ರಾಹುಲ್‌ ಗಾಂಧಿಗೆ ಗುಂಡು: ಬಿಜೆಪಿಯ ಕೊಲೆಗಡುಕ ಸಂಸ್ಕೃತಿಗೆ ಉದಾಹರಣೆ: ಹರಿಪ್ರಸಾದ್‌ ಟೀಕೆ

Most read

ಬೆಂಗಳೂರು: ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಬೇಕು ಎಂದು ಹೇಳಿಕೆ ನೀಡಿರುವ ತನ್ನ ವಕ್ತಾರನನ್ನು ಪಕ್ಷದಿಂದ ಉಚ್ಚಾಟಿಸಿ ದೇಶದ ಜನರೆದುರು ಕ್ಷಮೆಯಾಚಿಸಬೇಕು ಎಂದು ಬಿಜೆಪಿಯನ್ನು ಕಾಂಗ್ರಸ್‌ ಮುಖಂಡ, ಮೇಲ್ಮನೆ ಸದಸ್ಯ ಬಿ ಕೆ ಹರಿಪ್ರಸಾದ್‌ ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸತ್ಯ,ಶಾಂತಿ, ಸೌಹಾರ್ದತೆ, ನ್ಯಾಯ-ನೀತಿಯ ಪ್ರತಿರೂಪವಾಗಿ ಬಾಳಿ ಬದುಕಿದ್ದ ಮಹಾತ್ಮಾ ಗಾಂಧಿಯವರ ಎದೆಗೆ ಗುಂಡಿಕ್ಕಿ  ಕೊಂದ ಸಂತತಿಯವರೇ ಇಂದು ದೇಶದ ವಿರೋಧ ಪಕ್ಷದ ನಾಯಕರಾದ ಶ್ರೀ @RahulGandhi ಅವರ ಎದೆಗೆ ಗುಂಡಿಕ್ಕಿ ಕೊಲೆ ಮಾಡುತ್ತೇವೆ ಎಂದು ಘೋಷಿಸುತ್ತಿರುವುದು @BJP4India ಯ ಕೊಲೆಗಡುಕ ಸಂಸ್ಕೃತಿಯ ಮುಖವಾಡಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.

ದೇಶದ ಕೋಟ್ಯಾಂತರ ಜನರ ನ್ಯಾಯಕ್ಕಾಗಿ ಹೋರಾಡುತ್ತಿರುವ ರಾಹುಲ್ ಗಾಂಧಿಯವರಿಗೆ ಈಗಾಗಲೇ ಬಿಜೆಪಿಯ ನಾಯಕರು ಬೆದರಿಕೆ ಒಡ್ಡುತ್ತಿದ್ದಾರೆ.ಈಗ ಪಕ್ಷದ ವಕ್ತಾರರೇ ಖಾಸಗಿ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿಯೇ ” ಬಿಜೆಪಿಯ ವಿರುದ್ಧ ರಾಹುಲ್ ಗಾಂಧಿ ಮಾತಾಡಿದರೆ ಗುಂಡು ಹಾರಿಸುತ್ತೇವೆ” ಎಂದು ಹೇಳಿಕೆ ನೀಡುವುದು ರಾಹುಲ್ ಗಾಂಧಿಯವರ ವಿರುದ್ಧ ಗಂಭಿರವಾಗಿ ಭಾರಿ ಪಿತೂರಿ ನಡೆಸಿರುವುದು ಸ್ಪಷ್ಟವಾಗುತ್ತಿದೆ.

ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಬಿಜೆಪಿ ನಾಯಕರು ಕೊಲೆಗೆ ಪ್ರಚೋದನೆ ನೀಡುವುದು ಬಾಯಿ ತಪ್ಪಿನಿಂದಲ್ಲ, ಬಿಜೆಪಿಯ ಉದ್ದೇಶ ಬಹಿರಂಗಗೊಂಡಿದೆ. ಇಂತಹ ಅಪಾಯವನ್ನು ದೇಶದ ಪ್ರತಿಯೊಬ್ಬ ನಾಯಕರು ಖಂಡಿಸಬೇಕಿದೆ. ದೇಶದ ವಿರೋಧ ಪಕ್ಷದ ನಾಯಕರನ್ನೇ ಬಹಿರಂಗವಾಗಿ ಗುಂಡಿಕ್ಕಿ ಕೊಲೆ ಮಾಡುತ್ತೇವೆ ಎನ್ನುವುದು ಬಿಜೆಪಿಯ ದ್ವೇಷಮಯ ರಾಜಕೀಯದ ಪರಮಾವಧಿ.

ಕೂಡಲೇ ಬಿಜೆಪಿ ಕೊಲೆ ಹೇಳಿಕೆ ನೀಡಿರುವ ವಕ್ತಾರನನ್ನು ಪಕ್ಷದಿಂದ ಉಚ್ಚಾಟಿಸಿ ದೇಶದ ಜನರೆದುರು ಕ್ಷಮೆಯಾಚಿಸಲಿ ಎಂದು ಹರಿಪ್ರಸಾದ್‌ ಆಗ್ರಹಪಡಿಸಿದ್ದಾರೆ.

More articles

Latest article