ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಪರವಾಗಿ ಮಾತನಾಡಿರುವ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ನೈತಿಕತೆಯನ್ನು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಬ್ಯಾನ್ ಮಾಡುವುದಾದರೆ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬಹುದಲ್ಲವೇ ಎಂದು ಹೇಳುವ ಮೂಲಕ ತಮ್ಮ ದ್ವಂದ್ವ ವ್ಯಕ್ತಿತ್ವವನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಸ್ವತಂತ್ರ ಪೂರ್ವದಲ್ಲಿ ಎರಡು ಬಾರಿ ಮತ್ತು ಸ್ವತಂತ್ರಾ ನಂತರ ಮೂರು ಬಾರಿ ಬ್ಯಾನ್ ಗೆ ಒಳಗಾಗಿದ್ದ ಸಂಘ ಪರಿವಾರದ ಪರವಾಗಿ ಸಮರ್ಥ ವಕ್ತಾರರಾಗಿ ಕೆಲಸ ಮಾಡುವ ಜವಾಬ್ದಾರಿಯನ್ನು ಹೆಗಲಿಗೆ ಹೇರಿಸಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಸನಾತನಿಗಳ ವಿರುದ್ಧ ಧ್ವನಿ ಎತ್ತದ ಸಂತೋಷ ಹೆಗ್ಡೆ, ಆರ್ ಎಸ್ ಎಸ್ ಪರವಾಗಿ ಪೈಪೋಟಿಗೆ ಬಿದ್ದು ಸಮರ್ಥನೆಗೆ ಮುಂದಾಗಿರುವುದು ವ್ಯವಸ್ಥೆಯ ವಿಪರ್ಯಾಸವಾಗಿದೆ. ಆರ್ ಎಸ್ ಎಸ್ ಗೆ ಅನುಮತಿ ನಿರಾಕರಿಸಲು ಯಾವುದೇ ಗುರುತರ ಆರೋಪ ಇಲ್ಲ, ಅವರು ಕೊಲೆ ಮಾಡಿಲ್ಲ ಎನ್ನುವ ಹೆಗ್ಡೆರವರಿಗೆ ಮಹಾತ್ಮ ಗಾಂಧಿಯವರ ಕೊಲೆ ಮತ್ತು ಕೊಲೆ ಆರೋಪಿಗಳು ಕಣ್ಣಿಗೆ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ರವರ ಒಂದು ಪತ್ರಕ್ಕೆ ತಲ್ಲಣಗೊಂಡಿರುವ ಆರ್ ಎಸ್ ಎಸ್ ಮತ್ತು ಸಂಘ ಪರಿವಾರ, ವೈಯಕ್ತಿಕ ನಿಂದನೆಯಿಂದ ಹಿಡಿದು ಪ್ರಾಣ ಬೆದರಿಕೆ ಒತ್ತುವ ತನಕ ತನ್ನ ಪ್ರಯತ್ನಗಳನ್ನು ಬಿಚ್ಚಿಡುತ್ತಿದೆ. ಸಂತೋಷ್ ಹೆಗ್ಡೆ ರವರ ಸಂಘ ಪರಿವಾರದ ಹೇಳಿಕೆ ಇದರಿಂದ ಹೊರತಾಗಿಲ್ಲ. ಸಂವಿಧಾನದ ಅಡಿಯಲ್ಲಿ ನೀಡಿರುವ ಆರ್ಟಿಕಲ್ 19ರ ಮೂಲಭೂತ ಹಕ್ಕನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಂತೋಷ್ ಹೆಗ್ಡೆ ಮತ್ತು ಅವರ ಪಟಾಲಂ ವ್ಯಾಖ್ಯಾನ ಮಾಡಲು ಹೊರಟಿದೆ. ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರಗಳ ನಿಯಂತ್ರಣ ಅಧಿಕಾರವ ಸಮರ್ಥಿಸಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ನಡೆದಿರುವ ಹಲವಾರು ಕೋಮು ಗಲಭೆಗಳ ಹಿಂದೆ ಸಂಘ ಪರಿವಾರದ ಚಿತಾವಣೆ ಇರುವುದು ಅಂಕಿ ಅಂಶಗಳ ಸಮೇತ ಗೃಹ ಇಲಾಖೆ ನೀಡಿದೆ. ಸಂಘ ಪರಿವಾರದ ಜೊತೆಗೆ ಯಾವುದೇ ಸಂಘಟನೆಗಳು ದೇಶದ ಕಾನೂನು ಸುವ್ಯವಸ್ಥೆ ಕದಡುವ, ಶಾಂತಿ ಕದಡುವ, ಕೋಮು ಪ್ರಚೋದನೆ ಉಂಟು ಮಾಡುವ, ದೇಶದ ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಸಂದರ್ಭದಲ್ಲಿ ಸರ್ಕಾರಗಳು ಕೈಕಟ್ಟಿ ಕೂರಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.

