ಲಿಂಗರಾಜ್ ಸೊಟ್ಟಪ್ಪನವರ ಅವರ ಚೊಚ್ಚಲ ಕಥಾ ಸಂಕಲನ ‘ಮಾರ್ಗಿಯಲ್ಲಿ ಒಟ್ಟು ಹದಿನೈದು ಕಥೆಗಳಿದ್ದು, ಪ್ರತಿಯೊಂದು ಕಥೆಯು ಗ್ರಾಮೀಣ ಬದುಕಿನ ಸ್ಥಿತ್ಯಂತರಗಳು, ಜಾಗತೀಕರಣದ ಪ್ರಭಾವ, ಜಾತಿ ವ್ಯವಸ್ಥೆಯ ಕ್ರೌರ್ಯ, ಸಂಬಂಧಗಳ ಸೂಕ್ಷ್ಮತೆ ಮತ್ತು ಆಧುನಿಕತೆಯ ಸಂಘರ್ಷದಲ್ಲಿ ಸಿಲುಕಿದ ಮಾನವೀಯ ಬಿಕ್ಕಟ್ಟುಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ – ಡಾ. ರವಿ ಎಂ. ಸಿದ್ಲಿಪುರ
ವಿಜ್ಞಾನದ ವಿದ್ಯಾರ್ಥಿಯಾಗಿ, ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ರಚನೆಗೆ ತೊಡಗಿಸಿಕೊಳ್ಳುವವರ ಬರಹಗಳಲ್ಲಿ ಒಂದು ಬಗೆಯ ವೈಚಾರಿಕ ಸ್ಪಷ್ಟತೆ ಮತ್ತು ವಿಶ್ಲೇಷಣಾತ್ಮಕ ನಿಖರತೆ ಇರುತ್ತದೆ. ಇದಕ್ಕೆ ಕನ್ನಡ ಸಾಹಿತ್ಯದಲ್ಲಿ ಹಲವು ಉದಾಹರಣೆಗಳಿವೆ. ಈ ಸಾಲಿಗೆ ಸೇರುವ ಮತ್ತೊಂದು ಮಹತ್ವದ ಹೆಸರು ಲಿಂಗರಾಜ್ ಸೊಟ್ಟಪ್ಪನವರ. ಅವರ ಚೊಚ್ಚಲ ಕಥಾ ಸಂಕಲನ ‘ಮಾರ್ಗಿ’ಯು ಸಮಕಾಲೀನ ಕನ್ನಡ ಸಣ್ಣಕಥಾ ಜಗತ್ತಿನಲ್ಲಿ ಒಂದು ಗಟ್ಟಿಯಾದ ಹೆಜ್ಜೆಗುರುತನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಕಲನದಲ್ಲಿ ಒಟ್ಟು ಹದಿನೈದು ಕಥೆಗಳಿದ್ದು, ಪ್ರತಿಯೊಂದು ಕಥೆಯು ಗ್ರಾಮೀಣ ಬದುಕಿನ ಸ್ಥಿತ್ಯಂತರಗಳು, ಜಾಗತೀಕರಣದ ಪ್ರಭಾವ, ಜಾತಿ ವ್ಯವಸ್ಥೆಯ ಕ್ರೌರ್ಯ, ಸಂಬಂಧಗಳ ಸೂಕ್ಷ್ಮತೆ ಮತ್ತು ಆಧುನಿಕತೆಯ ಸಂಘರ್ಷದಲ್ಲಿ ಸಿಲುಕಿದ ಮಾನವೀಯ ಬಿಕ್ಕಟ್ಟುಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.
ನೋವು ಮತ್ತು ನಿರೀಕ್ಷೆಗಳ ನಡುವೆ
‘ಮಾರ್ಗಿ’ ಸಂಕಲನದಲ್ಲಿನ ಪ್ರತಿಯೊಂದು ಕಥೆಯೂ ತನ್ನದೇ ಆದ ವಿಶಿಷ್ಟ ಜಗತ್ತನ್ನು ಹೊಂದಿದೆ. ‘ದೂರತೀರದ ಮೋಹ’ ಕಥೆಯು ಗೋವಾದಂತಹ ಆಧುನಿಕ ನಗರಗಳ ಆಕರ್ಷಣೆಗೆ ಒಳಗಾಗಿ ತಮ್ಮ ಹಳ್ಳಿಗಳನ್ನು ತೊರೆಯುವ ಯುವಜನರ ಭ್ರಮನಿರಸನವನ್ನು ಚಿತ್ರಿಸಿದರೆ, ‘ಮನೆ ಬೇಕಾಗಿದೆ’ ಕಥೆಯು ನಗರ ಪ್ರದೇಶಗಳಲ್ಲಿಯೂ ಜಾತಿ ವ್ಯವಸ್ಥೆಯು ಹೇಗೆ ತನ್ನ ಕರಾಳ ಮುಖವನ್ನು ಉಳಿಸಿಕೊಂಡಿದೆ ಎಂಬುದನ್ನು ನಿರ್ದಾಕ್ಷಿಣ್ಯವಾಗಿ ಬಯಲು ಮಾಡುತ್ತದೆ. ಅಸ್ಪೃಶ್ಯತೆಯ ನೋವನ್ನುಂಡ ವ್ಯಕ್ತಿಯೊಬ್ಬ ತನಗೊಂದು ಸೂರು ಕಟ್ಟಿಕೊಳ್ಳಲು ಪಡುವ ಪಾಡು, ಆಧುನಿಕತೆಯ ಮು-ಖವಾಡದ ಹಿಂದಿನ ಕ್ರೌರ್ಯವನ್ನು ತೆರೆದಿಡುತ್ತದೆ.

‘ಮಠ’ ಕಥೆಯು ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಶೋಷಣೆ ಮತ್ತು ಅಧಿಕಾರದ ರಾಜಕಾರಣವನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಿದರೆ, ‘ಬೇಲಿ ಮತ್ತು ಹೂವು’ ಕಥೆಯು ಜಾತಿಯ ಎಲ್ಲೆಗಳನ್ನು ಮೀರಿ ಅರಳುವ ಪ್ರೀತಿಯ ದುರಂತವನ್ನು ಮನಕಲಕುವಂತೆ ನಿರೂಪಿಸುತ್ತದೆ. ಅಂತೆಯೇ, ‘ಕೊನಡೆ’, ‘ಸದ್ದು ಬೇಸಿಗೆಯ ಒಂದು ಹಗಲುಗನಸು’ ಮುಂತಾದ ಕಥೆಗಳು ಗ್ರಾಮೀಣ ಬದುಕಿನ ನಂಬಿಕೆಗಳು, ಲೈಂಗಿಕ ತುಮುಲಗಳು ಮತ್ತು ಮನೋವೈಜ್ಞಾನಿಕ ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ಹಿಡಿದಿಡುತ್ತವೆ. ಲೇಖಕರ ಭಾಷೆಯು ಉತ್ತರ ಕರ್ನಾಟಕದ ಆಡುಮಾತಿನ ಸೊಗಡಿನಿಂದ ಕೂಡಿದ್ದು, ಅದು ಕಥೆಗಳಿಗೆ ಒಂದು ಬಗೆಯ ಸಹಜತೆ ಮತ್ತು ಜೀವಂತಿಕೆಯನ್ನು ತಂದುಕೊಟ್ಟಿದೆ. ಪ್ರಹ್ಲಾದ ಅಗಸನಕಟ್ಟೆ ಅವರು ತಮ್ಮ ಮುನ್ನುಡಿಯಲ್ಲಿ ಹೇಳುವಂತೆ, ಲೇಖಕರು “ಗಾಢವಾದ ಅನುಭವವನ್ನು ಒಂದು ಸುಭಗ ಪಾರದರ್ಶಕ ಶೈಲಿಯಲ್ಲಿ ಕಟ್ಟುವ ಕಲೆ”ಯಲ್ಲಿ ಯಶಸ್ವಿಯಾಗಿದ್ದಾರೆ. ಈ ಕಥೆಗಳು ಕೇವಲ ಸಾಮಾಜಿಕ ವಿಮರ್ಶೆಯಾಗಿ ಉಳಿಯದೆ, ಮಾನವೀಯ ಸಂವೇದನೆಗಳ ಆಳಕ್ಕಿಳಿದು ಓದುಗರನ್ನು ಕಾಡುತ್ತವೆ.
‘ಮಾರ್ಗಿ’ಯ ಅರ್ಥಪದರಗಳು
ಈ ಸಂಕಲನಕ್ಕೆ ಶೀರ್ಷಿಕೆಯಾಗಿರುವ ‘ಮಾರ್ಗಿ’ ಕಥೆಯು ಇಡೀ ಸಂಕಲನದ ಆಶಯವನ್ನು ಪ್ರತಿನಿಧಿಸುವ ಅತ್ಯಂತ ಶಕ್ತಿಶಾಲಿ ಕಥೆಯಾಗಿದೆ. ಕಥೆಯ ನಾಯಕ ನಾಮದೇವ ಶಿವಸಿಂಪಿ, ಊರಿನ ಜನರಿಂದ ಪ್ರೀತಿಯಿಂದ ‘ರಾಮಣ್ಣ’ ಎಂದು ಕರೆಯಲ್ಪಡುವ ಒಬ್ಬ ಸಾಮಾನ್ಯ ಸಿಂಪಿಗ. ತನ್ನ ಅಂಗಡಿಯಲ್ಲಿ ‘ಮಾರ್ಗಿ’ ಎಂಬ ಬಟ್ಟೆ ಹೊಲಿಯುತ್ತಾ, ಪಾಂಡುರಂಗನ ಪರಮಭಕ್ತನಾಗಿ, ಪ್ರತಿವರ್ಷ ಪಂಢರಪುರಕ್ಕೆ ‘ದಿಂಡಿ’(ಭಜನಾ ಯಾತ್ರೆ) ಹೋಗುತ್ತಾ ನೆಮ್ಮದಿಯ ಜೀವನ ನಡೆಸುವವನು. ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ, ಊರಿನ ಎರಡು ಪ್ರಬಲ ರಾಜಕೀಯ ಬಣಗಳ ಕಚ್ಚಾಟದಿಂದ ಬೇಸತ್ತ ಜನ, ರಾಮಣ್ಣನಂತಹ ಒಳ್ಳೆಯ ವ್ಯಕ್ತಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಪ್ರಸ್ತಾಪ ಮುಂದಿಡುತ್ತಾರೆ. ಭಕ್ತ ಮಂಡಳಿಯ ಒತ್ತಾಯಕ್ಕೆ ಮಣಿದು, ಇದನ್ನು ಪಾಂಡುರಂಗನ ಸೇವೆಯೆಂದೇ ಭಾವಿಸಿ ರಾಮಣ್ಣ ಚುನಾವಣೆಗೆ ನಿಲ್ಲಲು ಒಪ್ಪುತ್ತಾನೆ.
‘ಮಾರ್ಗಿ’ ಕಥೆಯು ಮೊದಲ ಓದಿಗೆ ಒಂದು ಸರಳ ರಾಜಕೀಯ ಕಥೆಯಂತೆ ಕಂಡರೂ, ಅದರ ಪದರಗಳನ್ನು ಬಿಡಿಸುತ್ತಾ ಹೋದಂತೆಲ್ಲಾ ಸಮಕಾಲೀನ ಭಾರತದ ತಳಸಮುದಾಯಗಳು ಎದುರಿಸುತ್ತಿರುವ ಅಸ್ಮಿತೆಯ ರಾಜಕಾರಣದ ಕ್ರೂರ ವಾಸ್ತವಗಳು ನಮ್ಮನ್ನು ತಟ್ಟುತ್ತವೆ. ಆರಂಭದಲ್ಲಿ ರಾಮಣ್ಣನ ಗೆಲುವು ನಿಶ್ಚಿತ ಎಂಬ ವಾತಾವರಣವಿದ್ದರೂ, ಇದನ್ನು ಸಹಿಸದ ರಾಜಕೀಯ ಶಕ್ತಿಗಳು ಒಂದಾಗುತ್ತವೆ. ರಾಮಣ್ಣನನ್ನು ಸೋಲಿಸಲು, ಅವು ಜಾತಿ ಮತ್ತು ಭಾಷೆಯ ವಿಷಬೀಜವನ್ನು ಬಿತ್ತಲು ಆರಂಭಿಸುತ್ತವೆ. ‘ರಾಮಣ್ಣ ನಮ್ಮವನಲ್ಲ, ಅವನು ಮರಾಠಿ, ಅವನದು ಆರ್ಯ ಮೂಲ, ನಮ್ಮ ದ್ರಾವಿಡ ಸಂಸ್ಕೃತಿಯವನಲ್ಲ’ ಎಂಬ ಕುತಂತ್ರದ ಪ್ರಚಾರವನ್ನು ವ್ಯವಸ್ಥಿತವಾಗಿ ಹರಿಯಬಿಡುತ್ತಾರೆ. ಆತನ ಪಾಂಡುರಂಗನ ಭಕ್ತಿಯನ್ನೇ ಅವನ ವಿರುದ್ಧ ಅಸ್ತ್ರವಾಗಿ ಬಳಸುತ್ತಾರೆ. ಈ ವಿಷ ಪ್ರಚಾರದ ಪರಿಣಾಮವಾಗಿ, ಅಲ್ಲಿಯವರೆಗೂ ರಾಮಣ್ಣನ ಪರವಾಗಿದ್ದ ಜನ, ಜಾತಿ ಮತ್ತು ಭಾಷೆಯ ಹೆಸರಿನಲ್ಲಿ ಒಡೆದು ಹೋಗುತ್ತಾರೆ. ಪ್ರಾಮಾಣಿಕನಾದ ರಾಮಣ್ಣ ಹೀನಾಯವಾಗಿ ಸೋಲನ್ನನುಭವಿಸುತ್ತಾನೆ. ನಮ್ಮ ದೇಶದಲ್ಲಿ ಆರ್ಯ-ದ್ರಾವಿಡ, ಉತ್ತರ-ದಕ್ಷಿಣ, ಕನ್ನಡ-ತಮಿಳು-ತೆಲುಗು-ಮರಾಠಿ, ಜಾತಿ, ಇವುಗಳು ಕೇವಲ ಶಬ್ದಗಳಾಗಿ ಉಳಿಯುವುದಿಲ್ಲ. ಒಂದನ್ನೊಂದು ಪರಕೀಯಗೊಳಿಸುವ ರಾಜಕೀಯ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ.

ಸೋಲಿನ ನಂತರ ಭ್ರಮನಿರಸನಗೊಂಡ ರಾಮಣ್ಣ, ಮತ್ತೆ ತನ್ನ ‘ಮಾರ್ಗಿ’ ಅಂಗಡಿಗೆ ಹಿಂತಿರುಗುತ್ತಾನೆ. ಈ ಹಂತದಲ್ಲಿ, ಕಥೆಯ ‘ಮಾರ್ಗಿ’ ಎಂಬ ಶೀರ್ಷಿಕೆಯು ಒಂದು ಶಕ್ತಿಶಾಲಿ ರೂಪಕವಾಗಿ ತೆರೆದುಕೊಳ್ಳುತ್ತದೆ. ಅದು ಕೇವಲ ರಾಮಣ್ಣನ ಅಂಗಡಿಯ ಹೆಸರಲ್ಲ; ಬದಲಿಗೆ, ಅವನು ಅನುಸರಿಸಿದ ‘ಭಕ್ತಿ ಮಾರ್ಗ’, ಪ್ರವೇಶಿಸಲು ಯತ್ನಿಸಿ ವಿಫಲನಾದ ‘ರಾಜಕೀಯ ಮಾರ್ಗ’ ಮತ್ತು ಅವನ ಬದುಕಿನ ಅಡಿಪಾಯವಾದ ‘ಕಾಯಕ ಮಾರ್ಗ’ – ಈ ಮೂರನ್ನೂ ಏಕಕಾಲದಲ್ಲಿ ಪ್ರತಿನಿಧಿಸುತ್ತದೆ. ರಾಜಕೀಯ ಮಾರ್ಗದ ಕ್ರೌರ್ಯದಿಂದ ಜರ್ಝರಿತನಾದ ಆತ, ತನ್ನ ಅಂಗಡಿಯಲ್ಲಿನ ಪಾಂಡುರಂಗನ ಫೋಟೋ ಮತ್ತು ಹೊಲಿಗೆ ಯಂತ್ರವನ್ನು ಪರ್ಯಾಯವಾಗಿ ನೋಡುವ ದೃಶ್ಯ ಅತ್ಯಂತ ಸಾಂಕೇತಿಕವಾಗಿದೆ. ಭಕ್ತಿ ಮಾರ್ಗವು ಮಾನಸಿಕ ನೆಮ್ಮದಿ ನೀಡಿದರೂ, ತನ್ನ ಬದುಕಿಗೆ ನಿಜವಾದ ಆಧಾರ ಮತ್ತು ಘನತೆಯನ್ನು ಒದಗಿಸುವುದು ‘ಕಾಯಕ ಮಾರ್ಗ’ವೇ ಎಂಬ ಸತ್ಯ ಅವನಿಗೆ ಅರಿವಾಗುತ್ತದೆ. ಈ ಜ್ಞಾನೋದಯದ ಕ್ಷಣದಲ್ಲಿ, ರಾಜಕೀಯದ ಹುಸಿ ಭರವಸೆಗಳನ್ನು ತೊರೆದು, ತನ್ನ ಶ್ರಮದ ವಾಸ್ತವ ಜಗತ್ತಿಗೆ ಮರಳುವ ರಾಮಣ್ಣನ ನಿರ್ಧಾರವು ‘ಕಾಯಕವೇ ಕೈಲಾಸ’ ಎಂಬ ತತ್ವದ ಬಲವಾದ ಪುನರ್ ಪ್ರತಿಪಾದನೆಯಂತೆ ಗೋಚರಿಸುತ್ತದೆ.
ವಿಭಜಿಸುವ ‘ಮಾರ್ಗಿ’
ಲಿಂಗರಾಜ ಸೊಟ್ಟಪ್ಪನವರ ‘ಮಾರ್ಗಿ’ ಸಂಕಲನವು ವರ್ತಮಾನದ ಗ್ರಾಮೀಣ ಭಾರತದ ಸಾಮಾಜಿಕ, ರಾಜಕೀಯ ಮತ್ತು ಮಾನಸಿಕ ಸಂಘರ್ಷಗಳಿಗೆ ಹಿಡಿದ ಕನ್ನಡಿಯಾಗಿದೆ. ಸರಳವೆಂದು ತೋರುವ ಬದುಕಿನೊಳಗೆ ಅಡಗಿರುವ ಸಂಕೀರ್ಣತೆಗಳನ್ನು, ಶೋಷಣೆಯ ವಿವಿಧ ರೂಪಗಳನ್ನು ಮತ್ತು ಅಸಹಾಯಕತೆಯ ನಡುವೆಯೂ ಮಿನುಗುವ ಮಾನವೀಯತೆಯ ಕಿಡಿಗಳನ್ನು ಈ ಕಥೆಗಳು ಅನಾವರಣಗೊಳಿಸುತ್ತವೆ. ‘ಮಾರ್ಗಿ’ ಕಥೆಯ ಮೂಲಕ ಕಥೆಗಾರ, ರಾಜಕೀಯವು ಜನರನ್ನು ಒಗ್ಗೂಡಿಸುವ ಬದಲು ಹೇಗೆ ವಿಭಜಿಸುವ ಮಾರ್ಗವಾಗಿದೆ ಎಂಬುದನ್ನು ಮನಗಾಣಿಸುತ್ತಾ, ಸಮಕಾಲೀನ ಸಮಾಜದ ಆತ್ಮವಿಮರ್ಶೆಗೆ ಹಚ್ಚುತ್ತಾರೆ. ಈ ಸಂಕಲನವು ಕನ್ನಡ ಕಥಾಲೋಕಕ್ಕೆ ಒಂದು ಮೌಲಿಕ ಕೊಡುಗೆಯಾಗಿದೆ.
ಡಾ. ರವಿ ಎಂ ಸಿದ್ಲಿಪುರ
ಸಹಾಯಕ ಪ್ರಾಧ್ಯಾಪಕರು
ಇದನ್ನೂ ಓದಿ- ಕನ್ನಡ ಕಾವ್ಯ: ನುಡಿ, ನಾಡು, ನಡಿಗೆ


