ನವದೆಹಲಿ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವನೆ ಮಡೆಯಲಿದ್ದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆಯನ್ನು ಮುಂದೂಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಕೇರಳದಲ್ಲಿ ಡಿಸೆಂಬರ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಈ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಸ್ ಐ ಆರ್ ಪ್ರಕ್ರಿಯೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಕೇರಳ ಸರ್ಕಾರ ಮನವಿ ಸಲ್ಲಿಸಿದೆ.
ಕೇಂದ್ರ ಚುನಾವಣಾ ಆಯೋಗವು ನವೆಂಬರ್ 4ರಿಂದ ಡಿಸೆಂಬರ್ 4ರವರೆಗೆ ಎಸ್ ಐ ಆರ್ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಏಕಕಾಲದಲ್ಲಿ ಎಸ್ ಐಆರ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವುದು ಅಸಾಧ್ಯ. ಹೊಂದಿಕೆಯಾಗುತ್ತದೆ. ಇದರಿಂದ ಸಿಬ್ಬಂದಿ ಕೊರತೆ ಉಂಟಾಗಿ ಮಾನವ ಸಂಪನ್ಮೂಲದ ಮೇಲೆ ಒತ್ತಡ ಬೀಳಲಿದೆ ಮತ್ತು ಸರ್ಕಾರದ ದಿನನಿತ್ಯದ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಲಿದೆ ಎಂದು ಕೇರಳ ಸರ್ಕಾರ ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ 68,000 ಪೊಲೀಸ್ ಮತ್ತು ಇತರ ಭದ್ರತಾ ಸಿಬ್ಬಂದಿಯ ಜೊತೆಗೆ ಸರ್ಕಾರಿ ಹಾಗೂ ಅರೆ ಸರ್ಕಾರಿ ಸೇವೆಗಳಿಂದ 1.76 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಸ್ ಐ ಆರ್ ಗೆ ಸುಮಾರು 25,668 ಹೆಚ್ಚುವರಿ ಸಿಬ್ಬಂದಿ ಅಗತ್ಯವಿದೆ ಎಂದು ತಿಳಿಸಲಾಗಿದೆ.
ಕೇರಳದ ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ 9 ಮತ್ತು 11ರಂದು ಮತದಾನ ನಡೆಯಲಿದ್ದು, ಡಿ.13ರಂದು ಮತ ಎಣಿಕೆ ನಡೆಯಲಿದೆ. ಡಿ.18ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯು ಮುಕ್ತಾಯಗೊಳ್ಳಲಿದೆ.

