ನವದೆಹಲಿ: ಐಷಾರಾಮಿ ವಾಹನಗಳ ಕಳ್ಳ ಸಾಗಣೆಗೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯವು (ಇಡಿ) ಖ್ಯಾತ ನಟರಾದ ಮುಮ್ಮುಟ್ಟಿ, ದುಲ್ಕರ್ ಸಲ್ಮಾನ್, ಅಮಿತ್ ಚಕ್ಕಲಕಲ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ನಿವಾಸಗಳಲ್ಲಿ ಶೋಧ ಆರಂಭಿಸಿದೆ.
ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ತಮಿಳುನಾಡಿನಲ್ಲಿ ಈ ನಟರಿಗೆ ಸೇರಿದ ನಿವಾಸಗಳು ಸೇರಿದಂತೆ 17 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್, ಮಲಪ್ಪುರಂ, ಕೊಟ್ಟಾಯಂ ಮತ್ತು ಕೊಯಮತ್ತೂರಿನಲ್ಲಿ ದಾಳಿ ನಡೆಸಲಾಗಿದೆ. ಈ ನಗರಗಳ ವಾಹನಗಳ ವ್ಯಾಪಾರಿಗಳನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಭೂತಾನ್ ಮತ್ತು ನೇಪಾಳದಿಂದ ಅಕ್ರಮ ಮಾರ್ಗಗಳ ಮೂಲಕ ಲ್ಯಾಂಡ್ ಕ್ರೂಸರ್‌ಗಳು, ಡಿಫೆಂಡರ್‌ಗಳು ಮತ್ತು ಮಸೆರಾಟಿಸ್ ನಂತಹ ಐಷಾರಾಮಿ ಕಾರುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.
ಕೊಯಮತ್ತೂರು ಮೂಲದ ಜಾಲವು ಭಾರತೀಯ ಸೇನೆ, ಅಮೆರಿಕ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವಾಲಯದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ಆರ್‌ಟಿಒ ನೋಂದಣಿಗಳನ್ನು ಬಳಸಿಕೊಂಡು ಕಾರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದವು. ನಂತರ ಈ ಕಾರುಗಳನ್ನು ಸಿನಿಮಾ ನಟರು ಸೇರಿದಂತೆ ವಿಐಪಿಗಳು ಮತ್ತು ಸೆಲೆಬ್ರಿಟಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.