ಬಿಜೆಪಿ ಮತಕಳವು: ಜಗತ್ತಿನ ಎದುರು ತಲೆ ಭಾರತ ತಲೆತಗ್ಗಿಸುವಂತಾಗಿದೆ: ಬಿಕೆ ಹರಿಪ್ರಸಾದ್‌ ವಾಗ್ದಾಳಿ

Most read

ಬೆಂಗಳೂರು: ಬಿಜೆಪಿ ಮತ ಕಳವು ಮಾಡುವ ಮೂಲಕ ಭಾರತ ಇಂದು ಇಡೀ ಜಗತ್ತಿನ ಎದುರು ತಲೆ ತಗ್ಗಿಸುವಂತಾಗಿದೆ ಎಂದು ಕಾಂಗ್ರೆಸ್‌ ಮುಖಂಡ, ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.  

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹರಿಯಾಣದಲ್ಲಿ ನಡೆದಿದೆ ಎನ್ನಲಾದ ವೋಟ್‌ ಚೋರಿ ಕುರಿತು ದಾಖಲೆಗಳ ಸಹಿತ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಮತ್ತು ಚುನಾವಣಾ ಆಯೋಗ ಹೇಗೆ ಜಂಟಿಯಾಗಿ ಮತ ಕಳ್ಳತನದಲ್ಲಿ ನಿರತವಾಗಿವೆ ಎಂದು ಆಪಾದಿಸಿದ ನಂತರ ಹರಿಪ್ರಸಾದ್‌ ಅವರು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಬಿಜೆಪಿಯನ್ನು ಟೀಕಿಸಿದ್ದಾರೆ.

ಜಗತ್ತಿನ ಪ್ರಜಾಪ್ರಭುತ್ವ ದೇಶಗಳಲ್ಲೇ ಪಾರದರ್ಶಕತೆ, ನಿಷ್ಪಕ್ಷಪಾತ, ಮಾದರಿ ಚುನಾವಣಾ ವ್ಯವಸ್ಥೆ ಹೊಂದಿದ್ದ ಭಾರತ ಇಂದು ಇಡೀ ಜಗತ್ತಿನ ಎದುರು ತಲೆ ತಗ್ಗಿಸುವಂತಾಗಿದೆ. ಹರಿಯಾಣ ರಾಜ್ಯದಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ಸಹಯೋಗದೊಂದಿಗೆ ನಡೆದಿರುವ ಚುನಾವಣಾ ಅಕ್ರಮಗಳು ಅತ್ಯಂತ ನೀಚತನದ ಪರಮಾವಧಿ.

ಕರ್ನಾಟಕದ ಮಹಾದೇವಪುರ, ಅಳಂದ ಕ್ಷೇತ್ರಗಳ ಚುನಾವಣಾ ಆಕ್ರಮಗಳನ್ನು ದಾಖಲೆ ಸಮೇತ ಬಯಲು ಮಾಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹರಿಯಾಣ ರಾಜ್ಯದಲ್ಲಿ ನಡೆದಿರುವ ಅಕ್ರಮಗಳನ್ನು ಬಯಲು ಮಾಡುತ್ತಾ ನೀಡಿರುವ ದಾಖಲೆಗಳನ್ನ ನೋಡಿದರೇ ದೇಶದ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಗೂ ದಿಗ್ಭ್ರಮೆಯಾಗುತ್ತದೆ.

ಚುನಾವಣಾ ಆಯೋಗದ ಅಕ್ರಮಗಳು ತಾಲೂಕು, ಜಿಲ್ಲೆ, ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಬ್ರೆಜಿಲ್ ದೇಶದ ರೂಪದರ್ಶಿ, ಮಾಡೆಲ್ ವರೆಗೂ ಚಾಚಿರುವುದು ನಾಚಿಕೆಗೇಡು. ಚುನಾವಣಾ ಆಯೋಗ ಮಾದರಿ ಚುನಾವಣಾ ನೀತಿ ಸಂಹಿತಿಯನ್ನು ಘೋಷಿಸುವ ಬದಲು “ಬಿಜೆಪಿ ಪಕ್ಷದ ಗೆಲುವಿಗೆ ಚುನಾವಣಾ ಆಯೋಗದ ಸಹಕಾರದ ಸೂತ್ರಗಳನ್ನ” ಘೋಷಿಸಿ ಬಿಡಲಿ.

ಹರಿಯಾಣ ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಮೊದಲೇ ಅರಿತಿದ್ದ ಬಿಜೆಪಿ ಪಕ್ಷ, ಚುನಾವಣಾ ಆಯೋಗದ ಸಹಕಾರದೊಂದಿಗೆ ಅಧಿಕಾರಕ್ಕಾಗಿ ಇಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಿರುವುದು ಹರಿಯಾಣ ರಾಜ್ಯದ ಪ್ರತಿಯೊಬ್ಬ ಮತದಾರರಿಗೂ ಮಾಡಿದ ದ್ರೋಹ. ಬಿಜೆಪಿ ಪಕ್ಷದ ವಕ್ತಾರರಂತೆ ಮಾತಾಡುವ ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವ ಜ್ಞಾನೇಶ್ ಕುಮಾರ್ ಪಲಾಯನವಾದಿಯಾಗದೆ ದೇಶದ ಜನರೆದುರು ಸತ್ಯ ಒಪ್ಪಿಕೊಳ್ಳುವ ಧೈರ್ಯವನ್ನಾದರೂ ಮಾಡಲಿ.

25 ಲಕ್ಷ ಮತಕಳ್ಳತನ ನಡೆಸಿ ಅಧಿಕಾರಕ್ಕೆ ಬಂದ ಹರಿಯಾಣದ ಬಿಜೆಪಿ ಸರ್ಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ಅರ್ಹತೆ ಇಲ್ಲ. ಕೂಡಲೇ ರಾಷ್ಟ್ರಪತಿಗಳು ಹರಿಯಾಣ ರಾಜ್ಯ ಸರ್ಕಾರವನ್ನು ವಿಸರ್ಜಿಸಿ, ಸಂವಿಧಾನದ ಮೇಲಿನ ಈ ವ್ಯವಸ್ಥಿತ ದಾಳಿಯ ರಕ್ಷಣೆಗೆ ಧಾವಿಸಬೇಕು. ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ಶ್ರೀ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಈ ಮತಕಳ್ಳತನದ ವಿರುದ್ಧದ ಹೋರಾಟಕ್ಕೆ ಪ್ರಜಾಪ್ರಭುತ್ವವಾದಿಗಳು ಹೆಗಲು ನೀಡುವಂತಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

More articles

Latest article