ಮಾತಾಡೋದು ದೈವವಾ.. ನರ್ತಕನಾ..!?‌

Most read

ಪ್ರಚಲಿತ ವೈದಿಕ ದೇವತಾರಾಧನಾ ಪದ್ಧತಿಗಳಿಗಿಂತ ಭಿನ್ನವಾಗಿರುವ ಕರಾವಳಿಯ ದೈವಾರಾಧನೆ ಪ್ರಕೃತಿ ಮತ್ತು ಸಾಧಕರೆನಿಸಿ ಗತಿಸಿದ ಹಿರಿಯರನ್ನು ಕಾಯ್ದು ಮುನ್ನಡೆಸುವ ಶಕ್ತಿಗಳೆಂದು ನಂಬುವಂತಹ ಆರಾಧನಾ ಪದ್ಧತಿ. ದೈವಾರಾಧನೆಯ ಕಥೆ ನಂಬಿಕೆಗೆ ಸಂಬಂಧಿಸಿದ ಸೂಕ್ಷ್ಮ ಸಂಗತಿ ಎಂಬುದನ್ನ ಮನಗಂಡು ಕಾಂತಾರದ ಮೊದಲ ಸಿನಿಮಾದಲ್ಲೇ ಇದನ್ನು ಒಂದು  ದಂತ ಕಥೆಎಂದು ಉಲ್ಲೇಖಿಸಿ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಬಳಿಕ ಬಂದ ಹೊಸ ಸಿನಿಮಾದಲ್ಲೂ ಕೂಡ ಕತೆ ಹೇಳುವ ಸಿನಿಮಾದ ಒಂದು ಪಾತ್ರವೇ ಇದನ್ನು ದಂತ ಕಥೆ ಎಂದೇ ಹೇಳಿ ಕಥೆಯನ್ನು ಪರಿಚಯಿಸುತ್ತದೆ ಶಂಕರ್‌ ಸೂರ್ನಳ್ಳಿ.

’ಮಾತಾಡೋದು ದೈವವಾ, ನರ್ತಕನಾ..” ರಿಷಭ್ ಶೆಟ್ಟಿಯವರ ಮೊದಲ ಕಾಂತಾರದ ಪ್ರಸಿದ್ಧ ಡೈಲಾಗ್ ಇದು. ತನ್ನ ಬಯಕೆಗೆ ವಿರುದ್ಧವಾಗಿ ಮಾತನಾಡಿದ ದೈವದ ವಿರುದ್ಧ ಭೂಮಾಲಿಕನ ಕುಟುಂಬಸ್ಥನೊಬ್ಬ ಗೊಣಗುವ ಸನ್ನಿವೇಶವಿದು. ಇದೇ ಮಾತೀಗ ಕಾಂತಾರದ ಇನ್ನೊಂದು ಸಿನಿಮಾ ಹೊಸ ಕಾಂತಾರ ಬಿಡುಗಡೆಯಾದ ಬಳಿಕ ಮತ್ತೆ ಸುದ್ದಿಯಾಗುತ್ತಿದೆ. ಹೊಸ ಕಾಂತಾರವನ್ನು ಹಿಂದಿನ ಸಿನಿಮಾದ ಪ್ರೀಕ್ವೆಲ್ ಎನ್ನಲಾಗುತ್ತಿದೆಯಾದರೂ ಹಿಂದೆ ಹೇಳಲಾದ ಕತೆಗೂ ಈಗ ತೋರಿಸಲಾಗುತ್ತಿರುವ ಸಿನಿಮಾದ ಕಥೆಗೂ ನೇರ ಸಂಬಂಧವಿರುವ ಯಾವ ಚಿತ್ರಣವೂ ಹೊಸ ಸಿನಿಮಾದಲ್ಲಿಲ್ಲ ಅಂದರೆ, ಹೆಸರನ್ನು ಬಿಟ್ಟರೆ ಆ ಕಥೆಯೇ ಬೇರೆ ಇದೇ ಬೇರೆ. ಬಹುಷ ಕಥೆಯ ವಿಸ್ತಾರದ ವೇಳೆಯಲ್ಲಿ ಆಗಿರುವ ಅನಿವಾರ್ಯ ಬದಲಾವಣೆಗಳಿಂದ ಈ ಪ್ರೀಕ್ವೆಲ್ ಕತೆಯ ಲಿಂಕ್ ಬದಲಿರಬಹುದೇನೋ. ಯಾಕೆಂದರೆ, ಚಿತ್ರ ತಂಡ ಎಲ್ಲೋ ಹೇಳಿಕೊಂಡಂತೆ ಈ ಹೊಸ ಚಿತ್ರದ ಸ್ಕ್ರಿಪ್ಟ್ ಸುಮಾರು ಹದಿನೈದು ಬಾರಿ ತಿದ್ದುಪಡಿಯಾಗಿತ್ತಂತೆ.

ಮೊದಲ ಕಾಂತಾರ ಬಿಡುಗಡೆಯಾದ ಬಳಿಕ ಆ ಸಿನಿಮಾದ ಭರ್ಜರಿ ಯಶಸ್ಸಿನಿಂದಾಗಿ ಚಿತ್ರದಲ್ಲಿ ಪ್ರಮುಖವಾಗಿ ತೋರಿಸಲ್ಪಟ್ಟ ಕರಾವಳಿಯ ದೈವಾರಾಧನೆಯ ವಿಚಾರ ಇಡೀ ಕರ್ನಾಟಕವಷ್ಟೆ ಅಲ್ಲ ದೇಶಾದ್ಯಂತ ಸುದ್ದಿಯಾದವು. ಎಲ್ಲಾ ವಿಚಾರಗಳಲ್ಲೂ ಇರುವಂತೆ ಇಲ್ಲಿ ಸಕಾರಾತ್ಮಕ ಪ್ರತಿಸ್ಪಂದನಗಳ ಜೊತೆಗೆ ನಕಾರಾತ್ಮಕ ಪರಿಣಾಮಗಳನ್ನೂ ಕೂಡ ಈ ಕುರಿತಂತೆ ನೋಡುವಂತಾಯ್ತು. ಕರಾವಳಿಯ ಈ ವಿಶಿಷ್ಟ ಆರಾಧನಾ ಪದ್ಧತಿಯ ಕುರಿತಂತೆ ಹಲವರು ಬೆರಗಿನಿಂದ ನೋಡತೊಡಗಿದರೆ, ಇನ್ನು ಕೆಲವರು ಅದರ ಅನುಕರಣೆ, ವೇಷ, ತಮಾಷೆ, ಜಾಲತಾಣಗಳ ರೀಲ್ಸ್ ಇತ್ಯಾದಿಗಳ ಹೆಸರಲ್ಲಿ ಹುಚ್ಚಾಟಕ್ಕಿಳಿದರು. ಈ ರೀತಿ ಕರಾವಳಿಯ ಒಂದು ಪಾರಂಪರಿಕ ಆರಾಧನಾ ಪದ್ಧತಿ ತಮಾಷೆಯ ವಸ್ತುವಾಗುತ್ತಿರುವ ಕುರಿತಂತೆ ಅಸಮಾಧಾನಗಳೂ ವ್ಯಕ್ತವಾದವು. ಕಾಂತಾರ ಸಿನಿಮಾವೇ ಇದಕ್ಕೆಲ್ಲ ಕಾರಣ ಕರಾವಳಿಯ ದೈವವನ್ನು ಅವರು ಕಮರ್ಶಿಯಲ್ ಉದ್ದೇಶಕ್ಕೆ ಬಳಸಿಕೊಂಡರು ಎಂಬ ಆಪಾದನೆಗಳೂ ಬಂದವು. 

ಎರಡನೇ ಕಾಂತಾರ

ಬಳಿಕ ಭರ್ಜರಿ ಬಜೆಟ್ಟಿನಲ್ಲಿ ತಯಾರಾಗುತ್ತಿರುವ ಕಾಂತಾರದ ಮತ್ತೊಂದು ಭಾಗಕ್ಕೂ ಆರಂಭದಲ್ಲೇ ವಿರೋಧ ವ್ಯಕ್ತವಾದರೂ ಎರಡನೇ ಕಾಂತಾರ ಚಿತ್ರೀಕರಣಗೊಂಡು ಇದೀಗ ವಿಶ್ವದಾದ್ಯಂತ ಬಿಡುಗಡೆಗೊಂಡು ದಾಖಲೆಯ ಮಟ್ಟದಲ್ಲಿ ಗಳಿಕೆಯನ್ನೂ (ಸಾವಿರ ಕೋಟಿ ಸಮೀಪದ) ಕಾಣುತ್ತಿದೆ. ಅದೇ ರೀತಿ ಹಿಂದಿನಂತೆ ದೈವ ಪಾತ್ರದ ಅನುಕರಣೆ ಮಾಡುವುದು, ಮೈ ನಡುಗಿಸಿಕೊಂಡು ಓ…ವ್ ಎಂದು ಕಿರುಚುವುದು, ವೇಷ ಹಾಕುವುದು ಹೆಂಗಸರು ಗಂಡಸರೆನ್ನದೇ ಸಿನಿಮಾ ವೀಕ್ಷಣೆಯ ವೇಳೆಯಲ್ಲೇ ದೈವ ಮೈಮೇಲೆ ಬರುವುದು, ಜಾಲತಾಣಗಳ ರೀಲ್ಸ್ ಹುಚ್ಚಾಟಗಳು ಕೂಡ ಮುಂದುವರೆಯುತ್ತಿವೆ. ಇದನ್ನೆಲ್ಲ ಮನಗಂಡೇ ಇತ್ತೀಚೆಗೆ ಕೆಲವರು ಪೆರಾರ ಎಂಬಲ್ಲಿನ ದೈವಸ್ಥಾನದಲ್ಲಿ ನೇರವಾಗಿ ದೈವದ ಬಳಿಯೇ ಈ ಬಗ್ಗೆ ದೂರಿಕೊಂಡಾಗ ಅದಕ್ಕೆ ಪ್ರತಿಯಾಗಿ ದೈವವು ’ನನ್ನ ಹೆಸರಲ್ಲಿ ಹುಚ್ಚಾಟ ನಡೆಸುವವರನ್ನ ಹುಚ್ಚು ಹಿಡಿಸುತ್ತೇನೆ  ಹಣ ಮಾಡುವವರ ಹಣವೆಲ್ಲ ಆಸ್ಪತ್ರೆಗೆ ಸೇರುವಂತೆ ಮಾಡುತ್ತೇನೆ” ಎಂದು ನುಡಿಕೊಟ್ಟಂತಹ ಸುದ್ದಿ ಬಂದಿತ್ತು. ಇದಕ್ಕುತ್ತರವಾಗಿ ಕೆಲವರು ಮೊದಲ ಕಾಂತಾರದ  ಆ ಹಳೆಯ ಡೈಲಾಗನ್ನೇ ಹೇಳಿ ಇದು ದೈವ ಮಾತಾಡಿದ್ದಾ.. ಇಲ್ಲ ನರ್ತಕನದ್ದಾ.. ಎಂದು ಟೀಕಿಸುತ್ತಿದ್ದಾರೆ.

ಕರಾವಳಿಯ ದೈವಾರಾಧನೆ, ನಾಗಾರಾಧನೆಯಂತಹ ಪದ್ಧತಿಗಳಲ್ಲಿ ಅತೀತ ಶಕ್ತಿಯನ್ನು ಮೈಮೇಲೆ ಆವಾಹಿಸಿಕೊಂಡು ಸಮಸ್ಯೆ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳುವಂತಹ ವಿಶಿಷ್ಟ ಆರಾಧನಾ ಕ್ರಮವಿದೆ. ಇಂತಹ ನಂಬಿಕೆ ಕೇವಲ ಕರಾವಳಿಯಲ್ಲಷ್ಟೆ ಅಲ್ಲ ಪ್ರಪಂಚದ ಅನೇಕ ಭಾಗಗಳಲ್ಲಿ ಇಂತಹ ಆಚರಣೆಗಳಿವೆ. ಕಾಲವಾದ ಹಿರಿಯರನ್ನು ಪ್ರಾಕೃತಿಕ ಶಕ್ತಿಗಳನ್ನು ಮೈಮೇಲೆ  ಆವಾಹಿಸಿಕೊಳ್ಳುವ, ಅದರಿಂದ ಕಾರ್ಯ ಸಾಧಿಸಬಹುದೆಂಬ ನಂಬಿಕೆಯುಳ್ಳ ಅನೇಕ ಸಂಪ್ರದಾಯಗಳಿವೆ. ಇದೇ ರೀತಿ,  ಪುನರ್ಜನ್ಮ ಅಥವಾ ದೈವ ಶಕ್ತಿ, ಸತ್ತವರ ಆತ್ಮಗಳು ಇನ್ನೊಬ್ಬರನ್ನು ಸೇರಿಕೊಳ್ಳುವ ಮೂಲಕ ಘಟಿಸಿ ಹೋದ ಅನ್ಯಾಯಗಳಿಗೆ ಪರಿಹಾರ ಕಂಡುಕೊಂಡ ಹ್ಯಾಪಿ ಎಂಡಿಂಗ್ ನ ಕಥೆಗಳಿರುವ ಹಲವಾರು ಸೂಪರ್ ಹಿಟ್ ಸಿನಿಮಾಗಳೂ ಸಹ ಬಂದು ಹೋಗಿವೆ.

ತಮಿಳಿನಲ್ಲಿ ಕಮಲಹಾಸನ್ ಅಭಿನಯಿಸಿರುವ ಸೂಪರ್ ಹಿಟ್ ಕಲ್ಯಾಣರಾಮನ್ ಸಿನಿಮಾ (ಕನ್ನಡದಲ್ಲಿ ರವಿಚಂದ್ರನ್ ಇದನ್ನು ಶ್ರೀರಾಮಚಂದ್ರ ಎಂದು ರಿಮೇಕ್ ಮಾಡಿದ್ದರು) ಶಾರೂಖ್, ಸಲ್ಮಾನ್ ಅಭಿನಯದ ಕರಣ್ ಅರ್ಜುನ್, ಸಲ್ಮಾನ್ ಖಾನರ ಹಲೋ ಬ್ರದರ್ (ಅಮೆರಿಕನ್ ಸಿನಿಮಾ Heart condition ದ ರಿಮೇಕ್) ಅತಿಮಾನುಷ ಜಗತ್ತಿನ ಚಿತ್ರಣವಿರುವ ಕಥೆಗಳೇ ಆಗಿವೆ. ಒಂದು ಪೀಳಿಗೆಯನ್ನೇ ಪ್ರಭಾವಿಸಿ ಬದಲಿಸಿದ (ಮಾಧ್ವ ಯತಿಯೊಬ್ಬರನ್ನು ಪುರಾಣದ ದೇವರ ಮಟ್ಟಕ್ಕೆ ಕೊಂಡೊಯ್ದ) ಹಳೆಯ ಕನ್ನಡ ಸಿನಿಮಾ ನಾನಿನ್ನ ಬಿಡಲಾರೆ ಅಷ್ಟೆ ಅಲ್ಲದೇ, ಇತ್ತೀಚೆಗೆ ಧೂಳೆಬ್ಬಿಸಿದ ಕರಾವಳಿಯ ಬದುಕಿನದ್ದೇ ಚಿತ್ರಣವಿರುವ ಸೂಪರ್ ಹಿಟ್ ’ಸು ಫ್ರಮ್ ಸೋ” ದಲ್ಲೂ ಕೂಡ ಚಿತ್ರದ ಕತೆ ಕಿಟಕಿ ಇಣುಕಿ ತಪ್ಪಿಸಿಕೊಳ್ಳಲು ದೈವ ಮೈಮೇಲೆ ಬಂದಂತೆ ನಟಿಸಿ ಆ ಬಳಿಕ ಅದರಿಂದ ಹೊರಬರಲಾರದೇ ಒದ್ದಾಡುವ ತಮಾಷೆಯ ಸಂಗತಿಯನ್ನೇ ಆಧರಿಸಿದ್ದು ತಾನೇ.. (ಮದ್ಯ ವರ್ಜನ ಶಿಬಿರದಲ್ಲಿ ಕ್ರಿಶ್ಚಿಯನ್ ಸಮುದಾಯದ ಮಾಜಿ ಕುಡುಕರೊಬ್ಬರು, ಮನೆಯಲ್ಲಿ ಕೂಡಿ ಹಾಕುವುದೇ ಮೊದಲಾದ ನಿರ್ಬಂಧಗಳನ್ನು ಅವರ ಮೇಲೆ ಹೇರಿದಾಗ ನಾನು ತಪ್ಪಿಸಿಕೊಳ್ಳಲು ದೆವ್ವ ಬಂದವರಂತೆ ವರ್ತಿಸಿದ್ದೂ ಇದೆ ಎಂದಿದ್ದನ್ನು ಕೇಳಿದ್ದೆ) ಇಂತಹ ಅತಿಮಾನುಷ ನಂಬಿಕೆಗಳ ಕತೆಯಿರುವ ಸಿನಿಮಾಗಳು ಸಾಕಷ್ಟು ಬಂದಿವೆ. ಅದೇ ರೀತಿ ಈ ’ಕಾಂತಾರ” ಗಳೂ ಕೂಡ ಇಂತಹ ಸಾಂಪ್ರದಾಯಿಕ ನಂಬಿಕೆಯ ಹಿನ್ನೆಲೆಯ ಎಳೆಯನ್ನು ಇಟ್ಟುಕೊಂಡೇ ಮಾಡಿದಂತಹ ಸಿನಿಮಾಗಳು. ನಿಜಕ್ಕೂ ಈರೀತಿ ದೈವ /ಆತ್ಮಗಳ ಆವಾಹನೆ ಅಥವಾ ಮೈಮೇಲೆ ಬರುವುದೆಲ್ಲ ನಿಜವೇ? ಇದನ್ನೇ ಯೂಟ್ಯೂಬ್ ನಲ್ಲಿ ಒಬ್ಬರು ಹಾಗೆಲ್ಲ ಇದ್ದಿದ್ದರೆ ಸೈನಿಕರು ಯಾಕೆ ಗಡಿಕಾವಲಿಗೆ ಬೇಕಿತ್ತು ಇವರನ್ನೇ ನೇಮಿಸಬಹುದಲ್ಲ ಎಂದು ಮಾತನಾಡಿದ್ದರು. ಒಟ್ಟಾರೆ ಇವನ್ನೆಲ್ಲ ಕೇವಲ ನಂಬಿಕೆಯ ವಿಚಾರಗಳು ಎಂದು ಬಿಡಬೇಕಷ್ಟೆ.

ಈಗಿನ ಕೋಲಾರ ತಮಿಳುನಾಡು ಪರಿಸರದ ಚಿನ್ನದ ನಿಕ್ಷೇಪದ ಕಥೆ ಹೇಳುವ ವಿಕ್ರಮ್ ಅಭಿನಯದ ತಾಂಗಲಾನ್ ತಮಿಳು ಸಿನಿಮಾವನ್ನು ನೆನಪಿಸುವ ತಮ್ಮ ನೆಲೆಯ ಕಾಡುತ್ಪನ್ನ ಸಂಬಾರ ಪದಾರ್ಥದ ದೋಚುಕೋರರ ವಿರುದ್ಧ ಪ್ರತಿರೋಧ ತೋರುವ ಕಥೆಯ ಹೊಸ ಕಾಂತಾರ ಮೊದಲ ಕಾಂತಾರದಷ್ಟು ಮನಸೆಳೆಯ ಹೋಗದಿದ್ದರೂ ಮೇಕಿಂಗ್ ಮತ್ತು ತಾಂತ್ರಿಕ ಅಬ್ಬರದ ವಿಷಯದಲ್ಲಿ ವಾವ್ ಅನ್ನಿಸುವಂತಿದೆ. ಸಿನಿಮಾದಲ್ಲಿ ರಿಷಭ್ ಶೆಟ್ಟರ ಶ್ರಮ, ಸಂಪೂರ್ಣ ತೊಡಗಿಸಿಕೊಳ್ಳುವಿಕೆ, ನೀಡಹೊರಟ ಮನರಂಜನೆಯ ಗುಣಮಟ್ಟದ ವಿಷಯದಲ್ಲಿ ಎಲ್ಲೂ ರಾಜಿಯಾಗದಿರುವಿಕೆ ಎಲ್ಲವೂ ಎದ್ದು ಇಲ್ಲಿ ಕಾಣುವಂತಿದೆ. ರಾಜರ ಕಾಲದ ಕಥೆಯ ಹೊಸ ಕಾಂತಾರ ನಮ್ಮನ್ನು ಕೇವಲ ಪ್ರೇಕ್ಷಕರನ್ನಾಗಿಸಿ ಪ್ರತ್ಯೇಕಿಸಿದರೆ ಹಿಂದಿನ ಕಾಂತಾರದ ಕಾಡಬೆಟ್ಟಿನ ಶಿವ ಮತ್ತು ಇನ್ನಿತರ ಪಾತ್ರಗಳು  ನಾವೇ ಅಥವಾ ನಮ್ಮ ಸುತ್ತಲಿನವರೇ ಅನ್ನಿಸಿ ಸಿನಿಮಾ ಹೆಚ್ಚು ಆಪ್ತವೆನಿಸುತ್ತದೆ.

ಹಿಂದಿನ ಕಾಂತಾರದ ವರಾಹರೂಪಂ ಹಾಡು ಪಂಜುರ್ಲಿಯನ್ನು ವಿಷ್ಣುವಿನ ವರಾಹಾವತಾರಕ್ಕೆ ಹೋಲಿಸಿದಂತಿದ್ದರೆ, ಹೊಸ ಕಾಂತಾರದಲ್ಲೂ ಕೂಡ ಬರುವ ಶಿವನ ಹೂದೋಟ ಎನ್ನುವ ಮಾತು ಅನವಶ್ಯಕವಾಗಿ ವೈದಿಕ ದೇವರನ್ನು ಎಳೆದು ತಂದಿತ್ತು. ಆದರೆ ಸಿನಿಮಾ ಬಿಡುಗಡೆಗೂ ಮೊದಲು ಇದರ ಹಾಡೊಂದು ಬಿಡುಗಡೆಯಾಗಿದ್ದು ಅದು ಪರಶುರಾಮ.. ಪರಶುರಾಮ.. ಎಂದು ಜಪಿಸುವಂತಹ ಹಾಡಾಗಿತ್ತು. ಅಷ್ಟೇ ಅಲ್ಲದೇ ಬಿಡುಗಡೆಗೊಳಿಸಿದ ಪೋಸ್ಟರ್ ನಲ್ಲೂ ಸಹ ಪರಶುರಾಮನಂತೆ ಕೊಡಲಿ ಹಿಡಿದು ಶತ್ರು ಸಂಹಾರಕ್ಕೆ ಹೊರಟವನ ಚಿತ್ರವಿತ್ತಾದರೂ ನಂತರ ಬಂದ ಚಿತ್ರದಲ್ಲಿ ಈ ಪರಶುರಾಮನ ಹಾಡಾಗಲೀ ಪರಶುರಾಮನ ಕತೆಯಾಗಲೀ ಎಲ್ಲೂ ಕಾಣಿಸಿಕೊಳ್ಳದೇ ಒಂದೆಡೆ ಅರಮನೆಯಲ್ಲಿ ಕೇವಲ ಬ್ರಾಹ್ಮಣರ ಬಾಯಿಂದಷ್ಟೆ ಪರಶುರಾಮಸೃಷ್ಟಿ ಎಂಬ ಮಾತನ್ನು ಹೇಳಿಸಲಾಗುತ್ತದೆ. ಅರ್ಥಾತ್ ನಂಬಿಕೆಯ ಪರಶುರಾಮ ಸೃಷ್ಟಿ ಹೌದು ಆದರದು ಕೇವಲ ಬ್ರಾಹ್ಮಣರಿಗಷ್ಟೆ ಎನ್ನುವ ಸಂದೇಶ ಇದ್ದಂತಿದೆ.

ಏನೇ ಆದರೂ ಕಾಂತಾರಗಳ ಹೆಸರಲ್ಲಿ ಅಸ್ಪೃಶ್ಯತೆ, ಜೀತದಂತಹ ಪಿಡುಗುಗಳ ಬಗ್ಗೆ ಕತೆ ಹೆಣೆದಿರುವ ರಿಷಭ್ ಶೆಟ್ಟರ ಕಾಳಜಿ ನಿಜಕ್ಕೂ ಮೆಚ್ಚುಬೇಕಾದದ್ದೇ.

ಶಂಕರ್ ಸೂರ್ನಳ್ಳಿ

ಸಾಮಾಜಿಕ ಹೋರಾಟಗಾರರು.

ಇದನ್ನೂ ಓದಿ- ಮಾರ್ಗಿ : ಕಾಯಕ, ಭಕ್ತಿ ಮತ್ತು ರಾಜಕಾರಣ

More articles

Latest article