ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿವಾಸ, ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಅವರ ನಿವಾಸಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು ಯಾವುದೇ ಸ್ಪೋಟಕ ವಸ್ತು ಕಂಡು ಬಂದಿಲ್ಲ. ಈ ಕರೆಗಳು ಹುಸಿ ಎಂದು ತಿಳಿಸಿದ್ದಾರೆ.
ಇಂದು ಸ್ಟಾಲಿನ್ ಅವರ ಆಳ್ವಾರ್ ಪೇಟೆ, ತ್ರಿಶಾ ಅವರ ತೆನಾಂಪೇಟೆ ನಿವಾಸಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿವೆ.
ಆಗಸ್ಟ್ 15ರಂದು ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು. ಇದೀಗ ಒಂದೂವರೆ ತಿಂಗಳ ನಂತರ ಮತ್ತೆ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದ ವ್ಯಕ್ತಿಯನ್ನು ಗಣೇಶ್ ಎಂದು ಗುರುತಿಸಲಾಗಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸ್ಟಾಲಿನ್ ಅವರಿಗೆ ಬಾಂಬ್ ಬೆದರಿಕೆ ಕರೆ ಇದೇ ಮೊದಲಲ್ಲ. 2024 ರಲ್ಲಿ ಅವರು ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗಬೇಕಿದ್ದ ವಿಮಾನವನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಇಮೇಲ್ ಕಳುಹಿಸಲಾಗಿತ್ತು. ಆಗಸ್ಟ್ 2023ರಲ್ಲಿ ಸ್ಟಾಲಿನ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಯುವಕನೊಬ್ಬನನ್ನು ಬಂಧಿಸಲಾಗಿತ್ತು.
ಕರೂರು ಕಾಲ್ತುಳಿತ ಸಂಭವಿಸಿದ ನಂತರ ಚೆನ್ನೈನ ನೀಲಂಕರೈನಲ್ಲಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ನಿವಾಸಕ್ಕೂ ಬಾಂಬ್ ಬೆದರಿಕೆ ಬಂದಿತ್ತು.