ಶಿವಮೊಗ್ಗ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಾ ಸಂವಿಧಾನಬಾಹಿರ ನಡೆ ಪ್ರದರ್ಶಿಸುತ್ತಿರುವ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಸಮೀಕ್ಷೆಯನ್ನು ಐದು ದಿನಗಳಲ್ಲೇ ಪೂರ್ಣಗೊಳಿಸಿದ 25 ಜನ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಯಶಸ್ಸು ಬಿಜೆಪಿಯ ಸೋಲು ಎಂದು ವ್ಯಾಖ್ಯಾನಿಸಿದ ಅವರು ಸಣ್ಣ ಸಮುದಾಯಗಳು, ಅರ್ಥಿಕವಾಗಿ ಹಿಂದುಳಿದವರ ಪ್ರಗತಿ ಸಾಧಿಸುವುದು ಸಮೀಕ್ಷೆಯ ಉದ್ದೇಶವಾಗಿದೆ. ಆದರೆ ಬಿಜೆಪಿಯ ತೇಜಸ್ವಿ ಸೂರ್ಯ, ಪ್ರಲ್ಹಾದ ಜೋಶಿ, ವಿಜಯೇಂದ್ರ, ಆರ್.ಅಶೋಕ ಅವರು ಸಮೀಕ್ಷೆ ವಿರೋಧಿಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು, ತಳ ಸಮುದಾಯದವರು ಇದ್ದ ಸ್ಥಿತಿಯಲ್ಲೇ ಇರಬೇಕು ಎನ್ನವುದು ಅವರ ಉದ್ದೇಶವಾಗಿರಬಹುದು ಎಂದು ಟೀಕಿಸಿದರು.
ಸಮೀಕ್ಷೆ ನೆಪದಲ್ಲಿ ಸರ್ಕಾರ ಜನರ ದತ್ತಾಂಶ ಕದಿಯುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಇಷ್ಟು ದಿನ ದೇಶದ ನಿವಾಸಿಗಳ ದತ್ತಾಂಶ ಕದ್ದು ಅದಾನಿ ಮತ್ತು ಅಂಬಾನಿಯವರಿಗೆ ಮಾರಿದ್ದು ಯಾರು ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಸಮೀಕ್ಷೆಯ ಮಹತ್ವ ಗೊತ್ತಿದೆ. ಹಾಗಾಗಿ ಅವರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿಲ್ಲ. ಉಳಿದ ಬಿಜೆಪಿ ನಾಯಕರಿಗೆ ಬಹುಶಃ ತಿಳಿವಳಿಕೆ ಇಲ್ಲದಿರಬಹುದು ಎಂದು ವ್ಯಂಗ್ಯವಾಡಿದರು.