ಕರ್ನಾಟಕ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿರುವ ಹಿರಿಯ ಬರಹಗಾರ ಮತ್ತು ಚಿಂತಕ ಡಾ. ಮೊಗಳ್ಳಿ ಗಣೇಶ್ ನಿಧನರಾಗಿದ್ದಾರೆ. ಅಗಲಿದ ಹಿರಿಯ ಚೇತನಕ್ಕೆ ತಮ್ಮ ಕಾವ್ಯದ ಮೂಲಕ ನುಡಿ ನಮನ ಸಲ್ಲಿಸಿದ್ದಾರೆ ಹಂಪಿ ವಿಶ್ವವಿದ್ಯಾಲಯದ ಡಾ. ಬಿ ಎಂ ಪುಟ್ಟಯ್ಯ.
ಬುಗುರಿ
ನೀ ಬಿಟ್ಟ ಬುಗುರಿ ತಿರುಗುತ್ತಿತ್ತು
ತಿರುಗುತ್ತಾ ತಿರುಗುತ್ತಿತ್ತು
ತಿರುಗುತ್ತಲೇ ತಿರುಗುತ್ತಿತ್ತು |
ಊರಿನ ನಂಜನ್ನುಂಡ ಕೇರಿ ಕೊಬ್ಬಿ ಕರುಬುತ್ತಿತ್ತು
ಇದನು ಮರೆಸುವೆನೆಂದು ಪಟ್ಟಣ ಕರೆಯುತ್ತಿತ್ತು
ಕೇರಿ ತೂರಿ ಪಟ್ಟಣ ಸೇರಿ
ಉಸಿರಾಡುವ ಉಸಿರ ಮೈದುಂಬಿಸಿಕೊಂಡಿತು
ತಗ್ಗು ಇಳಿದು ದಿಣ್ಣೆ ಏರಿ
ದಣಿವರಿಯದೆ ದಣಿಯುತ್ತಾ
ಸಮತಟ್ಟು ನೆಲಕೆ ಬರಲು
ಜೀವ ಸವೆಸಿ ದಣಿವನುಂಡು ಬೆವರ ಕುಡಿದು
ಹಸಿವ ನೀಗಿಕೊಂಡಿತು |
ಬಾಳ ಬದುಕಿನ ಕಹಿ ಒಡಲಿನ
ಕಡಲಾಳದ ಒಳಗಿಳಿದು
ಕದಡಿ ತದುಕಿ ಕಂಡ ತೊಟ್ಟು ಹನಿಯನು
ಸಿಹಿ ಎಂದು ಹಿಗ್ಗಿ ಹಿಗ್ಗಿ ನಲಿಯಿತು
ನೋಡುಗರಿಗೆ ಕಾಣಿರೆಂದು ಕೋರಿತು |
ನೀ ಬಿಟ್ಟ ಬುಗುರಿ ಗರಗರ ಬರಬರ ತಿರುಗುತ್ತಿತ್ತು
ಗುಂಯ್ ಗುಂಯ್ ಗುಂಯ್ ಗುಡುತ್ತಿತ್ತು
ಕಾದುವ ಗೂಳಿಯಾಗಿತ್ತು, ಚಲಿಸುವ ಮೋಡವಾಗಿತ್ತು
ಗರಿಬಿಚ್ಚಿ ಕುಣಿಯುವ ನವಿಲಾಗಿತ್ತು
ಚೆಲುವು ಚಿಮ್ಮುತ್ತಿತ್ತು; ಸೊಬಗು ಸೊಗಸಾಗಿತ್ತು |
ಹತ್ತಿರ ಹೋದವರಿಗೆ
`ನಿಂತು ನೋಡಿ ನಂತರ ಬನ್ನಿ’ ಎನ್ನುತ್ತಿತ್ತು |
ಬುಗುರಿಯ ಮರಗಳು
ಬುಗುರಿ ಹುರಿಯ ನಾರಿನ ಮರಗಳು
ಸಾಲುಸಾಲು ಕೊಲೆಗಳು
ಬೋಳಾಯಿತು ಕಾಡು, ನಾಡಿಗಾಯ್ತು ಕೇಡು
ಪ್ಲಾಸ್ಟಿಕ್ ಬುಗುರಿ!
ಪ್ಲಾಸ್ಟಿಕ್ ದಾರ!
ಎಲ್ಲೆಲ್ಲೂ ಕಾಂಚಾಣದ ಕಾರುಭಾರು
ಬಡವ ಬಲ್ಲಿದರ ನಡುವೆ ಭೂಮಿ ಆಕಾಶದ
ಅಂತರ
ದುಡಿಯುವವರಿಗೆ ದುಡಿಮೆಯಿಲ್ಲ
ಅಗುಳು ಅನ್ನಕ್ಕೂ ತತ್ವಾರ
ಲೂಟಿಕೋರ ದಾಳಿಗಿಟ್ಟ ಹೆಸರು ಜಾಗತೀಕರಣ
ಬುಗುರಿ ಇದನು ಕಾಣದಾಗಿ
ಜಾಗತೀಕರಣವೆ ಬಿಡುಗಡೆಯ ಹೆಬ್ಬಾಗಿಲೆಂದು
ನಂಬಿ ನಡೆದು ತಿರುಗಿತು |
ನೀ ಬಿಟ್ಟ ಬುಗುರಿ ನೆಲದಲ್ಲಿ ತಿರುಗುತ್ತಲೇ
ತಿರುಗುತ್ತಿತ್ತು
ತಿರುಗುವ ಬುಗುರಿಯನು ಹುರಿಯಿಂದ ಮೇಲೆತ್ತಿ
ಅಂಗೈಗೆ ತರುವಷ್ಟರಲ್ಲಿ
ತಿರುಗಿ ನೆಲ ಸೇರುತ್ತಿತ್ತು
ಪ್ರಯತ್ನವ ಗೇಲಿ ಮಾಡಿ
ತಲೆಮೇಲೆ ಏರುವುದೆ ಗುರಿಯೆಂದು ಗರಿ
ಬಿಚ್ಚಿತ್ತು |
ನೀ ಬಿಟ್ಟ ಬುಗುರಿ ತಿರುಗುತ್ತಿತ್ತು
ಬುಗುರಿ ಆಟದಲ್ಲಿ
ಯಾವು ಯಾವುದಕ್ಕೋ ಡಿಕ್ಕಿ ಹೊಡೆಯುತ್ತಿತ್ತು
ಡಿಕ್ಕಿ ಹೊಡೆಸಿಕೊಳ್ಳುತ್ತಿತ್ತು |
ಬುಗುರಿಯಾಟದಲ್ಲಿ ಗುನ್ನ ಹೊಡೆಯಲು ಹೋಗಿ
ಗುನ್ನವಂತೂ ಬೀಳುತ್ತಿತ್ತು
ಆದರೆ, ಗುರಿ ತಪ್ಪುತ್ತಿತ್ತು
ಗುನ್ನ ಹೊಡೆಸಿಕೊಂಡವರು
‘ಗುನ್ನ ಬಿತ್ತು; ಗುರಿ ತಪ್ಪಿತಲ್ಲ’
ಎಂದು ಪರಿತಪಿಸುತ್ತಿದ್ದರು
ಒಳಗೊಳಗೇ ಗುನುಗುತ್ತಿದ್ದರು |
ನೀ ಬಿಟ್ಟ ಬುಗುರಿ ತಿರುಗುತ್ತಿತ್ತು
ಏಕಾಂತವಾಗಿ ತಿರುಗುತ್ತಿತ್ತು
ಹುರಿಯ ಬಿಗಿತ ಸಡಿಲಗೊಂಡು ತಿರುಗಲು
ಬಳಲುತ್ತಿತ್ತು
ತಿರುಗುವ ಬುಗುರಿ ನಮ್ಮನ್ನು ನೋಡುತ್ತಿತ್ತೊ?
ನಾವು ಬುಗುರಿಯ ನೋಡುತ್ತಿದ್ದೆವೊ?
ಅಂತೂ ಬುಗುರಿ ತಿರುಗುತ್ತಿತ್ತು |
‘ನಾನು ತಿರುಗುವುದನ್ನು ನನ್ನ ಮಟ್ಟಕ್ಕೇರಿ
ಯಾರೂ ನೋಡಲೇಯಿಲ್ಲ’ ಎಂದು ಬುಗುರಿ
ಅತೃಪ್ತಿಯಿಂದ ಕೊರಗಿತೆ?
ಸೊರಗಿತೆ?
ಹುರಿಯ ಬಿಗಿತ ಸಡಿಲವಾಯಿತೆ?
ಮೊಳೆಯ ಮೊನಚು ಮೊಂಡಾಯಿತೆ?
ಹುರಿಯ ಬಿಗಿತ ಸಡಿಲಗೊಂಡು
ಬುಗುರಿ ತಿರುಗಲು ಸಾಹಸ ಪಟ್ಟಿತು |
ತಿರುಗದ ಬುಗುರಿ
ತಿರುಗುವ ಬುಗುರಿಯ ನೋಡಲು
ನೋಡುವ ಕಡೆಗೆ ತಿರುಗುತ್ತಿತ್ತು |
ಡಾ. ಬಿ.ಎಂ. ಪುಟ್ಟಯ್ಯ