ನವದೆಹಲಿ: ಶಾಲಾಕಾಲೇಜುಗಳು ಮತ್ತು ಆಸ್ಪತ್ರೆಗಳಿರುವ ಪ್ರದೇಶಗಳಲ್ಲಿ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೀದಿನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ನ್ಯಾ. ವಿಕ್ರಂ ನಾಥ್, ನ್ಯಾ. ಸಂದೀಷ್ ಮೆಹ್ರಾ ಹಾಗೂ ನ್ಯಾ. ಎನ್.ವಿ. ಅಂಜಾರಿಯಾ ಅವರ ತ್ರಿಸದಸ್ಯ ಪೀಠವು ಈ ನಿರ್ದೇಶನ ನೀಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಆವರಣಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಪೀಠವು ಈ ಪ್ರದೇಶಗಳಿಗೆ ಬೀದಿ ನಾಯಿಗಳು ಪ್ರವೇಶಿಸುವುದನ್ನು ನಿಯಂತ್ರಿಸಬೇಕು. ಈ ಪ್ರದೇಶಗಳಲ್ಲಿ ಹಿಡಿದು ತಂದ ನಾಯಿಗಳನ್ನು ಪುನಃ ಅದೇ ಸ್ಥಳದಲ್ಲಿ ಬಿಡಬಾರದು ಎಂದೂ ಪೀಠ ಸೂಚಿಸಿದೆ.
ಶಾಲಾ ಕಾಲೇಜು ಆಸ್ಪತ್ರೆಯಂತಹ ಕೆಲವು ಸಂಸ್ಥೆಗಳಲ್ಲಿರುವ ಬೀದಿ ನಾಯಿಗಳಿಗೆ ಅಲ್ಲಿನ ಉದ್ಯೋಗಿಗಳೇ ಆಹಾರ ನೀಡುತ್ತಿದ್ದಾರೆ. ಇದರಿಂದ ನಾಯಿಗಳು ಅಲ್ಲಿಯೇ ಠಿಕಾಣಿ ಹೂಡುವುದರಿಂದ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ಅದೇಶ ಹೊರಡಿಸುವುದಾಗಿ ನ.3ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಪೀಠ ತಿಳಿಸಿತ್ತು. ಮುಂದಿನ ವಿಚಾರಣೆ ಜ. 13ರಂದು ನಡೆಯಲಿದೆ.
ಬೀದಿ ಬೀದಿಗಳಲ್ಲಿ ಅಡ್ಡಾಡುವ ಜಾನುವಾರುಗಳು ಸೇರಿದಂತೆ ಇತರ ಪ್ರಾಣಿಗಳನ್ನು ಹೆದ್ದಾರಿ ಮತ್ತು ಎಕ್ಸ್ ಪ್ರೆಸ್ ವೇಗಳಿಂದ ತೆರವುಗೊಳಿಸಿ ಅವುಗಳನ್ನೂ ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಪೀಠವು ನಿರ್ದೇಶನ ನೀಡಿದೆ.
ಪ್ರಾಣಿಗಳು ಹೆಚ್ಚಾಗಿ ಕಂಡುಬರುವ ಹೆದ್ದಾರಿಗಳನ್ನು ಗುರುತಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಹಿತ ವಿವಿಧ ಇಲಾಖೆಗಳು ಜಂಟಿ ಅಭಿಯಾನ ನಡೆಸಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

