮಾಡುವಾಗ ಒಬ್ಬನನ್ನು ಮೇಜಿನ ಮೇಲೆ ನಿಲ್ಲಲು ಹೇಳುತ್ತಿದ್ದರು. ಆತ ಹುಲಿ. ಕೆಳಗಡೆ ಒಬ್ಬ ನಿಲ್ಲಬೇಕು. ಆತ ಪುಣ್ಯ ಕೋಟಿ. ಅವರ ನಡುವೆ ಸಂಭಾಷಣೆ ನಡೆಯುವಂತೆ ಮಾಡುತ್ತಿದ್ದರು. ಈ ತೆರನ ಪಾಠದ ಕಾರಣಕ್ಕೇ ಹಲವು ದಶಕಗಳ ಬಳಿಕವೂ ಅವರ ಪಾಠವೂ ಅವರೂ ನೆನಪಿನಲ್ಲಿ ಉಳಿದಿದ್ದಾರೆ. 1971ರಲ್ಲಿಯೇ ಅವರು ನಿವೃತ್ತರಾದರು.

ಶಾಲೆಯಲ್ಲಿ ಅನೇಕ ಅನುಭವಿ ಹಿರಿಯ ಶಿಕ್ಷಕರಿದ್ದರು. ಆದರೆ ಅವರು ಪದವೀಧರರಾಗಿರಲಿಲ್ಲ. ಹಾಗಾಗಿ ಶೈಕ್ಷಣಿಕ ಅರ್ಹತೆಯ ನೆಲೆಯಲ್ಲಿ ಪದವೀಧರ ಮುಖ್ಯೋಪಾಧ್ಯಾಯ ಎಂದು ಶ್ರೀನಿವಾಸ ಮುಚ್ಚಿಂತಾಯ ಎಂಬವರು ಹೆಡ್‌ ಮಾಸ್ತರನಾಗಿ ಬಂದರು. ಇವರ ಜಾತಿ ಭಾವನೆಯೋ ಇನ್ನೊಂದೇ ನೆಲೆಯದು. ನಮ್ಮನ್ನು ತಪ್ಪಿಯೂ ಮುಟ್ಟುತ್ತಿರಲಿಲ್ಲ. ನಾವು ಬೀಗದ ಕೀ ಇತ್ಯಾದಿ ಏನನ್ನಾದರೂ ಕೊಟ್ಟರೆ, ಅದನ್ನು ಒಂದೆಡೆ ಇಡಲು ಹೇಳಿ ಅದಕ್ಕೆ ನೀರನ್ನು ಪ್ರೋಕ್ಷಿಸಿ ತೆಗೆದುಕೊಳ್ಳುತ್ತಿದ್ದರು.

ಆಗ ಶಾಲೆಗೆ ಅಟೆಂಡರ್‌ ಎಂದು ಇರಲಿಲ್ಲ. ಹಾಗಾಗಿ ಪೇಟೆಯಾಚೆಯ ಶಾಲಾ ಕಟ್ಟಡಕ್ಕೆ ಬೀಗ ಹಾಕಿ ಬರಲು ನನ್ನಲ್ಲಿ ಹೇಳುತ್ತಿದ್ದರು (ಈ ಕೆಲಸ ನಾನು ಸಂತೋಷದಿಂದ ಒಪ್ಪಿಕೊಳ್ಳಲು ಒಂದು ಸ್ವಾರಸ್ಯಕರ ಕಾರಣವಿದೆ, ಅದನ್ನು ಮುಂದೆ ಹೇಳುವೆ). ಬೀಗ ಹಾಕಿ ಕೀ ತಂದು ಕೊಟ್ಟರೆ ಅದನ್ನು ನೀರು ಪ್ರೋಕ್ಷಿಸಿ ಪರಿಶುದ್ಧಗೊಳಿಸಿ ತೆಗೆದುಕೊಳ್ಳುತ್ತಿದ್ದರು. ನಾನು ನಾಲ್ಕನೆ ತರಗತಿಗೆ ಬರುವಾಗ ಏಳನೇ ತರಗತಿಯಲ್ಲಿ ನನ್ನ ಕಿರಿಯ ಅಣ್ಣ ಉಮೇಶ ಇದ್ದ. ಆತ ಮುಚ್ಚಿಂತಾಯರ ವರ್ತನೆ ಗೊತ್ತಿದ್ದು ಒಮ್ಮೆ ಹಾಜರಿ ಪುಸ್ತಕವನ್ನು ನಳ್ಳಿ ನೀರಿನಲ್ಲಿ ಚೆನ್ನಾಗಿ ತೊಳೆದು ತಂದು ಕೊಟ್ಟಿದ್ದನಂತೆ. ಪುಸ್ತಕದ ಒಳಗಿನ ಎಲ್ಲವೂ ಅಳಿಸಿಹೋಗಿತ್ತು.

ನಾವು ಜಾತಿ ಶ್ರೇಣಿಯಲ್ಲಿ ಅತ್ಯಂತ ಕೆಳಗಿನವರಾಗಿಲ್ಲದಿದ್ದರೂ ಇಷ್ಟೊಂದು ಜಾತಿ ಅವಮಾನ, ಅಸ್ಪೃಶ್ಯತೆ ಅನುಭವಿಸಬೇಕಿದ್ದರೆ, ನಿಜವಾಗಿ ಜಾತಿ ಶ್ರೇಣಿಯಲ್ಲಿ ಕೆಳಗಿದ್ದವರ ಸ್ಥಿತಿ ಹೇಗಿರಬಹುದು ಯೋಚಿಸಿ. ಆ ಸಮುದಾಯದವರು ನಮ್ಮ ಸಹಪಾಠಿಗಳಾಗಿದ್ದುದೇ ನನಗೆ ನೆನಪಿಲ್ಲ. ಅದಕ್ಕೆ ಈ ಸ್ಥಿತಿಯೂ ಒಂದು ಕಾರಣ ಇರಬಹುದೇ?

ಶ್ರೀನಿವಾಸ ಕಾರ್ಕಳ

More articles

Latest article