ಬಿಜೆಪಿ ಅವಧಿಯಲ್ಲಿ ಜಾತಿ ಆಧಾರಿತ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ: ಮಲ್ಲಿಕಾರ್ಜುನ ಖರ್ಗೆ ಕಳವಳ

Most read

ನವದೆಹಲಿ: ರಾಷ್ಟ್ರೀಯ ಅಪರಾಧ ಬ್ಯೂರೋ ಅಂಕಿಅಂಶಗಳ ಪ್ರಕಾರ 2013 ರಿಂದ 2023 ರವರೆಗೆ ದಲಿತರ ಮೇಲಿನ ಅಪರಾಧಗಳು ಶೇ. 46 ಮತ್ತು ಆದಿವಾಸಿಗಳ ಮೇಲಿನ ಅಪರಾಧ ಶೇ. 91 ರಷ್ಟು ಹೆಚ್ಚಳವಾಗಿದೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ  ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಅಂಕಿಅಂಶಗಳನ್ನು ಹಂಚಿಕೊಂಡಿರುವ ಅವರು, ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ವಿರುದ್ಧ  ಊಳಿಗಮಾನ್ಯ ಮತ್ತು ಜಾತಿವಾದಿ ಮನಸ್ಥಿತಿಯನ್ನು ಬಿಜೆಪಿ ಸಕ್ರಿಯಗೊಳಿಸುತ್ತಿದೆ ಮತ್ತು ಸಮರ್ಥಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ, ಹರಿಯಾಣದ ದಲಿತ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ದಲಿತ ವ್ಯಕ್ತಿ ಹರಿಓಂ ವಾಲ್ಮೀಕಿಯ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರವನ್ನು ಕಾಣಬಹುದು ಎಂದು ಹೇಳಿದ್ದಾರೆ.

ಈ ಘಟನೆಗಳು ಆರ್‌ಎಸ್‌ಎಸ್-ಬಿಜೆಪಿಯ ಊಳಿಗಮಾನ್ಯ ಮನಸ್ಥಿತಿಯ ಅಪಾಯಕಾರಿ ಮನೋಭಾವವನ್ನು ತೋರಿಸುತ್ತದೆ ಮತ್ತು ಸಂವಿಧಾನ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳ ಮೇಲಿನ ನೇರ ದಾಳಿಯಾಗಿದೆ ಎಂದು ಟೀಕಿಸಿದ್ದಾರೆ.

ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಇತರ ಅಂಚಿನಲ್ಲಿರುವ ಗುಂಪುಗಳನ್ನು ಹತ್ತಿಕ್ಕಲು ಆಡಳಿತಾರೂಢ ಎನ್‌ ಡಿಎ ಸರ್ಕಾರ ಹವಣಿಸುತ್ತಿದೆ. ಭಾರತವು ಸಂವಿಧಾನದಿಂದ ಆಳಲ್ಪಡುತ್ತದೆ, ಯಾವುದೇ ಉಗ್ರಗಾಮಿ ಸಿದ್ಧಾಂತಗಳಿಂದಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

More articles

Latest article