ಧರ್ಮಸ್ಥಳ: ಎಸ್‌ ಐಟಿ ತನಿಖೆಗೆ ಮಧ್ಯಂತರ ತಡೆ; ಆದರೆ ನಾಪತ್ತೆ, ಯುಡಿಆರ್ ಕುರಿತು ತನಿಖೆ ಮುಂದುವರಿಕೆ

Most read

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳನ್ನು ಎಸಗಿ ಮೃತ ದೇಹಗಳನ್ನು ಕಾನೂನುಬಾಹಿರವಾಗಿ ಹೂತುಹಾಕಲಾಗಿದೆ ಎಂಬ ಆರೋಪಗಳನ್ನು ಕುರಿತು ಎಸ್ಐಟಿ ನಡೆಸುತ್ತಿರುವ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳ‌ ಮತ್ತು ಬೆಳ್ತಂಗಡಿ ಪೊಲೀಸ್‌ ಠಾಣೆಗಳಲ್ಲಿ ಸಂಭವಿಸಿರುವ ಅಸ್ವಾಭಾವಿಕ ಸಾವುಗಳ (ಯುಡಿಆರ್) ಕುರಿತಾದ ಮತ್ತು ನಾಪತ್ತೆಯಾದವರನ್ನು ಕುರಿತು ತನಿಖೆ ಮುಂದುವರೆಯಲಿದೆ ಎಂದು ಬಿಎಲ್‌ ಆರ್‌ ಪೋಸ್ಟ್‌ ವರದಿ ಮಾಡಿದೆ.

ನಮ್ಮ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಮತ್ತು ಬೆಳ್ತಂಗಡಿ ಜೆಎಂಎಫ್‌ ಸಿ ನ್ಯಾಯಾಲಯದಲ್ಲಿ  ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ ಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ತಡೆ ನೀಡಿ ಆದೇಶಿಸಿದೆ.

ಈ ಮಧ್ಯೆ ಎಸ್‌ ಐಟಿಯು ವಿಚಾರಣೆಗೆ ಹಾಜರಾಗುವಂತೆ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಮತ್ತು ವಿಠಲ ಗೌಡ ಅವರಿಗೆ ನೋಟಿಸ್ ನೀಡಿದೆ.

ಹೈಕೋರ್ಟ್‌ ವಿಚಾರಣೆಗೆ ವಿಡಿಯೋ ಮುಖಾಂತರ ಹಾಜರಾದ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಸ್.ಬಾಲಕೃಷ್ಣನ್ ಹಾಗೂ ದೀಪಕ್ ಖೋಸ್ಲಾ, ಅವರು ವಾದಿಸಿ ಅರ್ಜಿದಾರರಿಗೆ ಈಗಾಗಲೇ 9 ಬಾರಿ ಪೊಲೀಸ್ ನೋಟಿಸ್ ಜಾರಿಗೊಳಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗಿದೆ. ಎಸ್‌ಐಟಿಯ ಮುಖ್ಯ ತನಿಖಾಧಿಕಾರಿಯು ಇದೇ ತಿಂಗಳ 24ರಂದು ವಾಟ್ಸ್ ಆ್ಯಪ್ ಮೂಲಕ ಅರ್ಜಿದಾರರಿಗೆ ಬಿಎನ್‌ಎಸ್ಎಸ್ ಕಲಂ 35(3) ಅಡಿಯಲ್ಲಿ ಮತ್ತೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈಗಾಗಲೇ 150 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ. ಆರಂಭದಲ್ಲಿ 211 (ಎ) ಅಡಿ ಎಫ್‌ಐಆರ್ ದಾಖಲಿಸಿ ನಂತರ ಬೇರೆ ಕಲಂಗಳ ಅಡಿಯಲ್ಲೂ ವಿಚಾರಣೆ ಮಾಡುತ್ತಿದ್ದಾರೆ.  ಆದ್ದರಿಂದ ಹೊಸದಾಗಿ ನೀಡಿರುವ ನೋಟಿಸ್‌ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಕೋರಿದಾಗ ನ್ಯಾಯಮೂರ್ತಿಗಳು  ಅರ್ಜಿದಾರರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು ಎಂದು ಪ್ರಾಸಿಕ್ಯೂಷನ್‌ ಗೆ ನಿರ್ದೇಶಿಸಿ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿದರು.

More articles

Latest article